ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೇಸ್‌ ದಾಳಿಗೆ ಹಳಿತಪ್ಪಿದ ಕರ್ನಾಟಕ

ರಣಜಿ ಕ್ರಿಕೆಟ್: ಸಿದ್ದಾರ್ಥ್‌, ನಿಶ್ಚಲ್‌ ಅರ್ಧಶತಕ l ಮನೀಷ್ ಪಾಂಡೆಗೆ ನಾಯಕತ್ವ l ವಿನಯ ಕುಮಾರ್‌ಗೆ ವಿಶ್ರಾಂತಿ
Last Updated 22 ಡಿಸೆಂಬರ್ 2018, 19:21 IST
ಅಕ್ಷರ ಗಾತ್ರ

ಶಿವಮೊಗ್ಗ: ಎದುರಾಳಿ ಬೌಲರ್‌ಗಳ ಸಾಮರ್ಥ್ಯವನ್ನು ಲಘುವಾಗಿ ಪರಿಗಣಿಸಿ ಕಣಕ್ಕಿಳಿದ ಕರ್ನಾಟಕ ತಂಡ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ರೈಲ್ವೇಸ್‌ ವಿರುದ್ಧ ಪರದಾಟ ನಡೆಸಿದೆ.

ನವುಲೆಯ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ಶನಿವಾರ ಆರಂಭವಾದ ಪಂದ್ಯದಲ್ಲಿ ರೈಲ್ವೇಸ್‌ ತಂಡದ ದಾಳಿಗೆ ಆತಿಥೇಯರ ಬ್ಯಾಟಿಂಗ್‌ ಹಳಿತಪ್ಪಿತು. ಮೊದಲ ದಿನದಾಟದ ಅಂತ್ಯಕ್ಕೆ ಕರ್ನಾಟಕ 89 ಓವರ್‌ಗಳಲ್ಲಿ 9 ವಿಕೆಟ್‌ಗೆ 208 ರನ್‌ ಗಳಿಸಿದೆ.

ಅಮಿತ್‌ ಮಿಶ್ರಾ (57ಕ್ಕೆ 3), ಅವಿನಾಶ್ ಯಾದವ್ (43ಕ್ಕೆ 3) ಮತ್ತು ಕರಣ್‌ ಠಾಕೂರ್‌ (41ಕ್ಕೆ 2) ಅವರ ಪ್ರಭಾವಿ ದಾಳಿಗೆ ಕರ್ನಾಟಕ ನಲುಗಿತು. ಕೆ.ವಿ.ಸಿದ್ದಾರ್ಥ್‌ (69, 185 ಎಸೆತ, 6 ಬೌಂ, 2 ಸಿ) ಹಾಗೂ ಡಿ.ನಿಶ್ಚಲ್ (52, 172 ಎಸೆತ, 4 ಬೌಂ) ಮಾತ್ರ ಛಲದ ಆಟವಾಡಿದರು.

ಆರಂಭಿಕ ಆಘಾತ: ಟಾಸ್‌ ಗೆದ್ದ ರೈಲ್ವೇಸ್‌ ಫೀಲ್ಡಿಂಗ್‌ ಆಯ್ದುಕೊಂಡಿತು. ಪಿಚ್‌ನಲ್ಲಿ ತೇವವಿದ್ದ ಕಾರಣ ಮೊದಲ ಒಂದು ಗಂಟೆಯ ಆಟ ಕರ್ನಾಟಕದ ಬ್ಯಾಟ್ಸ್‌ಮನ್‌ಗಳಿಗೆ ಸವಾಲಿನದ್ದಾಗಿತ್ತು. ರೈಲ್ವೇಸ್‌ ಮಧ್ಯಮವೇಗಿಗಳು ಉತ್ತಮ ಲೈನ್‌ ಮತ್ತು ಲೆಂತ್‌ ಕಾಪಾಡಿಕೊಂಡು ಬೌಲ್‌ ಮಾಡಿದರು.

ಮೊದಲ ಎಸೆತದಿಂದಲೇ ತಡಕಾಡಿದ ಆರ್‌.ಸಮರ್ಥ್ ಏಳನೇ ಓವರ್‌ನಲ್ಲಿ ಅಮಿತ್‌ ಮಿಶ್ರಾ ಬೌಲಿಂಗ್‌ನಲ್ಲಿ ಮೊದಲ ಸ್ಲಿಪ್‌ನಲ್ಲಿ ಪ್ರಶಾಂತ್‌ ಗುಪ್ತಾ ಅವರಿಗೆ ಕ್ಯಾಚಿತ್ತು ಔಟಾದರು. 21 ಎಸೆತಗಳನ್ನು ಎದುರಿಸಿದ ಅವರ ಗಳಿಕೆ ಕೇವಲ ಮೂರು.

ಬಳಿಕ ಬಂದ ದೇವದತ್ತ ಪಡಿಕ್ಕಲ್ (1) ಮತ್ತು ಮನೀಷ್‌ ಪಾಂಡೆ (4) ಅವರೂ ಬೇಗನೇ ಮರಳಿದರು. ಕರಣ್‌ ಠಾಕೂರ್‌ ಬೌಲಿಂಗ್‌ನಲ್ಲಿ ಇಬ್ಬರೂ ವಿಕೆಟ್‌ ಕೀಪರ್‌ಗೆ ಕ್ಯಾಚ್‌ ಕೊಟ್ಟರು.

ಶತಕದ ಜತೆಯಾಟ: 17 ರನ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡು ಕುಸಿತದ ಹಾದಿ ಹಿಡಿದಿದ್ದ ಕರ್ನಾಟಕ ತಂಡಕ್ಕೆ ನಿಶ್ಚಲ್‌ ಮತ್ತು ಸಿದ್ದಾರ್ಥ್‌ ಆಸರೆಯಾದರು. ಭೋಜನ ವಿರಾಮದವರೆಗೆ ಹೆಚ್ಚಿನ ವಿಕೆಟ್‌ ಬೀಳದಂತೆ ಇವರು ನೋಡಿಕೊಂಡರು.

ಆರಂಭದಲ್ಲಿ ತೀರಾ ಎಚ್ಚರಿಕೆಯಿಂದ ಆಡಿದ ಇವರು ಪರಿಸ್ಥಿತಿಗೆ ಹೊಂದಿಕೊಂಡ ಬಳಿಕ ರನ್‌ ಬರತೊಡಗಿತು. ನಿಶ್ಚಲ್‌ ರಕ್ಷಣೆಯ ಚಿಪ್ಪಿನಿಂದ ಹೊರಬರಲೇ ಇಲ್ಲ. ಸಿದ್ದಾರ್ಥ್‌ ಅವಕಾಶ ಸಿಕ್ಕಾಗ ಬೌಂಡರಿ, ಸಿಕ್ಸರ್‌ ಹೊಡೆಯುವ ಧೈರ್ಯ ತೋರಿದರು.

ಅರ್ಧಶತಕದ ಗಡಿದಾಟಿದ ಬಳಿಕ ನಿಶ್ಚಲ್ ಹೆಚ್ಚುಹೊತ್ತು ನಿಲ್ಲಲಿಲ್ಲ. ಎಡಗೈ ಸ್ಪಿನ್ನರ್‌ ಅವಿನಾಶ್‌ ಯಾದವ್ ಬೌಲಿಂಗ್‌ನಲ್ಲಿ ರಕ್ಷಣಾತ್ಮಕವಾಗಿ ಆಡಲು ಪ್ರಯತ್ನಿಸಿದರು. ಆದರೆ ತೀರಾ ಕೆಳಮಟ್ಟದಲ್ಲಿ ನುಗ್ಗಿದ ಚೆಂಡು ಸ್ಟಂಪ್‌ಗೆ ಬಡಿಯಿತು. ಕರ್ನಾಟಕದ ಇನಿಂಗ್ಸ್‌ಗೆ ಜೀವ ತುಂಬಿದ ಜತೆಯಾಟಕ್ಕೆ ಅದರೊಂದಿಗೆ ತೆರೆಬಿತ್ತು. ಇವರಿಬ್ಬರು 300 ಎಸೆತಗಳಲ್ಲಿ 112 ರನ್‌ ಸೇರಿಸಿದರು.

ಹಠಾತ್‌ ಕುಸಿತ: ಚಹಾ ವಿರಾಮದ ವೇಳೆಗೆ 4 ವಿಕೆಟ್‌ಗೆ 139 ರನ್‌ ಗಳಿಸಿದ್ದ ಕರ್ನಾಟಕ ಕೊನೆಯ ಅವಧಿಯಲ್ಲಿ ಮರುಹೋರಾಟ ನಡೆಸಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಎದುರಾಳಿ ಬೌಲರ್‌ಗಳು ಅದಕ್ಕೆ ಅವಕಾಶ ನೀಡಲಿಲ್ಲ.

ಉತ್ತಮವಾಗಿ ಆಡುತ್ತಿದ್ದ ಸಿದ್ದಾರ್ಥ್‌ ಅನವಶ್ಯಕ ಹೊಡೆತಕ್ಕೆ ಮುಂದಾಗಿ ಸೌರಭ್‌ಗೆ ಕ್ಯಾಚಿತ್ತು ಔಟಾದರು. ಆ ಬಳಿಕ ಪೆವಿಲಿಯನ್‌ ಪೆರೇಡ್‌ ನಡೆಯಿತು. ಅಮಿತ್‌ ಮಿಶ್ರಾ ಒಂದೇ ಓವರ್‌ನಲ್ಲಿ ಶ್ರೇಯಸ್‌ ಗೋಪಾಲ್‌ ಮತ್ತು ಕೆ.ಗೌತಮ್‌ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. 10 ಎಸೆತಗಳ ಅಂತರದಲ್ಲಿ ಯಾವುದೇ ರನ್‌ ಗಳಿಸದೆ ಕರ್ನಾಟಕ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು.

ಶರತ್‌ ಶ್ರೀನಿವಾಸ್‌ ಕೊನೆಯಲ್ಲಿ (ಬ್ಯಾಟಿಂಗ್ 28) ಅಲ್ಪ ಪ್ರತಿರೋಧ ಒಡ್ಡಿದ್ದರಿಂದ ತಂಡದ ಮೊತ್ತ 200ರ ಗಡಿ ದಾಟಿತು.

ನಾಯಕ ಆರ್‌.ವಿನಯ್ ಕುಮಾರ್ ಮಂಡಿನೋವಿನ ಕಾರಣ ಈ ಪಂದ್ಯದಲ್ಲಿ ಕಣಕ್ಕಿಳಿಯಲಿಲ್ಲ. ಅವರ ಅನುಪಸ್ಥಿತಿಯಲ್ಲಿ ಮನೀಷ್ ಪಾಂಡೆ ತಂಡವನ್ನು ಮುನ್ನಡೆಸಿದರು.

ನಿತಿನ್‌ ಭಿಲ್ಲೆಗೆ ಐದು ಕ್ಯಾಚ್

ರೈಲ್ವೇಸ್ ತಂಡದ ವಿಕೆಟ್‌ ಕೀಪರ್ ನಿತಿನ್ ಭಿಲ್ಲೆ ಐದು ಕ್ಯಾಚ್‌ಗಳನ್ನು ಪಡೆದು ಮಿಂಚಿದರು. ವಿವಿಧ ವಯೋವರ್ಗಗಳ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದ ಧಾರವಾಡದ ನಿತಿನ್‌ ಅವರು ಕಳೆದ ಕೆಲ ವರ್ಷಗಳಿಂದ ರಣಜಿ ಟೂರ್ನಿಯಲ್ಲಿ ರೈಲ್ವೇಸ್‌ ಪರ ಆಡುತ್ತಿದ್ದಾರೆ.

**

ಇಲ್ಲಿನ ಪಿಚ್‌ನಲ್ಲಿ ಬ್ಯಾಟಿಂಗ್‌ ಕಷ್ಟ. ಒತ್ತಡದ ಪರಿಸ್ಥಿತಿಯಲ್ಲಿ ತಂಡದ ನೆರವಿಗೆ ನಿಲ್ಲಲು ಸಾಧ್ಯವಾಗಿದ್ದು ಸಂತಸ ನೀಡಿದೆ.

–ಕೆ.ವಿ.ಸಿದ್ದಾರ್ಥ್, ಕರ್ನಾಟಕದ ಆಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT