ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ಏಕದಿನ ವಿಶ್ವಕಪ್: ಮಿಥಾಲಿ ಬಳಗದಲ್ಲಿ ಕರ್ನಾಟಕದ ರಾಜೇಶ್ವರಿ

ಕ್ರಿಕೆಟ್ ಟೂರ್ನಿ: ಜೆಮಿಮಾ ರಾಡ್ರಿಗಸ್‌, ಶಿಖಾ ಪಾಂಡೆಗೆ ಇಲ್ಲ ಸ್ಥಾನ
Last Updated 6 ಜನವರಿ 2022, 13:17 IST
ಅಕ್ಷರ ಗಾತ್ರ

ನವದೆಹಲಿ: ಅನುಭವಿ ಸ್ಪಿನ್ನರ್‌, ಕರ್ನಾಟಕದ ರಾಜೇಶ್ವರಿ ಗಾಯಕವಾಡ್ ಅವರು ಮಹಿಳೆಯರ ಏಕದಿನ ವಿಶ್ವಕಪ್‌ ಕ್ರಿಕೆಟ್ ಟೂರ್ನಿಗೆ ಪ್ರಕಟಿಸಿರುವ ಭಾರತ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ತಂಡವನ್ನು ಮಿಥಾಲಿ ರಾಜ್ ಮುನ್ನಡೆಸಲಿದ್ದು ಹರ್ಮನ್‌ಪ್ರೀತ್ ಕೌರ್ ಉಪನಾಯಕಿಯಾಗಿರುವರು.

ಮುಂದಿನ ತಿಂಗಳಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ ಏಕದಿನ ಸರಣಿಗೂ ಇದೇ ತಂಡವನ್ನು ಉಳಿಸಿಕೊಳ್ಳಲಾಗಿದ್ದು ಅಲ್ಲಿ ನಡೆಯುವ ಟ್ವೆಂಟಿ20 ಸರಣಿಗೆ ಹರ್ಮನ್‌ಪ್ರೀತ್ ಕೌರ್ ನಾಯಕಿಯಾಗಿರುವ ಮತ್ತು ಸ್ಮೃತಿ ಮಂದಾನ ಉಪನಾಯಕಿಯಾಗಿರುವ ತಂಡವನ್ನು ಪ್ರಕಟಿಸಲಾಗಿದೆ.

ಮಾರ್ಚ್ 4ರಿಂದ 13ರ ವರೆಗೆ ನ್ಯೂಜಿಲೆಂಡ್‌ನಲ್ಲಿ ವಿಶ್ವಕಪ್‌ ಟೂರ್ನಿ ನಡೆಯಲಿದ್ದು ಗುರುವಾರ ಪ್ರಕಟಿಸಿರುವ15 ಮಂದಿ ಆಟಗಾರ್ತಿಯರ ತಂಡದಿಂದ ಅಗ್ರ ಕ್ರಮಾಂಕದ ಬ್ಯಾಟರ್ ಜೆಮಿಮಾ ರಾಡ್ರಿಗಸ್ ಮತ್ತು ವೇಗದ ಬೌಲರ್‌ ಶಿಖಾ ಪಾಂಡೆ ಅವರನ್ನು ಕೈಬಿಡಲಾಗಿದೆ. ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಸರಣಿಯಲ್ಲಿ ಉತ್ತಮ ಸಾಮರ್ಥ್ಯ ತೋರಿದವರನ್ನು ಪರಿಗಣಿಸಲಾಗಿದೆ. ಎಡಗೈ ಬ್ಯಾಟರ್ ಯಾಷ್ಠಿಕಾ ಭಾಟಿಯಾ ಮತ್ತು ವೇಗದ ಜೋಡಿ ಮೇಘನಾ ಸಿಂಗ್‌–ರೇಣುಕಾ ಸಿಂಗ್ ಅವರಿಗೆ ಮಣೆ ಹಾಕಲಾಗಿದೆ.

ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ನಡೆದ ಟ್ವೆಂಟಿ20 ಸರಣಿಯಲ್ಲಿ ಮಿಂಚಿದ್ದ ಜೆಮಿಮಾ ಏಕದಿನ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ತೋರಲು ವಿಫಲರಾಗಿದ್ದರು. ಶಿಖಾ ಅವರಿಗೂ ಈಚೆಗೆ ಬೌಲಿಂಗ್‌ನಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಆಗಿರಲಿಲ್ಲ. ಪೂನಂ ರಾವತ್ ಅವರನ್ನೂ ಕಡೆಗಣಿಸಲಾಗಿದ್ದು ಭರ್ಜರಿ ಹೊಡೆತಗಳ ಬ್ಯಾಟರ್‌ಗಳ ಕಡೆಗೆ ಆಯ್ಕೆ ಸಮಿತಿಯವರು ಗಮನಹರಿಸಿದ್ದಾರೆ.

2017ರಲ್ಲಿ ರನ್ನರ್ ಅಪ್ ಆಗಿದ್ದ ಭಾರತ ತಂಡವನ್ನು ಮಿಥಾಲಿ ರಾಜ್ ಮುನ್ನಡೆಸಿದ್ದರು. ಈ ಬಾರಿ ವಿಶ್ವಕಪ್ ನಂತರ ಅವರು ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ. ಸ್ಮೃತಿ ಮಂದಾನ, ದೀಪ್ತಿ ಶರ್ಮಾ, ಜೂಲನ್ ಗೋಸ್ವಾಮಿ ಮತ್ತು ಯುವ ಆಟಗಾರ್ತಿ ಶಫಾಲಿ ವರ್ಮಾ ಅವರು ತಂಡದಲ್ಲಿದ್ದು ರಿಚಾ ಘೋಷ್ ಮತ್ತು ತಾನಿಯಾ ಭಾಟಿಯಾ ಅವರನ್ನು ವಿಕೆಟ್‌ ಕೀಪರ್‌ಗಳನ್ನಾಗಿ ಸೇರ್ಪಡೆಗೊಳಿಸಲಾಗಿದೆ. ಈಚೆಗೆ ಮುಕ್ತಾಯಗೊಂಡ ಚಾಲೆಂಜರ್ ಟ್ರೋಫಿ ಟೂರ್ನಿಯಲ್ಲಿ ಗರಿಷ್ಠ ರನ್ ಗಳಿಸಿದ ಸಬ್ಬಿನೇನಿ ಮೇಘನಾ ಅವರೊಂದಿಗೆ ಏಕ್ತಾ ಬಿಷ್ಠ್‌ ಮತ್ತು ಸಿಮ್ರನ್ ದಿಲ್ ಬಹದ್ದೂರ್ ಅವರು ಕಾಯ್ದಿರಿಸಿದ ಆಟಗಾರ್ತಿಯರ ಪಟ್ಟಿಲ್ಲಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ 5 ಏಕದಿನ ಪಂದ್ಯಗಳ ಸರಣಿ ಫೆಬ್ರುವರಿ 11ರಂದು ಆರಂಭವಾಗಲಿದೆ. ಫೆಬ್ರವರಿ 9ರಂದು ಏಕೈಕ ಟ್ವೆಂಟಿ20 ಪಂದ್ಯ ನಡೆಯಲಿದೆ. ಈ ಪಂದ್ಯ ಹಾಗೂ ಮೊದಲ ಏಕದಿನ ಪಂದ್ಯ ನೇಪಿಯರ್‌ನಲ್ಲಿ ನಡೆಯಲಿದೆ. ನೆಲ್ಸನ್‌ನಲ್ಲಿ ಫೆಬ್ರುವರಿ 1ರಂದು ಮತ್ತು 16ರಂದು, ಕ್ವೀನ್ಸ್‌ ಟೌನ್‌ನಲ್ಲಿ ಫೆಬ್ರುವರಿ 22 ಹಾಗೂ 24ರಂದು ಉಳಿದ ಏಕದಿ ಪಂದ್ಯಗಳು ನಡೆಯಲಿವೆ.

ತಂಡಗಳು
ವಿಶ್ವಕಪ್ ಮತ್ತು ಏಕದಿನ ಸರಣಿಗೆ:
ಮಿಥಾಲಿ ರಾಜ್ (ನಾಯಕಿ), ಹರ್ಮನ್‌ಪ್ರೀತ್ ಕೌರ್ (ಉಪನಾಯಕಿ), ಸ್ಮೃತಿ ಮಂದಾನ, ಶಫಾಲಿ ವರ್ಮಾ, ಯಾಷ್ಠಿಕಾ ಭಾಟಿಯಾ, ದೀಪ್ತಿ ಶರ್ಮಾ, ರಿಚಾ ಘೋಷ್‌ (ವಿಕೆಟ್ ಕೀಪರ್), ಸ್ನೇಹ್ ರಾಣಾ, ಜೂಲನ್ ಗೋಸ್ವಾಮಿ, ಪೂಜಾ ವಸ್ತ್ರಕಾರ್‌, ಮೇಘನಾ ಸಿಂಗ್‌, ರೇಣುಕಾ ಸಿಂಗ್‌, ತಾನಿಯಾ ಭಾಟಿಯಾ (ವಿಕೆಟ್ ಕೀಪರ್‌), ರಾಜೇಶ್ವರಿ ಗಾಯಕವಾಡ್‌, ಪೂನಂ ಯಾದವ್‌
ಕಾಯ್ದಿರಿಸಿದ ಆಟಗಾರ್ತಿಯರು: ಸಬ್ಬಿನೇನಿ ಮೇಘನಾ, ಏಕ್ತಾ ಬಿಷ್ಠ್‌, ಸಿಮ್ರನ್ ದಿಲ್ ಬಹದ್ದೂರ್‌.

ನ್ಯೂಜಿಲೆಂಡ್ ಎದುರಿನ ಏಕೈಕ ಟ್ವೆಂಟಿ20ಗೆ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂದಾನ (ಉಪನಾಯಕಿ), ಶಫಾಲಿ ವರ್ಮಾ, ಯಾಷ್ಠಿಕಾ ಭಾಟಿಯಾ, ದೀಪ್ತಿ ಶರ್ಮಾ, ರಿಚಾ ಘೋಷ್‌ (ವಿಕೆಟ್ ಕೀಪರ್‌), ಸ್ನೇಹ್ ರಾಣಾ, ಪೂಜಾ ವಸ್ತ್ರಕಾರ್‌, ಮೇಘನಾ ಸಿಂಗ್‌, ರೇಣುಕಾ ಸಿಂಗ್‌, ತಾನಿಯಾ ಭಾಟಿಯಾ (ವಿಕೆಟ್ ಕೀಪರ್‌), ರಾಜೇಶ್ವರಿ ಗಾಯಕವಾಡ್, ಪೂನಂ ಯಾದವ್‌, ಏಕ್ತಾ ಬಿಷ್ಠ್‌, ಸಬ್ಬಿನೇನಿ ಮೇಘನಾ, ಸಿಮ್ರನ್ ದಿಲ್‌ ಬಹದೂರ್‌.

ಮಹಿಳೆಯರ ವಿಶ್ವಕಪ್‌ನಲ್ಲಿ ಭಾರತದ ವೇಳಾಪಟ್ಟಿ‌

ದಿನಾಂಕ ಎದುರಾಳಿ ಸ್ಥಳ
ಮಾ.6 ಪಾಕಿಸ್ತಾನ ಬೇ ಓವಲ್‌
ಮಾ.10 ನ್ಯೂಜಿಲೆಂಡ್‌ ಹ್ಯಾಮಿಲ್ಟನ್‌
ಮಾ.12 ವೆಸ್ಟ್‌ ಇಂಡೀಸ್‌ ಹ್ಯಾಮಿಲ್ಟನ್‌
ಮಾ.16 ಇಂಗ್ಲೆಂಡ್‌ ತೌರಂಗ
ಮಾ.19 ಆಸ್ಟ್ರೇಲಿಯಾ ಆಕ್ಲೆಂಡ್‌
ಮಾ.22 ಬಾಂಗ್ಲಾದೇಶ ಹ್ಯಾಮಿಲ್ಟನ್‌
ಮಾ.27 ದಕ್ಷಿಣ ಆಫ್ರಿಕಾ ಕ್ರೈಸ್ಟ್‌ ಚರ್ಚ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT