ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔಟಾಗಲು ಹೊಸ ಹಾದಿ ಹುಡುಕುವ ರಾಹುಲ್!

ಕ್ರಿಕೆಟ್: ಭಾರತ ತಂಡದ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ವ್ಯಂಗ್ಯ
Last Updated 29 ನವೆಂಬರ್ 2018, 14:12 IST
ಅಕ್ಷರ ಗಾತ್ರ

ಸಿಡ್ನಿ: ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ ಅವರು ಪ್ರತಿ ಬಾರಿಯೂ ಔಟಾಗಲು ಹೊಸ ರೀತಿಯನ್ನು ಹುಡುಕಿಕೊಳ್ಳುತ್ತಿದ್ಧಾರೆಯೇ? ರನ್‌ ಗಳಿಕೆಗಿಂತ ಔಟಾಗುವತ್ತಲೇ ಹೆಚ್ಚು ಗಮನ ಕೊಡುತ್ತಿದ್ದಾರೆಯೇ?

ತಂಡದ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅವರ ಪ್ರಕಾರ ಈ ಮಾತುಗಳು ಸತ್ಯ.

ಇಲ್ಲಿ ಆಸ್ಟ್ರೇಲಿಯಾ ‘ಎ’ ತಂಡದ ವಿರುದ್ಧ ನಡೆಯುತ್ತಿರುವ ಅಭ್ಯಾಸ ಪಂದ್ಯದ ಎರಡನೇ ದಿನವಾದ ಗುರುವಾರ ರಾಹುಲ್ ಕೇವಲ ಮೂರು ರನ್‌ ಗಳಿಸಿ ಔಟಾದರು. ಇತ್ತೀಚಿನ ದಿನಗಳಲ್ಲಿ ಹಲವು ಪಂದ್ಯಗಳಲ್ಲಿ ಅವರು ವೈಫಲ್ಯ ಕಂಡಿದ್ದಾರೆ. ಇದರಿಂದಾಗಿ ಬೇಸರಗೊಂಡಿರುವ ಸಂಜಯ್ ಬಂಗಾರ್ ಸುದ್ದಿಗಾರರ ಎದುರು ವ್ಯಂಗ್ಯವಾಡಿದರು.

‘ರಾಹುಲ್ ಚೆಂಡಿನ ಲಯವನ್ನು ಉತ್ತಮವಾಗಿ ಗುರುತಿಸುತ್ತಿದ್ದಾರೆ. ಆದರೆ ಹೊಡೆತ ಪ್ರಯೋಗಿಸುವಾಗ ಎಡುವುತ್ತಿದ್ದಾರೆ. ಪ್ರತಿ ಬಾರಿಯೂ ತಮ್ಮನ್ನು ಔಟ್‌ ಮಾಡಿಕೊಳ್ಳುವ ಹೊಸ ಹಾದಿ ಹುಡುಕಿಕೊಳ್ಳುತ್ತಿದ್ದಾರೆ. ಇವತ್ತಿನ ಪಂದ್ಯದಲ್ಲಿ ಅವರು ತಮ್ಮ ದೇಹದಿಂದ ದೂರ ಇದ್ದ ಚೆಂಡನ್ನು ಡ್ರೈವ್ ಮಾಡಿದರು. ಆದರೆ ಡ್ರೈವ್‌ ನಲ್ಲಿ ಯಾವುದೇ ಸತ್ವ ಇರಲಿಲ್ಲ. ಅದಕ್ಕಾಗಿ ದಂಡ ತೆತ್ತರು’ ಎಂದರು.

‘ನಮಗೆ ಅವರ ಸಾಮರ್ಥ್ಯದ ಅರಿವು ಇದೆ. ಅವರು ಉತ್ತಮ ಆಟಗಾರ. 30 ಟೆಸ್ಟ್‌ಗಳನ್ನು ಆಡಿರುವ ಅನುಭವಿ. ಅವರ ಮೇಲೆ ಜವಾಬ್ದಾರಿ ಇದೆ. ಅದನ್ನು ಅರಿತು ಅವರು ಆಡಬೇಕು. ತಂಡಕ್ಕೆ ಉತ್ತಮ ಕಾಣಿಕೆ ನೀಡಬೇಕು ಎಂಬ ನಿರೀಕ್ಷೆ ನಮಗಿದೆ’ ಎಂದರು.

ಈ ಪಂದ್ಯದಲ್ಲಿ ರಾಹುಲ್ ಅವರು ಪೃಥ್ವಿ ಶಾ ಜೊತೆಗೆ ಇನಿಂಗ್ಸ್‌ ಆರಂಭಿಸಿದರು. ಆದರೆ ಪೃಥ್ವಿ ಶಾ, ನಾಯಕ ವಿರಾಟ್ ಕೊಹ್ಲಿ, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ ಮತ್ತು ಹನುಮವಿಹಾರಿ ಅವರು ಅರ್ಧಶತಕಗಳನ್ನು ಗಳಿಸಿದರು. ರೋಹಿತ್ ಶರ್ಮಾ ಕೂಡ 40 ರನ್‌ ಗಳಿಸಿದರು. ತಂಡವು 358 ರನ್‌ಗಳಿಗೆ ಆಲೌಟ್ ಆಯಿತು. ಪ್ರತಿಕ್ರಿಯೆಯಾಗಿ ಆಸ್ಟ್ರೇಲಿಯಾ ತಂಡವು ದಿನದಾಟದ ಕೊನೆಗೆ ವಿಕೆಟ್ ನಷ್ಟವಿಲ್ಲದೇ 24 ರನ್‌ ಗಳಿಸಿದೆ.

ಮೊದಲ ದಿನವಾದ ಬುಧವಾರ ಮಳೆಯಿಂದಾಗಿ ಆಟ ನಡೆದಿರಲಿಲ್ಲ.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಭಾರತ:92 ಓವರ್‌ಗಳಲ್ಲಿ 358 (ಪೃಥ್ವಿ ಶಾ 66, ಚೇತೇಶ್ವರ್ ಪೂಜಾರ 54, ವಿರಾಟ್ ಕೊಹ್ಲಿ 64, ಅಜಿಂಕ್ಯ ರಹಾನೆ 56, ಹನುಮವಿಹಾರಿ 53, ರೋಹಿತ್ ಶರ್ಮಾ 40, ರಿಷಭ್ ಪಂತ್ 11, ಆ್ಯರನ್ ಹಾರ್ಡಿ 50ಕ್ಕೆ4) ಆಸ್ಟ್ರೇಲಿಯಾ ’ಎ’: 4 ಓವರ್‌ಗಳಲ್ಲಿ 24 (ಡಾರ್ಚಿ ಶಾರ್ಟ್ ಬ್ಯಾಟಿಂಗ್ 10, ಮ್ಯಾಕ್ಸ್ ಬ್ರಿಯಂಟ್ ಬ್ಯಾಟಿಂಗ್ 14).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT