ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಕ್ರಿಕೆಟ್ ಟೂರ್ನಿ: ಕರ್ನಾಟಕಕ್ಕೆ ತ್ರಿಪುರಾ ಸವಾಲು

ಗೆಲುವಿನ ವಿಶ್ವಾಸದಲ್ಲಿ ಕರುಣ್ ಬಳಗ
Last Updated 13 ಜನವರಿ 2021, 13:41 IST
ಅಕ್ಷರ ಗಾತ್ರ

ಬೆಂಗಳೂರು: ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿ ಸಂಭ್ರಮಿಸಿದರೂ ಎರಡನೇ ಪಂದ್ಯದಲ್ಲಿ ಮುಗ್ಗಿರಿಸಿದ ಕರ್ನಾಟಕ ತಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಗುರುವಾರ ತ್ರಿಪುರಾವನ್ನು ಎದುರಿಸಲಿದೆ. ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣ–3ರಲ್ಲಿ ನಡೆಯಲಿರುವ ಎಲೀಟ್‌ ‘ಎ’ ಗುಂಪಿನ ಪಂದ್ಯದಲ್ಲಿ ಜಯದ ಲಯಕ್ಕೆ ಮರಳುವ ವಿಶ್ವಾಸದೊಂದಿಗೆ ಕರುಣ್ ನಾಯರ್ ಬಳಗ ಕಣಕ್ಕೆ ಇಳಿಯಲಿದೆ.

ಮೊದಲ ಪಂದ್ಯದಲ್ಲಿ ಆಲ್‌ರೌಂಡ್ ಆಟವಾಡಿದ ಕರ್ನಾಟಕ ತಂಡ ಜಮ್ಮು ಮತ್ತು ಕಾಶ್ಮೀರ ವಿರುದ್ಧ 43 ರನ್‌ಗಳ ಗೆಲುವು ದಾಖಲಿಸಿತ್ತು. ಆದರೆ ಎರಡನೇ ಪಂದ್ಯದಲ್ಲಿ ತಂಡ ನೀರಸ ಆಟವಾಡಿ ಪಂಜಾಬ್‌ಗೆ ಒಂಬತ್ತು ವಿಕೆಟ್‌ಗಳಿಂದ ಮಣಿದಿತ್ತು. ತ್ರಿಪುರ ಮೊದಲ ಎರಡೂ ಪಂದ್ಯಗಳಲ್ಲಿ ಸೋತಿತ್ತು. ಮೊದಲ ಪಂದ್ಯದಲ್ಲಿ ರೈಲ್ವೇಸ್ ಎದುರು ಐದು ವಿಕೆಟ್‌ಗಳಿಂದ ಪರಾಭವಗೊಂಡಿದ್ದರೆ ಎರಡನೇ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಏಳು ವಿಕೆಟ್‌ಗಳಿಗೆ ಮಣಿದಿತ್ತು.

ಮೊದಲ ಪಂದ್ಯದಲ್ಲಿ ಕರ್ನಾಟಕದ ಬ್ಯಾಟಿಂಗ್‌ ಬಲ ಪೂರ್ಣಪ್ರಮಾಣದಲ್ಲಿ ಪ್ರಕಟಗೊಂಡಿರಲಿಲ್ಲ. ವಿಕೆಟ್ ಕೀಪರ್ ಕೃಷ್ಣನ್ ಶ್ರೀಜಿತ್ ಅವರ ಅಮೋಘ ಬ್ಯಾಟಿಂಗ್ ಬಲದಿಂದ ತಂಡ ಸ್ಪರ್ಥಾತ್ಮಕ ಮೊತ್ತ ಗಳಿಸಿತ್ತು. ಆದರೆ ಬೌಲರ್‌ಗಳು ಎದುರಾಳಿಗಳನ್ನು ಕಾಡುವಲ್ಲಿ ಯಶಸ್ವಿಯಾಗಿದ್ದರು. ವೇಗಿಗಳಾದ ಪ್ರಸಿದ್ಧ ಕೃಷ್ಣ ಮತ್ತು ಅಭಿಮನ್ಯು ಮಿಥುನ್ ಕ್ರಮವಾಗಿ ಮೂರು ಹಾಗೂ ಎರಡು ವಿಕೆಟ್ ಕಬಳಿಸಿದ್ದರು. ರೋನಿತ್ ಮೋರೆ ಕೂಡ ಒಂದು ಬಲಿ ಪಡೆದಿದ್ದರು. ಸ್ಪಿನ್ ವಿಭಾಗವೂ ಉತ್ತಮ ದಾಳಿ ಸಂಘಟಿಸಿತ್ತು. ಕೃಷ್ಣಪ್ಪ ಗೌತಮ್ ಮತ್ತು ಜೆ.ಸುಚಿತ್ ತಲಾ ಎರಡು ವಿಕೆಟ್ ಉರುಳಿಸಿದ್ದರು.

ಎರಡನೇ ಪಂದ್ಯದಲ್ಲಿ ಎಲ್ಲ ವಿಭಾಗದಲ್ಲೂ ತಂಡ ವೈಫಲ್ಯ ಕಂಡಿತ್ತು. ಬ್ಯಾಟಿಂಗ್‌ನಲ್ಲಿ ರೋಹನ್ ಕದಂ ಅವರೊಬ್ಬರನ್ನು ಬಿಟ್ಟರೆ ಉಳಿದ ಯಾರಿಗೂ ಮಿಂಚಲು ಆಗಲಿಲ್ಲ. ಸಿದ್ಧಾರ್ಥ್ ಕೌಲ್ ಮತ್ತು ಆರ್ಷದೀಪ್ ಸಿಂಗ್ ಅವರ ದಾಳಿಗೆ ಉತ್ತರಿಸಲು ಸಾಧ್ಯವಾಗದೆ ನಾಲ್ವರು ಎರಡಂಕಿಯನ್ನೂ ದಾಟಲಾಗದೆ ಮರಳಿದ್ದರು. 126 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಪಂಜಾಬ್ ತಂಡದ ಆರಂಭಿಕ ಜೋಡಿ ಕರ್ನಾಟಕದ ದಾಳಿಯನ್ನು ಸಮರ್ಥವಾಗಿ ಮೆಟ್ಟಿನಿಂತು 93 ರನ್‌ಗಳನ್ನು ಸೇರಿಸಿದ್ದರು.

ತ್ರಿಪುರ ಮೊದಲ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಮಾಡಿ 170 ರನ್ ಗಳಿಸಿತ್ತು. ಆದರೆ ಎದುರಾಳಿಗಳನ್ನು ಕಟ್ಟಿ ಹಾಕಲು ಬೌಲರ್‌ಗಳಿಗೆ ಸಾಧ್ಯವಾಗಲಿಲ್ಲ. ಎರಡನೇ ಪಂದ್ಯದಲ್ಲಿ ಕೇವಲ 93 ರನ್‌ಗಳಿಗೆ ಆಲೌಟಾಗಿತ್ತು. ಹೀಗಾಗಿ ಆ ತಂಡ ಕರುಣ್ ನಾಯರ್ ಬಳಗಕ್ಕೆ ದೊಡ್ಡ ಸವಾಲಾಗದು ಎಂಬ ನಿರೀಕ್ಷೆ ಇದೆ.

ಮಿಂಚಿದ ಬಾರೋಟ್, ಸಕರಿಯಾ; ಪುನೀತ್‌ಗೆ ಶತಕ

ಅವಿ ಬಾರೋಟ್ (93; 44 ಎಸೆತ, 13 ಬೌಂಡರಿ, 4 ಸಿಕ್ಸರ್) ಮತ್ತು ಪ್ರೇರಕ್ ಮಂಕಡ್ (59; 26 ಎ, 6 ಬೌಂ, 4 ಸಿ) ಅವರ ಅಮೋಘ ಬ್ಯಾಟಿಂಗ್ ಮತ್ತು ಚೇತನ್ ಸಕರಿಯಾ (11ಕ್ಕೆ5) ಅವರ ಉತ್ತಮ ಬೌಲಿಂಗ್ ನೆರವಿನಿಂದ ಸೌರಾಷ್ಟ್ರ ತಂಡ ವಿದರ್ಭ ಎದುರು 79 ರನ್‌ಗಳ ಗೆಲುವು ದಾಖಲಿಸಿತು.

ಸಂಕ್ಷಿಪ್ತ ಸ್ಕೋರು: ಇಂದೋರ್‌, ಡಿ ಗುಂಪು: ಸೌರಾಷ್ಟ್ರ: 20 ಓವರ್‌ಗಳಲ್ಲಿ 7ಕ್ಕೆ 233 (ಅವಿ ಬಾರೋಟ್ 93, ಪ್ರೇರಕ್ ಮಂಕಡ್ 59, ಅರ್ಪಿತ್ ವಸಾವಡ 39; ದರ್ಶನ್ ನಲ್ಕಂಡೆ 32ಕ್ಕೆ4, ಯಶ್ ಠಾಕೂರ್ 47ಕ್ಕೆ2); ವಿದರ್ಭ: 17.2 ಓವರ್‌ಗಳಲ್ಲಿ 154 (ಜಿತೇಶ್ ಶರ್ಮಾ 43, ಸಿದ್ದೇಶ್ ವಥ್ 21, ಅಕ್ಷಯರ್ ಕರ್ನೇವರ್ 21; ಜಯದೇವ ಉನದ್ಕತ್ 31ಕ್ಕೆ1, ಚೇತನ್ ಸಕಾರಿಯ 11ಕ್ಕೆ5, ಪ್ರೇರಕ್ ಮಂಕಡ್ 48ಕ್ಕೆ4). ಫಲಿತಾಂಶ: ಸೌರಾಷ್ಟ್ರಕ್ಕೆ 79 ರನ್‌ಗಳ ಜಯ.

ಪ್ಲೇಟ್ ಗುಂಪು, ಚೆನ್ನೈ: ಮೇಘಾಲಯ: 20 ಓವರ್‌ಗಳಲ್ಲಿ 6ಕ್ಕೆ 230 (ಯೋಗೇಶ್ ತಿವಾರಿ 53, ಪುನೀತ್ ಬಿಷ್ಠ್‌ 148; ಲಾಲ್ನುಂಕಿಮ 45ಕ್ಕೆ2); ಮಿಜೋರಾಂ: 20 ಓವರ್‌ಗಳಲ್ಲಿ 9ಕ್ಕೆ 100 (ಕೆ.ಬಿ.ಪವನ್ 33; ಆಕಾಶ್ ಚೌಧರಿ 17ಕ್ಕೆ2, ಆದಿತ್ಯ ಸಿಂಘಾನಿಯ 15ಕ್ಕೆ4, ಕಿಲ್ಕೊ ಮಾರಕ್ 5ಕ್ಕೆ2). ಫಲಿತಾಂಶ: ಮೇಘಾಲಯಕ್ಕೆ 130 ರನ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT