ಭಾನುವಾರ, ನವೆಂಬರ್ 29, 2020
19 °C
ಅಂತರ ಜಿಲ್ಲಾ 19 ವರ್ಷದೊಳಗಿನವರ ಟ್ವೆಂಟಿ –20 ಕ್ರಿಕೆಟ್ ಟೂರ್ನಿ

ಕೆಸಿಸಿ ಕಲಬುರ್ಗಿ ತಂಡದ ಮುಡಿಗೆ ಟ್ರೋಫಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಮನಾಬಾದ್: ಕರ್ನಾಟಕ ಕ್ರಿಕೆಟ್ ಕ್ಲಬ್ (ಕೆಸಿಸಿ) ಕಲಬುರ್ಗಿ ತಂಡವು ಗ್ಯಾಲಕ್ಸಿ ಕ್ರಿಕೆಟ್ ಕ್ಲಬ್ (ಜಿಸಿಸಿ) ಕಲಬುರ್ಗಿ ತಂಡವನ್ನು ಮಣಿಸುವ ಮೂಲಕ ಅಂತರ ಜಿಲ್ಲಾ 19 ವರ್ಷದೊಳಗಿನವರ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯಲ್ಲಿ ಟ್ರೋಫಿ ಮುಡಿಗೇರಿಸಿಕೊಂಡಿತು.‌

ಇಲ್ಲಿಯ ಶ್ರೀ ಸಿದ್ಧರಾಜ ಟರ್ಫ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕೆಸಿಸಿ ತಂಡವು ಜಿಸಿಸಿ ವಿರುದ್ಧ 8 ವಿಕೆಟ್‌ಗಳಿಂದ ಜಯ ಸಾಧಿಸಿತು.

ಟಾಸ್‌ ಗೆದ್ದ ಜಿಸಿಸಿ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ, ನಿತೀಶ್ ವಣಿಕ್ಯಾಳ ಅವರ ಮಾರಕ ಬೌಲಿಂಗ್‌ನಿಂದಾಗಿ ತಂಡದ ಲೆಕ್ಕಾಚಾರ ತಲೆಕೆಳಗಾಯಿತು.

ತಂಡದ ಮೊತ್ತ 20 ಆಗುವಷ್ಟರಲ್ಲಿ ಪ್ರಮುಖ ಮೂರು ವಿಕೆಟ್‌ಗಳು ಪತನವಾದವು. ಮಧ್ಯಮ ಕ್ರಮಾಂಕದಲ್ಲಿ ಸಂತೋಷ್ ಹಟ್ಟಿ (26) ಮತ್ತು ಆಶಿಷ್ ಎಸ್., (17) ರನ್ ಗಳಿಸಿದ್ದು ಬಿಟ್ಟರೆ ಉಳಿದವರಿಂದ ಉತ್ತಮ ಆಟ ಮೂಡಿ ಬರಲಿಲ್ಲ. ನಿತೀಶ್ ವಣಿಕ್ಯಾಳ ಹ್ಯಾಟ್ರಿಕ್ ವಿಕೆಟ್ ಪಡೆದು ಭಾರಿ ಪೆಟ್ಟು ನೀಡಿದರು. ಆರು ಜನ ಆಟಗಾರರು ಶೂನ್ಯ ಸಂಪಾದನೆ ಮಾಡಿದರು.

ಜಿಸಿಸಿ ತಂಡವು 13.2 ಓವರ್‌ಗಳಲ್ಲಿ 68 ರನ್‌ಗೆ ಆಲ್‌ಔಟ್‌ ಆಯಿತು. 3.2 ಓವರ್ ಬೌಲಿಂಗ್ ಮಾಡಿದ ನಿತೀಶ್ ವಣಿಕ್ಯಾಳ 13 ರನ್ ನೀಡಿ 5 ವಿಕೆಟ್ ಪಡೆದರು. ಲಕ್ಷ್ಮಿಕಾಂತ ಸೂರ್ಯವಂಶಿ 4ಕ್ಕೆ 2 ವಿಕೆಟ್ ಗಳಿಸಿದರು.

 ಕೆಸಿಸಿ ತಂಡವು 11.2 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 71 ರನ್ ಗಳಿಸುವ ಮೂಲಕ ವಿಜಯದ ನಗೆ ಬೀರಿತು.

ಶ್ರೇಯರ್ ಪುರಾಣಿಕ್ 40 ರನ್ ( 4 ಬೌಂಡರಿ, 2 ಸಿಕ್ಸರ್) ಭೀಮರಾವ್ ನವಲೆ 10 ರನ್ ಗಳಿಸಿ ತಂಡದ ಗೆಲುವಿಗೆ ಕಾಣಿಕೆ ನೀಡಿದರು. ಕರಣ್ ರಾಠೋಡ್ 22ಕ್ಕೆ 1 ವಿಕೆಟ್ ಪಡೆದರು.

ಶ್ರೇಯಸ್ ಪುರಾಣಿಕ್ ಉತ್ತಮ ಬ್ಯಾಟ್ಸ್‌ಮನ್ (205 ರನ್‌) ಪ್ರಶಸ್ತಿ ಪಡೆದರು. ನಿತೀಶ್ ವಣಿಕ್ಯಾಳ ಉತ್ತಮ ಬೌಲರ್ (13 ವಿಕೆಟ್) ಮತ್ತು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಮಾಣಿಕ ಸ್ಪೋರ್ಟ್ಸ್ ಅಕಾಡೆಮಿ ಅಧ್ಯಕ್ಷ ಆನಂದರಾಜ ಪ್ರಭು ಅವರು ವಿಜೇತ ತಂಡಕ್ಕೆ ಟ್ರೋಫಿ ಪ್ರದಾನ ಮಾಡಿದರು.

ಕ್ರೀಡೆಗೂ ಆದ್ಯತೆ ನೀಡಿ: ‘ದೈಹಿಕ ಆರೋಗ್ಯ ಮತ್ತು ಮಾನಸಿಕ ನೆಮ್ಮದಿಗೆ ಕ್ರೀಡೆ ಸಹಕಾರಿಯಾಗಿದೆ. ಯುವಕರು ಶಿಕ್ಷಣದ ಜತೆಗೆ ಕ್ರೀಡೆಗೂ ಆದ್ಯತೆ ನೀಡಬೇಕು’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ ನಾಡಗೇರಿ ಹೇಳಿದರು.

ಕ್ರಿಕೆಟ್‌ ಟೂರ್ನಿಯಲ್ಲಿ ವಿಜೇತ ತಂಡಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಮಾಣಿಕ ಸ್ಪೋರ್ಟ್ಸ್‌ ಅಕಾಡೆಮಿ ಅಧ್ಯಕ್ಷ ಆನಂದರಾಜ ಪ್ರಭು ಮಾತನಾಡಿ, ‘ಯುವಕರು ಕ್ರೀಡೆಯಲ್ಲಿ ಸೋಲು– ಗೆಲುವನ್ನು ಸಮಾನವಾಗಿ ತೆಗೆದುಕೊಳ್ಳಬೇಕು. ಕಲ್ಯಾಣ ಕರ್ನಾಟಕ ಭಾಗದ ಕ್ರೀಡಾಪಟುಗಳು ಕ್ರೀಡೆಯಲ್ಲಿ ಉನ್ನತ ಸಾಧನೆ ಮಾಡಬೇಕು’ ಎಂದು ಸಲಹೆ ನೀಡಿದರು.

ಮಾಣಿಕಪ್ರಭು ಪಬ್ಲಿಕ ಶಾಲೆ ಮತ್ತು ಕಾಲೇಜಿನ ಪ್ರಾಂಶುಪಾಲರಾದ ಸುಮಂಗಲಾ ಜಾಗೀರದಾರ, ಯುವ ಉದ್ಯಮಿ ವೆಂಕಟೇಶ
ಕುಲಕರ್ಣಿ, ಮಾಣಿಕಪ್ರಭು ಅಂಧ ಮಕ್ಕಳ ಶಾಲೆಯ ವ್ಯವಸ್ಥಾಪಕ ಪ್ರಭು ಪಂಚಾಳ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು