ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಕೀಪಿಂಗ್‌ನಲ್ಲಿ ಬೀಸುತಿದೆ ಹೊಸ ಗಾಳಿ

Last Updated 11 ನವೆಂಬರ್ 2018, 19:30 IST
ಅಕ್ಷರ ಗಾತ್ರ

ಇನ್ನು ಆರು ತಿಂಗಳು ಕಳೆದರೆ ಇಂಗ್ಲೆಂಡ್‌ನಲ್ಲಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸಂಭ್ರಮ ಗರಿಗೆದರಲಿದೆ. ಅಲ್ಲಿ ಆಡಲಿರವ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಈಗ ಬಹುತೇಕ ಆಟಗಾರರು ಚಿತ್ತ ನೆಟ್ಟಿದ್ದಾರೆ. ಅದಕ್ಕಾಗಿಯೇ ಇದೀಗ ಆರಂಭವಾಗಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯನ್ನು ಎಲ್ಲ ಆಟಗಾರರೂ ಬಹಳ ಗಂಭೀರವಾಗಿ ತೆಗೆದುಕೊಂಡಿದ್ದಾರೆ.

ಆದರಲ್ಲೂ ಕರ್ನಾಟಕದ ಆಟಗಾರರೂ ಹಿಂದೆ ಬಿದ್ದಿಲ್ಲ. ಇದೇ ಹೊತ್ತಿನಲ್ಲಿ ರಾಜ್ಯ ತಂಡದಲ್ಲಿ ಹೊಸ ಗಾಳಿ ಬೀಸುತ್ತಿದೆ. ಈ ಬಾರಿಯ ರಣಜಿ ಟೂರ್ನಿಯಲ್ಲಿ ಕರ್ನಾಟಕ ತಂಡವು ಇದೇ 12ರಂದು ತನ್ನ ಮೊದಲ ಪಂದ್ಯ ಆಡಲಿದೆ. ನಾಗಪುರದಲ್ಲಿ ಹಾಲಿ ಚಾಂಪಿಯನ್ ವಿದರ್ಭ ತಂಡವನ್ನು ಎದುರಿಸಲಿದೆ. ಹೋದ ವರ್ಷ ಸೆಮಿಫೈನಲ್‌ ಹಂತದಲ್ಲಿ ಇದೇ ವಿದರ್ಭ ತಂಡವು ವಿನಯಕುಮಾರ್ ನಾಯಕತ್ವದ ಬಳಗವನ್ನು ಮಣಿಸಿತ್ತು.

ಕೋಲ್ಕತ್ತದಲ್ಲಿ ನಡೆದಿದ್ದ ಪಂದ್ಯದಲ್ಲಿ ಗೆಲುವಿನಂಚಿನಲ್ಲಿ ತಂಡವು ಎಡವಿತ್ತು. ಅದರಿಂದಾಗಿ ಕೆಲವು ಮಹತ್ವದ ಬದಲಾವಣೆಗಳೊಂದಿಗೆ ತಂಡವನ್ನು ಕಣಕ್ಕಿಳಿಸಲಾಗುತ್ತಿದೆ. ಅದರಲ್ಲಿ ಪ್ರಮುಖವಾಗಿ ವಿಕೆಟ್‌ ಕೀಪರ್‌ ಸ್ಥಾನಕ್ಕೆ ಇಬ್ಬರು ಹೊಸಪ್ರತಿಭೆಗಳನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಶರತ್ ಶ್ರೀನಿವಾಸ್ ಮತ್ತು ಬಿ.ಆರ್. ಶರತ್ ಅವರೇ ಆ ಇಬ್ಬರು. ಅನುಭವಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಸಿ.ಎಂ. ಗೌತಮ್ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ.

ಈಚೆಗೆ ವಿಜಯ್ ಹಜಾರೆ ಟ್ರೋಫಿಯಲ್ಲಿಯೂ ಕರ್ನಾಟಕ ತಂಡವು ಲೀಗ್ ಹಂತದಲ್ಲಿ ಎಡವಿತ್ತು. ಆ ಸಂದರ್ಭದಲ್ಲಿಯೇ ಕೆಲವು ಪಂದ್ಯಗಳಲ್ಲಿ ಗೌತಮ್‌ ಅವರನ್ನು ಕೈಬಿಡಲಾಗಿತ್ತು. ಭಿ.ಆರ್. ಶರತ್‌ಗೆ ಸ್ಥಾನ ನೀಡಲಾಗಿತ್ತು. ಶರತ್ ಕೂಡ ಭರವಸೆ ಮೂಡಿಸುವಂತಹ ಆಟವಾಡಿದ್ದರು. ಚುರುಕಿನ ಫೀಲ್ಡಿಂಗ್ ಜೊತೆಗೆ, ಬ್ಯಾಟಿಂಗ್‌ನಲ್ಲಿಯೂ ಮಿಂಚಿದ್ದರು. ಒಂದು ಅರ್ಧಶತಕ ಗಳಿಸಿದ್ದರು.

ಶರತ್ ಶ್ರೀನಿವಾಸ್ ಅವರೂ ವಯೋಮಿತಿಯ ಕ್ರಿಕೆಟ್‌ನಲ್ಲಿ ಮಿಂಚಿರುವ ಬೆಂಗಳೂರಿನ ಪ್ರತಿಭಾನ್ವಿತ. ಇಬ್ಬರಿಗೂ 22 ವರ್ಷ ತುಂಬಿವೆ. ಕ್ರಿಕೆಟ್ ಅಂಗಳದಲ್ಲಿ ತಮ್ಮ ಛಾಪು ಮೂಡಿಸುವ ಉತ್ಸಾಹದಲ್ಲಿದ್ದಾರೆ. ಆದರೆ ಇವರಿಬ್ಬರಲ್ಲಿ ಯಾರು ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳುತ್ತಾರೆ ಎಂಬ ಕುತೂಹಲ ಈಗ ಗರಿಗೆದರಿದೆ. ಕರ್ನಾಟಕ ತಂಡದ ವಿಕೆಟ್‌ಕೀಪರ್ ಆಗಿ ಕಾರ್ಯನಿರ್ವಹಿಸುವುದು ಸುಲಭವಲ್ಲ. ಏಕೆಂದರೆ ರಾಜ್ಯ ತಂಡಕ್ಕೆ ಈ ವಿಭಾಗದಲ್ಲಿ ಬಹಳ ಭವ್ಯವಾದ ಪರಂಪರೆ ಇದೆ.

ಕರ್ನಾಟಕದ ಕ್ರಿಕೆಟ್ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ, ಆಟದ ಎಲ್ಲ ವಿಭಾಗಗಳಿಗೂ ಅಪ್ರತಿಮ ಆಟಗಾರರನ್ನು ಕೊಡುಗೆ ನೀಡಿದ ಹೆಮ್ಮೆಯ ಭಾವ ಮೂಡುವುದರಲ್ಲಿ ಸಂದೇಹವೇ ಇಲ್ಲ. ಆದರಲ್ಲೂ ವಿಕೆಟ್‌ಕೀಪಿಂಗ್‌ ಕ್ಷೇತ್ರಕ್ಕೆ ನಮ್ಮ ರಾಜ್ಯ ನೀಡಿರುವ ಕೊಡುಗೆಯನ್ನು ಬೇರೆ ಯಾವುದೇ ರಾಜ್ಯವೂ ನೀಡಿಲ್ಲ.

41 ಬಾರಿ ರಣಜಿ ಚಾಂಪಿಯನ್ ಆಗಿರುವ ಮುಂಬೈ ತಂಡವು ವಿಶ್ವ ದಾಖಲೆಯ ಬ್ಯಾಟ್ಸ್‌ಮನ್‌ಗಳನ್ನು ಮತ್ತು ಬೌಲರ್‌ಗಳನ್ನು ಕೊಡುಗೆ ನೀಡಿದೆ. ಆದರೆ ವಿಕೆಟ್‌ಕೀಪಿಂಗ್ ವಿಷಯದಲ್ಲಿ ಅದು ಕರ್ನಾಟಕ್ಕೆ ಸರಿಸಾಟಿ ಅಲ್ಲ. ಕೀಪಿಂಗ್‌ ಎನ್ನುವುದು ಕಠಿಣ ಕಲೆಯೂ ಹೌದು, ವಿಜ್ಞಾನ ಮತ್ತು ಗಣಿತವೂ ಹೌದು. ಇದೊಂದು ‘ಥ್ಯಾಂಕ್‌ಲೆಸ್‌’ ಕೆಲಸವೂ ಹೌದು. ಕೀಪರ್ ಎಷ್ಟೇ ಚೆನ್ನಾಗಿ ಕಾರ್ಯನಿರ್ವಹಿಸಿದರೂ ಅದು ಆತನ ಕರ್ತವ್ಯ. ಸಣ್ಣ ಲೋಪ ಎಸಗಿದರೆ ಮಾತ್ರ ಎಲ್ಲರ ಕೆಂಗಣ್ಣೂ ಆತನ ಮೇಲೆಯೇ. ಇಂತಹ ಗುರುತರ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ವಿಶ್ವದಾಖಲೆ ಬರೆದವರನ್ನು ಕರ್ನಾಟಕದವರು ಎಂಬುದೇ ಹೆಮ್ಮೆ.

ಕೃಷ್ಣಸ್ವಾಮಿ ಬಾಲಾಜಿ ಶ್ರೀನಿವಾಸನ್, ಬುಧಿ ಕುಂದರನ್, ಸೈಯದ್ ಮುಜ್ತಬಾ ಹುಸೇನ್ ಕಿರ್ಮಾನಿ, ಸದಾನಂದ್ ವಿಶ್ನನಾಥ್, ಕೆ.ಆರ್. ರಾಜಗೋಪಾಲ್, ರಾಹುಲ್ ದ್ರಾವಿಡ್ (ಭಾರತದ ಪರ ವಿಕೆಟ್‌ಕೀಪಿಂಗ್ ಮಾಡಿದ್ದರು), ಅವಿನಾಶ್ ವೈದ್ಯ, ಸೋಮಶೇಖರ್ ಶಿರಗುಪ್ಪಿ, ತಿಲಕನಾಯ್ಡು ಮತ್ತು ಸಿ.ಎಂ. ಗೌತಮ್ ಅವರ ಸಾಧನೆಗಳು ಸಣ್ಣದಲ್ಲ. ಐಪಿಎಲ್‌ನಲ್ಲಿ ತಮ್ಮ ತಂಡಗಳ ಪರವಾಗಿ ಸಾಂದರ್ಭಿಕವಾಗಿ ವಿಕೆಟ್‌ಕೀಪಿಂಗ್ ಮಾಡುವ ರಾಬಿನ್ ಉತ್ತಪ್ಪ, ಕೆ.ಎಲ್. ರಾಹುಲ್ ಕೂಡ ಕರ್ನಾಟಕದ ಈ ವಿಭಾಗವನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ.

ಇವರೆಲ್ಲರೂ ಕಟ್ಟಿರುವ ಸಾಧನೆಗಳ ಗೋಪುರಕ್ಕೆ ಹೊನ್ನಿನ ಕಳಶ ಇಡುವ ಕಾರ್ಯವನ್ನು ಮುಂಬರುವ ಯುವ ಕೀಪರ್‌ಗಳು ಮಾಡುವ ಸವಾಲು ಇದೆ. ಏಕೆಂದರೆ, ಈ ಕಾಲಘಟ್ಟದಲ್ಲಿ ಭಾರತ ತಂಡದ ವಿಕೆಟ್‌ಕೀಪಿಂಗ್‌ಗೆ ಸ್ಥಾನ ಗಿಟ್ಟಿಸುವುದು ಸುಲಭದ ಮಾತಲ್ಲ. ಮಹೇಂದ್ರಸಿಂಗ್ ಧೋನಿ ಮಾಡಿರುವ ಸಾಧನೆಗಳನ್ನು ಸರಿಗಟ್ಟಬಲ್ಲ ಸಾಮರ್ಥ್ಯ ಇರುವವರಿಗೆ ಮಾತ್ರ ಅವಕಶ ಸಿಗುವುದು ಖಚಿತ. ಅದಕ್ಕಾಗಿ ದೇಶದ ಉದ್ದಗಲ್ಲಕ್ಕೂ ಯುವ ವಿಕೆಟ್‌ಕೀಪರ್‌ಗಳು ಶ್ರಮಿಸುತ್ತಿದ್ದಾರೆ. ಈ ಹಾದಿಯಲ್ಲಿ ರಿಷಭ್ ಪಂತ್ ಸದ್ಯ ಮುಂಚೂಣಿಯಲ್ಲಿದ್ದಾರೆ. ಕೀಪಿಂಗ್ ಜೊತೆಗೆ ಬ್ಯಾಟಿಂಗ್‌ನಲ್ಲಿಯೂ ಮಹತ್ವದ ಕಾಣಿಕೆ ಕೊಡುವವರಿಗೆ ಆದ್ಯತೆ ಸಿಗುತ್ತದೆ. ಆದ್ದರಿಂದ ಕರ್ನಾಟಕದ ಕೀಪರ್‌ಗಳ ಮುಂದೆ ಇರುವ ಹಾದಿ ತುಂಬ ಕಠಿಣ. ಇದನ್ನು ಶರತ್ ದ್ವಯರು ಹೇಗೆ ಎದುರಿಸುತ್ತಾರೆ ಕಾದು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT