ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲಿನ ಸರಪಳಿ ಕಳಚಲು ಸಂಜು–ಮಾರ್ಗನ್ ಹಣಾಹಣಿ

ಕೋಲ್ಕತ್ತ ನೈಟ್ ರೈಡರ್ಸ್–ರಾಜಸ್ಥಾನ ರಾಯಲ್ಸ್‌ ಮುಖಾಮುಖಿ ಇಂದು
Last Updated 23 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಮುಂಬೈ: ಸತತ ಸೋಲುಗಳಿಂದ ಕಂಗೆಟ್ಟಿರುವ ರಾಜಸ್ಥಾನ ರಾಯಲ್ಸ್‌ ಮತ್ತು ಕೋಲ್ಕತ್ತ ನೈಟ್ ರೈಡರ್ಸ್‌ ತಂಡಗಳು ಶನಿವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ.

ಉಭಯ ತಂಡಗಳೂ ತಲಾ ನಾಲ್ಕು ಪಂದ್ಯಗಳನ್ನು ಆಡಿವೆ. ಅದರಲ್ಲಿ ತಲಾ ಮೂರರಲ್ಲಿ ಸೋತು, ಒಂದರಲ್ಲಿ ಗೆದ್ದಿವೆ. ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ ತಂಡವು ಗುರುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎದುರು ಸೋಲಿನ ಆಘಾತ ಅನುಭವಿಸಿತ್ತು. ವಿರಾಟ್ ಕೊಹ್ಲಿ ಮತ್ತು ದೇವದತ್ತ ಪಡಿಕ್ಕಲ್ ಅವರ ಅಬ್ಬರದ ಜೊತೆಯಾಟವನ್ನು ಮುರಿಯವಲ್ಲಿ ರಾಜಸ್ಥಾನದ ಬೌಲರ್‌ಗಳು ಸಂಪೂರ್ಣ ವೈಫಲ್ಯ ಅನುಭವಿಸಿದ್ದರು. ಬೆಂಗಳೂರು 10 ವಿಕೆಟ್‌ಗಳಿಂದ ಜಯಶಾಲಿಯಾಗಿತ್ತು. 20 ವರ್ಷದ ದೇವದತ್ತ ಐಪಿಎಲ್‌ನಲ್ಲಿ ತಮ್ಮ ಚೊಚ್ಚಲ ಶತಕ ದಾಖಲಿಸಿದ್ದರು.

ಅದರಿಂದಾಗಿ ತಂಡದ ಬೌಲಿಂಗ್‌ ವಿಭಾಗದಲ್ಲಿ ಕೆಲವು ಬದಲಾವಣೆಗಳೊಂದಿಗೆ ತಂಡವು ಕಣಕ್ಕಿಳಿಯುವ ಸಾಧ್ಯತೆ ಇದೆ. ಬ್ಯಾಟಿಂಗ್‌ನಲ್ಲಿಯೂ ಕೆಲವು ಸುಧಾರಣೆಗಳನ್ನು ಮಾಡಿಕೊಳ್ಳುವತ್ತಲ್ಲೂ ತಂಡದ ವ್ಯವಸ್ಥಾಪಕರು ಚಿತ್ತ ನೆಟ್ಟಿದ್ದಾರೆ. ಏಕೆಂದರೆ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದ್ದಾರೆ. ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದ ಶಿವಂ ದುಬೆ, ರಿಯಾನ್ ಪರಾಗ್ ಮತ್ತು ರಾಹುಲ್ ತೆವಾಟಿಯಾ ಅವರ ದಿಟ್ಟ ಬ್ಯಾಟಿಂಗ್‌ನಿಂದಾಗಿ ತಂಡವು ಹೋರಾಟದ ಮೊತ್ತ ಗಳಿಸಿತ್ತು. ಈ ಟೂರ್ನಿಯಲ್ಲಿ ಒಂದು ಶತಕ ದಾಖಲಿಸಿರುವ ಸಂಜು ಸ್ಯಾಮ್ಸನ್, ಆರಂಭಿಕ ಜೋಸ್ ಬಟ್ಲರ್, ಡೇವಿಡ್ ಮಿಲ್ಲರ್,ಮನನ್ ವೊಹ್ರಾ ಅವರ ವೈಫಲ್ಯವು ತಂಡವನ್ನು ಕಾಡುತ್ತಿದೆ.

ಕೋಲ್ಕತ್ತ ತಂಡದ ಪರಿಸ್ಥಿತಿಯೂ ಹೆಚ್ಚುಕಮ್ಮಿ ಇದೇ ರೀತಿಯದ್ದು. ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ಪಂದ್ಯದಲ್ಲಿ ದಿನೇಶ್ ಕಾರ್ತಿಕ್, ಪ್ಯಾಟ್ ಕಮಿನ್ಸ್ ಮತ್ತು ಆ್ಯಂಡ್ರೆ ರಸೆಲ್ ಅವರು ಅಮೋಘವಾಗಿ ಬ್ಯಾಟಿಂಗ್ ಮಾಡಿದ್ದರು. ಆದರೆ, ಅಗ್ರ ನಾಲ್ವರು ಬ್ಯಾಟ್ಸ್‌ಮನ್‌ಗಳು ನಿರಾಸೆ ಮೂಡಿಸಿದ್ದರು. ಬೌಲಿಂಗ್‌ನಲ್ಲಿ ಕಮಿನ್ಸ್‌ ದುಬಾರಿಯಾಗಿದ್ದರು. ಆದರೆ ಬ್ಯಾಟಿಂಗ್‌ನಲ್ಲಿ ಮಿಂಚಿದ್ದರಿಂದ ಅವರು ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಅಬ್ಬರದ ಆಟಗಾರ ರಸೆಲ್ ಲಯಕ್ಕೆ ಮರಳಿರುವುದು ತಂಡದಲ್ಲಿ ಉತ್ಸಾಹ ಮೂಡಿಸಿದೆ. ಆದರೆ, ನಾಯಕ ಮಾರ್ಗನ್, ನಿತೀಶ್ ರಾಣಾ ಮತ್ತು ರಾಹುಲ್ ತ್ರಿಪಾಠಿ ಅವರು ಲಯಕ್ಕೆ ಮರಳಿದರೆ, ಬ್ಯಾಟಿಂಗ್‌ ವಿಭಾಗ ಸದೃಢವಾಗಬಹುದು. ಪ್ರಸಿದ್ಧಕೃಷ್ಣ, ಸ್ಪಿನ್ನರ್ ವರುಣ್ ಚಕ್ರವರ್ತಿ, ಕಮಲೇಶ್ ನಾಗರಕೋಟಿ ಮತ್ತು ಸುನಿಲ್ ನಾರಾಯಣ್ ಅವರು ಜೊತೆಯಾಟಗಳಿಗೆ ತಡೆಯೊಡ್ಡುವಲ್ಲಿ ಸಫಲರಾದರೆ ತಂಡವು ಗೆಲುವಿನ ಹಾದಿಗೆ ಮರಳುವ ಸಾಧ್ಯತೆ ಹೆಚ್ಚು.

ತಂಡಗಳು: ರಾಜಸ್ಥಾನ ರಾಯಲ್ಸ್: ಸಂಜು ಸ್ಯಾಮ್ಸನ್ (ನಾಯಕ–ವಿಕೆಟ್‌ಕೀಪರ್), ಜೋಸ್ ಬಟ್ಲರ್, ಮನನ್ ವೊಹ್ರಾ, ರಿಯಾನ್ ಪರಾಗ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ಶ್ರೇಯಸ್ ಗೋಪಾಲ್, ಜಯದೇವ್ ಉನದ್ಕತ್, ಶಿವಂ ದುಬೆ, ಕ್ರಿಸ್ ಮೊರಿಸ್, ಮುಸ್ತಫಿಜುರ್ ರೆಹಮಾನ್, ಚೇತನ್ ಸಕಾರಿಯಾ, ಕೆ.ಸಿ. ಕಾರ್ಯಪ್ಪ, ಕುಲದೀಪ್ ಯಾದವ್, ಯಶಸ್ವಿ ಜೈಸ್ವಾಲ್.

ಕೋಲ್ಕತ್ತ ನೈಟ್ ರೈಡರ್ಸ್: ಏಯಾನ್ ಮಾರ್ಗನ್ (ನಾಯಕ), ದಿನೇಶ್ ಕಾರ್ತಿಕ್, ಶುಭಮನ್ ಗಿಲ್, ನಿತೀಶ್ ರಾಣಾ, ಟಿಮ್ ಸೀಫರ್ಟ್, ಆ್ಯಂಡ್ರೆ ರಸೆಲ್, ಸುನಿಲ್ ನಾರಾಯಣ್, ಪ್ಯಾಟ್ ಕಮಿನ್ಸ್, ಲಾಕಿ ಫರ್ಗ್ಯುಸನ್, ಸಂದೀಪ್ ವರಿಯರ್, ಪ್ರಸಿದ್ಧ ಕೃಷ್ಣ, ರಾಹುಲ್ ತ್ರಿಪಾಠಿ, ವರುಣ್ ಚಕ್ರವರ್ತಿ, ಶಕೀಬ್ ಅಲ್ ಹಸನ್, ಹರಭಜನ್ ಸಿಂಗ್, ಕರುಣ್ ನಾಯರ್, ಬೆನ್ ಕಟಿಂಗ್.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT