ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನನಗೆ ಊಟ–ನಿದ್ರೆಯಂತೆಯೇ ಫಿಟ್‌ನೆಸ್‌’

Last Updated 9 ಜೂನ್ 2019, 19:30 IST
ಅಕ್ಷರ ಗಾತ್ರ

ನಮಗೆ ಮ್ಯಾರಥಾನ್‌ ಬಗ್ಗೆ ಚೆನ್ನಾಗಿ ಗೊತ್ತಿದೆ. ಸಮಯದ ಜೊತೆಗೆ ಓಡುವಂತಹ ಈ ಕ್ರೀಡೆಯಲ್ಲಿ ಛಾಪು ಮೂಡಿಸಿರುವವರು ಹಲವರು ಇದ್ದಾರೆ. ಆದರೆ ಕ್ಲಿಷ್ಟಕರ ಕ್ರೀಡೆಯೆಂದೇ ಗಮನ ಸೆಳೆಯುವ ಟ್ರಯಥ್ಲಾನ್‌ನಲ್ಲಿ ವಿಶೇಷ ಸಾಧನೆ ಮಾಡಿರುವವರು ಕಡಿಮೆ. ಇಲ್ಲಿ ಸ್ಪರ್ಧಿಗಳು ಓಟ, ಈಜು, ಸೈಕ್ಲಿಂಗ್‌ ಮೂರನ್ನೂ ಒಂದರ ನಂತರ ಒಂದರಂತೆ ಪೂರೈಸಬೇಕು. ಇಂತಹ ಕ್ರೀಡೆಯಲ್ಲಿ ಹಲವು ವರ್ಷಗಳಿಂದ ಛಾಪು ಮೂಡಿಸುತ್ತಿರುವ ಕೌಸ್ತುಭ್ ರಾಡ್ಕರ್‌ ಈ ಕ್ರೀಡೆಯ ವಿಷಯಗಳನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.

ಕರ್ನಾಟಕದಲ್ಲಿ ನಡೆದಿರುವ ಹಲವು ಸ್ಪರ್ಧೆಗಳಲ್ಲಿ ನೀವು ಭಾಗವಹಿಸಿದ್ದೀರಿ. ಈ ಸ್ಪರ್ಧೆಗಳಲ್ಲಿನ ಅನುಭವ ಹೇಗಿತ್ತು?
ಇಲ್ಲಿನ ಹಲವು ಸಂಸ್ಥೆಗಳು ಸ್ಪರ್ಧೆಗಳನ್ನು ಉತ್ತಮವಾಗಿ ಆಯೋಜಿಸುತ್ತವೆ. ಇಲ್ಲಿನ ಅಮೆಚೂರ್ ಮತ್ತು ನ್ಯುಬಿಸ್‌ ಸಂಸ್ಥೆಗಳೊಂದಿಗೆ ಉತ್ತಮ ಬಾಂಧವ್ಯವಿದೆ. ಇಲ್ಲಿ ನಡೆದ ಒಂದು ಸ್ಪರ್ಧೆಯಲ್ಲಿ 16 ವರ್ಷದ ಹುಡುಗನಿಂದ ಹಿಡಿದು 55 ವರ್ಷ ದಾಟಿದ ಹಿರಿಯರವರೆಗೂ ಭಾಗವಹಿಸಿದ್ದರು. ಇದೇ ಈ ಸ್ಪರ್ಧೆಯ ವಿಶೇಷ.

ನಿಮ್ಮ ಪ್ರವೃತ್ತಿಯಾಗಿದ್ದ ಟ್ರಯಥ್ಲಾನ್ ವೃತ್ತಿಯಾಗಿ ಬದಲಾಗಿದ್ದು ಹೇಗೆ?
ಟ್ರಯಥ್ಲಾನ್‌ನ ವೈಶಿಷ್ಟ್ಯವೇ ಅದು. ಸ್ಪರ್ಧೆಗಿಳಿದರೆ ಆಸಕ್ತಿ ಕೆರಳಿಸುತ್ತಾ ಹೋಗುತ್ತದೆ. ಟ್ರಯಥ್ಲಾನ್ ಬಗೆಗಿನ ಕಾಳಜಿಯಿಂದಾಗಿಯೇ 23 ಬಾರಿ ‘ಐರನ್‌ ಮ್ಯಾನ್‌’ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಸಾಧ್ಯವಾಯಿತು. ಈ ಸಾಧನೆ ಮಾಡಿದ ಭಾರತದ ಏಕೈಕ ಕ್ರೀಡಾಪಟು ನಾನು.

ಭಾರತದ ಐರನ್‌ಮ್ಯಾನ್ ಎಂದೇ ಗುರುತಿಸಿಕೊಂಡಿರುವ ನಿಮ್ಮ ಫಿಟ್‌ನೆಸ್‌ ಗುಟ್ಟು ಏನು?
ಶಿಸ್ತುಬದ್ಧ ಜೀವನವೇ ಫಿಟ್‌ನೆಸ್ ಗುಟ್ಟು. ಊಟ, ನಿದ್ರೆ ಬಗ್ಗೆ ನೀಡುವಷ್ಟೇ ಕಾಳಜಿ ಫಿಟ್‌ನೆಸ್‌ಗೂ ತೋರುತ್ತೇನೆ. ಅದು ನನ್ನ ಜೀವನದ ಅವಿಭಾಜ್ಯ ಅಂಗ. ಇಲ್ಲದಿದ್ದರೆ ಈ ಕ್ರೀಡೆಯಲ್ಲಿ ಸಾಧನೆ ಮಾಡುವುದು ಕಷ್ಟ.

ಟ್ರಯಥ್ಲಾನ್‌ನಲ್ಲಿ ಭಾಗವಹಿಸಲು ಇಚ್ಛಿಸುವವರು ಎಂತಹ ಆಹಾರ ಸೇವಿಸಿದರೆ ಸೂಕ್ತ?
ಇಂಥಹದ್ದೇ ಆಹಾರ ಸೇವಿಸಬೇಕು ಎಂದು ಸಲಹೆ ನೀಡುವುದಕ್ಕೆ ನನಗೆ ಇಷ್ಟವಿಲ್ಲ. ದೇಹಕ್ಕೆ ಹೊಂದಿಕೆಯಾಗುವಂತಹ ಮತ್ತು ಆರೋಗ್ಯಕ್ಕೆ ಯಾವುದೇ ರೀತಿಯಲ್ಲೂ ಹಾನಿ ಮಾಡದಂತಹ ಆಹಾರ ಸೇವಿಸುವುದು ಸೂಕ್ತ. ಇದರ ಜತೆಗೆಶಿಸ್ತುಬದ್ಧವಾಗಿ ವ್ಯಾಯಾಮವನ್ನೂ ಮಾಡಬೇಕು.

ಟ್ರಯಥ್ಲಾನ್‌ ಎಂದರೆ ಶ್ರಮ ಬೇಡುವ ಕ್ರೀಡೆ. ಇದರಲ್ಲಿ ಭಾಗವಹಿಸಲು ಇಚ್ಛಿಸುವವರಿಗೆ ನಿಮ್ಮ ಸಲಹೆ ಏನು?
ಇದರಲ್ಲಿ ಭಾಗವಹಿಸಲು ಇಚ್ಛಿಸುವವರು ದೈಹಿಕ ಕ್ಷಮತೆ ಕಾಪಾಡಿಕೊಳ್ಳುವುದು ಅಗತ್ಯ. ಒಂದೇ ನೆಗೆತಕ್ಕೆ ಶಿಖರಗಳನ್ನು ಏರಬೇಕು ಎಂಬ ಉದ್ದೇಶ ಇಟ್ಟುಕೊಳ್ಳದೇ ನಿಧಾನವಾಗಿ, ಹಂತ ಹಂತವಾಗಿ ಆರಂಭಿಸಬೇಕು. ಇದಕ್ಕೆ ಸಹನೆ ಬೇಕು. ಮುಖ್ಯವಾಗಿ ನಮ್ಮ ಗಮನವೆಲ್ಲಾ ಸದಾ ಗುರಿಯ ಮೇಲೆ ಇರಬೇಕು.

ವೇಗವಾಗಿ ಓಡುವ, ಈಜುವ ಮತ್ತು ಸೈಕಲ್ ಚಲಾಯಿಸುವ ಮೂರೂ ಕ್ರೀಡೆಗಳ ಮೇಲೆ ಗಮನ ಒಮ್ಮೆಗೆ ಕೊಡುವುದು ಹೇಗೆ?
ಎಂಥವರಿಗೂ ಇದು ಕಷ್ಟದ ಕೆಲಸ. ಹಾಗೆಂದು ಹಿಂಜರಿಯುವ ಆಲೋಚನೆ ಬೇಡ. ಪ್ರತಿಯೊಂದು ಕ್ರೀಡೆಯನ್ನು ಅಭ್ಯಸಿಸುವುದಕ್ಕೆ ನಿರ್ದಿಷ್ಟ ವೇಳಾಪಟ್ಟಿಯನ್ನು ಮಾಡಿಕೊಂಡು ಅಭ್ಯಾಸ ಮಾಡಿದರೆ ಸ್ಪರ್ಧೆಯಲ್ಲಿ ಯಶಸ್ಸು ಗಳಿಸಲು ‌ಸಾಧ್ಯ. ಸಮಯದ ಹೊಂದಾಣಿಕೆ ಇಲ್ಲಿ ಮುಖ್ಯ.

ಟ್ರಯಥ್ಲಾನ್‌ನಲ್ಲಿ ಭಾಗವಹಿಸಬೇಕೆಂದರೆ ಎಂತಹ ವ್ಯಾಯಾಮಗಳನ್ನು ಮಾಡಬೇಕು?
ಈ ಸ್ಪರ್ಧೆಗಳಲ್ಲಿ ಭಾಗವಹಿಸಲು ಮಾಂಸಖಂಡಗಳು ಸದೃಢವಾಗಿರುವುದು ಅಗತ್ಯ. ಇದಕ್ಕಾಗಿ ಜಿಮ್‌ಗಳಿಗೆ ಹೋಗಿ ವಿಶೇಷ ಪರಿಣತಿ ಪಡೆಯಬೇಕು ಎಂಬ ಅಗತ್ಯವೇನೂ ಇಲ್ಲ. ನಿತ್ಯ ಈಜುವುದು, ಸೈಕಲ್ ತುಳಿಯುವುದು, ಓಡುವ ಅಭ್ಯಾಸ ಮಾಡಿದರೆ ಸಾಕು. ಮಾಂಸಖಂಡಗಳು ದೃಢವಾಗುತ್ತವೆ.

ಟ್ರಯಥ್ಲಾನ್‌ನ ಜನಪ್ರಿಯತೆ ಹೇಗಿದೆ?
ಕ್ರಿಕೆಟ್‌, ಫುಟ್‌ಬಾಲ್, ಹಾಕಿಯಂತೆಯೇ ಟ್ರಯಥ್ಲೀಟ್‌ಗಳು ಕೂಡ ಜನಪ್ರಿಯರಾಗುತ್ತಿದ್ದಾರೆ. ಅಥ್ಲೆಟಿಕ್ಸ್‌ಗೂ ಈಗ ಪ್ರಾಶಸ್ತ್ಯ ಸಿಗುತ್ತಿದೆ. ಶೂಟಿಂಗ್, ಕುಸ್ತಿ, ಬ್ಯಾಡ್ಮಿಂಟನ್‌ ಆಟಗಾರರು ಕೂಡ ಕ್ರಿಕೆಟ್ ತಾರೆಯರಂತೆ ಮಿಂಚುತ್ತಿರುವ ಕಾಲ ಇದು. ಸಾಧನೆ ಮಾಡುವ ಹಂಬಲವೊಂದು ಇದ್ದರೆ ಸಾಕು.

ಸ್ಪೀಡೊದೊಂದಿಗೆ ನಿಮ್ಮ ಒಡನಾಟ ಹೇಗಿದೆ?
ವಿಶೇಷವೆಂದರೆ, ಕ್ರೀಡೋಪಕರಣಗಳನ್ನು ತಯಾರಿಸುವ ಸ್ಪೀಡೊ ಸಂಸ್ಥೆಯೊಂದಿಗೆ ನನಗೆ 10 ವರ್ಷವಿರುವಾಗಲೇ ಸಂಪರ್ಕವಿತ್ತು. ಆಗಿನಿಂದಲೇ ಈ ಸಂಸ್ಥೆಯ ಹಲವು ವಸ್ತು, ಉಪಕರಣಗಳನ್ನು ಬಳಸಿಕೊಳ್ಳುತ್ತಾ ಅಭ್ಯಾಸ ಮಾಡಿದ್ದೇನೆ. ಈಗ ಇದೇ ಸಂಸ್ಥೆಯ ಪ್ರಚಾರ ರಾಯಭಾರಿಯಾಗಿರುವುದು ಖುಷಿಯ ವಿಚಾರ.

ನಿಮ್ಮ ಮುಂದಿನ ಗುರಿಗಳೇನು?
24ನೇ ಬಾರಿ ‘ಐರನ್ ಮ್ಯಾನ್’ (ಉಕ್ಕಿನ ಮನುಷ್ಯ) ಪ್ರಶಸ್ತಿ ಗೆಲ್ಲುವುದಕ್ಕೆ ಕಸರತ್ತು ನಡೆಸುತ್ತಿದ್ದೇನೆ. ಇದೇ ಆಗಸ್ಟ್‌ 18ರಂದು ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದೇನೆ. ಪ್ರಶಸ್ತಿ ಗೆಲ್ಲುವ ವಿಶ್ವಾಸವೂ ಇದೆ. ಈ ಸ್ಪರ್ಧೆಯಲ್ಲಿ ನನ್ನ ಬಳಿ ತರಬೇತಿ ಪಡೆಯುತ್ತಿರುವ ಎಂಟು ವಿದ್ಯಾರ್ಥಿಗಳು ಕೂಡ ಭಾಗವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT