ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯಾಘಾತ: ಎಎನ್‌ಎಫ್‌ ಕಾನ್‌ಸ್ಟೆಬಲ್‌ ಸಾವು

ಮಡಪ್ಪಾಡಿ: ಶಂಕಿತ ನಕ್ಸಲರಿಗಾಗಿ ಶೋಧ ಕಾರ್ಯಾಚರಣೆ
Last Updated 16 ಜೂನ್ 2018, 18:10 IST
ಅಕ್ಷರ ಗಾತ್ರ

ಸುಳ್ಯ: ತಾಲ್ಲೂಕಿನ ಮಡಪ್ಪಾಡಿ ಗ್ರಾಮದ ಹಾಡಿಕಲ್ಲು ಎಂಬಲ್ಲಿಗೆ ಶಂಕಿತ ನಕ್ಸಲರು ಭೇಟಿ ನೀಡಿದ ಮೇರೆಗೆ ನಕ್ಸಲರಿಗಾಗಿ ಶನಿವಾರ ಶೋಧ ಕಾರ್ಯ ಮುಂದುವರಿದಿದ್ದು, ಈ ಕಾರ್ಯಾಚರಣೆಯಲ್ಲಿ ತೊಡಗಿದ್ದ ನಕ್ಸಲ್‌ ನಿಗ್ರಹ ದಳದ (ಎಎನ್‌ಎಫ್‌) ಸಿಬ್ಬಂದಿಯೊಬ್ಬರು ಕಾಡಿನಲ್ಲಿ ಹೃದಯಾಘಾತದಿಂದ ಮೃತಪಟ್ಟರು.

ಕಾರ್ಕಳ ಎಎನ್‌ಎಫ್‌ ಸಿಬ್ಬಂದಿ ರಂಗಸ್ವಾಮಿ (48) ಮೃತಪಟ್ಟವರು. ಶನಿವಾರ ರಾತ್ರಿ ವೇಳೆಗೆ ಮೃತದೇಹವನ್ನು ಇಲ್ಲಿನ ಕೆವಿಜಿ ಆಸ್ಪತ್ರೆಗೆ ತರಲಾಯಿತು.

ಹಾಡಿಕಲ್ಲಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಆರ್‌. ರವಿಕಾಂತೇಗೌಡ ಭೇಟಿ ನೀಡಿ ಮಾಹಿತಿ ಪಡೆದರು. ಎಎನ್‌ಎಫ್‌ ಎಸ್‌ಪಿ ಲಕ್ಷ್ಮಿಪ್ರಸಾದ್, ಪುತ್ತೂರು ಡಿವೈಎಸ್‌ಪಿ ಶ್ರೀನಿವಾಸ್ ಸಹಿತ ಅನೇಕ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಕ್ಸಲರಿಗಾಗಿ ಶೋಧ ಕಾರ್ಯಾಚರಣೆ ನಡೆದಿದೆ.

ಕಾರ್ಕಳದಿಂದ ಎಎನ್‌ಎಫ್‌ನ 4 ತಂಡಗಳು ವಿವಿಧ ಕಡೆಗಳಲ್ಲಿ ಶೋಧ ನಡೆಸುತ್ತಿವೆ. ನಕ್ಷಲರು ಬಂದು ಹೋದ ಹಾಡಿಕಲ್ಲು, ಕೆಲ ವರ್ಷಗಳ ಹಿಂದೆ ನಕ್ಸಲರು ಭೇಟಿ ನೀಡಿದ್ದ ಸುಬ್ರಹ್ಮಣ್ಯದ ಪಳ್ಳಿಗದ್ದೆ, ಶಿರಾಡಿಯ ಅಡ್ಡಹೊಳೆ ಕಾಡುಗಳಲ್ಲಿ ಶೋಧ ನಡೆದಿದೆ. ಬೆಳ್ತಂಗಡಿಯ ಎಎನ್‌ಎಫ್‌ ಸಿಬ್ಬಂದಿಯೂ ಜತೆಗಿದ್ದಾರೆ.

ಇದೇ 14ರಂದು ರಾತ್ರಿ ಸುಳ್ಯ ಕೃಷಿ ಉತ್ಪನ್ನ ಸಮಿತಿ ಮಾಜಿ ಅಧ್ಯಕ್ಷ, ಬಿಜೆಪಿ ನಾಯಕ ಜಯರಾಮ ಹಾಡಿಕಲ್ಲು  ಎಂಬುವರಿಗೆ ಸೇರಿದ ತೋಟದ ರಬ್ಬರ್ ಮರಗಳ ಟ್ಯಾಪಿಂಗ್‌ ಅನ್ನು 6 ತಿಂಗಳ ಹಿಂದೆ ಕಾಸರಗೋಡು ಜಿಲ್ಲೆಯ ಚಿತ್ತಾರಿಕಲ್ ಎಂಬಲ್ಲಿನ ಥಾಮಸ್‌ ಎಂಬುವರಿಗೆ ಲೀಸ್‌ಗೆ ನೀಡಲಾಗಿತ್ತು. ಜಯರಾಮ ಅವರ ಮನೆಯ ಒಂದು ಫರ್ಲಾಂಗ್ ದೂರದಲ್ಲಿರುವ ಈ ಶೆಡ್‌ನಲ್ಲಿ ಅವರು ವಾಸ್ತವ್ಯವಿದ್ದರು. ಅಲ್ಲಿಯೇ ಅಡುಗೆ ತಯಾರಿಸುತ್ತಿದ್ದರು. ರಾತ್ರಿ 7.45ರ ಸುಮಾರಿಗೆ ಇಬ್ಬರು ಯುವತಿಯರು ಮತ್ತು ಒಬ್ಬ ಪುರುಷ ಶೆಡ್‌ಗೆ ಬಂದು ಹೋಗಿದ್ದರು.

ಸುಮಾರು 23 ವರ್ಷದ ಯುವತಿಯ ಬಳಿ ಎರಡು ಪಿಸ್ತೂಲ್‌, ಸುಮಾರು 35 ವರ್ಷದ ಮಹಿಳೆಯ ಬಳಿ ಎರಡು ಪಿಸ್ತೂಲ್‌ ಹಾಗೂ 45 ವರ್ಷದ ಪುರುಷನ ಬಳಿ ಒಂದು ಪಿಸ್ತೂಲ್‌, ಒಂದು ಕೋವಿಗಳಿದ್ದವು ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಭಾವಚಿತ್ರ ಚಹರೆ ಗುರುತಿಸಲು ವಿಫಲ

ಎಎನ್‌ಎಫ್‌ ಅಧಿಕಾರಿಗಳು ನಕ್ಸಲ್ ಪಟ್ಟಿಯಲ್ಲಿರುವವರ ಭಾವಚಿತ್ರಗಳನ್ನು ಥಾಮಸ್‌ ಅವರಿಗೆ ತೋರಿಸಿ ಮಾಹಿತಿ ಪಡೆಯಲು ಪ್ರಯತ್ನಿಸಿದರು. ಆದರೆ ಶಂಕಿತ ನಕ್ಸಲರನ್ನು ಗುರುತಿಸಲು ಥಾಮಸ್ ಅವರಿಗೆ ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ.

4 ತಂಡಗಳಲ್ಲಿ ಶೋಧ

ತಗ್ಗಿದ ಮಳೆ, ಕಾರ್ಯಾಚರಣೆ ಸರಾಗ

ಈ ಹಿಂದೆ ಭೇಟಿ ನೀಡಿದ್ದ ಸ್ಥಳಗಳಲ್ಲೂ ಶೋಧ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT