ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ: ಮಯಂಕ್ ಬಳಗಕ್ಕೆ ಇನಿಂಗ್ಸ್ ಮುನ್ನಡೆ

ರಜತ್ ಶತಕ, ಕ್ಯಾಚ್‌ಗಳನ್ನು ಕೈಚೆಲ್ಲಿದ ಆತಿಥೇಯ ಫೀಲ್ಡರ್‌ಗಳು
Last Updated 15 ಡಿಸೆಂಬರ್ 2022, 19:43 IST
ಅಕ್ಷರ ಗಾತ್ರ

ಬೆಂಗಳೂರು: ಗುರುವಾರ ದಿನದಾಟದ ಮೊದಲ ಎಸೆತದಲ್ಲಿಯೇ ’ಜೀವದಾನ‘ ಪಡೆದ ಸರ್ವಿಸಸ್ ತಂಡದ ರಜತ್ ಪಲೀವಾಲ ಕರ್ನಾಟಕದ ದೊಡ್ಡ ಮುನ್ನಡೆಯ ಅವಕಾಶವನ್ನು ಕಸಿದುಕೊಂಡರು. ಜೊತೆಗೆ ಸುಂದರ ಶತಕವನ್ನೂ ದಾಖಲಿಸಿದರು.

ಆದರೂ ಮಯಂಕ್ ಅಗರವಾಲ್ ಬಳಗವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಸಿ ಗುಂಪಿನ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 43 ರನ್‌ಗಳ ಅಲ್ಪ ಮುನ್ನಡೆ ಗಳಿಸಿತು.

ಕರ್ನಾಟಕವು ಮೊದಲ ಇನಿಂಗ್ಸ್‌ನಲ್ಲಿ ಗಳಿಸಿದ್ದ 304 ರನ್‌ಗಳ ಮೊತ್ತ ಬೆನ್ನಟ್ಟಿದ್ದ ಸರ್ವಿಸಸ್ ತಂಡಕ್ಕೆ 83.2 ಓವರ್‌ಗಳಲ್ಲಿ 261 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಎರಡನೇ ಇನಿಂಗ್ಸ್ ಆರಂಭಿಸಿದ ಆತಿಥೇಯ ತಂಡವು ’ಮಂದಬೆಳಕಿನ ಕಾರಣ‘ಕ್ಕೆ ಆಟ ಸ್ಥಗಿತವಾದಾಗ 25 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 90 ರನ್ ಗಳಿಸಿದೆ. ಆರ್. ಸಮರ್ಥ್ (ಬ್ಯಾಟಿಂಗ್ 40) ಹಾಗೂ ಮಯಂಕ್ ಅಗರವಾಲ್ (ಬ್ಯಾಟಿಂಗ್ 47) ಕ್ರೀಸ್‌ನಲ್ಲಿದ್ದಾರೆ. ತಂಡವು ಒಟ್ಟು 133 ರನ್‌ಗಳ ಮುನ್ನಡೆಯಲ್ಲಿದೆ.

ಪಂದ್ಯದಲ್ಲಿ ಇನ್ನೊಂದು ದಿನ ಉಳಿದಿದೆ. ಕರ್ನಾಟಕ ತಂಡವು ಎದುರಾಳಿ ತಂಡಕ್ಕೆ ಕಠಿಣ ಗುರಿಯೊಡ್ಡಿ ಜಯಿಸಲು ಸಮಯಾವಕಾಶ ಕಡಿಮೆ ಇದೆ. ಇದರಿಂದಾಗಿ ಡ್ರಾ ಆಗುವ ಸಾಧ್ಯತೆಯೇ ಹೆಚ್ಚಿದೆ.

ಕೈಚೆಲ್ಲಿದ ಕ್ಯಾಚ್‌ಗಳು; ರಜತ್ ಶತಕ: ಬುಧವಾರ ದಿನದಾಟದ ಮುಕ್ತಾಯಕ್ಕೆ ಸರ್ವಿಸಸ್ ತಂಡವು 4 ವಿಕೆಟ್‌ಗಳ ನಷ್ಟಕ್ಕೆ ಗಳಿಸಿದ್ದ 96 ರನ್‌ಗಳಿಗೆ, ಮೂರನೇ ದಿನ 165 ರನ್‌ಗಳನ್ನು ಸೇರಿಸಲು ಕರ್ನಾಟಕ ತಂಡದ ಕಳಪೆ ಫೀಲ್ಡಿಂಗ್ ಕಾರಣವಾಯಿತು. ಒಟ್ಟು ನಾಲ್ಕು ಕ್ಯಾಚ್‌ಗಳು ಮಣ್ಣುಪಾಲಾದವು.

ರೋನಿತ್ ಮೋರೆ ಹಾಕಿದ ದಿನದ ಮೊದಲ ಓವರ್‌ನಲ್ಲಿಯೇ ಪ್ರಥಮ ಸ್ಲಿಪ್ ಫೀಲ್ಡರ್ ವಿಶಾಲ್ ಒನತ್ ಅವರು ರಜತ್‌ ಕ್ಯಾಚ್ ಕೈಚೆಲ್ಲಿದರು. ಆಗ ರಜತ್ 42 ರನ್‌ ಗಳಿಸಿದ್ದರು. ರಜತ್ 93 ರನ್‌ ಗಳಿಸಿದ ಸಂದರ್ಭದಲ್ಲಿಯೂ ಒಂದು ಜೀವದಾನ ಸಿಕ್ಕಿತು. ಈ ಬಾರಿ ತುಸು ಕಷ್ಟದ ಕ್ಯಾಚ್ ಅದಾಗಿತ್ತು. ಗೌತಮ್ ಬೌಲಿಂಗ್‌ನಲ್ಲಿ ರಜತ್ ಸ್ವೀಪ್ ಆಡುವ ಪ್ರಯತ್ನ ಮಾಡಿದರು. ಆಗ ಬ್ಯಾಟ್‌ಗೆ ತಗುಲಿದ ಚೆಂಡು ವೇಗವಾಗಿ ಚಿಮ್ಮಿತು. ತಮ್ಮಿಂದ ಸ್ವಲ್ಪ ದೂರದಲ್ಲಿ ಸಾಗುತ್ತಿದ್ದ ಚೆಂಡು ಹಿಡಿಯಲು ಶಾರ್ಟ್‌ ಲೆಗ್‌ನಲ್ಲಿದ್ದ ವಿಶಾಲ್ ಪ್ರಯತ್ನಕ್ಕೆ ಫಲ ಸಿಗಲಿಲ್ಲ.

ರಜತ್ ತಾವೆದುರಿಸಿದ 162ನೇ ಎಸೆತದಲ್ಲಿ ಶತಕದ ಗಡಿ ದಾಟಿದರು. 220 ನಿಮಿಷ ಬ್ಯಾಟಿಂಗ್ ಮಾಡಿ ಈ ಸಾಧನೆ ಮಾಡಿದರು. ಅದರಲ್ಲಿ 12 ಬೌಂಡರಿಗಳೂ ಸೇರಿದ್ದವು. ಅವರು, ಶ್ರೇಯಸ್ ಗೋಪಾಲ್ ಎಸೆತದಲ್ಲಿ ನಿಕಿನ್‌ ಜೋಸ್‌ಗೆ ಕ್ಯಾಚಿತ್ತು ನಿರ್ಗಮಿಸಿದರು.

ರಜತ್ ಜೊತೆಗೆ ಎರಡನೇ ದಿನ ಕ್ರೀಸ್‌ನಲ್ಲಿ ಉಳಿದಿದ್ದ ರವಿ ಚೌಹಾಣ್ (56 ರನ್) ಅರ್ಧಶತಕ ಗಳಿಸಿದರು. ಅವರು49 ರನ್ ಗಳಿಸಿದ್ದ ಸಂದರ್ಭದಲ್ಲಿ ವಿಕೆಟ್‌ಕೀಪರ್ ಶರತ್ ಸುಲಭ ಕ್ಯಾಚ್ ಕೈಚೆಲ್ಲಿದರು.ಊಟದ ನಂತರದ ಅವಧಿಯಲ್ಲಿ ಹೊಸ ಚೆಂಡು ಪಡೆದ ವಿದ್ವತ್ ಹಾಕಿದ ಎಸೆತದಲ್ಲಿ ದಿವೇಶ್ ಎತ್ತರಕ್ಕೆ ಹೊಡೆದ ಚೆಂಡನ್ನು ಹಿಡಿತಕ್ಕೆ ಪಡೆಯುವಲ್ಲಿ ಕವರ್ಸ್‌ನಲ್ಲಿದ್ದ ಮಯಂಕ್ ವಿಫಲರಾದರು. ಸ್ವಲ್ಪ ಹೊತ್ತಿನ ನಂತರ ರೋನಿತ್ ಎಸೆತದಲ್ಲಿ ದಿವೇಶ್ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ರಾಹುಲ್ ಮತ್ತು ನಿಶಾನ್ ಸಿಂಗ್ ಅವರ ವಿಕೆಟ್‌ಗಳನ್ನೂ ರೋನಿತ್ ಪಡೆದರು.

ಸ್ಕೋರ್‌ ಕಾರ್ಡ್‌

ಮೊದಲ ಇನಿಂಗ್ಸ್

ಕರ್ನಾಟಕ 304 (74.4 ಓವರ್‌ಗಳಲ್ಲಿ)

ಸರ್ವಿಸಸ್ 261 (83.2 ಓವರ್‌ಗಳಲ್ಲಿ)

ರವಿ ಸಿ ಮಯಂಕ್ ಬಿ ಗೌತಮ್ 56 (99ಎ, 4X8)

ರಜತ್ ಸಿ ನಿಕಿನ್ ಬಿ ಶ್ರೇಯಸ್ 124 (217ಎ, 4X14)

ರಾಹುಲ್ ಸಿ ಶರತ್ ಬಿ ರೋನಿತ್ 36

ದಿವೇಶ್ ಎಲ್‌ಬಿಡಬ್ಲ್ಯು ರೋನಿತ್ 11

ಅರ್ಪಿತ್ ಔಟಾಗದೆ 7 (7ಎ, 4X1)

ನಿಶಾನ್ ಬಿ ರೋನಿತ್ 0(1ಎ)

ಇತರೆ: 3 (ಲೆಗ್‌ಬೈ 2, ವೈಡ್ 1)

ವಿಕೆಟ್ ಪತನ: 5–134 (ರವಿ ಚೌಹಾಣ 37.2), 6–157 (ಪುಳ್ಕಿತ್ ನಾರಂಗ್; 46.4), 7–237 (ರಜತ್ ಪಲೀವಾಲ; 76.5), 8–252 (ದಿವೇಶ್ ಗುರುದೇವ್ ಪಠಾಣಿಯಾ; 81.1), 9–261 (ರಾಹುಲ್ ಸಿಂಗ್; 83.1), 10–261 (ನಿಶಾನ್ ಸಿಂಗ್; 83.2)

ಬೌಲಿಂಗ್‌: ವಿದ್ವತ್ ಕಾವೇರಪ್ಪ 21–4–64–4, ವಿ. ವೈಶಾಖ 16–1–63–1, ರೋನಿತ್ ಮೋರೆ 16.2–3–54–3, ಕೆ. ಗೌತಮ್ 19–2–39–1, ಶ್ರೇಯಸ್ ಗೋಪಾಲ್ 11–1–39–1

ಎರಡನೇ ಇನಿಂಗ್ಸ್: ಕರ್ನಾಟಕ ವಿಕೆಟ್ ನಷ್ಟವಿಲ್ಲದೇ 90 (25 ಓವರ್‌ಗಳಲ್ಲಿ)

ಸಮರ್ಥ್ ಬ್ಯಾಟಿಂಗ್ 40 (82ಎ, 4X5)

ಮಯಂಕ್ ಬ್ಯಾಟಿಂಗ್ 47 (69ಎ, 4X5)

ಇತರೆ: 3(ಬೈ 1, ವೈಡ್ 1,

ನೋಬಾಲ್ 1)

ಬೌಲಿಂಗ್‌: ದಿವೇಶ್ ಪಠಾಣಿಯಾ 5–0–31–0, ನಿಶಾನ್ ಸಿಂಗ್ 5–2–0–7–0, ಅರ್ಪಿತ್ ಗುಲೇರಿಯಾ 7–1–24–0, ಪುಳ್ಕಿತ್ ನಾರಂಗ್ 8–1–27–0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT