ಕರ್ನಾಟಕಕ್ಕೆ ಇನಿಂಗ್ಸ್ ಮುನ್ನಡೆಯ ‘ಶ್ರೇಯಸ್ಸು’

7
ಚೊಚ್ಚಲ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಮಾಡಿದ ಶರತ್‌; ಪಡಿಕ್ಕಲ್‌ಗೆ ಅರ್ಧಶತಕ

ಕರ್ನಾಟಕಕ್ಕೆ ಇನಿಂಗ್ಸ್ ಮುನ್ನಡೆಯ ‘ಶ್ರೇಯಸ್ಸು’

Published:
Updated:
Deccan Herald

ಸೂರತ್‌: ವೈಯಕ್ತಿಕ ಶತಕದಿಂದ ವಂಚಿತರಾದರೂ ಶ್ರೇಯಸ್ ಗೋಪಾಲ್ ಕರ್ನಾಟಕಕ್ಕೆ ಗೌರವ ತಂದುಕೊಟ್ಟರು. ಇಲ್ಲಿನ ಲಾಲಾಭಾಯಿ ಕಾಂಟ್ರಾಕ್ಟರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಎಲೀಟ್ ‘ಎ’ ಗುಂಪಿನ ಪಂದ್ಯದಲ್ಲಿ ಗೋಪಾಲ್‌ (93; 115 ಎಸೆತ; 5 ಬೌಂಡರಿ) ಮತ್ತು ದೇವದತ್ತ ಪಡಿಕ್ಕಲ್ (74; 130 ಎ, 10 ಬೌಂ) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ವಿನಯಕುಮಾರ್‌ ಬಳಗ ಇನಿಂಗ್ಸ್ ಮುನ್ನಡೆ ಗಳಿಸಿತು.

ಆತಿಥೇಯ ಗುಜರಾತ್ ತಂಡವನ್ನು 216 ರನ್‌ಗಳಿಗೆ ಆಲೌಟ್ ಮಾಡಿದ್ದ ಕರ್ನಾಟಕ ಮೊದಲ ದಿನವಾದ ಶುಕ್ರವಾರ ದಿನದಾಟದ ಮುಕ್ತಾಯಕ್ಕೆ 45 ರನ್ ಗಳಿಸುವಷ್ಟರಲ್ಲಿ ಎರಡು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಗಿತ್ತು. ಏಳು ರನ್‌ ಗಳಿಸಿ ಕ್ರೀಸ್‌ನಲ್ಲಿದ್ದ ಆರ್‌.ಸಮರ್ಥ್‌ 25 ರನ್‌ ಗಳಿಸಿ ಔಟಾದರು. ಆದರೆ ನಾಲ್ಕನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ದೇವದತ್ತ ಪಡಿಕ್ಕಲ್‌ ಎದುರಾಳಿ ಬೌಲರ್‌ಗಳ ಬೆವರಿಳಿಸಿದರು. ಅವರೊಂದಿಗೆ ಕೆ.ವಿ.ಸಿದ್ಧಾರ್ಥ್‌ 40 ರನ್‌ಗಳ ಜೊತೆಯಾಟ ಆಡಿದರು.

ಗೋಪಾಲ್‌–ಶರತ್‌ ಮೋಹಕ ಜೊತೆಯಾಟ: ಸಿದ್ಧಾರ್ಥ್ ಮತ್ತು ದೇವದತ್ತ ಔಟಾದ ನಂತರ ಶ್ರೇಯಸ್ ಗೋಪಾಲ್ ಮತ್ತು ಎಸ್‌.ಶರತ್‌ ಅವರ ಆಟ ರಂಗೇರಿತು. ಇವರಿಬ್ಬರು ಗುಜರಾತ್‌ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಚೊಚ್ಚಲ ಪಂದ್ಯ ಆಡುತ್ತಿರುವ ಶರತ್‌ ಅವರು ಸುಂದರ ಹೊಡೆತಗಳ ಮೂಲಕ ರಂಜಿಸಿದರು. ಆರನೇ ವಿಕೆಟ್‌ಗೆ ಅವರೊಂದಿಗೆ 117 ರನ್‌ಗಳ ಜೊತೆಯಾಟ ಆಡಿದ ಶ್ರೇಯಸ್ ಗೋಪಾಲ್‌ ಏಳು ರನ್‌ಗಳಿಂದ ಶತಕ ವಂಚಿತರಾದರು.

ನಂತರ ಗೌತಮ್ ಮಿಂಚಿನ ಬ್ಯಾಟಿಂಗ್ ಮಾಡಿದರು. 18 ಎಸೆತಗಳಲ್ಲಿ ಎರಡು ಸಿಕ್ಸರ್ ಮತ್ತು ಒಂದು ಬೌಂಡರಿ ಗಳಿಸಿದ ಅವರು 22 ರನ್‌ ಗಳಿಸಿದರು. ಅವರು ಔಟಾದ ನಂತರ ನಾಯಕ ವಿನಯಕುಮಾರ್‌ ಮತ್ತು ಶರತ್‌ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಗಿ ದಿನದಾಟದಲ್ಲಿ ಮತ್ತಷ್ಟು ವಿಕೆಟ್‌ಗಳು ಪತನ ಆಗದಂತೆ ನೋಡಿಕೊಂಡರು. 130 ಎಸೆತಗಳನ್ನು ಎದುರಿಸಿರುವ ಶರತ್‌ ನಾಲ್ಕು ಬೌಂಡರಿಗಳನ್ನು ಬಾರಿಸಿದ್ದಾರೆ. ಅರ್ಧಶತಕ ಪೂರೈಸಲು ಅವರಿಗೆ ಮೂರು ರನ್‌ಗಳು ಬೇಕಾಗಿವೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !