ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಲಿಸ್, ಸ್ಥಳೇಕರ್‌ಗೆ ಐಸಿಸಿಯ ಹಾಲ್‌ ಆಫ್ ಫೇಮ್ ಗೌರವ

Last Updated 23 ಆಗಸ್ಟ್ 2020, 13:51 IST
ಅಕ್ಷರ ಗಾತ್ರ

ದುಬೈ: ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಜಾಕ್ಸ್ ಕಾಲಿಸ್, ಪಾಕಿಸ್ತಾನದ ಬ್ಯಾಟಿಂಗ್ ದಿಗ್ಗಜ ಜಹೀರ್ ಅಬ್ಬಾಸ್ ಮತ್ತು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕಿ ಲಿಸಾ ಸ್ಥಳೇಕರ್ ಅವರಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯ ಹಾಲ್ ಆಫರ್ ಫೇಮ್ ಗೌರವ ಸಂದಿದೆ. ಸ್ಥಳೇಕರ್ ಮೂಲತಃ ಮಹಾರಾಷ್ಟ್ರದ ಪುಣೆಯವರು. ಆನ್‌ಲೈನ್ ಮೂಲಕ ಸಮಾರಂಭ ನಡೆಯಿತು.

ವಿಶ್ವದ ಅತಿಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಕಾಲಿಸ್ ಅವರು ದಕ್ಷಿಣ ಆಫ್ರಿಕಾ ತಂಡಕ್ಕಾಗಿ 166 ಟೆಸ್ಟ್‌, 328 ಏಕದಿನ ಮತ್ತು 25 ಟ್ವೆಂಟಿ–20 ಪಂದ್ಯಗಳನ್ನು ಆಡಿದ್ದಾರೆ. 1995ರಿಂದ 2014ರ ವರೆಗೆ ಅವರು ತಂಡದಲ್ಲಿದ್ದರು. ಅವರಿಗೆ ಈಗ 44 ವರ್ಷ. ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾ ಪರ ಗರಿಷ್ಠ ರನ್ ಗಳಿಸಿದ ಆಟಗಾರ ಎನಿಸಿರುವ ಅವರು ಈ ಎರಡೂ ಮಾದರಿಗಳಲ್ಲಿ ಕ್ರಮವಾಗಿ 13289 ಮತ್ತು 11579 ರನ್ ಕಲೆ ಹಾಕಿದ್ದಾರೆ. ಮಧ್ಯಮ ವೇಗದ ಬೌಲರ್ ಕೂಡ ಆಗಿರುವ ಕಾಲಿಸ್ ಟೆಸ್ಟ್‌ನಲ್ಲಿ 292 ಮತ್ತು ಏಕದಿನ ಕ್ರಿಕೆಟ್‌ನಲ್ಲಿ 273 ವಿಕೆಟ್ ಉರುಳಿಸಿದ್ದಾರೆ. ಟೆಸ್ಟ್‌ನಲ್ಲೂ ಏಕದಿನ ಕ್ರಿಕೆಟ್‌ನಲ್ಲೂ 10 ಸಾವಿರಕ್ಕೂ ಹೆಚ್ಚು ರನ್ ಮತ್ತು 250ಕ್ಕೂ ಹೆಚ್ಚು ವಿಕೆಟ್ ಪಡೆದಿರುವ ವಿಶ್ವದ ಏಕೈಕ ಆಟಗಾರ ಅವರು.

ಅವರು ಹಾಲ್ ಆಫ್‌ ಫೇಮ್‌ಗೆ ಪಾತ್ರರಾದ ದಕ್ಷಿಣ ಆಫ್ರಿಕಾದ ನಾಲ್ಕನೇ ಆಟಗಾರ. ಜಹೀರ್ ಅಬ್ಬಾಸ್ ಈ ಗೌರವ ಗಳಿಸಿದ ಪಾಕಿಸ್ತಾನದ ಆರನೇ ಆಟಗಾರ. ಸ್ಥಳೇಕರ್ ಹಾಲ್ ಆಫ್ ಫೇಮ್ ಆದ ಆಸ್ಟ್ರೇಲಿಯಾದ 27ನೇ ಕ್ರಿಕೆಟ್‌ ಪಟು ಹಾಗೂ ಒಂಬತ್ತನೇ ಆಟಗಾರ್ತಿ. ಈ ಹಿಂದೆ ಗೌರವ ಗಳಿಸಿದ ಎಂಟು ಮಂದಿಯ ಪೈಕಿ ಐವರು ಆಸ್ಟ್ರೇಲಿಯಾದವರೇ ಆಗಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಐದು ವರ್ಷಗಳ ನಂತರ ಈ ಗೌರವಕ್ಕೆ ಪರಿಗಣಿಸಲಾಗುತ್ತದೆ. ಈ ವರೆಗೆ ಒಟ್ಟು 93 ಮಂದಿ ಹಾಲ್ ಆಫ್ ಫೇಮ್ ಆಗಿದ್ದಾರೆ.

ಪಾಕಿಸ್ತಾನ ಪರ 78 ಟೆಸ್ಟ್ ಪಂದ್ಯಗಳನ್ನು ಆಡಿರುವ ಅಬ್ಬಾಸ್ 62 ಏಕದಿನ ಪಂದ್ಯಗಳಲ್ಲೂ ದೇಶವನ್ನು ಪ್ರತಿನಿಧಿಸಿದ್ದಾರೆ. ಕ್ರಮವಾಗಿ 5062 ಮತ್ತು 2572 ರನ್ ಕಲೆ ಹಾಕಿದ್ದಾರೆ. ಎರಡೂ ಮಾದರಿಗಳಲ್ಲಿ 40ಕ್ಕೂ ಹೆಚ್ಚು ಸರಾಸರಿ ಹೊಂದಿರುವುದು ಅವರ ಹೆಗ್ಗಳಿಕೆ. 73 ವರ್ಷದ ಅಬ್ಬಾಸ್ ಸತತ ಮೂರು ಏಕದಿನ ಪಂದ್ಯಗಳಲ್ಲಿ ಶತಕ ಗಳಿಸಿದ ಮೊದಲಿಗ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 100 ಶತಕಗಳನ್ನು ಗಳಿಸಿದ ಏಷ್ಯಾದ ಏಕೈಕ ಆಟಗಾರ ಕೂಡ ಆಗಿದ್ದಾರೆ. ಅವರನ್ನು ಏಷ್ಯಾದ ಬ್ರಾಡ್‌ಮಾನ್ ಎಂದೂ ಕರೆಯಲಾಗುತ್ತದೆ.

ಆಸ್ಟ್ರೇಲಿಯಾ ಮಹಿಳಾ ತಂಡವನ್ನು ಎಂಟು ಟೆಸ್ಟ್, 125 ಏಕದಿನ ಮತ್ತು 54 ಟ್ವೆಂಟಿ–20 ಪಂದ್ಯಗಳಲ್ಲಿ ಪ್ರತಿನಿಧಿಸಿರುವ ಸ್ಥಳೇಕರ್ ‘ಹಾಲ್ ಆಫ್ ಫೇಮ್‌ ಗೌರವ ಗಳಿಸಿದ ಪ್ರತಿಭಾವಂತರ ಸಾಲಿನಲ್ಲಿ ನಾನು ಕೂಡ ಸ್ಥಾನ ಗಳಿಸುವೆನು ಎಂದು ಕನಸಿನಲ್ಲೂ ಎನಿಸಿರಲಿಲ್ಲ. ಆದ್ದರಿಂದ ಈಗ ಅತ್ಯಂತ ವಿನಯದಿಂದ ಗೌರವವನ್ನು ಸ್ವೀಕರಿಸುತ್ತಿದ್ದೇನೆ’ ಎಂದು ಹೇಳಿದರು.

ಕಾಲಿಸ್ ಅವರೊಂದಿಗೆ ದೀರ್ಘ ಕಾಲ ಕ್ರಿಕೆಟ್ ಆಡಿರುವ ಶಾನ್ ಪೊಲಾಕ್ ಮತ್ತುಭಾರತದ ಸುನಿಲ್ ಗಾವಸ್ಕರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಬ್ಬಾಸ್ ಬಗ್ಗೆ ಮಾತನಾಡಿದ ಗಾವಸ್ಕರ್ ‘ಈ ಗೌರವಕ್ಕೆ ಅವರು ಯೋಗ್ಯರು. ಅವರ ಆಟವನ್ನು ಎದುರಾಳಿ ತಂಡದವರು ಕೂಡ ಮೆಚ್ಚುತ್ತಿದ್ದರು. ಹೆಚ್ಚು ರನ್ ಗಳಿಸಲು ಅವರಲ್ಲಿದ್ದ ದಾಹ ಬೆರಗು ಮೂಡಿಸುವಂಥಾದ್ದು. ಅವರನ್ನು ಗೆಳೆಯ ಎಂದು ಕರೆಯಲು ನನಗೆ ಅತ್ಯಂತ ಸಂತೋಷವಾಗುತ್ತದೆ’ ಎಂದರು.

2009ರಲ್ಲಿ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾಗಿದ್ದ ಗಾವಸ್ಕರ್ ಅವರು ಕಾಲಿಸ್ ಕುರಿತು ಕೂಡ ಮೆಚ್ಚುಗೆಯ ಮಾತುಗಳನ್ನಾಡಿದರು. ‘ಕಾಲಿಸ್ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಹಾಲ್ ಆಫ್ ಫೇಮ್ ಗೌರವಕ್ಕೆ ಅವರು ಸೂಕ್ತ ವ್ಯಕ್ತಿ’ ಎಂದು ಅವರು ಹೇಳಿದರು.

ಸ್ಥಳೇಕರ್ ಬಗ್ಗೆ ಮಾತನಾಡಿ ‘ನೀವು ಆಸ್ಟ್ರೇಲಿಯಾದಲ್ಲಿ ಮಾತ್ರವಲ್ಲ, ಭಾರತದಲ್ಲೂ ಅನೇಕರಿಗೆ ಪ್ರೇರಣೆಯಾಗಿದ್ದೀರಿ. ಭಾರತದ ಜೂನಿಯರ್ ಕ್ರಿಕೆಟಿಗರು ಒಳಗೊಂಡಂತೆ ಅನೇಕ ಆಟಗಾರ್ತಿಯರ ಜೊತೆ ಸಂವಾದ ನಡೆಸಿರುವ ನೀವು ಮಹಿಳೆಯರು ಕೂಡ ಅತ್ಯುನ್ನತ ಮಟ್ಟಕ್ಕೆ ಏರಬಹುದು ಎಂಬುದನ್ನು ಸಾಬೀತು ಮಾಡಿದ್ದೀರಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT