ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಸ್‌ಪ್ರೀತ್‌ ಬೂಮ್ರಾಗೆ ಗಾಯ; ಟೆಸ್ಟ್‌ಗೆ ಅಲಭ್ಯ

ಅ.2ರಿಂದ ಭಾರತ–ದಕ್ಷಿಣ ಆಫ್ರಿಕಾ ನಡುವಣ ಮೊದಲ ಟೆಸ್ಟ್; ಉಮೇಶ್ ಯಾದವ್‌ಗೆ ಅವಕಾಶ
Last Updated 24 ಸೆಪ್ಟೆಂಬರ್ 2019, 20:05 IST
ಅಕ್ಷರ ಗಾತ್ರ

ನವದೆಹಲಿ: ಮುಂದಿನ ವಾರ ದಕ್ಷಿಣ ಆಫ್ರಿಕಾ ಎದುರು ಆರಂಭವಾಗಲಿರುವ ಟೆಸ್ಟ್ ಸರಣಿಗೂ ಮುನ್ನ ಭಾರತಕ್ಕೆ ಆಘಾತವೊಂದು ಎದುರಾಗಿದೆ. ತಂಡದ ‘ಟ್ರಂಪ್‌ ಕಾರ್ಡ್‌’ ಬೌಲರ್ ಜಸ್‌ಪ್ರೀತ್ ಬೂಮ್ರಾ ಕೆಳಬೆನ್ನುನೋವಿನಿಂದಾಗಿ ಸರಣಿಯಿಂದ ಹೊರಗುಳಿಯಲಿದ್ದಾರೆ. ಅವರ ಬದಲಿಗೆ ವಿದರ್ಭದ ಉಮೇಶ್ ಯಾದವ್ ಅವರಿಗೆ ಸ್ಥಾನ ನೀಡಲಾಗಿದೆ.

ಅವರ ಬೆನ್ನಿನ ಸ್ನಾಯುವಿಗೆ ಗಾಯವಾಗಿರುವುದರಿಂದ ಸುಮಾರು ಎರಡು ತಿಂಗಳುಗಳ ವಿಶ್ರಾಂತಿ ಬೇಕಾಗಬಹುದು. ಆದ್ದರಿಂದ ಅವರು ದಕ್ಷಿಣ ಆಫ್ರಿಕಾ ಎದುರಿನ ಸರಣಿಯಷ್ಟೇ ಅಲ್ಲ, ಅದರ ನಂತರ ನಡೆಲಿರುವ ಬಾಂಗ್ಲಾದೇಶ ಎದುರಿನ ಸರಣಿಗೂ ಅಲಭ್ಯರಾಗುವ ಸಾಧ್ಯತೆ ಇದೆ.

‘ರೆಡಿಯಾಲಜಿಕಲ್ ಸ್ಕ್ರೀನಿಂಗ್ ಮಾಡುವ ಸಂದರ್ಭದಲ್ಲಿ ಅವರ ಬೆನ್ನಿನಲ್ಲಿ ಸಣ್ಣ ಮೂಳೆಮುರಿತವೊಂದು ಪತ್ತೆಯಾಗಿದೆ. ಆದ್ದರಿಂದ ಅವರಿಗೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಅವರನ್ನು ಬೆಂಗಳೂರಿನ ರಾಷ್ಟ್ರೀಯ ಕ್ರೀಡಾ ಅಕಾಡೆಮಿ (ಎನ್‌ಸಿಎ) ಪುನಶ್ಚೇತನ ವಿಭಾಗಕ್ಕೆ ಕಳುಹಿಸಲಾಗುವುದು. ಬಿಸಿಸಿಐನ ವೈದ್ಯಕೀಯ ತಂಡವು ಅವರ ಆರೈಕೆ ಮಾಡಲಿದೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

‘ಅದೃಷ್ಟವಶಾತ್ ಬೂಮ್ರಾ ಅವರ ಗಾಯವು ಆರಂಭಿಕ ಹಂತದಲ್ಲಿಯೇ ಪತ್ತೆಯಾಗಿದೆ. ಆದ್ದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಗುಣಮುಖರಾಗಲು ಸ್ವಲ್ಪ ಸಮಯ ಬೇಕು’ ಎಂದು ಮೂಲಗಳು ಹೇಳಿವೆ.

ಭಾನುವಾರ ಮುಗಿದ ದಕ್ಷಿಣ ಆಫ್ರಿಕಾ ವಿರುದ್ಧದ ಟ್ವೆಂಟಿ–20 ಸರಣಿಯಲ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಬೂಮ್ರಾ 12 ಟೆಸ್ಟ್‌ಗಳನ್ನು ಆಡಿದ್ಧಾರೆ. 62 ವಿಕೆಟ್‌ಗಳು ಅವರ ಖಾತೆಯಲ್ಲಿವೆ. ಆದರೆ ಹೋದ ವರ್ಷ ಪದಾರ್ಪಣೆ ಮಾಡಿದಾಗಿನಿಂದಲೂ ಅವರು ಎಲ್ಲ ಟೆಸ್ಟ್‌ಗಳನ್ನೂ ವಿದೇಶಿ ನೆಲದಲ್ಲಿಯೇ ಆಡಿದ್ದರು.

ಇದೇ ಮೊದಲ ಬಾರಿಗೆ ಸ್ವದೇಶದಲ್ಲಿ ಆಡುವ ಅವಕಾಶ ಅವರಿಗೆ ಇತ್ತು. ಅದರೆ ಇದೀಗ ಅದು ಕೈತಪ್ಪಿದೆ.

ಭಾರತ–ದಕ್ಷಿಣ ಆಫ್ರಿಕಾ ನಡುವಣ ಮೊದಲ ಟೆಸ್ಟ್ ಅ.2ರಿಂದ 6ರವರೆಗೆ ವಿಶಾಖಪಟ್ಟಣದಲ್ಲಿ ನಡೆಯಲಿದೆ. ಉಳಿದೆರಡು ಪಂದ್ಯಗಳು ಕ್ರಮವಾಗಿ ಪುಣೆ (ಅ. 10–14) ಮತ್ತು ರಾಂಚಿ (ಅ. 19–23) ಯಲ್ಲಿ ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT