ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವದತ್ತಗೆ ಸತತ ಎರಡನೇ ಶತಕ ಸಂಭ್ರಮ

ಪಾಯಿಂಟ್‌ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಕರ್ನಾಟಕ; ಗೋವಾಕ್ಕೆ ನಿರಾಸೆ
Last Updated 16 ಅಕ್ಟೋಬರ್ 2019, 19:28 IST
ಅಕ್ಷರ ಗಾತ್ರ

ಬೆಂಗಳೂರು: ಲೆಗ್‌ಸ್ಪಿನ್ನರ್ ಪ್ರವೀಣ ದುಬೆ ಬೌಲಿಂಗ್‌ನಲ್ಲಿ ಕುಸಿದ ಗೋವಾ ತಂಡದ ಗಾಯದ ಮೇಲೆ ಕರ್ನಾಟಕದ ಎಡಗೈ ಬ್ಯಾಟ್ಸ್‌ಮನ್ ದೇವದತ್ತ ಪಡಿಕ್ಕಲ್ ಬರೆ ಎಳೆದರು.

ದುಬೆ (29ಕ್ಕೆ3) ಮತ್ತು ಟೂರ್ನಿಯಲ್ಲಿ ಸತತ ಎರಡನೇ ಶತಕ ಹೊಡೆದ ದೇವದತ್ತ (102; 116ಎಸೆತ, 6ಬೌಂಡರಿ, 5 ಸಿಕ್ಸರ್) ಅವರ ಆಟದ ಬಲದಿಂದ ಕರ್ನಾಟಕ ತಂಡವು ಗೋವಾ ಎದುರು 8 ವಿಕೆಟ್‌ಗಳಿಂದ ಗೆದ್ದಿತು.ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದ ಮೂರನೇ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಗೋವಾ ತಂಡವು ಮೊದಲು ಬ್ಯಾಟಿಂಗ್ ಮಾಡಿತು. ಆದರೆ ಕರ್ನಾಟಕದ ಬೌಲಿಂಗ್ ಎದುರು 47.5 ಓವರ್‌ಗಳಲ್ಲಿ 171 ರನ್‌ಗಳ ಮೊತ್ತವನ್ನು ಗಳಿಸಿತು.ಆದಿತ್ಯ ಕೌಶಿಕ್ (75 ರನ್) ಮತ್ತು ದರ್ಶನ್ ಮಿಸಾಳ್ (33 ರನ್) ಅವರ ಆಟದಿಂದಾಗಿ ತಂಡಕ್ಕೆ ನೂರೈವತ್ತು ರನ್‌ಗಳ ಗಡಿ ದಾಟಲು ಸಾಧ್ಯವಾಯಿತು. ಇಲ್ಲದಿದ್ದರೆ ಅಲ್ಪಮೊತ್ತಕ್ಕೆ ಪತನವಾಗುವ ಆತಂಕದಲ್ಲಿತ್ತು.

ಗುರಿ ಬೆನ್ನಟ್ಟಿದ ಆತಿಥೇಯ ತಂಡವು 34.2 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 177 ರನ್‌ ಗಳಿಸಿತು. ಈಗಾಗಲೇ ಕ್ವಾರ್ಟರ್‌ಫೈನಲ್‌ ತಲುಪಿರುವ ಮನೀಷ್ ಪಾಂಡೆ ನಾಯಕತ್ವದ ಬಳಗವು ಒಟ್ಟು 28 ಪಾಯಿಂಟ್‌ಗಳೊಂದಿಗೆ ಲೀಗ್ ಹಂತದ ಅಭಿಯಾನ ಮುಗಿಸಿತು. ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿತು. ಪ್ಲೇಟ್‌ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡವನ್ನು ಕರ್ನಾಟಕವು ಎಂಟರ ಘಟ್ಟದ ಪಂದ್ಯದಲ್ಲಿ ಎದುರಿಸಲಿದೆ.

ದೇವದತ್ತ ಮಿಂಚು: ಬೆಂಗಳೂರಿನ 19 ವರ್ಷದ ದೇವದತ್ತಗೆ ಇದೇ ಮೊದಲ ಬಾರಿ ವಿಜಯ್ ಹಜಾರೆ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಒಟ್ಟು ಎಂಟು ಪಂದ್ಯಗಳಲ್ಲಿಯೂ ಅವರು ಇನಿಂಗ್ಸ್‌ ಆರಂಭಿಸಿದರು.

ಮೂರು ಅರ್ಧಶತಕ ಮತ್ತು ಎರಡು ಅಜೇಯ ಅರ್ಧಶತಕಗಳನ್ನು ಅವರು ದಾಖಲಿಸಿದ್ದಾರೆ. ಒಟ್ಟು 456 ರನ್‌ಗಳನ್ನು ಪೇರಿಸಿದ್ದಾರೆ.

ಹೋದ ಪಂದ್ಯದಲ್ಲಿ ಸೌರಾಷ್ಟ್ರ ವಿರುದ್ಧ ಅವರು ತಮ್ಮ ಚೊಚ್ಚಲ ಶತಕ ದಾಖಲಿಸಿದ್ದರು. ಇಲ್ಲಿ ರಾಹುಲ್ ಜೊತೆಗೆ ಇನಿಂಗ್ಸ್‌ ಆರಂಭಿಸಿದರು.

ರಾಹುಲ್ ಕೇವಲ 9 ರನ್ ಗಳಿಸಿದರು. ಅವರು ಎತ್ತಿದ ಒಂದು ಸಿಕ್ಸರ್‌ಗೆ ಚೆಂಡು ಮಾಧ್ಯಮ ಗ್ಯಾಲರಿಗೆ ಬಂದು ಬಿತ್ತು.

ಬೇಗನೆ ಇನಿಂಗ್ಸ್‌ ಮುಗಿಸುವ ಭರದಲ್ಲಿ ಆಟದ ವೇಗ ಹೆಚ್ಚಿಸಿದ ರಾಹುಲ್ ಲಕ್ಷ್ಯ ಗಾರ್ಗ್ ಎಸೆತವನ್ನು ಪುಲ್ ಮಾಡಿದರು. ವೈಭವ್ ಗೋವೆಕರ್‌ಗೆ ಕ್ಯಾಚಿತ್ತರು. ದೇವದತ್ತ ಜೊತೆಗೆ ಕರುಣ್ ನಾಯರ್ (21; 36ಎಸೆತ) ಎರಡನೇ ವಿಕೆಟ್‌ಗೆ 65 ರನ್‌ ಸೇರಿಸಿದರು. ಕರುಣ್ ತಮ್ಮ ಹಳೆಯ ಗೆಳೆಯ ಅಮಿತ್ ವರ್ಮಾ ಬೌಲಿಂಗ್‌ನಲ್ಲಿ ಔಟಾದರು.

ದೇವದತ್ತ ಜೊತೆಗೂಡಿದ ಮನೀಷ್ ಪಾಂಡೆ (ಅಜೇಯ 34; 34ಎಸೆತ 1ಬೌಂಡರಿ, 3ಸಿಕ್ಸರ್) ತಂಡವನ್ನು ಗೆಲುವಿನ ದಡ ಸೇರಿಸಿದರು. ಟೂರ್ನಿಯಲ್ಲಿ ಮನೀಷ್‌ 505 ರನ್‌ ಗಳಿಸಿದ ಸಾಧನೆ ಮಾಡಿದರು. ಅವರು ಒಂದು ಶತಕ ಮತ್ತು ಐದು ಅರ್ಧಶತಕಗಳನ್ನು ಹೊಡೆದಿದ್ದಾರೆ.

ಸಂಕ್ಷಿಪ್ತ ಸ್ಕೋರು
ಗೋವಾ:
47.5 ಓವರ್‌ಗಳಲ್ಲಿ 171 (ಆದಿತ್ಯ ಕೌಶಿಕ್ 75, ದರ್ಶನ್ ಮಿಸಾಳ್ 33, ಅಭಿಮನ್ಯು ಮಿಥುನ್ 26ಕ್ಕೆ2, ಜೆ. ಸುಚಿತ್ 28ಕ್ಕ2, ಪ್ರವೀಣಕುಮಾರ್ ದುಬೆ 29ಕ್ಕೆ3, ಕೆ. ಗೌತಮ್ 41ಕ್ಕೆ1, ಕರುಣ್ ನಾಯರ್ 23ಕ್ಕೆ1).

ಕರ್ನಾಟಕ: 34.2 ಓವರ್‌ಗಳಲ್ಲಿ 2ಕ್ಕೆ177 (ದೇವದತ್ತ ಪಡಿಕ್ಕಲ್ ಔಟಾಗದೆ 102, ಕರುಣ್ ನಾಯರ್ 21, ಮನೀಷ್ ಪಾಂಡೆ 34, ಲಕ್ಷ್ಯ ಗರ್ಗ್ 27ಕ್ಕೆ1, ಅಮಿತ್ ವರ್ಮಾ 37ಕ್ಕೆ1) ಫಲಿತಾಂಶ: ಕರ್ನಾಟಕ ತಂಡಕ್ಕೆ 8 ವಿಕೆಟ್‌ಗಳ ಜಯ ಮತ್ತು ನಾಲ್ಕು ಪಾಯಿಂಟ್ಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT