ದಿನೇಶ್ ಬಳಗಕ್ಕೆ ಚೆನ್ನೈ ಸವಾಲು

ಶನಿವಾರ, ಏಪ್ರಿಲ್ 20, 2019
27 °C
ಸತತ ಸೋಲು ಕಂಡ ಆತಿಥೇಯರಿಗೆ ಜಯದ ನಿರೀಕ್ಷೆ

ದಿನೇಶ್ ಬಳಗಕ್ಕೆ ಚೆನ್ನೈ ಸವಾಲು

Published:
Updated:
Prajavani

ಕೋಲ್ಕತ್ತ: ಜಯದ ಓಟ ಮುಂದುವರಿಸಿರುವ ಚಾಂಪಿಯನ್‌ ಚೆನ್ನೈ ಸೂಪರ್ ಕಿಂಗ್ಸ್‌ ಮತ್ತು ಸತತ ಸೋಲಿನಿಂದ ಕಂಗೆಟ್ಟಿರುವ ಕೋಲ್ಕತ್ತ ನೈಟ್ ರೈಡರ್ಸ್ ತಂಡಗಳ ನಡುವಿನ ಹಣಾಹಣಿಗೆ ಈಡನ್ ಗಾರ್ಡನ್ಸ್ ಸಜ್ಜಾಗಿದೆ.

ಪಾಯಿಂಟ್ ಪಟ್ಟಿಯ ಅಗ್ರಸ್ಥಾನದಲ್ಲಿರುವ ಸೂಪರ್ ಕಿಂಗ್ಸ್ ವಿರುದ್ಧ ಗೆದ್ದು ಜಯದ ಲಯಕ್ಕೆ ಮರಳಲು ಆತಿಥೇಯರು ಪ್ರಯತ್ನಿಸಲಿದ್ದಾರೆ. ನೈಟ್‌ ರೈಡರ್ಸ್ ಎದುರು ಮೊದಲ ಸುತ್ತಿನ ಪಂದ್ಯದಲ್ಲಿ ಗೆದ್ದಿರುವ ಸೂಪರ್‌ ಕಿಂಗ್ಸ್‌ ಭಾನುವಾರವೂ ಜಯಿಸಿ ‘ಡಬಲ್‌’ ಸಾಧನೆಯ ನಿರೀಕ್ಷೆಯಲ್ಲಿದೆ.

ಉತ್ತಮ ಸಾಮರ್ಥ್ಯ ತೋರಿ ಗೆಲುವಿನ ಹಾದಿಯಲ್ಲಿ ಸಾಗಿದ್ದ ನೈಟ್‌ ರೈಡರ್ಸ್‌ ದಿಢೀರ್ ಆಗಿ ಸೋಲಿನ ಸುಳಿಯಲ್ಲಿ ಸಿಲುಕಿದೆ. ಏಪ್ರಿಲ್‌ ಒಂಬತ್ತರಂದು ನಡೆದಿದ್ದ ಪಂದ್ಯದಲ್ಲಿ ಸೂಪರ್ ಕಿಂಗ್ಸ್‌ಗೆ ಮಣಿದ ತಂಡ ಶುಕ್ರವಾರದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಎದುರು ಸೋತಿತ್ತು. ಸ್ಫೋಟಕ ಬ್ಯಾಟ್ಸ್‌ಮನ್‌ ಆ್ಯಂಡ್ರೆ ರಸೆಲ್ ಅವರನ್ನು ತಂಡ ಹೆಚ್ಚು ಅವಲಂಬಿಸಿದೆ ಎಂಬುದು ಈ ಪಂದ್ಯಗಳಲ್ಲಿ ಸ್ಪಷ್ಟವಾಗಿತ್ತು. ರಸೆಲ್‌ ಗಾಯಗೊಂಡಿದ್ದು ಭಾನುವಾರ ಕಣಕ್ಕಿಳಿಯುವುದು ಸಂದೇಹ. ಹೀಗಾಗಿ ತಂಡ ಈಗ ಗಾಯದ ಮೇಲೆ ಬರೆ ಎಳೆದಂಥ ಪರಿಸ್ಥಿತಿಗೆ ಸಿಲುಕಿದೆ.

ತಂಡ ಗೆದ್ದ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ರಸೆಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾಗಿದ್ದರು. ಚೆನ್ನೈನಲ್ಲಿ ನಡೆದಿದ್ದ ಸೂಪರ್ ಕಿಂಗ್ಸ್ ಎದುರಿನ ಪಂದ್ಯದಲ್ಲಿ ರಸೆಲ್‌ ಮಣಿಗಂಟು ನೋವಿಗೆ ಒಳಗಾಗಿದ್ದರು.  ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಅದನ್ನು ಲೆಕ್ಕಿಸದೆ ಬ್ಯಾಟಿಂಗ್ ಮಾಡಿ 21 ಎಸೆತಗಳಲ್ಲಿ 45 ರನ್ ಗಳಿಸಿದ್ದ ಅವರು ಬೌಲಿಂಗ್ ವೇಳೆ ತೀವ್ರ ನೋವಿಗೆ ಒಳಗಾಗಿದ್ದರು.

ಯುವ ಬ್ಯಾಟ್ಸ್‌ಮನ್ ಶುಭಮನ್ ಗಿಲ್‌ ಶುಕ್ರವಾರದ ಪಂದ್ಯದಲ್ಲಿ ಉತ್ತಮ ಸಾಮರ್ಥ್ಯ ತೋರಿರುವುದು ನೈಟ್ ರೈಡರ್ಸ್‌ ಪಾಳಯದಲ್ಲಿ ಸಂತಸ ಮೂಡಿಸಿದೆ. ಆದರೆ ನಾಯಕ ದಿನೇಶ್ ಕಾರ್ತಿಕ್‌ ಇನ್ನೂ ಲಯ ಕಂಡುಕೊಳ್ಳಲು ಆಗದೇ ಇರುವುದು ತಂಡದ ಆತಂಕಕ್ಕೆ ಕಾರಣವಾಗಿದೆ. ದಿನೇಶ್‌ ಈ ವರೆಗೆ 15.33ರ ಸರಾಸರಿಯಲ್ಲಿ 93 ರನ್‌ ಕಲೆ ಹಾಕಿದ್ದಾರೆ.

ವೇಗಿಗಳು ಮಿಂಚುವ ಭರವಸೆ:ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದ ಪಿಚ್‌ನಲ್ಲಿ ಸ್ಪಿನ್‌ ಬೌಲರ್‌ಗಳಿಗೆ ನೆರವು ಸಿಗುವುದಿಲ್ಲ. ಆದ್ದರಿಂದ ಸೂಪರ್ ಕಿಂಗ್ಸ್‌ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ಸ್ಪಿನ್‌ ಅಸ್ತ್ರಗಳ ಬದಲಿಗೆ ವೇಗಿಗಳನ್ನು ಕಣಕ್ಕೆ ಇಳಿಸುವ ಸಾಧ್ಯತೆ ಇದೆ.

ಧೋನಿ ಕ್ರಿಕೆಟ್ ಅಕಾಡೆಮಿ ಆರಂಭ

ಮಹೇಂದ್ರ ಸಿಂಗ್ ಧೋನಿ ಅವರ ಕ್ರಿಕೆಟ್ ಅಕಾಡೆಮಿಯನ್ನು ಶನಿವಾರ ಇಲ್ಲಿ ಉದ್ಘಾಟಿಸಲಾಯಿತು. ಸಿಂಗಪುರ ಮತ್ತು ದುಬೈನಲ್ಲಿ ಈಗಾಗಲೇ ಅಕಾಡೆಮಿ ಕೇಂದ್ರಗಳನ್ನು ಹೊಂದಿದೆ. ಒಟ್ಟು 17 ಶಾಖೆಗಳನ್ನು ಹೊಂದಿರುವ ಅಕಾಡೆಮಿ ಭಾರತದ ಮಹಾನಗರದಲ್ಲಿ ಇದೇ ಮೊದಲ ಬಾರಿ ಕಾಲೂರಿದೆ. ಸಾಲ್ಟ್‌ ಲೇಕ್‌ನಲ್ಲಿ ತೆರೆದಿರುವ ಶಾಖೆಯಲ್ಲಿ ಮೇ ಒಂದರಿಂದ 19 ವರ್ಷದೊಳಗಿನವರಿಗೆ ತರಬೇತಿ ಆರಂಭವಾಗಲಿದೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಇಮ್ರಾನ್ ತಾಹಿರ್‌ ‘ಮಹೇಂದ್ರ ಸಿಂಗ್ ಧೋನಿ ಅವರು ಉತ್ತಮ ಪ್ರೇರಕ ಶಕ್ತಿಯಾಗಿದ್ದು ಒಳ್ಳೆಯ ನಾಯಕ ಎನಿಸಿಕೊಂಡಿದ್ದಾರೆ. ವಿಶ್ವಕಪ್‌ ನಂತರ ಅಕಾಡೆಮಿಯಲ್ಲಿ ನಾನೂ ಸೇರುವೆ’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !