ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ ಧ್ರುವೀಕರಣದಲ್ಲಿ ‘ಸಜ್ಜನಿಕೆ’ಯೇ ಸವಾಲು

ಕಾಂಗ್ರೆಸ್–ಬಿಜೆಪಿ ಮಧ್ಯೆ ನೇರ ಹಣಾಹಣಿ; ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ
Last Updated 9 ಮೇ 2018, 13:48 IST
ಅಕ್ಷರ ಗಾತ್ರ

ಯಾದಗಿರಿ: ಜಾತಿ ಸಮೀಕರಣಕ್ಕೆ ಇಲ್ಲಿ ಅವಕಾಶವೇ ಇಲ್ಲ. ಏನಿದ್ದರೂ ರೆಡ್ಡಿ ಲಿಂಗಾಯತ ಸಮುದಾಯದಲ್ಲಿ ಆಗಬಹುದಾದ ಮತ ಧ್ರುವೀಕರಣದ ಆಧಾರದ ಮೇಲೆ ಅಭ್ಯರ್ಥಿಗಳ ಗೆಲುವು–ಸೋಲಿನ ಪ್ರಶ್ನೆ ಉಳಿದಿದೆ. ಅದು ‘ಸಜ್ಜನಿಕೆ’ ಆಧಾರದ ಮೇಲೆ ಮತ ಧ್ರುವೀಕರಣ ನಿಂತಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಯಾದಗಿರಿ ಕ್ಷೇತ್ರದಲ್ಲಿ 1989ರಿಂದಲೂ ರೆಡ್ಡಿ ಲಿಂಗಾಯತ ಮುಖಂಡರೇ ಅಧಿಕಾರ ಹಿಡಿಯುತ್ತಾ ಬಂದಿದ್ದಾರೆ. ಡಾ.ಎ.ಬಿ.ಮಾಲಕರಡ್ಡಿ ಹೆಚ್ಚು ಬಾರಿ ಗೆಲುವು ಸಾಧಿಸಿದ್ದಾರೆ. 2004ರಲ್ಲಿ ಬದಲಾವಣೆ ಬಯಸಿದ ಮತದಾರರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರೆಡ್ಡಿ ಲಿಂಗಾಯತ ಸಮುದಾಯದ ಮುಖಂಡ ವೈದ್ಯರಾದ ಡಾ.ವೀರಬಸಂತರೆಡ್ಡಿ ಅವರನ್ನು 11,433 ಮತಗಳ ಅಂತರದಿಂದ ಗೆಲ್ಲಿಸಿ ಅಧಿಕಾರ ನೀಡಿದ್ದರು. ಆಗಲೂ ‘ಸಜ್ಜನಿಕೆ’ ಆಧಾರದ ಮೇಲೆ ಮತ ಧ್ರುವೀಕರಣ ಆಗಿದ್ದವು ಎಂದೇ ರಾಜಕೀಯ ಮುಖಂಡರು ಹೇಳುತ್ತಾರೆ.

ಕ್ಷೇತ್ರದಲ್ಲಿ ಈಗ ಕಾಂಗ್ರೆಸ್‌ನಿಂದ ಡಾ.ಎ.ಬಿ.ಮಾಲಕರಡ್ಡಿ, ಬಿಜೆಪಿಯ ವೆಂಟರೆಡ್ಡಿಗೌಡ ಮುದ್ನಾಳ, ಜೆಡಿಎಸ್‌ನಿಂದ ಅಬ್ದುಲ್ ನಬಿ ಚಾಂದ್ ಕಾಡ್ಲೂರ ಅವರು ಸ್ಪರ್ಧಾ ಕಣದಲ್ಲಿ ಇದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಅಜಾತಶತ್ರು ಅಂತಲೇ ಕರೆಯಿಸಿಕೊಳ್ಳುವ ಡಾ.ಎ.ಬಿ.ಮಾಲಕರಡ್ಡಿ ಅವರಿಗೆ ಕ್ಷೇತ್ರದಲ್ಲಿ ವಿರೋಧಿ ಅಲೆ ಇಲ್ಲ. ಶ್ರೀಸಾಮಾನ್ಯರೂ ಅವರನ್ನು ಸುಲಭವಾಗಿ ಕಂಡು ಅಹವಾಲು ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದು ಎಂಬ ಅಭಿಪ್ರಾಯವನ್ನು ಮತದಾರರು ಹೊಂದಿದ್ದಾರೆ. ಹಾಗಾಗಿ, ಕಾಂಗ್ರೆಸ್‌ ಈ ಬಾರಿಯೂ ಕ್ಷೇತ್ರದಲ್ಲಿ ಪ್ರಾಬಲ್ಯ ಪಡೆದಿದೆ.

ಪ್ರಾಬಲ್ಯ ಪಡೆದ ಅಭ್ಯರ್ಥಿಯನ್ನು ಮಣಿಸಲೆಂದೇ ಬಿಜೆಪಿ ಕಣದಲ್ಲಿ ವೆಂಕಟರೆಡ್ಡಿಗೌಡ ಮುದ್ನಾಳ ಅವರನ್ನು ತಂದು ನಿಲ್ಲಿಸಿದೆ. ಹಿರಿಯ ರಾಜಕಾರಣಿ ವಿಶ್ವನಾಥರೆಡ್ಡಿ ಅವರ ಮಗ ವೆಂಕಟರೆಡ್ಡಿಗೌಡ ಮುದ್ನಾಳ ಅವರು ತಂದೆಯ ಅಭಿವೃದ್ಧಿಯನ್ನೇ ಜನರ ಮುಂದೆ ಇಡುತ್ತಿದ್ದಾರೆ. ಬಡವರಿಗೆ ಸದಾ ಸಹಾಯಹಸ್ತ ಚಾಚುವ ಪ್ರತೀತಿ ಈ ಕುಟುಂಬಕ್ಕೆ ಇದೆ. ಹಾಗಾಗಿ, ಮುದ್ನಾಳ ಕುಟುಂಬದ ಕುಡಿ ಈಗ ಹಿರಿಯ ಹುರಿಯಾಳು ಡಾ.ಎ.ಬಿ.ಮಾಲಕರಡ್ಡಿ ಅವರಿಗೆ ಎದುರಾಗಿದೆ. ಒಂದೇ ಸಮುದಾಯದ ಈ ಇಬ್ಬರು ಮುಖಂಡರು ಮತ ವಿಭಜನೆಯನ್ನೇ ಕೌತುಕದಿಂದ ಎದುರು ನೋಡುತ್ತಿದ್ದಾರೆ.

ಕಾಂಗ್ರೆಸ್ ಸರ್ಕಾರದ ಐದು ವರ್ಷದ ಅವಧಿಯಲ್ಲಿ ಶಾಸಕರಾಗಿದ್ದ ಡಾ.ಎ.ಬಿ.ಮಾಲಕರಡ್ಡಿ ಜಿಲ್ಲಾಕೇಂದ್ರದ ಅಭಿವೃದ್ಧಿಗೆ ಒತ್ತು ನೀಡಲಿಲ್ಲ. ಬಿಡ್ಜ್‌ ಕಂ ಬ್ಯಾರೇಜುಗಳಲ್ಲಿ ಹೇರಳ ನೀರಿದ್ದರೂ, ನಗರದಲ್ಲಿ ಕುಡಿಯುವ ನೀರಿನ ಹಾಹಾಕಾರ ತಪ್ಪಿಲ್ಲ. ಈ ನಿಟ್ಟಿನಲ್ಲಿ ಶಾಸಕರು ಅಭಿವೃದ್ಧಿ ಯೋಜನೆಗಳನ್ನು ಕೈಚೆಲ್ಲಿದ್ದಾರೆ. ವಡಗೇರಾ ಹೊರತುಪಡಿಸಿದರೆ ಗ್ರಾಮೀಣ ರಸ್ತೆಗಳು ಸುಧಾರಣೆ ಕಂಡಿಲ್ಲ ಎಂಬ ಟೀಕೆ ಕ್ಷೇತ್ರದಲ್ಲಿ ವ್ಯಾಪಕವಾಗಿದೆ. ಇದನ್ನೇ ಬಿಜೆಪಿ ಅಸ್ತ್ರ ಮಾಡಿಕೊಂಡು ಮತದಾರರನ್ನು ಸೆಳೆಯುತ್ತಿದೆ.

ರೆಡ್ಡಿ ಲಿಂಗಾಯತ ಸಮುದಾಯದ ಇಬ್ಬರು ಮುಖಂಡರ ಅಬ್ಬರದಲ್ಲಿ ಜೆಡಿಎಸ್ ಅಡಗಿ ಕುಳಿತಿದೆ. ಜೆಡಿಎಸ್ ಅಭ್ಯರ್ಥಿ ಅಬ್ದುಲ್ ನಬಿ ಚಾಂದ ಕಾಡ್ಲೂರ ಅವರು ಗ್ರಾಮೀಣ ಭಾಗದಲ್ಲಿ ಪ್ರಚಾರ ನಡೆಸಿದ್ದರೂ, ಮತದಾರರನ್ನು ಸೆಳೆಯುವಲ್ಲಿ ವಿಫಲರಾಗಿದ್ದಾರೆ. ಮುಸ್ಲಿಂ ಸಮುದಾಯದ ಮುಖಂಡರನ್ನೇ ಅವರು ಒಂದುಗೂಡಿಸುವಲ್ಲಿ ಹೈರಾಣ ಅನುಭವಿಸಿದ್ದಾರೆ. ಇದರ ಮಧ್ಯೆ ಬಂಡಾಯ ಎದ್ದು ನಂತರ ಪಕ್ಷದ ಪ್ರಚಾರ ನಡೆಸಿದ್ದ ಹನಮೇಗೌಡ ಬೀರನಕಲ್‌ ಅವರ ನೂರಾರು ಬೆಂಬಲಿಗರು ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ. ಇದರಿಂದಾಗಿ ಜೆಡಿಎಸ್ ಇರುವ ಕಾರ್ಯಕರ್ತರನ್ನೇ ಕಳೆದುಕೊಂಡಿದೆ. ಅಧಿಸೂಚನೆಯ ನಂತರ ಜೆಡಿಎಸ್ ಪ್ರಭಾವಿ ನಾಯಕರನ್ನು ಕ್ಷೇತ್ರಕ್ಕೆ ಕರೆಸಿ ಮತಪ್ರಚಾರ ಕೂಡ ನಡೆಸಿಲ್ಲ.

ಅಖಾಡದ ಅಂತಿಮ ಹಣಾಹಣಿಯಲ್ಲಿ ಕಾಂಗ್ರೆಸ್–ಬಿಜೆಪಿ ಮಧ್ಯೆ ಹೋರಾಟ ನಡೆಯಲಿದೆ. ಈ ಹೋರಾಟದ ಮಧ್ಯೆ ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಹ ಸ್ಥಿತಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT