ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌತಮ್ ಸ್ಪಿನ್‌ ದಾಳಿಗೆ ಕುಸಿದ ಜಾರ್ಖಂಡ್

ರಣಜಿ ಕ್ರಿಕೆಟ್: ಕರ್ನಾಟಕ ತಂಡಕ್ಕೆ ಮೊದಲ ದಿನದ ಗೌರವ
Last Updated 24 ಜನವರಿ 2023, 22:58 IST
ಅಕ್ಷರ ಗಾತ್ರ

ರಾಂಚಿ: ಸ್ಪಿನ್ ಜೋಡಿ ಕೃಷ್ಣಪ್ಪ ಗೌತಮ್ ಪರಿಣಾಮಕಾರಿ ದಾಳಿಯಿಂದಾಗಿ ಆತಿಥೇಯ ಜಾರ್ಖಂಡ್ ತಂಡವು ಕುಸಿಯಿತು.

ಮಂಗಳವಾರ ಇಲ್ಲಿ ಆರಂಭವಾದ ಸಿ ಗುಂಪಿನ ಕೊನೆಯ ಪಂದ್ಯದಲ್ಲಿ ಆಫ್‌ಸ್ಪಿನ್ನರ್ ಗೌತಮ್ (61ಕ್ಕೆ4) ಅವರ ದಾಳಿಗೆ ಆತಿಥೇಯ ಜಾರ್ಖಂಡ್ ತಂಡವು 64.2 ಓವರ್‌ಗಳಲ್ಲಿ 164 ರನ್‌ಗಳ ಸಾಧಾರಣ ಮೊತ್ತ ಗಳಿಸಿ ಆಲೌಟ್ ಆಯಿತು.

ಎರಡನೇ ಇನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡವು ದಿನದಾಟದ ಅಂತ್ಯಕ್ಕೆ 27 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 80 ರನ್ ಗಳಿಸಿದೆ. ದೇವದತ್ತ ಪಡಿಕ್ಕಲ್ (ಬ್ಯಾಟಿಂಗ್ 20) ಮತ್ತು ನಿಕಿನ್ ಜೋಸ್ (ಬ್ಯಾಟಿಂಗ್ 8) ಕ್ರೀಸ್‌ನಲ್ಲಿದ್ಧಾರೆ.

ಸಮರ್ಥ್ ಜೊತೆಗೆ ಮೊದಲ ವಿಕೆಟ್ ಜೊತೆಯಾಟದಲ್ಲಿ 46 ರನ್‌ ಸೇರಿಸಿದ ಮಯಂಕ್ 12ನೇ ಓವರ್‌ನಲ್ಲಿ ನದೀಮ್ ಎಸೆತವನ್ನು ಆಡುವ ಪ್ರಯತ್ನದಲ್ಲಿ ಆರ್ಯಮನ್ ಸೇನ್‌ಗೆ ಕ್ಯಾಚ್ ಕೊಟ್ಟರು. ಏಳು ಓವರ್‌ಗಳ ನಂತರ ಅನುಕೂಲ್ ರಾಯ್ ಎಸೆತದಲ್ಲಿ ಸಮರ್ಥ್ (31; 67ಎ, 4X3) ಕ್ಲೀನ್‌ಬೌಲ್ಡ್ ಆದರು. ಪ್ರಥಮ ಇನಿಂಗ್ಸ್‌ ಮುನ್ನಡೆ ಗಳಿಸಲು ಕರ್ನಾಟಕ ತಂಡಕ್ಕೆ 84 ರನ್‌ಗಳ ಅಗತ್ಯವಿದೆ. ಮಯಂಕ್ ಬಳಗವು ಈಗಾಗಲೇ ಕ್ವಾರ್ಟರ್‌ಫೈನಲ್ ಪ್ರವೇಶಿಸಿದೆ.

ಗೌತಮ್ ಮೋಡಿ: ಟಾಸ್ ಗೆದ್ದ ಜಾರ್ಖಂಡ್ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮೂವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿದ ಕರ್ನಾಟಕ ತಂಡವು ವೇಗಿ ವೈಶಾಖ ವಿಜಯಕುಮಾರ್‌ಗೆ ವಿಶ್ರಾಂತಿ ಕೊಟ್ಟು, ಎಡಗೈ ಸ್ಪಿನ್ನರ್ ಶುಭಾಂಗ್ ಹೆಗಡೆಗೆ ಅವಕಾಶ ನೀಡಿತು.

ವೇಗಿ ವಿದ್ವತ್ ಕಾವೇರಪ್ಪ ಒಂಬತ್ತನೇ ಓವರ್‌ನಲ್ಲಿ ದೇವವ್ರತ್ ವಿಕೆಟ್ ಗಳಿಸಿ ಕರ್ನಾಟಕದ ಖಾತೆ ತೆರೆದರು. ಇದಾದ ಮೇಲೆ ಗೌತಮ್ ಶಿಸ್ತಿನ ದಾಳಿಗೆ ಪ್ರಮುಖ ಬ್ಯಾಟರ್‌ಗಳಾದ ಆರ್ಯಮನ್ ಸೇನ್, ಕುಮಾರ್ ಸೂರಜ್, ವಿನತ್ ಸಿಂಗ್ ಮತ್ತು ಸೌರಭ್ ತಿವಾರಿ ಪೆವಿಲಿಯನ್ ಸೇರಿದರು.

ಇದರಿಂದಾಗಿ ಆತಿಥೇಯ ತಂಡವು ನೂರು ರನ್‌ಗಳ ಮೊತ್ತ ಮುಟ್ಟುವ ಮುನ್ನವೇ ಆರು ವಿಕೆಟ್‌ಗಳನ್ನು ಕಳೆದುಕೊಂಡಿತು. ಇನ್ನೊಂದೆಡೆ ಶ್ರೇಯಸ್ ಕೂಡ ಕೆಳಕ್ರಮಾಂಕದ ಆಟಗಾರರಿಗೆ ಪೆವಿಲಿಯನ್ ದಾರಿ ತೋರಿದರು. ಶುಭಾಂಗ್ ಕೂಡ ಒಂದು ವಿಕೆಟ್ ಗಳಿಸಿದರು. ಕುಶಾಗ್ರ (37; 106ಎ) ಹಾಗೂ ನದೀಮ್ (22; 4X3) ಅವರ ಬ್ಯಾಟಿಂಗ್‌ನಿಂದಾಗಿ ತಂಡದ ಮೊತ್ತಕ್ಕೆ ಮತ್ತಷ್ಟು ರನ್‌ಗಳು ಸೇರಿದವು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಜಾರ್ಖಂಡ್: 64.2 ಓವರ್‌ಗಳಲ್ಲಿ 164 (ದೇವವ್ರತ್ 18, ಕುಮಾರ ಸೂರಜ್ 22, ಕುಮಾರ್ ಖುಶಾಗ್ರ 37, ನದೀಮ್ 22, ವಿದ್ವತ್ ಕಾವೇರಪ್ಪ 34ಕ್ಕೆ2, ಕೃಷ್ಣಪ್ಪ ಗೌತಮ್ 61ಕ್ಕೆ4, ಶ್ರೇಯಸ್ ಗೋಪಾಲ್ 18ಕ್ಕೆ3, ಶುಭಾಂಗ್ ಹೆಗಡೆ 16ಕ್ಕೆ1) ಕರ್ನಾಟಕ: 27 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 80(ಆರ್. ಸಮರ್ಥ್ 31, ಮಯಂಕ್ ಅಗರವಾಲ್ 20, ದೇವದತ್ತ ಪಡಿಕ್ಕಲ್ ಬ್ಯಾಟಿಂಗ್ 20, ನಿಕಿನ್ ಜೋಸ್ ಬ್ಯಾಟಿಂಗ್ 8, ಶಹಬಾಜ್ ನದೀಮ್ 40ಕ್ಕೆ1, ಅನುಕೂಲ್ ರಾಯ್ 12ಕ್ಕೆ1)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT