ಶುಕ್ರವಾರ, ನವೆಂಬರ್ 22, 2019
23 °C

ಮಹಿಳಾ ಟ್ವೆಂಟಿ–20 ಕ್ರಿಕೆಟ್‌: ವನಿತಾ ಅಬ್ಬರ; ಕರ್ನಾಟಕ ಜಯಭೇರಿ

Published:
Updated:
Prajavani

ಬೆಂಗಳೂರು: ಆರಂಭಿಕ ಆಟಗಾರ್ತಿ ವಿ.ಆರ್‌.ವನಿತಾ, ಭಾನುವಾರ ಆಂಧ್ರಪ್ರದೇಶದ ಮೂಲಪಾಡಿನಲ್ಲಿರುವ ದೇವಿನೇನಿ ವೆಂಕಟರಮಣ ಪ್ರಣೀತಾ ಮೈದಾನದಲ್ಲಿ ರನ್‌ ಮಳೆ ಸುರಿಸಿದರು.

ವನಿತಾ ಅವರ ಅಬ್ಬರದ ಬ್ಯಾಟಿಂಗ್‌ನಿಂದಾಗಿ ಕರ್ನಾಟಕ ತಂಡದವರು ಬಿಸಿಸಿಐ ಸೀನಿಯರ್‌ ಮಹಿಳಾ ಟ್ವೆಂಟಿ–20 ಟ್ರೋಫಿ ಕ್ರಿಕೆಟ್‌ ಟೂರ್ನಿಯ ಸೂಪರ್‌ ಲೀಗ್‌ ಪಂದ್ಯದಲ್ಲಿ ಆತಿಥೇಯ ಆಂಧ್ರ ವಿರುದ್ಧ 9 ವಿಕೆಟ್‌ಗಳಿಂದ ಜಯಭೇರಿ ಮೊಳಗಿಸಿದ್ದಾರೆ.

ಮೊದಲು ಬ್ಯಾಟ್ ಮಾಡಿದ ಆಂಧ್ರ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 96ರನ್‌ ಸೇರಿಸಿತು. ಸಹನಾ ಪವಾರ್‌ (10ಕ್ಕೆ2) ಮತ್ತು ಸಿ.ಪ್ರತ್ಯೂಷಾ (12ಕ್ಕೆ2) ಬಿಗುವಿನ ದಾಳಿ ನಡೆಸಿ ಗಮನ ಸೆಳೆದರು.

ಕೆ.ರಕ್ಷಿತಾ ನಾಯಕತ್ವದ ಕರ್ನಾಟಕ ತಂಡ 11.2 ಓವರ್‌ಗಳಲ್ಲಿ 1 ವಿಕೆಟ್‌ ಕಳೆದುಕೊಂಡು ಗುರಿ ಮುಟ್ಟಿತು.

ಅನುಭವಿ ಆಟಗಾರ್ತಿ ವನಿತಾ, ಸ್ಫೋಟಕ ಆಟ ಆಡಿದರು. 36 ಎಸೆತಗಳನ್ನು ಎದುರಿಸಿದ ಅವರು 69ರನ್‌ ಕಲೆಹಾಕಿದರು. ಬೌಂಡರಿ (8) ಮತ್ತು ಸಿಕ್ಸರ್‌ಗಳ (4) ಮೂಲಕವೇ ಅವರ ಖಾತೆಗೆ 56ರನ್‌ಗಳು ಸೇರ್ಪಡೆಯಾದವು.

ವನಿತಾ ಅವರಿಗೆ ಶುಭಾ ಸತೀಶ್‌ (ಔಟಾಗದೆ 16; 23ಎ) ಉತ್ತಮ ಬೆಂಬಲ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 51 ಎಸೆತಗಳಲ್ಲಿ 78ರನ್‌ ಸೇರಿಸಿತು. ಒಂಬತ್ತನೇ ಓವರ್‌ನಲ್ಲಿ ವನಿತಾ ಪೆವಿಲಿಯನ್‌ ಸೇರಿದರು.

ನಂತರ ಶುಭಾ ಮತ್ತು ದಿವ್ಯಾ ಜ್ಞಾನಾನಂದ (ಔಟಾಗದೆ 12; 9ಎ, 2ಬೌಂ) ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಸಂಕ್ಷಿಪ್ತ ಸ್ಕೋರ್‌
ಆಂಧ್ರ:
20 ಓವರ್‌ಗಳಲ್ಲಿ 5 ವಿಕೆಟ್‌ಗೆ 96 (ಅನುಷಾ ಎನ್‌.ವೆಂಕಟೇಶ್‌ 21, ಸಿ.ಸಿ. ಜಾನ್ಸಿ ಲಕ್ಷ್ಮಿ 24, ಕೆ.ವಿ.ಅಂಜಲಿ ಸರ್ವಣಿ ಔಟಾಗದೆ 34; ರಾಮೇಶ್ವರಿ ಗಾಯಕವಾಡ್‌ 22ಕ್ಕೆ1, ಸಹನಾ ಪವಾರ್‌ 10ಕ್ಕೆ2, ಸಿ.ಪ್ರತ್ಯೂಷಾ 12ಕ್ಕೆ2).

ಕರ್ನಾಟಕ: 11.2 ಓವರ್‌ಗಳಲ್ಲಿ 1 ವಿಕೆಟ್‌ಗೆ 100 (ವಿ.ಆರ್‌.ವನಿತಾ 69, ಶುಭಾ ಸತೀಶ್‌ ಔಟಾಗದೆ 16, ದಿವ್ಯಾ ಜ್ಞಾನಾನಂದ ಔಟಾಗದೆ 12; ಜಿ.ಚಂದ್ರಲೇಖಾ 23ಕ್ಕೆ1).

ಫಲಿತಾಂಶ: ಕರ್ನಾಟಕಕ್ಕೆ 9 ವಿಕೆಟ್‌ ಗೆಲುವು.

ಪ್ರತಿಕ್ರಿಯಿಸಿ (+)