ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಹಿ ಪ್ರಿಯ ಭುವಿ; ಮತ್ಸ್ಯಪ್ರೇಮಿ ಬೂಮ್ರಾ

Last Updated 18 ನವೆಂಬರ್ 2018, 19:31 IST
ಅಕ್ಷರ ಗಾತ್ರ

‘ಸ್ವಿಂಗ್‌ ಕಿಂಗ್’ ಭುವನೇಶ್ವರ್ ಕುಮಾರ್ ಮತ್ತು ‘ಡೆತ್ ಓವರ್‌ ಪರಿಣತ’ ಜಸ್‌ಪ್ರೀತ್ ಬೂಮ್ರಾ ಅವರ ಮೇಲೆ ಈಗ ಕ್ರಿಕೆಟ್‌ಪ್ರಿಯರ ಚಿತ್ತ ನೆಟ್ಟಿದೆ.

ಇದೇ 21ರಿಂದ ಆಸ್ಟ್ರೇಲಿಯಾದಲ್ಲಿ ಆರಂಭವಾಗಲಿರುವ ಸರಣಿಯಲ್ಲಿ ಆಡಲಿರುವ ಭಾರತ ತಂಡದಲ್ಲಿ ಇಬ್ಬರೂ ಇದ್ದಾರೆ. ವಿದೇಶಿ ಪಿಚ್‌ಗಳು ವೇಗಿಗಳಿಗೆ ನೆರವು ನೀಡುತ್ತವೆ. ಆದ್ದರಿಂದ ಭಾರತದ ಗೆಲುವಿನಲ್ಲಿ ಇವರ ಪಾತ್ರ ಮಹತ್ವದ್ದು. ನೋಡಲು ತೆಳ್ಳಗೆ, ಎತ್ತರ ಇರುವ ಇಬ್ಬರೂ 135 ರಿಂದ 145 ಕಿಲೋಮೀಟರ್ (ಪ್ರತಿ ಗಂಟೆ) ವೇಗದಲ್ಲಿ ಎಸೆತಗಳನ್ನು ಹಾಕುತ್ತಾರೆ. ಅವರ ಈ ಶಕ್ತಿಯ ಹಿಂದಿನ ಗುಟ್ಟು ಏನು?

ಅವರು ನಿರ್ವಹಿಸುವ ಫಿಟ್‌ನೆಸ್‌ ಗುಟ್ಟುಗಳನ್ನು ಈಚೆಗೆ ಒಂದು ವೆಬ್‌ಸೈಟ್‌ನಲ್ಲಿ ಅವರು ಬಹಿರಂಗಗೊಳಿಸಿದ್ದಾರೆ. ಪ್ರತಿದಿನ ವ್ಯಾಯಾಮ ಮತ್ತು ಆಹಾರದಲ್ಲಿ ಕಟ್ಟುನಿಟ್ಟು ಸಾಮಾನ್ಯ ವಿಷಯ. ಆದರೆ ಇವರಿಬ್ಬರೂ ತಮ್ಮ ಸ್ವಿಂಗ್, ಯಾರ್ಕರ್ ಎಸೆತಗಳ ಮೂಲಕ ಬ್ಯಾಟ್ಸ್‌ಮನ್‌ಗಳನ್ನು ವಂಚಿಸುವ ರೀತಿಯಲ್ಲಿಯೇ ತಮ್ಮ ಹೊಟ್ಟೆಗೂ ಮೋಸ ಮಾಡುತ್ತಾರೆ!

‘ನಮ್ಮ ದೇಹದ ಮೆಟಾಬಲಿಕ್ ಸಿಸ್ಟಂಗೆ ಒಂದು ವಿಶೇಷ ಗುಣ ಇದೆ. ನಾವು ಪ್ರತಿದಿನ ಪಾಲಿಸುವ ಆಹಾರ ಸೇವನೆ ಪದ್ಧತಿಯನ್ನು ಅದು ಪ್ರೋಗ್ರಾಮಿಂಗ್ ಮಾಡಿಕೊಂಡಿರುತ್ತದೆ. ವಾರದಲ್ಲಿ ಒಂದು ದಿನ ಅದನ್ನು ತಪ್ಪಿಸಬೇಕು. ಉಪವಾಸ ಮಾಡಬಹುದು. ಅಥವಾ ಆಹಾರ ಪದಾರ್ಥಗಳ ಬದಲಾವಣೆ ಮಾಡಬೇಕು. ಆಗ ನಮ್ಮ ಚಯಾಪಚಯ ಪ್ರಕ್ರಿಯೆಯು ಬದಲಾಗುತ್ತದೆ. ಇದರಿಂದ ದೇಹವು ಹೆಚ್ಚು ಕ್ಯಾಲೊರಿಗಳನ್ನು ಖರ್ಚು ಮಾಡುತ್ತದೆ. ಆದ್ದರಿಂದ ನಾವು ವಾರದ ಆರು ದಿನ ನಮ್ಮ ಟ್ರೇನರ್, ಡಯಟಿಷಿಯನ್ ಹಾಕಿಕೊಟ್ಟ ವೇಳಾಪಟ್ಟಿಯನ್ನು ಪಾಲಿಸುತ್ತೇವೆ. ಒಂದು ದಿನ ಫುಲ್‌ ಮಜಾ. ನಮಗೆ ಬೇಕಾದ್ದನ್ನು ಮನತುಂಬಿ ತಿನ್ನುತ್ತೇವೆ’ ಎಂದು ಜಸ್‌ಪ್ರೀತ್ ಬೂಮ್ರಾ ಹೇಳುತ್ತಾರೆ.

ಟ್ವೆಂಟಿ–20 ಮತ್ತು ಏಕದಿನ ಮಾದರಿಯ ಕ್ರಿಕೆಟ್‌ನಲ್ಲಿ ಬೂಮ್ರಾ ಅವರು ಇನಿಂಗ್ಸ್‌ನ ಕೊನೆಯ ಹಂತದ ಓವರ್‌ಗಳಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಸವಾಲೊಡ್ಡುವಂತ ಎಸೆತಗಳನ್ನು ಹಾಕುವಲ್ಲಿ ಪರಿಣತರು. ಇವರಿಗೆ ಗ್ರಿಲ್‌ನಲ್ಲಿ ಸಿದ್ಧಪಡಿಸಿದ ಆಹಾರ ಪದಾರ್ಥಗಳು ಮತ್ತು ಮೀನಿನ ಖಾದ್ಯಗಳೆಂದರೆ ಪಂಚಪ್ರಾಣ. ಬಿರಿಯಾನಿ, ಭಾರತೀಯ ಸಿಹಿತಿಂಡಿಗಳೂ ಬೇಕೆ ಬೇಕು.

‘ಕ್ರಿಕೆಟ್‌ ಅಷ್ಟೇ ಆಲ್ಲ. ಫುಟ್‌ಬಾಲ್ ಮತ್ತು ಬ್ಯಾಡ್ಮಿಂಟನ್ ಕೂಡ ಆಡುತ್ತೇನೆ. ಈ ಆಟಗಳು ಫಿಟ್‌ನೆಸ್‌ ನಿರ್ವಹಿಸಲು ನೆರವಾಗುತ್ತವೆ. ಜೊತೆಗೆ ಮಾನಸಿಕ ಉಲ್ಲಾಸವನ್ನೂ ನೀಡುತ್ತವೆ’ ಎನ್ನುತ್ತಾರೆ ಬೂಮ್ರಾ.

ಉತ್ತರಪ್ರದೇಶದ ಮೀರಠ್ ಹುಡುಗ ಭುವನೇಶ್ವರ್ ಕುಮಾರ್ ಕೂಡ ಕಮ್ಮಿಯೇನಲ್ಲ. ಹಲವು ಬಾರಿ ಗಾಯದ ಸಮಸ್ಯೆ ಕಾಡಿದರೂ ಚೇತರಿಸಿಕೊಂಡು ಬಂದು ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದವರು. ಕ್ರಿಕೆಟ್‌ನ ಮೂರು ಮಾದರಿಗಳಲ್ಲಿಯೂ ಮಿಂಚಿದವರು.

‘ಪಂದ್ಯಗಳಲ್ಲಿ ಆಡದೇ ಇರುವ ಸಂದರ್ಭದಲ್ಲಿ (ಆಫ್‌ ಸೀಸನ್) ಬಹಳಷ್ಟು ಸಿಹಿ ತಿಂಡಿಗಳನ್ನು ತಿನ್ನುವುದು ನನ್ನ ಚಾಳಿ. ಆದರೆ ದೈಹಿಕ ಕ್ಷಮತೆ ಮತ್ತು ಆರೋಗ್ಯಕ್ಕಾಗಿ ಫೈಬರ್, ಪ್ರೋಟಿನ್‌ಯುಕ್ತ ಆಹಾರವನ್ನು ಯಥೇಚ್ಚವಾಗಿ ಸೇವಿಸುತ್ತೇನೆ. ಜಿಮ್ನಾಷಿಯಂನಲ್ಲಿ ವರ್ಕ್‌ಔಟ್ ತಪ್ಪಿಸುವುದಿಲ್ಲ. ವೇಟ್ ಟ್ರೇನಿಂಗ್, ಬಾಲ್‌ ಮೇಲೆ ವ್ಯಾಯಾಮಗಳು ಮತ್ತು ಜಾಗಿಂಗ್ ಮಾಡುತ್ತೇನೆ’ ಎಂದು ಭುವಿ ಹೇಳುತ್ತಾರೆ.

‘ನಮ್ಮ ದೇಶದಲ್ಲಿ ಕ್ರೀಡಾ ಸಂಸ್ಕೃತಿ ಕಡಿಮೆ. ಮಕ್ಕಳನ್ನು ಅವರ ಪಾಡಿಗೆ ಆಡಲು ಬಿಟ್ಟುಬಿಡಬೇಕು. ದೊಡ್ಡವರೂ ಅಷ್ಟೇ. ಯಾವುದಾದರೂ ಕ್ರೀಡೆಯನ್ನು ಆಡುವ ಹವ್ಯಾಸ ಇಟ್ಟುಕೊಳ್ಳಬೇಕು. ಆಟದಲ್ಲಿಯೇ ಫಿಟ್‌ನೆಸ್‌ ಗುಟ್ಟಿದೆ’ ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT