ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ್ ಹಜಾರೆ ಟ್ರೋಫಿ: ರಾಹುಲ್ ಭರ್ಜರಿ ಶತಕ

Last Updated 28 ಸೆಪ್ಟೆಂಬರ್ 2019, 9:39 IST
ಅಕ್ಷರ ಗಾತ್ರ

ಬೆಂಗಳೂರು: ಬಹುದಿನಗಳ ನಂತರ ಶತಕ ಬಾರಿಸಿದ ಕೆ.ಎಲ್. ರಾಹುಲ್ ಶನಿವಾರ ಸುಂದರ ಆಟದ ರಸದೌತಣ ಉಣಬಡಿಸಿದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ‘ಎ’ ಗುಂಪಿನ ಪಂದ್ಯದಲ್ಲಿ ರಾಹುಲ್ ಶತಕ(131;122 ಎಸೆತ, 10ಬೌಂಡರಿ, 4ಸಿಕ್ಸರ್) ಮತ್ತು ಮನೀಷ್ ಪಾಂಡೆ ಮಿಂಚಿನ ಅರ್ಧಶತಕದ ಬಲದಿಂದ ಕರ್ನಾಟಕ ತಂಡವು 49.5 ಓವರ್‌ಗಳಲ್ಲಿ 294 ರನ್ ಗಳಿಸಿತು.

ಟಾಸ್ ಗೆದ್ದ ಕೇರಳ ತಂಡದ ನಾಯಕ ರಾಬಿನ್ ಉತ್ತಪ್ಪ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಐದನೇ ಓವರ್‌ನಲ್ಲಿ ದೇವದತ್ತ ಪಡಿಕ್ಕಲ್ ವಿಕೆಟ್ ಕಬಳಿಸಿದ ಸಂದೀಪ್ ವಾರಿಯರ್ ಸಂಭ್ರಮಿಸಿದರು. ಜಾರ್ಖಂಡ್ ಎದುರಿನ ಪಂದ್ಯದಲ್ಲಿಅವರು ಅರ್ಧಶತಕ ಗಳಿಸಿದ್ದರು.

ನಂತರ ಬಂದ ಕೆ.ವಿ. ಸಿದ್ಧಾರ್ಥ್ (7 ರನ್) ಅವರಿಗೂ ಸಂದೀಪ್ ಪೆವಿಲಿಯನ್ ದಾರಿ ತೋರಿಸಿದರು. ಆದರೆ ಅದರಿಂದ ಕೇರಳಕ್ಕೆ ಲಾಭಕ್ಕಿಂತ ಹೆಚ್ಚು ನಷ್ಟವೇ ಆಯಿತು!

ಕ್ರೀಸ್‌ಗೆ ಬಂದ ಮನೀಷ್ ಪಾಂಡೆ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು.ಇನ್ನೊಂದೆಡೆ ರಾಹುಲ್ ಮಾತ್ರ ತಾಳ್ಮೆಯಿಂದ ಆಡುತ್ತಿದ್ದರು.

ಹೋದ ಪಂದ್ಯದಲ್ಲಿಯೂ ಅರ್ಧಶತಕ ಬಾರಿಸಿದ್ದ ಮನೀಷ್ ಈ ಪಂದ್ಯದಲ್ಲಿಯೂ ತಮ್ಮ ಛಾಪು ಮೂಡಿಸಿದರು. ಆರು ಬೌಂಡರಿ, ಎರಡು ಸಿಕ್ಸರ್‌ಗಳಿಂದ ಅರ್ಧಶತಕ ಗಳಿಸಿದರು. 50 ಎಸೆತಗಳಲ್ಲಿಯೇ ಅವರ ಅರ್ಧಶತಕ ದಾಖಲಾಯಿತು. ಅದರಲ್ಲೂ ಬಾಸಿಲ್ ಥಂಪಿಯ ಎಸೆತಗಳನ್ನು ಹೆಚ್ಚು ದಂಡಿಸಿದರು. ಮೂರನೇ ವಿಕೆಟ್ ಜೊತೆಯಾಟದಲ್ಲಿ 84 ರನ್ ಸೇರಿಸಿದರು. 24ನೇ ಓವರ್‌ನಲ್ಲಿ ಪಾಂಡೆ ಔಟಾದರು.

ಆಗ ಪಿಚ್‌ನ ಮರ್ಮ ಅರಿತಿದ್ದ ರಾಹುಲ್ ತಮ್ಮ ಬೀಸಾಟ ಆರಂಭಿಸಿದರು. ದೇಶಿ ಮತ್ತು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಸಾಕಷ್ಟು ವೈಫಲ್ಯ ಅನುಭವಿಸಿರುವ ರಾಹುಲ್ ಲಯಕ್ಕೆ ಮರಳಿದರು. 108 ಎಸೆತಗಳಲ್ಲಿ ಶತಕದ ಗಡಿ ಮುಟ್ಟಿದರು. 112 ರನ್‌ ಗಳಿಸಿದ್ದ ಸಂದರ್ಭದಲ್ಲಿ ಅವರಿಗೆ ಜೀವದಾನವೂ ಲಭಿಸಿತು. ತಂಡದ ಸ್ಕೋರ್‌ ಹೆಚ್ಚಿಸಲು ರಾಹುಲ್ ವೇಗದ ಆಟವಾಡಿದರು. 43ನೇ ಓವರ್‌ನಲ್ಲಿ ಅವರು ಔಟಾದಾಗ ತಂಡದ ಮೊತ್ತವು 248 ರನ್‌ ಆಗಿತ್ತು. ಆದರೆ ಉಳಿದ ಬ್ಯಾಟ್ಸ್‌ಮನ್‌ಗಳು ವೇಗದ ಆಟವಾಡಲಿಲ್ಲ. ಅದರಿಂದಾಗಿ ಮುನ್ನೂರು ರನ್‌ಗಳ ಮೊತ್ತ ಗಳಿಸುವ ಅವಕಾಶ ತಪ್ಪಿತು.

ಸಂಕ್ಷಿಪ್ತ ಸ್ಕೋರು: ಕರ್ನಾಟಕ: 49.5 ಓವರ್‌ಗಳಲ್ಲಿ 294 (ಕೆ.ಎಲ್. ರಾಹುಲ್ 131, ಮನೀಷ್ ಪಾಂಡೆ 50, ಶ್ರೇಯಸ್ ಗೋಪಾಲ್ 31, ಸಂದೀಪ್ ವಾರಿಯರ್ 46ಕ್ಕೆ2, ಬಾಸಿಲ್ ಥಂಪಿ 70ಕ್ಕೆ3, ಕೆ.ಎಂ. ಆಸಿಫ್ 59ಕ್ಕೆ3, ವಿನೂಪ್ ಮನೋಹರನ್ 55ಕ್ಕೆ2) ಕೇರಳ ವಿರುದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT