ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಮಿಫೈನಲ್‌ಗೆ ಸಮೀರ್‌ ವರ್ಮಾ

Last Updated 31 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಒರ್ಲೀನ್ಸ್‌, ಫ್ರಾನ್ಸ್‌: ಮಿಂಚಿನ ಆಟ ಆಡಿದ ಭಾರತದ ಸಮೀರ್‌ ವರ್ಮಾ, ಒರ್ಲೀನ್ಸ್‌ ಓಪನ್‌ ವಿಶ್ವ ಸೂಪರ್‌ –100 ಟೆನಿಸ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ಶನಿವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ ಹೋರಾಟದಲ್ಲಿ ಸಮೀರ್‌ 17–21, 21–19, 21–15ರಿಂದ ಫ್ರಾನ್ಸ್‌ನ ಲೂಕಾಸ್‌ ಕೊರ್ವೀ ಅವರನ್ನು ಸೋಲಿಸಿದರು.

ತವರಿನ ಅಭಿಮಾನಿಗಳ ಮುಂದೆ ಕಣಕ್ಕಿಳಿದಿದ್ದ ಲೂಕಾಸ್‌ ಮೊದಲ ಗೇಮ್‌ನಲ್ಲಿ  ಉತ್ತಮವಾಗಿ ಆಡಿದರು. ಚುರುಕಿನ ಸರ್ವ್‌ಗಳ ಜೊತೆಗೆ ಬ್ಯಾಕ್‌ಹ್ಯಾಂಡ್‌ ಮತ್ತು ಫೋರ್‌ಹ್ಯಾಂಡ್‌ ಹೊಡೆತಗಳಿಂದ ಭಾರತದ ಆಟಗಾರನನ್ನು ತಬ್ಬಿಬ್ಬುಗೊಳಿಸಿ ಗೇಮ್‌ ಜಯಿಸಿದರು.

ಆರಂಭಿಕ ನಿರಾಸೆಯಿಂದ ಸಮೀರ್‌ ಎದೆಗುಂದಲಿಲ್ಲ.  ಅವರು ಎರಡನೇ ಗೇಮ್‌ನಲ್ಲಿ ಉತ್ತಮ ಆಟ ಆಡಿದರು.

ಮನಮೋಹಕ ಕ್ರಾಸ್‌ಕೋರ್ಟ್‌ ಹೊಡೆತಗಳನ್ನು ಬಾರಿಸಿ ಅಭಿಮಾನಿಗಳನ್ನು ರಂಜಿಸಿದ ಸಮೀರ್, ಬೇಸ್‌ಲೈನ್‌ ಹೊಡೆತಗಳ ಮೂಲಕವೂ ಪಾಯಿಂಟ್ಸ್‌ ಗಳಿಸಿ ಮುನ್ನಡೆ ಸಾಧಿಸಿದರು. ವಿರಾಮದ ನಂತರವೂ ಕೆಚ್ಚೆದೆಯಿಂದ ಹೋರಾಡಿದ ಭಾರತದ ಆಟಗಾರ ಗೇಮ್‌ ಗೆದ್ದು 1–1ರಲ್ಲಿ ಸಮಬಲ ಮಾಡಿಕೊಂಡರು.

ನಿರ್ಣಾಯಕ ಎನಿಸಿದ್ದ ಮೂರನೇ ಗೇಮ್‌ನಲ್ಲಿ ಉಭಯ ಆಟಗಾರರೂ ತುರುಸಿನ ಪೈಪೋಟಿ ನಡೆಸಿದರು. ಹೀಗಾಗಿ ಮೊದಲರ್ಧದಲ್ಲಿ ಸಮಬಲದ ಹೋರಾಟ ಕಂಡುಬಂತು. ನಂತರ ಸಮೀರ್‌ ಆಟ ರಂಗೇರಿತು. ಪಾದರಸದಂತಹ ಚಲನೆಯ ಮೂಲಕ ಎದುರಾಳಿ ಬಾರಿಸುತ್ತಿದ್ದ ಷಟಲ್‌ ಹಿಂತಿರುಗಿಸುತ್ತಿದ್ದ ಅವರು, ಚುರುಕಿನ ಡ್ರಾಪ್‌ಗಳ ಮೂಲಕ ಪಾಯಿಂಟ್ಸ್‌ ಹೆಕ್ಕಿದರು. ಇದರಿಂದ ವಿಚಲಿತರಾದಂತೆ ಕಂಡ ಲೂಕಾಸ್‌ ಹಲವು ತಪ್ಪುಗಳನ್ನು ಮಾಡಿದರು. ಇದರ ಲಾಭ ಎತ್ತಿಕೊಂಡ ಸಮೀರ್‌ ಗೆಲುವಿನ ತೋರಣ ಕಟ್ಟಿದರು.

ಈ ಹೋರಾಟ ಒಂದು ಗಂಟೆ ಎಂಟು ನಿಮಿಷ ನಡೆಯಿತು.

ನಾಲ್ಕರಘಟ್ಟದ ಪಂದ್ಯದಲ್ಲಿ ಸಮೀರ್‌, ನೆದರ್ಲೆಂಡ್ಸ್‌ನ ಮಾರ್ಕ್‌ ಕ್ಯಾಲ್‌ಜೋವ್‌ ವಿರುದ್ಧ ಸೆಣಸಲಿದ್ದಾರೆ. ಮಾರ್ಕ್‌ ಇಲ್ಲಿ ನಾಲ್ಕನೇ ಶ್ರೇಯಾಂಕದ ಆಟಗಾರರಾಗಿದ್ದಾರೆ.

ಕಶ್ಯಪ್‌ಗೆ ನಿರಾಸೆ: ಸಿಂಗಲ್ಸ್‌ ವಿಭಾಗದಲ್ಲಿ  ಭಾರತದ ಇನ್ನೊಬ್ಬ ಆಟಗಾರ ಪರುಪಳ್ಳಿ ಕಶ್ಯಪ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಸೋತರು.

ಐದನೇ ಶ್ರೇಯಾಂಕಿತ ಆಟಗಾರ ಕಶ್ಯಪ್‌ 18–21, 14–21ರಲ್ಲಿ ಮೂರನೇ ಶ್ರೇಯಾಂಕಿತ ಆಟಗಾರ ರಾಸ್‌ಮಸ್‌ ಜೆಮ್ಕೆ ಎದುರು ಶರಣಾದರು.

ಪುರುಷರ ಡಬಲ್ಸ್‌ ವಿಭಾಗದ ಪಂದ್ಯದಲ್ಲಿ ಭಾರತದ ಕೆ. ನಂದಗೋಪಾಲ್‌ ಮತ್ತು ಫ್ರಾನ್ಸಿಸ್‌ ಅಲ್ವಿನ್‌ 21–19, 14–21, 8–21ರಲ್ಲಿ ಜರ್ಮನಿಯ ಮಾರ್ಕ್‌ ಲ್ಯಾಮಸ್‌ಫಸ್‌ ಮತ್ತು ಮಾರ್ವಿನ್‌ ಎಮಿಲ್‌ ಸೀಡೆಲ್‌ ವಿರುದ್ಧ ಸೋತರು. ಈ ಪಂದ್ಯ 44 ನಿಮಿಷ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT