ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುತ್ತಿದ್ದೇನೆ: ಕೆ.ಎಲ್. ರಾಹುಲ್

ಅಕ್ಷರ ಗಾತ್ರ

ಬೆಂಗಳೂರು: ಗಾಯಗೊಂಡಿದ್ದ ಟೀಮ್ ಇಂಡಿಯಾದ ಉಪನಾಯಕ ಕೆ.ಎಲ್. ರಾಹುಲ್ ಅವರು ಜರ್ಮನಿಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

ಟ್ವಿಟರ್, ಇನ್‌ಸ್ಟಾಗ್ರಾಮ್ ಮೂಲಕ ರಾಹುಲ್ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಎಲ್ಲರಿಗೂ ನಮಸ್ಕಾರ, ಕಳೆದ ಕೆಲವು ವಾರಗಳು ಅತ್ಯಂತ ಕಠಿಣವಾದ ಸಮಯವಾಗಿತ್ತು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಸದ್ಯ ನಾನು ಚೇತರಿಸಿಕೊಳ್ಳುತ್ತಿದ್ದೇನೆ. ನನ್ನ ಚೇತರಿಕೆಯ ಸಮಯ ಆರಂಭವಾಗಿದೆ. ನಿಮ್ಮ ಸಂದೇಶ ಮತ್ತು ಪ್ರಾರ್ಥನೆಗೆ ಧನ್ಯವಾದ. ಸದ್ಯದಲ್ಲೇ ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಹಾಸಿಗೆ ಮೇಲೆ ಕುಳಿತು ರಿಲ್ಯಾಕ್ಸ್ ಮಾಡುತ್ತಾ ನಗುಮೊಗದಲ್ಲಿ ಗೆಳತಿ ಅತಿಯಾ ಶೆಟ್ಟಿ ಕಡೆ ನೋಡುತ್ತಿರುವ ಚಿತ್ರವನ್ನೂ ಅವರು ಹಂಚಿಕೊಂಡಿದ್ದಾರೆ.

ತೊಡೆ ಸಂದು ಗಾಯಕ್ಕೆ ಒಳಗಾಗಿದ್ದ ಕೆ.ಎಲ್. ರಾಹುಲ್, ದಕ್ಷಿಣ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಟಿ–20 ಸರಣಿಯಿಂದ ಹೊರಗುಳಿದಿದ್ದರು. ರಾಹುಲ್ ಅನುಪಸ್ಥಿತಿಯಲ್ಲಿ ರಿಷಬ್ ಪಂತ್ ತಂಡವನ್ನು ಮುನ್ನಡೆಸಿದ್ದರು.

ಕಳೆದ ವರ್ಷ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ರೋಹಿತ್ ಶರ್ಮಾ ಜೊತೆ ಉತ್ತಮ ಆರಂಭಿಕ ಜೊತೆಯಾಟ ನೀಡುವ ಮೂಲಕ ರಾಹುಲ್ ಟೆಸ್ಟ್‌ಗೆ ಕಮ್ ಬ್ಯಾಕ್ ಮಾಡಿದ್ದರು. ಲಾರ್ಡ್ಸ್‌ನಲ್ಲಿ ಸ್ಮರಣೀಯ ಶತಕ ಸೇರಿ ಸರಣಿಯಲ್ಲಿ 315 ರನ್ ಸಿಡಿಸಿದ್ದರು.

ಸದ್ಯ, ಶಸ್ತ್ರಚಿಕಿತ್ಸೆ ಮುಗಿದು ಚೇತರಿಸಿಕೊಳ್ಳುತ್ತಿರುವ ರಾಹುಲ್ ಬಳಿಕ ಪುನಶ್ಚೇತನ ಕೇಂದ್ರಕ್ಕೆ ತೆರಳಲಿದ್ದಾರೆ. ಅದು ಎಷ್ಟು ದಿನ ಹಿಡಿಯಲಿದೆ ಎಂಬುದನ್ನು ಕಾದುನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT