ಭಾನುವಾರ, ಜುಲೈ 25, 2021
21 °C

50 ವರ್ಷಗಳ ನಂತರ ಜೋನ್ಸ್‌ಗೆ ಟೆಸ್ಟ್‌ ಕ್ರಿಕೆಟಿಗ ಗೌರವ!

ಎಪಿ Updated:

ಅಕ್ಷರ ಗಾತ್ರ : | |

ಟೆಸ್ಟ್ ಕ್ಯಾಪ್‌ನೊಂದಿಗೆ ಅಲನ್ ಜೋನ್ಸ್‌ –ಇಸಿಬಿ ಚಿತ್ರ

ಲಂಡನ್: ಎಂಬತ್ತೊಂದು ವರ್ಷದ ಅಲನ್ ಜೋನ್ಸ್‌ ಅವರಿಗೆ ಅಚ್ಚರಿ ಮತ್ತು ಸಂತೋಷಗಳೆರಡೂ ಏಕಕಾಲದಲ್ಲಿ ಹುಡುಕಿಕೊಂಡು ಬಂದಿವೆ.

ಬರೋಬ್ಬರಿ 50 ವರ್ಷಗಳ ನಂತರ ಅವರನ್ನು ‘ಟೆಸ್ಟ್ ಕ್ರಿಕೆಟಿಗ’ ಗೌರವ ನೀಡಲು ನಿರ್ಧರಿಸಲಾಗಿದೆ. 1970ರಲ್ಲಿ ಅವರು ಇಂಗ್ಲೆಂಡ್ ತಂಡದಲ್ಲಿ ರೆಸ್ಟ್‌ ಆಫ್ ದಿ ವರ್ಲ್ಡ್‌ ಇಲೆವನ್ ತಂಡದ ವಿರುದ್ಧದ ಪಂದ್ಯದಲ್ಲಿ ಆಡಿದ್ದರು. ಅದೊಂದೇ ಬಾರಿ ಅವರು ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿದ್ದು. ಆ ಟೆಸ್ಟ್‌ ಪಂದ್ಯವು ಟೆಸ್ಟ್‌ಗೆ ತತ್ಸಮಾನ ಎಂದು ಪರಿಗಣಿಸಲಾಗಿತ್ತು. ಆದರೂ 1972ರಲ್ಲಿ ಐಸಿಸಿಯು ಇದನ್ನು ಅಲ್ಲಗಳೆದಿತ್ತು.

ಇದೀಗ ಇಂಗ್ಲೆಂಡ್ ಮತ್ತು ವೇಲ್ಸ್‌ ಕ್ರಿಕೆಟ್ ಮಂಡಳಿಯು ಜೋನ್ಸ್‌ ಅವರಿಗೆ ಟೆಸ್ಟ್‌ ಕ್ಯಾಪ್ (ನಂಬರ್ 696) ನೀಡಿ ಗೌರವಿಸಿದೆ. ಕೊರೊನಾ ಸೋಂಕು ತಡೆಗೆ ದೇಶದಲ್ಲಿ ಲಾಕ್‌ಡೌನ್‌ ಇರುವುದರಿಂದ ಕ್ಯಾಪ್ ಪ್ರಧಾನ ಕಾರ್ಯಕ್ರಮವನ್ನು ವಿಡಿಯೊ ಲಿಂಕ್ ಮೂಲಕ ನೆರವೇರಿಸಲಾಯಿತು.

‘ಈ ಹೆಲ್ಮೆಟ್‌ಗಾಗಿ ಕಾಯುತ್ತಿದ್ದೆ. ಇದು ನನ್ನ ತಲೆಗೆ ಸರಿಹೊಂದುತ್ತದೆ’ ಎಂದು ಜೋನ್ಸ್‌ ಹೇಳಿದ್ದಾರೆ.

‘ಪೂರ್ಣಪ್ರಮಾಣದಲ್ಲಿ ಇಂಗ್ಲೆಂಡ್ ಟೆಸ್ಟ್‌ ಕ್ಯಾಪ್‌ ನೀಡುವುದನ್ನು ಆಗ ತಿರಸ್ಕರಿಸಿದ್ದರು. ಆಗ ಸಹಜವಾಗಿಯೇ ಬೇಸರವಾಗಿತ್ತು. ಪರಿಪೂ್ರ್ಣ ಇಂಗ್ಲೆಂಡ್ ಆಟಗಾರನೆಂಬ ಭಾವನೆ ಬರುತ್ತಿರಲಿಲ್ಲ. ನನ್ನ ಬಳಿ ಕ್ಯಾಪ್‌, ಬ್ಲೆಜರ್, ಸ್ವೆಟರ್ ಮತ್ತು ಟೈಗಳು ಇದ್ದವು. ಆದರೆ  ಆ ಸರಣಿಯಲ್ಲ ಸೋತಿದ್ದರಿಂದ ನಂತರದ ಟೆಸ್ಟ್‌ಗಳಲ್ಲಿ ಧರಿಸುವ ಅವಕಾಶವೇ ನನಗೆ ಸಿಗಲಿಲ್ಲ. ಕೆಲವು ವರ್ಷಗಳ ನಂತರ ಕ್ಯಾಪ್ ಅನ್ನು ಮರಳಿ ಪಡೆಯಲಾಗಿತ್ತು. ಆಗ ತುಂಬಾ ಬೇಸರವಾಗಿತ್ತು’ ಎಂದು ಹೇಳಿದರು.

ಆ ಪಂದ್ಯದಲ್ಲಿ ಅಲನ್ ಜೋನ್ಸ್‌ ಮೊದಲ ಇನಿಂಗ್ಸ್‌ನಲ್ಲಿ ಸೊನ್ನೆಗೆ ಔಟಾಗಿದ್ದರು. ಎರಡನೇ ಇನಿಂಗ್ಸ್‌ನಲ್ಲಿ ಐದು ರನ್‌ ಹೊಡೆದಿದ್ದರು. 

ಗ್ಲಾಮರ್‌ಗನ್‌ನ ಜೋನ್ಸ್‌ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 645 ಪಂದ್ಯಗಳಲ್ಲಿ 36,049 ರನ್ ಗಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್, ‘ಅಲನ್ ಅವರ ಕ್ರಿಕೆಟ್ ಸಾಧನೆಗಳು ಪ್ರೇರಣಾದಾಯಕವಾಗಿವೆ. ಅವರ ಸಂಭ್ರಮದಲ್ಲಿ ಭಾಗವಹಿಸಲು ನನಗೆ ಅಪಾರ ಸಂತಸವಾಗುತ್ತಿದೆ. ದೇಶದ ತಂಡಕ್ಕೆ ಆಯ್ಕೆಯಾಗುವುದು ಯಾವುದೇ ಕ್ರಿಕೆಟಿಗನಿಗೂ ದೊಡ್ಡ ಗೌರವದ ಸಂಕೇತ. ಅವರು ದೇಶದ ತಂಡದಲ್ಲಿ ಅತ್ಯಲ್ಪ ಕಾಲ ಆಡಿದ್ದರು. ಆದರೆ 50 ವರ್ಷಗಳ ಹಿಂದಿನ ನೆನಪುಗಳನ್ನು ಅವರು ಎಂದೂ ಮರೆಯುವುದಿಲ್ಲ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು