ಗುರುವಾರ , ಜನವರಿ 23, 2020
22 °C
ಹುಬ್ಬಳ್ಳಿಯಲ್ಲಿ ಇಂದಿನಿಂದ ರಣಜಿ ಪಂದ್ಯ; 200ನೇ ಗೆಲುವಿನ ಮೇಲೆ ಕರ್ನಾಟಕ ತಂಡದ ಕಣ್ಣು

ಉತ್ತರ ಪ್ರದೇಶಕ್ಕೆ ಯುವಪಡೆ ಸವಾಲು

ಪ್ರಮೋದ್ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಪ್ರಮುಖ ಆಟಗಾರರ ಅನುಪಸ್ಥಿತಿ ಎದುರಿಸುತ್ತಿರುವ ಕರ್ನಾಟಕ ತಂಡ, ಯುವಪಡೆಯ ಬಲದೊಂದಿಗೆ ರಣಜಿ ಟೂರ್ನಿಯಲ್ಲಿ ಉತ್ತರ ಪ್ರದೇಶ ತಂಡದ ಸವಾಲು ಎದುರಿಸಲು ಸಜ್ಜಾಗಿದೆ.

ಹಸಿರಿನಿಂದ ಕಂಗೊಳಿಸುತ್ತಿರುವ ಇಲ್ಲಿನ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಮಂಗಳವಾರ ಆರಂಭವಾಗಲಿರುವ ನಾಲ್ಕು ದಿನಗಳ ಪಂದ್ಯದಲ್ಲಿ ಗೆಲುವಿನ ‘ದ್ವಿಶತಕ’ದ ಸಾಧನೆ ಮಾಡಲು ಕೂಡ ರಾಜ್ಯ ತಂಡ ಕಾತರದಿಂದ ಇದೆ.

ರಣಜಿ ಟೂರ್ನಿಯಲ್ಲಿ ಕರ್ನಾಟಕ ಇದುವರೆಗೂ 440 ಪಂದ್ಯಗಳನ್ನಾಡಿ 199ರಲ್ಲಿ ಗೆಲುವು ಸಾಧಿಸಿದೆ. 175 ಪಂದ್ಯಗಳು ಡ್ರಾ ಆಗಿದ್ದು, 66 ಪಂದ್ಯಗಳಲ್ಲಿ ಸೋತಿದೆ. ಇಲ್ಲಿ ಗೆದ್ದರೆ 200 ಪಂದ್ಯಗಳಲ್ಲಿ ಗೆಲುವು ಸಾಧಿಸಿದ ದೇಶದ ಎರಡನೇ ತಂಡ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಮುಂಬೈ (241 ಪಂದ್ಯಗಳಲ್ಲಿ ಜಯ) ಮೊದಲ ಸ್ಥಾನದಲ್ಲಿದೆ.‌

ಈ ಬಾರಿಯ ರಣಜಿ ಟೂರ್ನಿಯಲ್ಲಿ ಕರ್ನಾಟಕಕ್ಕೆ ಇದು ಎರಡನೇ ಪಂದ್ಯ. ದಿಂಡಿಗಲ್‌ನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ತಮಿಳುನಾಡು ತಂಡದ ಎದುರು 26 ರನ್‌ಗಳ ಗೆಲುವು ಸಾಧಿಸಿತ್ತು. ಸ್ಪಿನ್ನರ್‌ ಗೌತಮ್‌ ಕೃಷ್ಣಪ್ಪ ಒಟ್ಟು 14 ವಿಕೆಟ್‌ಗಳನ್ನು ಉರುಳಿಸಿ ಗೆಲುವಿಗೆ ಕಾರಣರಾಗಿದ್ದರು. ಅವರು ಗಾಯಗೊಂಡಿರುವ ಕಾರಣ ‌ಇಲ್ಲಿನ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ಶಕ್ತಿ ಎನಿಸಿದ್ದ ಸ್ಥಳೀಯ ಆಟಗಾರ ಪವನ್‌ ದೇಶಪಾಂಡೆ ಕೂಡ ಗಾಯಗೊಂಡಿದ್ದು ತಂಡದಲ್ಲಿ ಸ್ಥಾನ ಗಳಿಸಿಲ್ಲ. ‌

ಬ್ಯಾಟ್ಸ್‌ಮನ್‌ಗಳಾದ ಮಯಂಕ್‌ ಅಗರವಾಲ್‌, ಕೆ.ಎಲ್‌. ರಾಹುಲ್‌ ಮತ್ತು ಮನೀಷ್ ಪಾಂಡೆ ವೆಸ್ಟ್‌ ಇಂಡೀಸ್‌ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿ ಆಡುತ್ತಿರುವ ರಾಷ್ಟ್ರೀಯ ತಂಡದಲ್ಲಿದ್ದಾರೆ. ಆದ್ದರಿಂದ ಯುವ ಪ್ರತಿಭೆಗಳಾದ ದೇವದತ್ತ ಪಡಿಕ್ಕಲ್‌, ಡೇಗಾ ನಿಶ್ಚಲ್‌, ಅಭಿಷೇಕ ರೆಡ್ಡಿ, ಬಿ.ಆರ್‌. ಶರತ್‌, ಆರ್‌.ಸಮರ್ಥ್, ಪ್ರವೀಣ ದುಬೆ, ಆಲ್‌ರೌಂಡರ್‌ ಶ್ರೇಯಸ್‌ ಗೋಪಾಲ್‌ ಅವರ ಮೇಲೆ ಹೆಚ್ಚು ಜವಾಬ್ದಾರಿಯಿದೆ.

ತಂಡವನ್ನು ಮುನ್ನಡೆಸಲಿರುವ ಅನುಭವಿ ಆಟಗಾರ ಕರುಣ್‌ ನಾಯರ್‌ ಅವರ ಮುಂದೆ ಹನ್ನೊಂದು ಆಟಗಾರರ ತಂಡವನ್ನು ಅಂತಿಮಗೊಳಿಸುವ ದೊಡ್ಡ ಸವಾಲು ಇದೆ. ಇಲ್ಲಿನ ಪಿಚ್‌ ಸ್ಪರ್ಧಾತ್ಮಕವಾಗಿ ವರ್ತಿಸುವುದರಿಂದ ಮೂವರು ವೇಗಿಗಳು ಹಾಗೂ ಇಬ್ಬರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಯಾರಿಗೆ ಅವಕಾಶ ಸಿಗುತ್ತದೆ ಎನ್ನುವ ಕುತೂಹಲವೂ ಮೂಡಿದೆ.

ತಂಡದ ಅಭ್ಯಾಸ ಮುಗಿದ ಬಳಿಕ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ತಂಡದ ಉಪನಾಯಕ ಶ್ರೇಯಸ್‌ ಗೋಪಾಲ್‌ ಅವರನ್ನು ಈ ಕುರಿತು ಪ್ರಶ್ನಿಸಿದಾಗ ‘ಒಂದು ದಿನ ಕಾದು ನೋಡಿ’ ಎಂದು ಚುಟುಕಾಗಿ ಪ್ರತಿಕ್ರಿಯಿಸಿದರು.

ಮೊದಲ ಗೆಲುವಿನತ್ತ ಚಿತ್ತ: ಕನ್ನಡಿಗ ಸುನೀಲ್ ಜೋಶಿ ತರಬೇತುದಾರರಾಗಿರುವ ಉತ್ತರ ಪ್ರದೇಶ ತಂಡ ಈ ಸಲದ ರಣಜಿ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆಯುವ ಲೆಕ್ಕಾಚಾರದಲ್ಲಿದೆ.

ಮೀರಟ್‌ನಲ್ಲಿ ನಡೆದಿದ್ದ ರೈಲ್ವೇಸ್‌ ಮತ್ತು ಉತ್ತರ ಪ್ರದೇಶ ತಂಡಗಳ ನಡುವಣ ಪಂದ್ಯ ಡ್ರಾ ಆಗಿತ್ತು. ರೈಲ್ವೇಸ್ ಇನಿಂಗ್ಸ್‌ ಮುನ್ನಡೆ ಪಡೆದುಕೊಂಡಿತ್ತು. 19 ವರ್ಷದ ಒಳಗಿನವರ ವಿಶ್ವಕಪ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದ ಭಾರತ ತಂಡದಲ್ಲಿದ್ದ ಶಿವಮ್‌ ಮಾವಿ ತಂಡದ ಬೌಲಿಂಗ್‌ ಶಕ್ತಿಯಾಗಿದ್ದಾರೆ. ನಾಯಕ ಅಂಕಿತ್‌ ರಜಪೂತ್‌, ಯಶ್ ದಯಾಳ್‌, ಸೌರಭ್‌ ಕುಮಾರ್‌ ತಂಡದ ಪ್ರಮುಖ ಬೌಲರ್‌ಗಳು.

ಪಂದ್ಯ ಆರಂಭ: ಬೆಳಿಗ್ಗೆ 9.30ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌.

 

ಕರ್ನಾಟಕ ತಂಡ ವಿಜಯ ಹಜಾರೆ ಮತ್ತು ಸೈಯದ್‌ ಮುಷ್ತಾಕ್‌ ಅಲಿ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದೆ. ಆದ್ದರಿಂದ ಈ ಸವಾಲು ಸುಲಭ ಎಂದುಕೊಂಡಿಲ್ಲ
-ಸುನೀಲ್ ಜೋಶಿ, ಉತ್ತರ ಪ್ರದೇಶ ತಂಡದ ಕೋಚ್‌

 

ಗೌತಮ್‌ ಇಲ್ಲದ ಕಾರಣ ಕಷ್ಟವಾಗಿದೆ. ಆದರೆ, ಹಿರಿಯ ಆಟಗಾರರ ಅನುಪಸ್ಥಿತಿ ತುಂಬಬಲ್ಲ ಸಾಮರ್ಥ್ಯ ಈಗಿನ ತಂಡದ ಆಟಗಾರರಿಗೆ ಇದೆ
-ಶ್ರೇಯಸ್‌ ಗೋಪಾಲ್‌, ಕರ್ನಾಟಕ ತಂಡದ ಉಪನಾಯಕ

****

ಹುಬ್ಬಳ್ಳಿಯಲ್ಲಿ ನಡೆದಿದ್ದ ಕರ್ನಾಟಕದ ಪಂದ್ಯಗಳ ಫಲಿತಾಂಶ

ವರ್ಷ;ಎದುರಾಳಿ;ಫಲಿತಾಂಶ

1971–72;ಕೇರಳ;ಗೆಲುವು

1976–77;ಆಂಧ್ರ;ಡ್ರಾ

1992–93;ಹೈದರಾಬಾದ್‌;ಫಲಿತಾಂಶವಿಲ್ಲ

2012–13;ಹರಿಯಾಣ;ಡ್ರಾ

2013–14;ಪಂಜಾಬ್‌;ಗೆಲುವು

2014–15;ಜಮ್ಮು ಮತ್ತು ಕಾಶ್ಮೀರ;ಗೆಲುವು

2015–16;ದೆಹಲಿ; ಡ್ರಾ

ಅಂಕಿಅಂಶ: ಚನ್ನಗಿರಿ ಕೇಶವಮೂರ್ತಿ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು