ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಳು ವಿದ್ಯಾರ್ಥಿಗಳು ಮತ್ತೆ ಶಾಲೆಗೆ

ಮೂಡಿಗೆರೆ: ದಾಖಲಾತಿ ಆಂದೋಲನಕ್ಕೆ ಕಿರಣ್‌ಕುಮಾರ್‌ ಚಾಲನೆ
Last Updated 19 ಜೂನ್ 2018, 12:06 IST
ಅಕ್ಷರ ಗಾತ್ರ

ಮೂಡಿಗೆರೆ: ದೇಶದಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ ಜಾರಿಯಲ್ಲಿದ್ದು, 6 ರಿಂದ 14 ವರ್ಷದೊಳಗಿನ ಮಕ್ಕಳು ಶಿಕ್ಷಣ ಪಡೆಯುವುದು ಅವರ ಮೂಲಭೂತ ಹಕ್ಕಾಗಿದೆ ಎಂದು ಶಿಕ್ಷಣ ಇಲಾಖೆ ಸಂಪನ್ಮೂಲ ವ್ಯಕ್ತಿ ಕಿರಣ್‌ಕುಮಾರ್‌ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಕೆ. ಚಂದ್ರಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ದಾಖಲಾತಿ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

6 ರಿಂದ 14 ವರ್ಷದೊಳಗಿನ ಪ್ರತಿಯೊಂದು ಮಗುವಿಗೂ ಶಿಕ್ಷಣ ನೀಡುವುದು ಪೋಷಕರ ಮೂಲಭೂತ ಕರ್ತವ್ಯವಾಗಿದೆ. ದಾಖಲಾತಿ ಆಂದೋಲನದಡಿಯಲ್ಲಿ ಶಾಲೆಯಿಂದ ಹೊರಗುಳಿದಿರುವ ಪ್ರತಿಯೊಂದು ವಿದ್ಯಾರ್ಥಿಯನ್ನೂ ಶಾಲೆಗೆ ಕರೆ ತೆರಲಾಗುವುದು. 6 ರಿಂದ 14 ವರ್ಷದೊಳಗಿನ ಯಾವುದೇ ಮಗುವು ಶಾಲೆಯಿಂದ ಹೊರಗುಳಿದಿದ್ದರೆ ಕೂಡಲೇ ಶಿಕ್ಷಣ ಇಲಾಖೆಯ ಗಮನಕ್ಕೆ ತರಬೇಕು ಎಂದು ಮನವಿ ಮಾಡಿದರು.

ಇಂದು ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣದೊಂದಿಗೆ ಮಗುವಿನ ಕಲಿಕೆಗೆ ಬೇಕಾದ ಎಲ್ಲ ಸವಲತ್ತುಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯದೇ ಸರ್ಕಾರದ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಂಡು ಸುಶಿಕ್ಷಿತರಾಗಬೇಕು ಎಂದು ಅವರು ಹೇಳಿದರು.

ಶಾಲೆಯ ಮುಖ್ಯ ಶಿಕ್ಷಕ ಅಣ್ಣಯ್ಯ ಮಾತನಾಡಿ, ‘ಶಾಲೆಯನ್ನು ಮಧ್ಯದಲ್ಲಿ ತೊರೆದಿರುವ ಮಕ್ಕಳನ್ನು ಮತ್ತೆ ಶಾಲೆಗೆ ದಾಖಲಿಸಲು ಪೋಷಕರು, ನೆರೆಹೊರೆಯವರು, ಶಾಲಾಭಿವೃದ್ಧಿ ಸಮಿತಿಯ ಸಹಕಾರ ಅಗತ್ಯವಾಗಿದೆ. ತಮ್ಮ ವಾಸಸ್ಥಳದ ಅಕ್ಕಪಕ್ಕದಲ್ಲಿ ಶಾಲೆಬಿಟ್ಟ ಯಾವುದೇ ಮಗುವಿದ್ದರೂ ತಪ್ಪದೇ ಶಾಲೆಗೆ ಸೇರಿಸಲು ನೆರವಾಗಬೇಕು’ ಎಂದರು.

ಕಾರ್ಯಕ್ರಮದ ಅಂಗವಾಗಿ ಕೆ. ಚಂದ್ರಾಪುರ ಸುತ್ತಮುತ್ತಲ ಕಾಫಿ ತೋಟಗಳಿಗೆ ತೆರಳಿ ಶಾಲೆಯಿಂದ ಹೊರಗುಳಿದಿದ್ದ ಏಳು ವಿದ್ಯಾರ್ಥಿಗಳನ್ನು ಗುರುತಿಸಿ ಶಾಲೆಗೆ ಕರೆ ತರಲಾಯಿತು. ಇವರೆಲ್ಲರೂ ದಾವಣಗೆರೆ ಮೂಲದವರಾಗಿದ್ದು, ತಮ್ಮ ಪೋಷಕರೊಂದಿಗೆ ಕಾಫಿ ತೋಟಗಳಿಗೆ ವಲಸೆ ಬಂದು, ಶಾಲೆಯಿಂದ ಹೊರಗುಳಿದಿದ್ದರು.

ದಾಖಲಾತಿ ಆಂದೋಲನದಲ್ಲಿ ಶಿಕ್ಷಕರಾದ ಕುಮಾರಪ್ಪ, ಎಚ್‌. ವಿಶ್ವನಾಥ್‌, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಣ್ಣಪ್ಪ, ಸದಸ್ಯ ಸುರೇಂದ್ರ ಮುಂತಾದವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT