ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಯ’ ಮಾಲೆ ಧರಿಸಲು ಕೈ–ಕಮಲ ಹಣಾಹಣಿ

Last Updated 18 ಜೂನ್ 2018, 14:10 IST
ಅಕ್ಷರ ಗಾತ್ರ

ಬೆಂಗಳೂರು: ಅನುಕಂಪದ ಅಲೆಯನ್ನು ನೆಚ್ಚಿಕೊಂಡಿರುವ ಬಿಜೆಪಿಗೆ ಅತೃಪ್ತರ ಕಾಟ, ಕಾಂಗ್ರೆಸ್‌ಗೆ ಹಿರಿಯ ಶಾಸಕ ರಾಮಲಿಂಗಾರೆಡ್ಡಿ ನಾಮಬಲ ಹಾಗೂ ‘ತೆನೆ ಹೊತ್ತ ಮಹಿಳೆ’ಯ ಬಲ, ತೊಟ್ಟಿರುವ ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾರೆಡ್ಡಿಯವರಿಗೆ ‘ಲಂಚಮುಕ್ತ ಜಯನಗರ’ದ ಸಂಕಲ್ಪ.... ಹೀಗೆ ಎಲ್ಲ ಪಕ್ಷಗಳ ಅಭ್ಯರ್ಥಿಗಳು ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದಾರೆ.

ಪ್ರತಿಷ್ಠೆಯ ಕಣವಾಗಿರುವ ಜಯನಗರ ಕ್ಷೇತ್ರದಲ್ಲಿ ಜೂನ್‌ 11ರಂದು ಮತದಾನ ನಡೆಯಲಿದ್ದು, ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್‌ನಿಂದ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾರೆಡ್ಡಿ, ಬಿಜೆಪಿಯಿಂದ ಬಿ.ಎನ್‌.ಪ್ರಹ್ಲಾದ್‌ ಕಣಕ್ಕೆ ಇಳಿದಿದ್ದಾರೆ.

1989, 1994, 1999 ಹಾಗೂ 2004ರ ಚುನಾವಣೆಗಳಲ್ಲಿ ರಾಮಲಿಂಗಾರೆಡ್ಡಿ ಜಯಭೇರಿ ಬಾರಿಸಿದ್ದರು. ಕ್ಷೇತ್ರ ಪುನರ್‌ವಿಂಗಡಣೆ ಬಳಿಕ ಅವರು 2008ರಲ್ಲಿ ಬಿ.ಟಿ.ಎಂ. ಲೇಔಟ್‌ ಕ್ಷೇತ್ರಕ್ಕೆ ವಲಸೆ ಹೋದರು.

ಎರಡು ಸಲ ಸೋತಿದ್ದ ಬಿ.ಎನ್‌.ವಿಜಯಕುಮಾರ್ ಅವರು 2008 ಹಾಗೂ 2013ರ ಚುನಾವಣೆಗಳಲ್ಲಿ ಗೆಲುವಿನ ನಗೆ ಬೀರಿದರು. ‘ಸಜ್ಜನ ಶಾಸಕ’ ಎಂದು ಗುರುತಿಸಿಕೊಂಡ ಅವರು ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದರು.ಚುನಾವಣಾ ಪ್ರಚಾರದ ವೇಳೆ ಅವರಿಗೆ ಹೃದಯಾಘಾತ ಉಂಟಾಯಿತು. ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ನಿಧನರಾದರು.

ಆ ಬಳಿಕ, ಟಿಕೆಟ್‌ ಗಿಟ್ಟಿಸಲು ಬಿಜೆಪಿಯಲ್ಲಿ ಪೈಪೋಟಿ ಆರಂಭವಾಯಿತು. ವಿಧಾನ ಪರಿಷತ್ ಸದಸ್ಯರಾದ ಬಿ.ಜೆ.ಪುಟ್ಟಸ್ವಾಮಿ, ತಾರಾ ಅನೂರಾಧ, ಮಾಜಿ ಮೇಯರ್‌ ಎಸ್‌.ಕೆ. ನಟರಾಜ್‌, ಪಾಲಿಕೆ ಸದಸ್ಯ ಎನ್‌.ನಾಗರಾಜು, ಪಾಲಿಕೆಯ ಮಾಜಿ ಸದಸ್ಯ ಸಿ.ಕೆ.ರಾಮಮೂರ್ತಿ ಅವಕಾಶದ ನಿರೀಕ್ಷೆಯಲ್ಲಿದ್ದರು. ವಿಜಯಕುಮಾರ್‌ ಸಹೋದರ ಬಿ.ಎನ್‌. ಪ್ರಹ್ಲಾದ್‌ಗೆ ಬಿಜೆಪಿ ಮಣೆ ಹಾಕಿತು. ಆರ್‌ಎಸ್‌ಎಸ್‌ ಶಿಫಾರಸು ಹಾಗೂ ಅನುಕಂಪದ ಅಲೆ ಅವರ ಹೆಸರನ್ನು ಮುನ್ನೆಲೆಗೆ ತಂದಿತು. ಈ ನಡೆ ಆಕಾಂಕ್ಷಿಗಳ ತೀವ್ರ ಅಸಮಾಧಾನಕ್ಕೆ ಕಾರಣವಾಯಿತು.

‘ನಮಗೆ ಟಿಕೆಟ್‌ ನೀಡಬೇಕು. ಇಲ್ಲದಿದ್ದರೆ ಪ್ರಚಾರಕ್ಕೆ ಬರುವುದಿಲ್ಲ’ ಎಂದು ಎಸ್‌.ಕೆ.ನಟರಾಜ್‌, ಸಿ.ಕೆ.ರಾಮಮೂರ್ತಿ, ಎನ್‌.ನಾಗರಾಜ್‌ ಬೆದರಿಕೆ ಹಾಕಿದರು. ‘ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅಭ್ಯರ್ಥಿ ಹೆಸರನ್ನು ಪ್ರಕಟಿಸಲಾಗಿದೆ’ ಎಂದು ಬಿಜೆಪಿ ಹಿರಿಯ ಶಾಸಕರು ಆಪ್ತರ ಬಳಿ ಅಸಮಾಧಾನ ತೋಡಿಕೊಂಡರು. ಜತೆಗೆ, ಚುನಾವಣಾ ಪ್ರಚಾರದಿಂದಲೂ ದೂರ ಉಳಿದರು.

ಹೈಕಮಾಂಡ್‌ ಸೂಚನೆ ಮೇರೆಗೆ ರಾಜ್ಯ ನಾಯಕರು ಅತೃಪ್ತರ ಮನವೊಲಿಸುವ ಕೆಲಸ ನಡೆಸಿದರು. ನಟರಾಜ್‌, ರಾಮಮೂರ್ತಿ ಪಟ್ಟು ಸಡಿಲಿಸಿದರು. ಬಿಜೆಪಿ ನಾಯಕರಿಂದ ನಾಗರಾಜ್‌ ಅಂತರ ಕಾಯ್ದುಕೊಂಡರು. ‘ರಾಮಲಿಂಗಾರೆಡ್ಡಿ ಜತೆಗೆ ಅವರು ಒಪ್ಪಂದ ಮಾಡಿಕೊಂಡಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದಾರೆ’ ಎಂಬುದು ಪಾಲಿಕೆಯ ಬಿಜೆಪಿ ಸದಸ್ಯರ ಆರೋಪ. ಇದನ್ನು ನಾಗರಾಜ್‌ ಅಲ್ಲಗಳೆದಿದ್ದಾರೆ. ಕಮಲ ಪಾಳಯದ ಒಳಬೇಗುದಿ ಪಕ್ಷಕ್ಕೆ ದೊಡ್ಡ ಸವಾಲಾಗಿದೆ. ನಿಷ್ಠಾವಂತ ಕಾರ್ಯಕರ್ತರ ಪಡೆ ಪಕ್ಷದ ಬೆನ್ನಿಗಿದೆ.

ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವ ಹೊಣೆಯನ್ನು ಕೇಂದ್ರ ಸಚಿವ ಅನಂತಕುಮಾರ್‌ ಅವರಿಗೆ ಬಿಜೆಪಿ ವರಿಷ್ಠರು ನೀಡಿದ್ದಾರೆ. ಅವರು ಒಂದು ವಾರದಿಂದ ನಿರಂತರ ಪ್ರಚಾರ ನಡೆಸುತ್ತಿದ್ದಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಗುರುವಾರದಿಂದ ಪ್ರಚಾರ ಆರಂಭಿಸಿದ್ದಾರೆ. ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಆರ್‌.ಅಶೋಕ ಮತ ಯಾಚನೆಯಲ್ಲಿ ತೊಡಗಿದ್ದಾರೆ. ಕ್ಷೇತ್ರದ ಏಳು ಪಾಲಿಕೆ ಸದಸ್ಯರ ಪೈಕಿ ಆರು ಮಂದಿ ಬಿಜೆಪಿಯವರು.


ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯಾ ರೆಡ್ಡಿ ಮತಯಾಚನೆ ಮಾಡಿದರು

ಅಪ್ಪನ ಶ್ರೀರಕ್ಷೆ: ಕಾಂಗ್ರೆಸ್‌ನಲ್ಲೂ ಟಿಕೆಟ್‌ಗಾಗಿ ಭಾರಿ ಪೈಪೋಟಿ ನಡೆದಿತ್ತು. 2013ರ ಚುನಾವಣೆಯಲ್ಲಿ 12,312 ಮತಗಳಿಂದ ಪರಾಭವ ಹೊಂದಿದ್ದ ಎಂ.ಸಿ. ವೇಣುಗೋಪಾಲ್‌ ಈ ಸಲವೂ ಕಣಕ್ಕೆ ಇಳಿಯಲು ಸಕಲ ಸಿದ್ಧತೆ ನಡೆಸಿದ್ದರು. ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಅವರ ಕೃಪಾಕಟಾಕ್ಷದ ನಿರೀಕ್ಷೆಯಲ್ಲಿದ್ದರು. ’ಮಗಳಿಗೆ ಸೀಟು ನೀಡಿದರೆ ಗೆಲ್ಲಿಸಿಕೊಂಡು ಬರುವ ಹೊಣೆ ನನ್ನದು’ ಎಂದು ರಾಮಲಿಂಗಾರೆಡ್ಡಿ ವರಿಷ್ಠರಿಗೆ ವಾಗ್ದಾನ ನೀಡಿದ್ದರು. ರಾಮಲಿಂಗಾರೆಡ್ಡಿ ಅವರು 20 ದಿನಗಳಿಂದ ಮಗಳ ಪರ ಮತ ಯಾಚನೆಯಲ್ಲಿ ತೊಡಗಿದ್ದಾರೆ.

ರಾಜ್ಯದಲ್ಲಿ ದೋಸ್ತಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಜಯನಗರ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲು ಜೆಡಿಎಸ್‌ ಒಪ್ಪಿತ್ತು. ಆದರೆ, ರಾಜರಾಜೇಶ್ವರಿನಗರ ಕ್ಷೇತ್ರವನ್ನು ಬಿಟ್ಟುಕೊಡಬೇಕು ಎಂದು ಪಟ್ಟು ಹಿಡಿದಿತ್ತು. ಇದಕ್ಕೆ ಕೈ ಪಾಳಯದ ನಾಯಕರು ಒಪ್ಪಿರಲಿಲ್ಲ. ಇದರ ಬೆನ್ನಲ್ಲೇ, ‘ನಮ್ಮ ಮೈತ್ರಿ ವಿಧಾನಸೌಧಕ್ಕೆ ಸೀಮಿತ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಗುಡುಗಿದ್ದರು. ಜೆಡಿಎಸ್‌ ಅಭ್ಯರ್ಥಿ ಕಾಳೇಗೌಡ ಪ್ರಚಾರ ಮುಂದುವರಿಸಿದ್ದರು. ರಾಜರಾಜೇಶ್ವರಿನಗರ ‘ಕೈ’ಪಾಲಾದ ಬಳಿಕ ಕಾಳೇಗೌಡ ಸದ್ದಿಲ್ಲದೆ ಪ್ರಚಾರ ನಿಲ್ಲಿಸಿದರು. ಪಕ್ಷದ ಬೆಂಬಲ ಕಾಂಗ್ರೆಸ್‌ಗೆ ಎಂದು ದೇವೇಗೌಡರು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್‌ ಶೇ 13ರಷ್ಟು ಮತಗಳನ್ನು ಪಡೆದಿತ್ತು.

ಲಂಚಮುಕ್ತ ಜಯನಗರ ಸಂಕಲ್ಪ: ಸಾಮಾಜಿಕ ಹೋರಾಟಗಳಿಂದ ಗುರುತಿಸಿಕೊಂಡ ರವಿಕೃಷ್ಣಾ ರೆಡ್ಡಿ ಅವರು ಗಮನ ಸೆಳೆದಿದ್ದಾರೆ. ಒಂದೂವರೆ ವರ್ಷಗಳಿಂದ ಕ್ಷೇತ್ರದಲ್ಲಿ ಬೀಡುಬಿಟ್ಟು ಮತಗಳನ್ನು ಸೆಳೆಯುವ ಯತ್ನದಲ್ಲಿ ತೊಡಗಿದ್ದಾರೆ. ಸೀರೆ, ಕುಕ್ಕರ್‌, ಹಣ ಹಂಚುವುದರ ವಿರುದ್ಧ ಸಿಡಿದೆದ್ದಿದ್ದಾರೆ. ರಾಷ್ಟ್ರೀಯ ಪಕ್ಷಗಳ ಆಮಿಷಗಳ ವಿರುದ್ಧ ಪ್ರತಿಭಟನೆಯನ್ನೂ ನಡೆಸಿದ್ದಾರೆ. ಅವರು ಪಡೆಯುವ ಮತಗಳು ನಿರ್ಣಾಯಕ.
*
ಮತದಾನಕ್ಕೆ ಸಕಲ ಸಿದ್ಧತೆ
ಕ್ಷೇತ್ರದಲ್ಲಿ ಇದೇ 11ರಂದು ಬೆಳಿಗ್ಗೆ 7ರಿಂದ ಸಂಜೆ 6ರ ವರೆಗೆ ಮತದಾನ ನಡೆಯಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎಂ. ಮಹೇಶ್ವರ ರಾವ್‌ ತಿಳಿಸಿದರು.

ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘50 ಮತಗಟ್ಟೆಗಳಿಗೆ ವೆಬ್‌ಕಾಸ್ಟಿಂಗ್‌ ಸೌಲಭ್ಯ ಕಲ್ಪಿಸಲಾಗಿದೆ. 15 ಮತದಾನ ಕಟ್ಟಡಗಳಲ್ಲಿ ವಿಡಿಯೋಗ್ರಫಿ ವ್ಯವಸ್ಥೆ ಮಾಡಲಾಗಿದೆ. ಮತಗಟ್ಟೆಗಳ ಮೇಲ್ವಿಚಾರಣೆ ನೋಡಿಕೊಳ್ಳಲು 29 ಸೆಕ್ಟರ್‌ ಅಧಿಕಾರಿಗಳನ್ನು ನಿಯೋಜಿಸಲಾಗಿದೆ’ ಎಂದರು.

‘ನೀತಿಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ 14 ಪ್ರಕರಣಗಳನ್ನು ದಾಖಲಿಸಲಾಗಿದ್ದು, ₹30.82 ಲಕ್ಷ ನಗದು ಜಪ್ತಿ ಮಾಡಲಾಗಿದೆ. ಇದೇ 9ರಂದು ಸಂಜೆ 6ಕ್ಕೆ ಬಹಿರಂಗ ಪ್ರಚಾರ ಕೊನೆಗೊಳ್ಳಲಿದೆ. 9ರ ಸಂಜೆ 5ರಿಂದ 11ರ ಮಧ್ಯರಾತ್ರಿ 12ರ ವರೆಗೆ ಹಾಗೂ 13ರ ಬೆಳಿಗ್ಗೆ 6ರಿಂದ ಮಧ್ಯರಾತ್ರಿ 12ರ ವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ’ ಎಂದರು.
*
ಜಯನಗರ ಕ್ಷೇತ್ರ ವಿವರ

2,03,184
ಕ್ಷೇತ್ರದ ಮತದಾರರು

1,02,668
ಪುರುಷ ಮತದಾರರು

1,00,500
ಮಹಿಳಾ ಮತದಾರರು

16
ತೃತೀಯ ಲಿಂಗಿಗಳು

19
ಕಣದಲ್ಲಿರುವ ಅಭ್ಯರ್ಥಿಗಳು

7
ಕ್ಷೇತ್ರದ ವಾರ್ಡ್‌ಗಳು

216
ಮತಗಟ್ಟೆಗಳು

5
ಪಿಂಕ್‌ ಮತಗಟ್ಟೆಗಳು

1,400
ಮತಗಟ್ಟೆ ಸಿಬ್ಬಂದಿ

Test

ಭಾನುವಾರ ಸೋಮವಾರ
2222 4444
ಸೋಮ 33 ರವಿ88*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT