ಭಾನುವಾರ, ಫೆಬ್ರವರಿ 23, 2020
19 °C
ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ–20 ಕ್ರಿಕೆಟ್: ಮನೀಷ್–ದಿನೇಶ್ ಮುಖಾಮುಖಿ

ಕರ್ನಾಟಕ vs ತಮಿಳುನಾಡು: ಕ್ರಿಕೆಟ್‌ನಲ್ಲಿ ದಕ್ಷಿಣ ದಿಗ್ಗಜ ತಂಡಗಳ ಹಣಾಹಣಿ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೂರತ್: ಸೈಯದ್ ಮುಷ್ತಾಕ್ ಅಲಿ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ ತಂಡಕ್ಕೆ ಈಗ ನಿಜವಾದ ಸತ್ವಪರೀಕ್ಷೆ  ಈಗ ಆರಂಭವಾಗಲಿದೆ.

‘ಎ’ ಗುಂಪಿನಲ್ಲಿ ಬರೋಡಾ ತಂಡವೊಂದನ್ನು ಬಿಟ್ಟರೆ ಉಳಿದ ತಂಡಗಳು ಅಷ್ಟೇನೂ ಬಲಾಢ್ಯವಾಗಿರಲಿಲ್ಲ. ಆದ್ದರಿಂದ ಕರ್ನಾಟಕ ತಂಡದ ಹಾದಿಯೂ ಸುಗಮವಾಗಿತ್ತು. ಗುರುವಾರ ಆರಂಭವಾಗಲಿರುವ ಸೂಪರ್ ಲೀಗ್ ಹಂತದ ಮೊದಲ ಪಂದ್ಯದಲ್ಲಿ ಕರ್ನಾಟಕಕ್ಕೆ  ದಿನೇಶ್ ಕಾರ್ತಿಕ್ ನಾಯಕತ್ವದ ತಮಿಳುನಾಡು ತಂಡವು ಸವಾಲೊಡ್ಡಲಿದೆ. ನಂತರದ ಪಂದ್ಯಗಳಲ್ಲಿ ಜಾರ್ಖಂಡ್, ಪಂಜಾಬ್ ಮತ್ತು ಮುಂಬೈ ತಂಡಗಳನ್ನು ಎದುರಿಸಲಿದೆ.

ಈಚೆಗೆ ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ತಮಿಳುನಾಡು ವಿರುದ್ಧ ಗೆದ್ದು ಪ್ರಶಸ್ತಿ ಗಳಿಸಿದ್ದ ಮನೀಷ್ ಪಾಂಡೆ ಬಳಗವು ಇಲ್ಲಿಯೂ ಜಯದ ಓಟ ಮುಂದುವರಿಸಿವು ಭರವಸೆಯಲ್ಲಿದೆ. ಆದರೆ, ಆಲ್‌ರೌಂಡರ್ ಕೃಷ್ಣಪ್ಪ ಗೌತಮ್ ಗಾಯಗೊಂಡು ಹೊರಬಿದ್ದಿರುವುದು ತುಸು ಚಿಂತೆಯ ವಿಷಯ. ಎಡಗೈ ಸ್ಪಿನ್ನರ್ ಜೆ.ಸುಚಿತ್, ಪವನ್ ದೇಶಪಾಂಡೆ ಅವರು ಉತ್ತಮವಾಗಿ ಆಡುತ್ತಿದ್ದಾರೆ.ಇದರಿಂದ ಸ್ಪಿನ್ ವಿಭಾಗದಲ್ಲಿ ಮತ್ತು ಮಧ್ಯಮಕ್ರಮಾಂಕದ ಬ್ಯಾಟಿಂಗ್‌ನಲ್ಲಿ ಹೆಚ್ಚಿನ ಚಿಂತೆ ಇಲ್ಲ.

ಕೆ.ಎಲ್. ರಾಹುಲ್ ಇನ್ನೂ ಲಯ ಕಂಡುಕೊಳ್ಳಬೇಕು.  ಹೋದ ವರ್ಷ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರೋಹನ್ ಕದಂ ಈ ಟೂರ್ನಿಯಲ್ಲಿ ನಾಲ್ಕು ಪಂದ್ಯಗಳನ್ನು ಆಡಿದ್ದಾರೆ. ಅದರಲ್ಲಿ ಎರಡು ಅರ್ಧಶತಕ ದಾಖಲಿಸಿದ್ದಾರೆ. ರಾಹುಲ್ ತಂಡಕ್ಕೆ ಮರಳಿದ್ದರಿಂದ ಕೊನೆಯ ಎರಡು ಪಂದ್ಯಗಳಲ್ಲಿ ವಿಶ್ತಾಂತಿ ಪಡೆದಿದ್ದರು. ಎಡಗೈ ಬ್ಯಾಟ್ಸ್‌ಮನ್  ದೇವದತ್ತ ಪಡಿಕ್ಕಲ್ ಈ ಟೂರ್ನಿಯಲ್ಲಿ ಒಂದು ಶತಕ ಮತ್ತು ಅರ್ಧಶತಕ ಗಳಿಸಿದ್ದಾರೆ. ನಾಯಕ ಮನೀಷ್ ಕೂಡ ಒಂದು ಶತಕ ಹೊಡೆದಿದ್ದಾರೆ. ಸೂಪರ್ ಲೀಗ್ ಹಂತದಲ್ಲಿಯೂ ಇವರ ಆಟವೇ ಪ್ರಮುಖವಾಗಲಿದೆ.

ತಮಿಳುನಾಡು ತಂಡವು ಸಿ ಗುಂಪಿನಲ್ಲಿ ಮೊದಲ ಸ್ಥಾನ ಗಳಿಸಿ ಸೂಪರ್ ಲೀಗ್ ಹಂತ ತಲುಪಿದೆ.  ಗುಂಪು ಹಂತದಲ್ಲಿ ಒಂದು ಪಂದ್ಯದಲ್ಲಿ ಮಾತ್ರ ದಿನೇಶ್ ಕಾರ್ತಿಕ್ ಬಳಗವು ಸೋತಿತ್ತು. ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್ ಟ್ವೆಂಟಿ–20 ಚಾಂಪಿಯನ್‌ಷಿಪ್‌ನಲ್ಲಿ ಆಡುವ ಭಾರತ ತಂಡದಲ್ಲಿ ಸ್ಥಾನದ ಆಕಾಂಕ್ಷಿಯಾಗಿರುವ ದಿನೇಶ್ ಈ  ಟೂರ್ನಿಯಲ್ಲಿ ಇಲ್ಲಿಯವರೆಗೆ 200 ರನ್‌ ಗಳನ್ನು ಕಲೆ ಹಾಕಿದ್ದಾರೆ. ಇದೀಗ ಅವರ ನಿಕಟ ಪ್ರತಿಸ್ಪರ್ಧಿ ಮನೀಷ್ ಪಾಂಡೆ ಬಳಗಕ್ಕೆ ಸವಾಲೊಡ್ಡಲು ಸಜ್ಜಾಗಿದ್ದಾರೆ.

 
ತಂಡಗಳು: ಕರ್ನಾಟಕ: ಮನೀಷ್ ಪಾಂಡೆ (ನಾಯಕ), ದೇವದತ್ತ ಪಡಿಕ್ಕಲ್, ಕೆ.ಎಲ್. ರಾಹುಲ್, ರೋಹನ್ ಕದಂ, ಕರುಣ್ ನಾಯರ್, ಲವನೀತ್ ಸಿಸೋಡಿಯಾ (ವಿಕೆಟ್‌ಕೀಪರ್),  ಪವನ್ ದೇಶಪಾಂಡೆ, ಪ್ರವೀಣ ದುಬೆ, ಶ್ರೇಯಸ್ ಗೋಪಾಲ್, ಅನಿರುದ್ಧ ಜೋಶಿ, ಅಭಿಮನ್ಯು ಮಿಥುನ್, ರೋನಿತ್ ಮೋರೆ,  ಜೆ. ಸುಚಿತ್, ಪ್ರತೀಕ್ ಜೈನ್.

ತಮಿಳುನಾಡು: ದಿನೇಶ್ ಕಾರ್ತಿಕ್ (ನಾಯಕ/ವಿಕೆಟ್‌ಕೀಪರ್), ವಾಷಿಂಗ್ಟನ್ ಸುಂದರ್, ಬಾಬಾ ಅಪರಾಜಿತ್, ಮುರುಗನ್ ಅಶ್ವಿನ್, ಶಾರೂಕ್ ಖಾನ್, ಮುರಳಿ ವಿಜಯ್, ವಿಜಯಶಂಕರ್, ಎಂ. ಮೊಹಮ್ಮದ್, ರವಿಶ್ರೀನಿವಾಸನ್ ಸಾಯಿಕಿಶೋರ್, ಟಿ. ನಟರಾಜನ್, ಜಿ. ಪೆರಿಯಾಸ್ವಾಮಿ, ಜಗದೀಶನ್ ಕೌಶಿಕ್, ಹರಿ ನಿಶಾಂತ, ಕೃಷ್ಣಮೂರ್ತಿ ವಿಘ್ನೇಶ್, ಎನ್. ಜಗದೀಶನ್.

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು