ಗುರುವಾರ , ಡಿಸೆಂಬರ್ 5, 2019
20 °C

ಕಪಿಲ್ ಜೀವನಾಧಾರಿತ ಸಿನಿಮಾ ‘83’ | ರಣವೀರ್ ’ನಟರಾಜ ಶಾಟ್’ಗೆ ಫ್ಯಾನ್ಸ್ ಫಿದಾ

Published:
Updated:

ಬೆಂಗಳೂರು: ಕ್ರಿಕೆಟ್‌ ಜಗತ್ತು ಕಂಡ ಶ್ರೇಷ್ಠ ಆಲ್ರೌಂಡರ್ ಹಾಗೂ ಭಾರತಕ್ಕೆ ಮೊದಲ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಕಪಿಲ್‌ ದೇವ್‌ ಅವರ ಜೀವನಾಧಾರಿತ ಸಿನಿಮಾ ‘83’ ಬಾಲಿವುಡ್‌ನಲ್ಲಿ ತಯಾರಾಗುತ್ತಿರುವುದು ಹಳೇ ವಿಚಾರ. ಕಪಿಲ್‌ ಪಾತ್ರದಲ್ಲಿ ರಣವೀರ್‌ ಸಿಂಗ್‌ ಕಾಣಿಸಿಕೊಳ್ಳಲಿ‌‌ದ್ದಾರೆ ಎಂಬುದೂ ಹೊಸತೇನಲ್ಲ. ಈ ಹಿಂದೆ ಸಿನಿಮಾದ ಫಸ್ಟ್‌ಲುಕ್‌ ರಿಲೀಸ್‌ ಆದಾಗ, ಥೇಟ್‌ ಕಪಿಲ್‌ರಂತೆಯೇ ಕಾಣಿಸಿಕೊಂಡಿದ್ದ ಸಿಂಗ್‌, ಇದೀಗ ಮತ್ತೊಂದು ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ರಣವೀರ್‌ ಲುಕ್‌ಗೆ ಕಪಿಲ್‌ ಬೌಲ್ಡ್!

ಕಪಿಲ್‌ ದೇವ್‌ ಅವರ ನೆಚ್ಚಿನ ನಟರಾಜ ಶಾಟ್‌ (ಬ್ಯಾಟಿಂಗ್‌ ಶೈಲಿ) ಅನ್ನು ನಕಲು ಮಾಡಿರುವ ರಣವೀರ್‌, ನಟರಾಜ ಶೈಲಿಯಲ್ಲಿ ಎಡಗಾಲನ್ನು ಮೇಲೆತ್ತಿ ಬ್ಯಾಟನ್ನು ಬಲವಾಗಿ ಬೀಸಿ ಚೆಂಡನ್ನೇ ದಿಟ್ಟಿಸುತ್ತಿರುವ ಫೋಟೊವೊಂದನ್ನು ಟ್ವಿಟರ್‌ನಲ್ಲಿ ಹರಿಬಿಟ್ಟಿದ್ದಾರೆ. ಇಂದು ಬೆಳಗ್ಗೆ 9 ಗಂಟೆಗೆ ಹಂಚಿಕೆಯಾಗಿರುವ ಈ ಚಿತ್ರವನ್ನು ಈಗಾಗಲೇ 31 ಸಾವಿರಕ್ಕೂ ಹೆಚ್ಚು ಜನರು ಮೆಚ್ಚಿಕೊಂಡಿದ್ದಾರೆ. 2.7 ಸಾವಿರ ಮಂದಿ ತಮ್ಮ ಖಾತೆಗಳಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಚಿತ್ರಕ್ಕೆ ಪ್ರತಿಕ್ರಿಯಿಸಿರುವ ಬಹುತೇಕರು, ಕಪಿಲ್‌ ದೇವ್‌ ಅವರ ಪಡಿಯಚ್ಚಿನಂತೆಯೇ ಕಾಣುತ್ತಿದ್ದೀರಿ ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಈ ಚಿತ್ರವನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿರುವ ಕಪಿಲ್, ರಣವೀರ್‌ಗೆ ಹ್ಯಾಟ್ಸ್‌ ಆಫ್‌ ಹೇಳಿದ್ದಾರೆ.

ಸಿನಿಮಾಕ್ಕಾಗಿ ಸಾಕಷ್ಟು ತಯಾರಿ ನಡೆಸಿರುವ ರಣವೀರ್‌, ಕಪಿಲ್‌ರ ಗುಣ, ಸ್ವಭಾವದ ಸೂಕ್ಷ್ಮ ವಿಷಯಗಳ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ಅವರ ನಿವಾಸದಲ್ಲಿಯೇ ಉಳಿದುಕೊಂಡಿದ್ದರು. ಮಾತ್ರವಲ್ಲ ಕಪಿಲ್‌ ಅವರಿಂದಲೇ ಕ್ರಿಕೆಟ್‌ ತರಬೇತಿಯನ್ನೂ ಪಡೆದುಕೊಂಡಿದ್ದರಂತೆ.

ಇದನ್ನೂ ಓದಿ: ‘83’ ರೋಚಕಇತಿಹಾಸದ ಚಿತ್ರ

ಕಪಿಲ್ ದೇವ್‌ ಅವರ ನೇತೃತ್ವದ ಭಾರತ ತಂಡ 1983ರಲ್ಲಿ ಕ್ರಿಕೆಟ್‌ ವಿಶ್ವಕಪ್‌ ಗೆದ್ದಿತು. ಇದೇ ಕಥಾವಸ್ತುವನ್ನಿಟ್ಟುಕೊಂಡು ‘83’ ಸಿನಿಮಾ ಎಣೆಯಲಾಗುತ್ತಿದೆ. ಈ ಚಿತ್ರವನ್ನು ಕಬೀರ್‌ ಖಾನ್‌ ನಿರ್ದೇಶಿಸುತ್ತಿದ್ದು, ಇದರಲ್ಲಿ ರಣವೀರ್‌ ಪತ್ನಿ ದೀಪಿಕಾ ಪಡುಕೋಣೆಯೇ ಕಪಿಲ್‌ ಪತ್ನಿ ರೋಮಿ ದೇವ್‌ ಅವರ ಪಾತ್ರ ನಿರ್ವಹಿಸಲಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು