ಶನಿವಾರ, ಜನವರಿ 16, 2021
28 °C
ನ್ಯೂಜಿಲೆಂಡ್‌ ವಿರುದ್ಧ ಪಾಕಿಸ್ತಾನದ ಸವಾಲಿನ ಮೊತ್ತ: ಶತಕ ತಪ್ಪಿಸಿಕೊಂಡ ಅಜರ್ ಅಲಿ

New Zealand vs Pakistan| ಜೆಮೀಸನ್‌ಗೆ ಐದು ವಿಕೆಟ್‌

ಎಪಿ Updated:

ಅಕ್ಷರ ಗಾತ್ರ : | |

Prajavani

ಕ್ರೈಸ್ಟ್‌ಚರ್ಚ್‌: ವೃತ್ತಿಜೀವನದಲ್ಲಿ ಕೇವಲ ಆರನೇ ಟೆಸ್ಟ್ ಆಡುತ್ತಿರುವ ವೇಗಿ ಕೈಲ್‌ ಜೆಮೀಸನ್ ಮೂರನೇ ಬಾರಿ ಐದು ವಿಕೆಟ್‌ಗಳ ಗೊಂಚಲು ಪಡೆದರು. ಅವರ ಬೌಲಿಂಗ್ (69ಕ್ಕೆ 5) ನೆರವಿನಿಂದ ನ್ಯೂಜಿಲೆಂಡ್‌ ತಂಡವು ಎರಡನೇ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ತಂಡಕ್ಕೆ ತಿರುಗೇಟು ನೀಡಲು ಸಾಧ್ಯವಾಯಿತು. ಮೊದಲ ಇನಿಂಗ್ಸ್‌ನಲ್ಲಿ, ಮೊದಲ ದಿನದಾಟದಲ್ಲಿ 297 ರನ್‌ ಗಳಿಸಿ ಪ್ರವಾಸಿ ತಂಡ ಆಲೌಟ್‌ ಆಗಿದೆ.

ಹೋದ ವರ್ಷದ ಫೆಬ್ರುವರಿಯಲ್ಲಿ ಭಾರತ ತಂಡದ ವಿರುದ್ಧ ನಡೆದ ಟೆಸ್ಟ್‌ನಲ್ಲಿ ಜೆಮೀಸನ್‌ 45ಕ್ಕೆ 5 ಹಾಗೂ ಕಳೆದ ತಿಂಗಳು ವೆಸ್ಟ್ ಇಂಡೀಸ್‌ ಎದುರಿನ ಪಂದ್ಯದಲ್ಲಿ 34 ರನ್‌ ನೀಡಿ ಐದು ವಿಕೆಟ್‌ ಗಳಿಸಿದ್ದರು.

ಟಾಸ್‌ ಸೋತು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡದ ಆರಂಭ ಉತ್ತಮವಾಗಿರಲಿಲ್ಲ. ತಂಡದ ಮೊತ್ತ ನಾಲ್ಕು ರನ್‌ ಆಗುವಷ್ಟರಲ್ಲಿ ಶಾನ್ ಮಸೂದ್ ಒಂದೂ ರನ್‌ ಗಳಿಸದೆ ವಿಕೆಟ್‌ ಕೈಚೆಲ್ಲಿದರು. ಬಳಿಕ ಅಬಿದ್ ಅಲಿ (25) ಹಾಗೂ ಏಳು ರನ್‌ಗಳಿಂದ ಶತಕ ತಪ್ಪಿಸಿಕೊಂಡ ಅಜರ್ ಅಲಿ (93) ಆಸರೆಯಾದರು. ಇವರಿಬ್ಬರು ಎರಡನೇ ವಿಕೆಟ್ ಜೊತೆಯಾಟದಲ್ಲಿ 62 ರನ್ ಸೇರಿಸಿದರು. ಬಳಿಕ ಅಜರ್ ಅವರು ಮಧ್ಯಮ ಕ್ರಮಾಂಕದಲ್ಲಿ ನಾಯಕ ಮೊಹಮ್ಮದ್‌ ರಿಜ್ವಾನ್ (61) ಜೊತೆ 88 ರನ್‌ ಜೊತೆಯಾಟದಲ್ಲಿ ಭಾಗಿಯಾದರು.

ಫಹೀಂ ಅಶ್ರಫ್‌ (48) ಹಾಗೂ ಜಾಫರ್ ಗೋಹರ್‌ (34) ಕಾಣಿಕೆ ನೀಡಿದ್ದರಿಂದ ಪ್ರವಾಸಿ ತಂಡ ಸವಾಲಿನ ಮೊತ್ತ ಪೇರಿಸಲು ಸಾಧ್ಯವಾಯಿತು.

ಸಂಕ್ಷಿಪ್ತ ಸ್ಕೋರ್‌: ಮೊದಲ ಇನಿಂಗ್ಸ್: ಪಾಕಿಸ್ತಾನ: 83.5 ಓವರ್‌ಗಳಲ್ಲಿ 297 (ಅಬಿದ್‌ ಅಲಿ 25, ಅಜರ್ ಅಲಿ 93, ಮೊಹಮ್ಮದ್ ರಿಜ್ವಾನ್‌ 61, ಫಹೀಂ ಅಶ್ರಫ್‌ 48, ಜಾಫರ್ ಗೋಹರ್ 34; ಕೈಲ್ ಜೆಮೀಸನ್‌ 69ಕ್ಕೆ 5, ಟಿಮ್‌ ಸೌಥಿ 61ಕ್ಕೆ 2, ಟ್ರೆಂಟ್‌ ಬೌಲ್ಟ್‌ 82ಕ್ಕೆ 2).

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು