ಗುರುವಾರ , ನವೆಂಬರ್ 26, 2020
20 °C
ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ರಾಹುಲ್–ಶ್ರೇಯಸ್ ಅಯ್ಯರ್ ಬಳಗ; ಮ್ಯಾಕ್ಸ್‌ವೆಲ್‌, ರಹಾನೆ ಮೇಲೆ ಕಣ್ಣು

IPL-2020 | DC vs KXIP: ಡೆಲ್ಲಿ ಬಲಕ್ಕೆ ಸವಾಲಾಗುವುದೇ ಕಿಂಗ್ಸ್?

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: ರೋಚಕ ‘ಡಬಲ್ ಸೂಪರ್ ಓವರ್‌‘ನಲ್ಲಿ ಗಳಿಸಿದ ಜಯವೂ ಸೇರಿದಂತೆ ಸತತ ಎರಡು ಗೆಲುವು ಸಾಧಿಸಿ ಆತ್ಮವಿಶ್ವಾಸದಲ್ಲಿರುವ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮಂಗಳವಾರ ಸೆಣಸಲಿದೆ.

ಎರಡನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 97 ರನ್‌ಗಳಿಂದ ಮಣಿಸಿದ್ದ ಕಿಂಗ್ಸ್ ಇಲೆವನ್ ನಂತರ ಐದು ಪಂದ್ಯಗಳಲ್ಲಿ ಸೋಲು ಕಂಡಿತ್ತು. ಎರಡನೇ ಸುತ್ತಿನ ಮೊದಲ ಪಂದ್ಯದಲ್ಲಿ ಮತ್ತೊಮ್ಮೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಎಂಟು ವಿಕೆಟ್‌ಗಳಿಂದ ಜಯಿಸಿದ್ದ ತಂಡ ಭಾನುವಾರ ರಾತ್ರಿ ಹಾಲಿ ಚಾಂಪಿಯನ್ನರನ್ನು ಸೂಪರ್ ಓವರ್‌ಗಳಲ್ಲಿ ಸೋಲಿಸಿತ್ತು.

177 ರನ್‌ಗಳ ಜಯದ ಗುರಿ ಬೆನ್ನತ್ತಿದ್ದ ತಂಡ ಅಮೋಘ ಹೋರಾಟ ತೋರಿ ಅಂತಿಮ ಹಂತದಲ್ಲಿ ಎಡವಿತ್ತು. ಮೊದಲ ಸೂಪರ್ ಓವರ್‌ನಲ್ಲಿ ಮುಂಬೈಯನ್ನು ಕಾಡಿ ಟೈ ಸಾಧಿಸಿತ್ತು. ಹೀಗಾಗಿ ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿ ಪಂದ್ಯವೊಂದು ಎರಡು ಸೂಪರ್ ಓವರ್‌ಗಳನ್ನು ಕಂಡಿತ್ತು. 12 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ತಂಡ ಕ್ರಿಸ್ ಗೇಲ್ ಅವರ ಸಿಕ್ಸರ್ ಮತ್ತು ಮಯಂಕ್ ಅಗರವಾಲ್ ಅವರ ಎರಡು ಬೌಂಡರಿಗಳ ನೆರವಿನಿಂದ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಎಲ್ಲ ವಿಭಾಗದಲ್ಲೂ ಆಟಗಾರರು ಪಾರಮ್ಯ ಮೆರೆದ ಕಾರಣ ತಂಡ ಆತ್ಮವಿಶ್ವಾಸದಲ್ಲಿದೆ. ಡೆಲ್ಲಿ ಎದುರಿನ ಮೊದಲ ಸುತ್ತಿನ ಪಂದ್ಯದಲ್ಲಿ ಸೂಪರ್ ಓವರ್‌ನಲ್ಲಿ ಸೋತಿದ್ದ ತಂಡ ಈಗ ಸೇಡು ತೀರಿಸಲು ಸಜ್ಜಾಗಿದೆ.  

ಡೆಲ್ಲಿ ಈ ವರೆಗೆ ಆಡಿರುವ ಒಂಬತ್ತು ಪಂದ್ಯಗಳ ಪೈಕಿ ಏಳರಲ್ಲಿ ಜಯ ಗಳಿಸಿದೆ. ಸೋಲಿನ ಬಳಿಕ ಕಳೆದ ಎರಡು ಪಂದ್ಯಗಳಲ್ಲಿ ಸತತ ಜಯ ಗಳಿಸಿ ಹ್ಯಾಟ್ರಿಕ್ ಸಾಧನೆಯತ್ತ ಹೆಜ್ಜೆ ಹಾಕಿದೆ.

ಸುಲಭವಾಗಿ ಗೆಲ್ಲಬಹುದಾದ ಪಂದ್ಯಗಳ ಕೊನೆಯ ಕ್ಷಣದಲ್ಲಿ ಎಡವಟ್ಟು ಆಗುತ್ತಿರುವುದು ಕಿಂಗ್ಸ್ ಇಲೆವನ್ ಪಂಜಾಬ್‌ ತಂಡವನ್ನು ಕಾಡುತ್ತಿರುವ ಸಮಸ್ಯೆ. ಬೆಂಗಳೂರು ಎದುರಿನ ಪಂದ್ಯದಲ್ಲಿ ಮತ್ತು ಮುಂಬೈ ವಿರುದ್ಧದ ಹಣಾಹಣಿಯಲ್ಲಿ ಇದು ಸ್ಪಷ್ಟವಾಗಿದೆ. ಹಾಲಿ ಚಾಂಪಿಯನ್ನರ ವಿರುದ್ಧದ ಪಂದ್ಯವನ್ನು ಸೂಪರ್ ಓವರ್‌ ವರೆಗೆ ಕೊಂಡೊಯ್ಯದೆ ನಿಗದಿತ ಅವಧಿಯಲ್ಲೇ ಮುಗಿಸುವ ‌ಅವಕಾಶ ತಂಡಕ್ಕೆ ಇತ್ತು. ಇನಿಂಗ್ಸ್‌ನ ಆರಂಭದಿಂದ 18ನೇ ಓವರ್ ವರೆಗೆ ಕ್ರೀಸ್‌ನಲ್ಲಿದ್ದು 51 ಎಸೆತಗಳಲ್ಲಿ 77 ರನ್ ಗಳಿಸಿದ ಕೆ.ಎಲ್‌.ರಾಹುಲ್ ಔಟಾದಾಗ ಜಯ ಗಳಿಸಲು 15 ಎಸೆತಗಳಲ್ಲಿ 24 ರನ್‌ಗಳು ಬೇಕಾಗಿದ್ದವು. ಐದು ವಿಕೆಟ್‌ ಉಳಿದಿದ್ದರೂ ಆ ಗುರಿ ಮುಟ್ಟಲು ಆಗಿರಲಿಲ್ಲ. ಡೆತ್ ಬೌಲಿಂಗ್‌ನಲ್ಲಿ ಮೊನಚು ಇಲ್ಲದೇ ಇರುವುದು ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರು ಫಾರ್ಮ್‌ಗೆ ಮರಳದಿರುವುದು ತಂಡಕ್ಕೆ ತಲೆನೋವಾಗಿದೆ.

ಕೆ.ಎಲ್‌.ರಾಹುಲ್ ಈಗಾಗಗಲೇ 525 ರನ್‌ ಗಳಿಸಿದ್ದು ಸತತ ಮೂರು ಆವೃತ್ತಿಗಳಲ್ಲಿ 500ರ ಗಡಿ ದಾಟಿದ ಅಪರೂಪದ ಸಾಧನೆ ಮಾಡಿದ್ದಾರೆ. ಮಯಂಕ್ ಅಗರವಾಲ್ ಬ್ಯಾಟಿನಿಂದಲೂ ರನ್‌ಗಳು ಹರಿದುಬರುತ್ತಿವೆ. ತಂಡಕ್ಕೆ ಮರಳಿರುವ ಕ್ರಿಸ್‌ ಗೇಲ್ ಕೂಡ ಬೌಂಡರಿ–ಸಿಕ್ಸರ್‌ಗಳನ್ನು ಸಿಡಿಸುತ್ತಿರುವುದು ತಂಡದಲ್ಲಿ ಉತ್ಸಾಹ ತುಂಬಿಸಿದೆ. ನಿಕೋಲಸ್ ಪೂರನ್ ಮೇಲೆಯೂ ಭರವಸೆ ಇದೆ.

ಶ್ರೇಯಸ್ ಅಯ್ಯರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆದ್ದು ಯಾವುದೇ ತಂಡವನ್ನು ಸೋಲಿಸುವ ಸಾಮರ್ಥ್ಯ ತನ್ನಲ್ಲಿದೆ ಎಂಬುದನ್ನು ಸಾಬೀತು ಮಾಡಿದೆ. ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಕಳೆದ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ. ಆದರೆ ಅವರ ಜೋಡಿ ಪೃಥ್ವಿ ಶಾ ಫಾರ್ಮ್ ಕಳೆದುಕೊಂಡಿದ್ದಾರೆ. ಹಿಂದಿನ ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿರುವ ಅವರು ಅದಕ್ಕೂ ಹಿಂದಿನ ಪಂದ್ಯದಲ್ಲಿ ಕೇವಲ ನಾಲ್ಕು ರನ್ ಗಳಿಸಿದ್ದರು.

ಅಕ್ಷರ್ ಪಟೇಲ್ ಸ್ಪಿನ್‌ ದಾಳಿಯಲ್ಲಿ ಮಾತ್ರವಲ್ಲ, ಬ್ಯಾಟಿಂಗ್‌ನಲ್ಲೂ ಮಿಂಚುತ್ತಿದ್ದಾರೆ. ಚೆನ್ನೈ ವಿರುದ್ಧದ ಪಂದ್ಯದ ಕೊನೆಯಲ್ಲಿ ರವೀಂದ್ರ ಜಡೇಜ ಓವರ್‌ನಲ್ಲಿ ಮೂರು ಸಿಕ್ಸರ್ ಸಿಡಿಸಿ ಅವರು ತಂಡಕ್ಕೆ ಜಯ ತಂದುಕೊಟ್ಟಿದ್ದರು. ಕಗಿಸೊ ರಬಾಡ ಮತ್ತು ಆ್ಯನ್ರಿಕ್ ನಾರ್ಕಿಯ ಅವರನ್ನೊಳಗೊಂಡ ಬೌಲಿಂಗ್‌ ವಿಭಾಗ ಬಲಿಷ್ಠವಾಗಿದ್ದು ಗಾಯಗೊಂಡಿರುವ ರಿಷಭ್ ಪಂತ್ ಅಭಾವದಲ್ಲಿ ಅಜಿಂಕ್ಯ ರಹಾನೆಗೆ ಲಯ ಕಂಡುಕೊಳ್ಳಲು ಮತ್ತೊಂದು ಅವಕಾಶ ಲಭಿಸುವ ಸಾಧ್ಯತೆ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು