ಬುಧವಾರ, ಸೆಪ್ಟೆಂಬರ್ 18, 2019
23 °C
ವಾಲ್ಟಿಂಗ್‌– ಗ್ರ್ಯಾಂಡ್‌ಹೋಮ್‌ ಶತಕದ ಜೊತೆಯಾಟ

ಶ್ರೀಲಂಕಾ–ನ್ಯೂಜಿಲೆಂಡ್‌ ಟೆಸ್ಟ್‌ ಕ್ರಿಕೆಟ್‌: ಕಿವೀಸ್‌ ಪಡೆ 138 ರನ್‌ ಮುನ್ನಡೆ

Published:
Updated:

ಕೊಲಂಬೊ: ವಿಕೆಟ್‌ ಕೀಪರ್‌ ಬಿ.ಜೆ.ವಾಲ್ಟಿಂಗ್‌ (ಬ್ಯಾಟಿಂಗ್‌ 81) ಮತ್ತು ಆಲ್‌ರೌಂಡರ್‌ ಕಾಲಿನ್‌ ಡಿ ಗ್ರಾಂಡ್‌ಹೋಮ್‌ (ಬ್ಯಾಟಿಂಗ್‌ 83) ಅವರ ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ನ್ಯೂಜಿಲೆಂಡ್‌ ಎರಡನೇ ಟೆಸ್ಟ್‌ನ ನಾಲ್ಕನೇ ದಿನವಾದ ಭಾನುವಾರ  ಶ್ರೀಲಂಕಾ ವಿರುದ್ಧ 138 ರನ್‌ಗಳ ಮೊದಲ ಇನಿಂಗ್ಸ್‌ ಮುನ್ನಡೆ ಪಡೆಯಿತು. ಪ್ರವಾಸಿ ತಂಡ ಇನ್ನೂ ಐದು ವಿಕೆಟ್‌ಗಳನ್ನು ಹೊಂದಿದೆ.‌

ಮಳೆಯಿಂದ ಮೊದಲ ಎರಡು ದಿನ 66 ಓವರುಗಳ ಆಟವಷ್ಟೇ ಸಾಧ್ಯವಾಗಿತ್ತು. ಪ್ರತಿಕೂಲ ಹವೆ ಮತ್ತು ಮಂದ ಬೆಳಕಿನಿಂದ ನಾಲ್ಕನೇ ದಿನ 48 ಓವರುಗಳ ಆಟವಷ್ಟೇ ನಡೆಯಿತು. ಶ್ರೀಲಂಕಾದ 244 ರನ್‌ಗಳಿಗೆ ಉತ್ತರವಾಗಿ  ನಾಲ್ಕನೇ ದಿನದ ಕೊನೆಗೆ 5 ವಿಕೆಟ್‌ಗೆ 382 ರನ್‌ ಗಳಿಸಿದೆ.

ಶನಿವಾರ ಶತಕ ಬಾರಿಸಿದ್ದ ಟಾಮ್ ಲಥಾಮ್‌ ಮತ್ತು ವಾಲ್ಟಿಂಗ್‌ ಬೇಗನೇ ರನ್‌ಗಳನ್ನು ಪೇರಿಸತೊಡಗಿದರು. ಲಾಥಮ್‌, ಆಫ್‌ ಸ್ಪಿನ್ನರ್‌ ದಿಲ್ರುವಾನ್‌ ಪೆರೀರಾ ಅವರಿಗೆ ಎಲ್‌ಬಿಡಬ್ಲ್ಯು ಆಗಿ ನಿರ್ಗಮಿಸುವ ಮೊದಲು ಐದನೇ ವಿಕೆಟ್‌ಗೆ 143 ರನ್‌ಗಳ ಜೊತೆಯಾಟವಾಡಿದರು. ಆದರೆ ಆತಿಥೇಯರ ಯಶಸ್ಸು ಅಷ್ಟಕ್ಕೇ ಕೊನೆಗೊಂಡಿತು. ಗ್ರ್ಯಾಂಡ್‌ಹೋಮ್‌ 75 ಎಸೆತಗಳ ಅಜೇಯ ಇನಿಂಗ್ಸ್‌ನಲ್ಲಿ ಬಿರುಸಿನ ಆಟವಾಡಿದ್ದು, ಐದು ಭರ್ಜರಿ ಸಿಕ್ಸರ್‌, ಐದು ಬೌಂಡರಿಗಳನ್ನು ಬಾರಿಸಿದ್ದಾರೆ. ವಾಲ್ಟಿಂಗ್ ಜೊತೆ ಮುರಿಯದ ಆರನೇ ವಿಕೆಟ್‌ಗೆ 113 ರನ್‌ಗಳು ಬಂದಿವೆ.

ನಾಯಕ ದಿಮುತ್‌ ಕರುಣಾರತ್ನೆ ಎಡಗಾಲಿನ ಸ್ನಾಯುಸೆಳೆತದಿಂದ ಕಾರಣ ಆಂಜೆಲೊ ಮ್ಯಾಥ್ಯೂಸ್‌ ತಂಡ ಮುನ್ನಡೆಸಿದರು. ಕರುಣಾರತ್ನೆ, ಶ್ರೀಲಂಕಾದ ಎರಡನೇ ಇನಿಂಗ್ಸ್‌ನಲ್ಲಿ ಏಳನೇ ಕ್ರಮಾಂಕಕ್ಕಿಂತ ಮೊದಲು ಆಡುವಂತಿಲ್ಲ. ಮೂರನೇ ದಿನ ಕಿರುಬೆರಳಿಗೆ ಗಾಯವಾದ ಕಾರಣ ವಿಕೆಟ್‌ಕೀಪರ್‌ ನಿರೋಶನ್ ಡಿಕ್ವೆಲ್ಲಾ ಕೂಡ ಕಣಕ್ಕಿಳಿಯಲಿಲ್ಲ. ಅವರ ಬದಲು ಸಬ್‌ಸ್ಟಿಟ್ಯೂಟ್‌ ದಿನೇಶ್‌ ಚಾಂಡಿಮಲ್‌ ಕೀಪಿಂಗ್‌ ಕೆಲಸ ನಿರ್ವಹಿಸಿದರು. 

ಸ್ಕೋರ್‌:

ಶ್ರೀಲಂಕಾ: 1ನೇ ಇನಿಂಗ್ಸ್: 244; ನ್ಯೂಜಿಲೆಂಡ್‌: 1ನೇ ಇನಿಂಗ್ಸ್: 110 ಓವರುಗಳಲ್ಲಿ 5 ವಿಕೆಟ್‌ಗೆ 382 (ಟಾಮ್‌ ಲಥಾಮ್‌ 154, ಬಿ.ಜೆ.ವಾಲ್ಟಿಂಗ್‌ ಬ್ಯಾಟಿಂಗ್‌ 81, ಕಾಲಿನ್‌ ಡಿ ಗ್ರಾಂಡ್‌ಹೋಮ್ ಬ್ಯಾಟಿಂಗ್‌ 83; ದಿಲ್ರುವಾನ್‌ ಪೆರೀರಾ 114ಕ್ಕೆ3).

Post Comments (+)