ಸಿದ್ಧಾರ್ಥ್ ಕೌಲ್ ದಾಳಿಗೆ ಕರ್ನಾಟಕ ತತ್ತರ

ಬೆಂಗಳೂರು: ಮಧ್ಯಮವೇಗಿ ಸಿದ್ಧಾರ್ಥ್ ಕೌಲ್ ಅವರ ದಾಳಿಯ ಮುಂದೆ ಆತಿಥೇಯ ಕರ್ನಾಟಕ ತಂಡವು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಸೋಲಿನ ಕಹಿ ಅನುಭವಿಸಿತು.
ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಕೌಲ್ (26ಕ್ಕೆ4) ಬಲದಿಂದ ಪಂಜಾಬ್ ತಂಡವು 9 ವಿಕೆಟ್‌ಗಳಿಂದ ಗೆದ್ದಿತು.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಪಂಜಾಬ್ ತಂಡದ ಬೌಲರ್‌ಗಳು ಉತ್ತಮ ದಾಳಿ ಸಂಘಟಿಸಿದರು. ಅದರಿಂದಾಗಿ ಆತಿಥೇಯ ಬಳಗವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 125 ರನ್ ಗಳಿಸಿತು. ಅದಕ್ಕುತ್ತರವಾಗಿ ಪಂಜಾಬ್ ತಂಡವು ಸಿಮ್ರನ್ ಸಿಂಗ್ (ಔಟಾಗದೆ 89; 52ಎಸೆತ, 9ಬೌಂಡರಿ, 5 ಸಿಕ್ಸರ್) ಅಬ್ಬರದ ಬ್ಯಾಟಿಂಗ್ ಬಲದಿಂದ 14.4 ಓವರ್‌ಗಳಲ್ಲಿ 1 ವಿಕೆಟ್‌ಗೆ 127 ರನ್ ಕಲೆ ಹಾಕಿ ಜಯಿಸಿತು.
ಎಲೀಟ್ ಎ ಗುಂಪಿನ ಮೊದಲ ಪಂದ್ಯದಲ್ಲಿ ಕರುಣ್ ನಾಯರ್ ಬಳಗವು ಜಮ್ಮು ಕಾಶ್ಮೀರ್ ತಂಡದ ವಿರುದ್ಧ ಜಯಿಸಿತ್ತು. ಆದರೆ, ಎರಡನೇ ಪಂದ್ಯದಲ್ಲಿ ಪಂಜಾಬ್ ಬೌಲಿಂಗ್ ಪಡೆಯನ್ನು ಎದುರಿಸುವಲ್ಲಿ ಎಡವಿತು.
ಅದರಲ್ಲೂ ಸಿದ್ಧಾರ್ಥ್ ಕೌಲ್ ಅವರ ಶಿಸ್ತಿನ ದಾಳಿಗೆ ಹಾಲಿ ಚಾಂಪಿಯನ್ ಕರ್ನಾಟಕವು ಸಾಧಾರಣ ಮೊತ್ತ ಗಳಿಸಿತು.
ಕೌಲ್ ಬೌಲಿಂಗ್‌ನಲ್ಲಿ ನಾಯಕ ಕರುಣ್ ನಾಯರ್ (13), ರೋಹನ್ ಕದಂ (32), ಅನಿರುದ್ಧ ಜೋಶಿ (7) ಮತ್ತು ಅಭಿಮನ್ಯು ಮಿಥುನ್ ಬೇಗನೆ ಪೆವಿಲಿಯನ್ ಸೇರಿದರು.
ಮೊದಲ ಪಂದ್ಯದಲ್ಲಿ ತಂಡದ ಗೆಲುವಿನ ರೂವಾರಿಯಾಗಿದ್ದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಕೆ.ಎಲ್. ಶ್ರೀಜಿತ್ ಇಲ್ಲಿ ಖಾತೆ ತೆರೆಯದಂತೆ ಆರ್ಷದೀಪ್ ಸಿಂಗ್ ನೋಡಿಕೊಂಡರು. ಆರಂಭಿಕ ಬ್ಯಾಟ್ಸ್‌ಮನ್ ದೇವದತ್ತ ಪಡಿಕ್ಕಲ್ ಗೂ ವಿಕೆಟ್ ಕೂಡ ಆರ್ಷದೀಪ್ ಕಬಳಿಸಿದರು.
ಬೆಳಗಾವಿಯ ರೋಹನ್ ಕದಂ 33 ಎಸೆತಗಳಲ್ಲಿ 32 ರನ್ ಗಳಿಸಿದರು. ಅದರಲ್ಲಿ ಮೂರು ಬೌಂಡರಿಗಳೂ ಸೇರಿದ್ದವು. ಕರ್ನಾಟಕ ತಂಡದ ಪರವಾಗಿ ಹೆಚ್ಚು ರನ್ ಗಳಿಸಿದ ಆಟಗಾರನಾದರು.
ಸಂಕ್ಷಿಪ್ತ ಸ್ಕೋರು
ಕರ್ನಾಟಕ: 20 ಓವರ್‌ಗಳಲ್ಲಿ 8ಕ್ಕೆ125 (ದೇವದತ್ತ ಪಡಿಕ್ಕಲ್ 19, ಕರುಣ್ ನಾಯರ್ 13, ಕೆ.ಗೌತಮ್ 13, ರೋಹನ್ ಕದಂ 32, ಪವನ್ ದೇಶಪಾಂಡೆ 16, ಸಿದ್ಧಾರ್ಥ್ ಕೌಲ್ 26ಕ್ಕೆ4, ಆರ್ಷದೀಪ್ ಸಿಂಗ್ 18ಕ್ಕೆ2)
ಪಂಜಾಬ್: 14.4 ಓವರ್‌ಗಳಲ್ಲಿ 1 ವಿಕೆಟ್‌ಗೆ 127 (ಅಭಿಷೇಕ್ ಶರ್ಮಾ 30, ಸಿಮ್ರನ್ ಸಿಂಗ್ ಔಟಾಗದೆ 89, ಕೆ. ಗೌತಮ್ 28ಕ್ಕೆ1)
ಫಲಿತಾಂಶ: ಪಂಜಾಬ್ ತಂಡಕ್ಕೆ 9 ವಿಕೆಟ್‌ಗಳ ಜಯ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.