ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್‌: ರಾಹುಲ್‌ಗೆ ಗಾಯ, ಸೂರ್ಯಕುಮಾರ್‌ಗೆ ಸ್ಥಾನ

ನ್ಯೂಜಿಲೆಂಡ್ ಎದುರಿನ ಮೊದಲ ಟೆಸ್ಟ್ ನಾಳೆಯಿಂದ
Last Updated 23 ನವೆಂಬರ್ 2021, 14:43 IST
ಅಕ್ಷರ ಗಾತ್ರ

ಕಾನ್ಪುರ: ಗುರುವಾರ ಇಲ್ಲಿ ಆರಂಭವಾಗಲಿರುವು ನ್ಯೂಜಿಲೆಂಡ್ ಎದುರಿನ ಮೊದಲ ಟೆಸ್ಟ್‌ನಲ್ಲಿ ಇನಿಂಗ್ಸ್‌ ಆರಂಭಿಸಬೇಕಿದ್ದ ಬ್ಯಾಟ್ಸ್‌ಮನ್ ಕೆ. ಎಲ್. ರಾಹುಲ್ ಗಾಯಗೊಂಡಿದ್ದಾರೆ. ಇದರಿಂದಾಗಿ ಅವರ ಬದಲಿಗೆ ಸೂರ್ಯಕುಮಾರ್ ಯಾದವ್ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ.

‘ರಾಹುಲ್ ಎಡ ತೊಡೆಯ ಸ್ನಾಯುಸೆಳೆತವಾಗಿದೆ. ಆದ್ದರಿಮದ ಅವರಿಗೆ ವಿಶ್ರಾಂತಿಯ ಅಗತ್ಯವಿದೆ. ಆದ್ದರಿಂದ ಅವರು ಎರಡೂ ಟೆಸ್ಟ್‌ಗಳಲ್ಲಿ ಆಡಲು ಲಭ್ಯರಿಲ್ಲ. ಅವರು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ತರಬೇತಿಗೆ ಸೇರಿಕೊಳ್ಳಲಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ದಕ್ಷಿಣ ಆಫ್ರಿಕಾ ಎದುರಿನ ಸರಣಿಗೆ ಅವರು ಲಭ್ಯರಾಗುವ ನಿರೀಕ್ಷೆ ಇದೆ’ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.‌

ಮಂಗಳವಾರ ನಡೆದ ಅಭ್ಯಾಸದಲ್ಲಿ ರಾಹುಲ್ ಭಾಗವಹಿಸಿರಲಿಲ್ಲ.

29 ವರ್ಷದ ರಾಹುಲ್ 40 ಟೆಸ್ಟ್‌ಗಳಲ್ಲಿ ಆಡಿದ್ದಾರೆ. 2321 ರನ್‌ಗಳನ್ನು ಗಳಿಸಿದ್ದಾರೆ.

ಅವರು ತಂಡದಿಂದ ಹೊರಬಿದ್ದಿರುವುದರಿಂದ ಮಯಂಕ್ ಅಗರವಾಲ್ ಅವರೊಂದಿಗೆ ಇನಿಂಗ್ಸ್ ಆರಂಭಿಸುವ ಹೊಣೆ ಶುಭಮನ್ ಗಿಲ್ ಅವರ ಹೆಗಲಿಗೆ ಬೀಳುವುದು ಖಚಿತವಾಗಿದೆ. ಮುಂಬೈನ ಸೂರ್ಯಕುಮಾರ್ ಯಾದವ್ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ಪದಾರ್ಪಣೆ ಮಾಡುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ತಂಡದಲ್ಲಿರುವ ಮತ್ತೊಬ್ಬ ಮುಂಬೈಕರ್ ಶ್ರೇಯಸ್ ಅಯ್ಯರ್ ಅವರಿಗೆ ಸ್ಥಾನ ಕೊಟ್ಟರೆ, ಸೂರ್ಯ ಬೆಂಚ್‌ನಲ್ಲಿರಬೇಕಾಗಬಹುದು.

ಮೂವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕೆ

ಗ್ರೀನ್‌ ಪಾರ್ಕ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್‌ನಲ್ಲಿ ತಮ್ಮ ತಂಡವು ಮೂವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ ಎಂದು ನ್ಯೂಜಿಲೆಂಡ್ ತಂಡದ ಕೋಚ್ ಗ್ಯಾರಿ ಸ್ಟೆಡ್ ಹೇಳಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಪಿಚ್‌ನಲ್ಲಿ ನಾಲ್ವರು ವೇಗಿಗಳು ಮತ್ತು ಒಬ್ಬ ಸ್ಪಿನ್ನರ್ ಆಡಿಸುವ ಸಾಂಪ್ರದಾಯಿಕ ಪದ್ಧತಿಗೆ ಮೊರೆ ಹೋದರೆ ಯಶಸ್ಸು ಸಿಗುವುದಿಲ್ಲ. ಪಂದ್ಯದ ಹಿಂದಿನ ದಿನ ಪಿಚ್‌ ವೀಕ್ಷಿಸಿದ ನಂತರವಷ್ಟೇ ಈ ಕುರಿತು ನಿರ್ಧರಿಸಲಾಗುವುದು’ ಎಂದು ಗ್ಯಾರಿ ತಿಳಿಸಿದರು.

ಪಟೇಲ್ ಕಣಕ್ಕೆ

ಮುಂಬೈನಲ್ಲಿ ಜನಿಸಿ ನ್ಯೂಜಿಲೆಂಡ್ ತಂಡದಲ್ಲಿ ಆಡುತ್ತಿರುವ ಎಡಗೈ ಸ್ಪಿನ್ನರ್ ಎಜಾಜ್ ಪಟೇಲ್ ಕಣಕ್ಕಿಳಿಯಲಿದ್ದಾರೆ.

ಎಜಾಜ್ ಎಂಟು ವರ್ಷದವರಾಗಿದ್ದಾಗಲೇ ಅವರ ಕುಟುಂಬವು ನ್ಯೂಜಿಲೆಂಡ್‌ಗೆ ತೆರಳಿತ್ತು.

‘ಭಾರತದಲ್ಲಿ ಸ್ಪಿನ್ ಬೌಲಿಂಗ್ ಮೋಡಿ ತೋರಿಸಲು ಉತ್ಸುಕನಾಗಿದ್ದೇನೆ. ಇಲ್ಲಿ ಬ್ಯಾಟರ್‌ಗಳ ಮುಂದೆ ಸ್ಪಿನ್ ಬೌಲಿಂಗ್ ಮಾಡಿ ಯಶಸ್ಸು ಪಡೆಯುವುದು ದೊಡ್ಡ ಸವಾಲೇ ಸರಿ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT