ಕೆಬಿಎಯಿಂದ ತರಬೇತಿ ಅಕಾಡೆಮಿ: ಅನೂಪ್ ಕೋಚ್

7

ಕೆಬಿಎಯಿಂದ ತರಬೇತಿ ಅಕಾಡೆಮಿ: ಅನೂಪ್ ಕೋಚ್

Published:
Updated:

ಬೆಂಗಳೂರು: ಪ್ರತಿಭಾನ್ವಿತ ಆಟಗಾರರಿಗೆ ತರಬೇತಿ ನೀಡಲು ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯು (ಕೆಬಿಎ)  ಅಕಾಡೆಮಿಯನ್ನು ಆರಂಭಿಸಲಿದೆ. ಅದಕ್ಕಾಗಿ ಹಿರಿಯ ಬ್ಯಾಡ್ಮಿಂಟನ್ ಆಟಗಾರ ಅನೂಪ್ ಶ್ರೀಧರ್ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡಿದೆ.

ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೆಬಿಎ ಹಿರಿಯ ಉಪಾಧ್ಯಕ್ಷ ಕೆ. ರಘುಪತಿ ಭಟ್ ಅವರು ಈ ವಿಷಯ ತಿಳಿಸಿದರು.

‘ಹೊಸ ಪ್ರತಿಭೆಗಳನ್ನು ಬೆಳೆಸಲು ಅಕಾಡೆಮಿ ಅವಶ್ಯಕ. ಅದಕ್ಕಾಗಿ ಸೌಲಭ್ಯಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು. ನಿರ್ವಹಣೆಗಾಗಿ ಪ್ರತ್ಯೇಕ ಸಮಿತಿಯನ್ನು ನೇಮಿಸಲಾಗುವುದು. ಕೆಲವು ವರ್ಷಗಳ ನಂತರ ಪ್ರತಿಯೊಂದು ಜಿಲ್ಲೆಗೂ ಅಕಾಡೆಮಿ ಸೌಲಭ್ಯಗಳನ್ನು ವಿಸ್ತರಿಸಲಾಗುವುದು’ ಎಂದು ಹೇಳಿದರು. 

‘ಅನೂಪ್ ಶ್ರೀಧರ್ ಅವರು ಅರ್ಜುನ ಪ್ರಶಸ್ತಿ ವಿಜೇತರಾಗಿದ್ದಾರೆ. ಅವರೊಂದಿಗೆ ಇಬ್ಬರು ಸಹಾಯಕ ಕೋಚ್‌ಗಳನ್ನೂ ನೇಮಕ ಮಾಡಲಾಗುವುದು’ ಎಂದರು.

ಈ ಸಂದರ್ಭದಲ್ಲಿ ಹಾಜರಿದ್ದ ಅನೂಪ್, ‘ಕೆಬಿಎದಲ್ಲಿ ಅಕಾಡೆಮಿಯಲ್ಲಿ ತರಬೇತಿ ನೀಡುವ ಕಾರ್ಯಕ್ಕೆ ಆಯ್ಕೆಯಾಗಿರುವುದು ಖುಷಿಯಾಗಿದೆ. ಇದು ನನಗೆ ಲಭಿಸಿರುವ ದೊಡ್ಡ ಗೌರವವಾಗಿದೆ. ವಿಶ್ವದ ಬಹಳಷ್ಟು ರಾಷ್ಟ್ರಗಳಲ್ಲಿ ಪ್ರವಾಸ ಮಾಡಿದ್ದೇನೆ. ಪ್ರಸ್ತುತ ರೂಢಿಯಲ್ಲಿರುವ ಬ್ಯಾಡ್ಮೀಂಟನ್ ಕೌಶಲಗಳ ಬಗ್ಗೆ ಅರಿವು ಇದೆ. ಯುವ ಆಟಗಾರರಿಗೆ ಮಾರ್ಗದರ್ಶನ ನೀಡಲು ಉತ್ಸುಕನಾಗಿದ್ದೇನೆ’ ಎಂದರು.

‘ಅನೂಪ್ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿರುವುದು ಸಂತಸ ತಂದಿದೆ. ರಾಷ್ಟ್ರಮಟ್ಟದಲ್ಲಿ ಉತ್ತಮ ಆಟಗಾರನಾಗಿ ಹೆಸರು ಮಾಡಿದ್ದರು. ಅವರ ಮಾರ್ಗದರ್ಶನದಲ್ಲಿ  ಉತ್ತಮ ಆಟಗಾರರು ಹೊರಹೊಮ್ಮಲಿದ್ದಾರೆ’ ಎಂದು ಹಿರಿಯ ಕೋಚ್ ಯು. ವಿಮಲ್‌ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆಕ್ಟೋಬರ್ 15ರಿಂದ ಅಕಾಡೆಮಿಯಲ್ಲಿ ನೋಂದಾಯಿಸಿಕೊಳ್ಳಬಹುದು. 75 ರಿಂದ 80 ಆಟಗಾರರಿಗೆ ನೋಂದಣಿ ನೀಡಲು ಅವಕಾಶವಿದೆ. 

ನ.27ರಿಂದ ಸಬ್‌ಜೂನಿಯರ್ ಟೂರ್ನಿ: ಕೆಬಿಎ ಆಶ್ರಯದಲ್ಲಿ ನವೆಂಬರ್ 27ರಿಂದ ಡಿಸೆಂಬರ್ 2ರವರೆಗೆ ರಾಷ್ಟ್ರೀಯ ಸಬ್‌ ಜೂನಿಯರ್ ಬ್ಯಾಡ್ಮಿಂಟನ್ ಟೂರ್ನಿ ನಡೆಯಲಿದೆ. 15 ಮತ್ತು 17 ವರ್ಷದೊಳಗಿನವರು ಸ್ಪರ್ಧಿಸಲಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !