ರಣಜಿ ಟ್ರೋಫಿ| ಗೌತಮ್ ದಾಳಿಗೆ ಜಾರ್ಖಂಡ್ ತತ್ತರ: ಗುಂಪು ಹಂತದಲ್ಲಿ ಕರ್ನಾಟಕ ಅಜೇಯ

ಜೆಮ್ಶೆಡ್‌ಪುರ್: ಐದು ವಿಕೆಟ್‌ಗಳ ಗೊಂಚಲು ಗಳಿಸಿದ ಕೃಷ್ನಪ್ಪ ಗೌತಮ್ ಸ್ಪಿನ್ ದಾಳಿಗೆ ಜಾರ್ಖಂಡ್ ತಂಡವು ತತ್ತರಿಸಿತು.
ಇದರೊಂದಿಗೆ ಕರ್ನಾಟಕ ತಂಡವು ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಸಿ ಗುಂಪಿನ ಕೊನೆಯ ಪಂದ್ಯದಲ್ಲಿ 9 ವಿಕೆಟ್‌ಗಳಿಂದ ಜಯಿಸಿತು. ಕೀನಾನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯವು ಮೂರೇ ದಿನಗಳಲ್ಲಿ ಮುಕ್ತಾಯವಾಯಿತು. 66 ರನ್‌ಗಳ ಚಿಕ್ಕ ಗುರಿಯನ್ನು 18.1 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು ಮುಟ್ಟಿತು. ಮೊದಲ ಇನಿಂಗ್ಸ್‌ನಲ್ಲಿ ಶತಕ ಗಳಿಸಿದ್ದ ದೇವದತ್ತ ಎರಡನೇ ಇನಿಂಗ್ಸ್‌ನಲ್ಲಿ ಖಾತೆಯನ್ನೇ ತೆರೆಯದೇ ಔಟಾದರು.
ಕರ್ನಾಟಕವು ಗುಂಪಿನ ಅಂಕಪಟ್ಟಿಯಲ್ಲಿ 35 ಅಂಕಗಳೊಂದಿಗೆ ಅಗ್ರಸ್ಥಾನ ಉಳಿಸಿಕೊಂಡಿತು. ಲೀಗ್ ಹಂತದಲ್ಲಿ ಅಜೇಯವಾಗುಳಿದು ಎಂಟರ ಘಟ್ಟಕ್ಕೆ ಸಾಗಿತು.
ಕರ್ನಾಟಕ ತಂಡವು ಬುಧವಾರ ಮೊದಲ ಇನಿಂಗ್ಸ್‌ನಲ್ಲಿ 136 ರನ್‌ಗಳ ಮುನ್ನಡೆ ಸಾಧಿಸಿತ್ತು. ಎರಡನೇ ಇನಿಂಗ್ಸ್ ಆರಂಭಿಸಿದ್ದ ಆತಿಥೇಯ ತಂಡವು ದಿನದಾಟದ ಕೊನೆಗೆ 28 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 85 ರನ್ ಗಳಿಸಿತ್ತು. ಕ್ರೀಸ್‌ನಲ್ಲಿ ಕುಮಾರ್ ಮತ್ತು ಕುಶಾಗ್ರ ಉಳಿದಿದ್ದರು. ದೊಡ್ಡ ಜೊತೆಯಾಟವಾಡಿ ಕರ್ನಾಟಕ್ಕೆ ದೊಡ್ಡ ಮೊತ್ತದ ಗುರಿ ನೀಡುವ ಅವರ ಉದ್ದೇಶ ಈಡೇರಲಿಲ್ಲ. ದಿನದಾಟದ ಎರಡನೇ ಓವರ್‌ನಲ್ಲಿಯೇ ಗೌತಮ್ ಎಸೆತದಲ್ಲಿ ಕುಮಾರ್ ಕ್ಲೀನ್‌ಬೌಲ್ಡ್ ಆದರು.
ಪ್ರಮುಖ ಬ್ಯಾಟರ್‌ಗಳಾದ ವಿರಾಟ್ ಸಿಂಗ್, ಕುಶಾಗ್ರ ಮತ್ತು ಅರ್ಧಶತಕದತ್ತ ಸಾಗಿದ್ದ ಸುಪ್ರಿಯೊ ಚಕ್ರವರ್ತಿ (48; 93ಎ, 4X3, 6X2) ಅವರ ವಿಕೆಟ್ ಗಳಿಸಿ ಗೌತಮ್ ತಂಡದ ಜಯವನ್ನು ಸುಗಮಗೊಳಿಸಿದರು.
ಗೌತಮ್‌ಗೆ ಮಧ್ಯಮವೇಗಿ ವಾಸುಕಿ ಕೌಶಿಕ್ (21ಕ್ಕೆ3) ಉತ್ತಮ ಬೆಂಬಲ ನೀಡಿದರು. ಲೆಗ್‌ಸ್ಪಿನ್ನರ್ ಶ್ರೇಯಸ್ ಗೋಪಾಲ್ ಎರಡು ವಿಕೆಟ್ ಗಳಿಸಿ ಜಾರ್ಖಂಡ್ ಇನಿಂಗ್ಸ್‌ಗೆ ತೆರೆಯೆಳೆದರು!
ಈ ಸೋಲಿನಿಂದಾಗಿ ಜಾರ್ಖಂಡ್ ತಂಡವು ಎಂಟರ ಘಟ್ಟಕ್ಕೆ ಪ್ರವೇಶಿಸುವ ಹಾದಿ ಕಠಿಣವಾಗಿದೆ. ಪುದುಚೇರಿ ವಿರುದ್ಧ ಆಡುತ್ತಿರುವ ಕೇರಳ ಮತ್ತು ಸರ್ವಿಸಸ್ ಎದುರು ಆಡುತ್ತಿರುವ ರಾಜಸ್ಥಾನ ತಂಡಗಳ ಪಂದ್ಯಗಳು ಶುಕ್ರವಾರ ಮುಕ್ತಾಯವಾಗಲಿವೆ. ಆ ಪಂದ್ಯಗಳ ಫಲಿತಾಂಶದ ನಂತರವೇ ಜಾರ್ಖಂಡ್ ಪ್ರವೇಶದ ಕುರಿತು ಸ್ಪಷ್ಟವಾಗಲಿದೆ.
ಉತ್ತರಾಖಂಡ ಎದುರಾಳಿ?
ಕರ್ನಾಟಕ ತಂಡಕ್ಕೆ ಎ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿರುವ ಉತ್ತರಾಖಂಡ ತಂಡವು ಕ್ವಾರ್ಟರ್‌ಫೈನಲ್‌ನಲ್ಲಿ ಮುಖಾಮುಖಿಯಾಗುವ ಸಾಧ್ಯತೆ ಹೆಚ್ಚಿದೆ. ತನ್ನ ಗುಂಪಿನಲ್ಲಿ ಉತ್ತರಾಖಂಡ ತಂಡವು ಆರು ಪಂದ್ಯಗಳಿಂದ 26 ಅಂಕ ಗಳಿಸಿದೆ. ಹರಿಯಾಣ ವಿರುದ್ಧದ ಕೊನೆಯ ಪಂದ್ಯದಲ್ಲಿ ಆಡುತ್ತಿದೆ. ಈ ಗುಂಪಿನಲ್ಲಿ ಬಂಗಾಳ ತಂಡವು ಅಗ್ರಸ್ಥಾನದಲ್ಲಿದೆ.
ಸಂಕ್ಷಿಪ್ತ ಸ್ಕೋರು: ಸಿ ಗುಂಪು: ಮೊದಲ ಇನಿಂಗ್ಸ್: ಜಾರ್ಖಂಡ್ 164, ಕರ್ನಾಟಕ: 300. ಎರಡನೇ ಇನಿಂಗ್ಸ್:ಜಾರ್ಖಂಡ್: 78.5 ಓವರ್‌ಗಳಲ್ಲಿ 201 (ಕುಮಾರ್ ಸೂರಜ್ 34, ಕುಶಾಗ್ರ 36, ಅನುಕೂಲ್ ರಾಯ್ 36, ಸುಪ್ರಿಯೊ ಚಕ್ರವರ್ತಿ 48, ವಿ. ಕೌಶಿಕ್ 21ಕ್ಕೆ3, ಶ್ರೇಯಸ್ ಗೋಪಾಲ್ 58ಕ್ಕೆ2, ಕೆ. ಗೌತಮ್ 75ಕ್ಕೆ5). ಕರ್ನಾಟಕ: 18.1 ಓವರ್‌ಗಳಲ್ಲಿ 1 ವಿಕೆಟ್‌ಗೆ 66 (ಆರ್. ಸಮರ್ಥ್ ಔಟಾಗದೆ 24, ನಿಕಿನ್ ಜೋಸ್ ಔಟಾಗದೆ 42, ಶಹಬಾಜ್ ನದೀಂ 24ಕ್ಕೆ1) ಫಲಿತಾಂಶ: ಕರ್ನಾಟಕ ತಂಡಕ್ಕೆ 9 ವಿಕೆಟ್‌ಗಳ ಜಯ ಮತ್ತು ಆರು ಅಂಕ.
ಇತರ ಪಂದ್ಯಗಳ ಸ್ಕೋರ್
(ಜೋಧಪುರ): ಮೊದಲ ಇನಿಂಗ್ಸ್: ಸರ್ವಿಸಸ್: 178, ರಾಜಸ್ಥಾನ:136. ಎರಡನೇ ಇನಿಂಗ್ಸ್: ಸರ್ವಿಸಸ್: 103.5 ಓವರ್‌ಗಳಲ್ಲಿ 276 (ಲವಕೇಶ್ ಬನ್ಸಾಲ್ 50, ಪುಳಕಿತ್ ನಾರಂಗ್ 47, ಅನಿಕೇತ್ ಚೌಧರಿ 58ಕ್ಕೆ5) ರಾಜಸ್ಥಾನ: 38 ಓವರ್‌ಗಳಲ್ಲಿ 6ಕ್ಕೆ107 (ಯಶ್ ಕೊಠಾರಿ 72, ಕರಣ್ ಲಾಂಬಾ ಬ್ಯಾಟಿಂಗ್ 18, ಪೂನಮ್ ಪೂನಿಯಾ 18ಕ್ಕೆ2, ಪುಳಕಿತ್ ನಾರಂಗ್ 20ಕ್ಕೆ4)
ಪುದುಚೇರಿ ಸಿಚೆಮ್ ಮೈದಾನ: ಮೊದಲ ಇನಿಂಗ್ಸ್: ಪುದುಚೇರಿ: 371.ಕೇರಳ: 286. ಎರಡನೇ ಇನಿಂಗ್ಸ್: ಪುದುಚೇರಿ: 14 ಓವರ್‌ಗಳಲ್ಲಿ 1 ವಿಕೆಟ್‌ಗೆ 34 (ಪಾರಸ್ ಡೋಗ್ರಾ ಬ್ಯಾಟಿಂಗ್ 20)
ಎ ಗುಂಪು: (ರೋಹ್ಟಕ್): ಮೊದಲ ಇನಿಂಗ್ಸ್: ಹರಿಯಾಣ: 71.3 ಓವರ್‌ಗಳಲ್ಲಿ 233 (ಸುಮಿತ್ ಕುಮಾರ್ 86, ಜಯಂತ್ ಯಾದವ್ 20 ಅವನೀಶ್ ಸುಧಾ 31ಕ್ಕೆ6, ಸ್ವಪ್ನಿಲ್ ಸಿಂಗ್ 58ಕ್ಕೆ2)
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.