ಭಾನುವಾರ, ಆಗಸ್ಟ್ 14, 2022
26 °C

ಮಹಿಳೆಯರ ಟೆಸ್ಟ್‌ಗೂ ಐದು ದಿನ ಇರಲಿ: ಹೀಥರ್‌ ನೈಟ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬ್ರಿಸ್ಟಲ್: ಭಾರತ ಮಹಿಳಾ ತಂಡದ ಎದುರಿನ ಏಕೈಕ ಟೆಸ್ಟ್ ಪಂದ್ಯದಿಂದಾಗಿ ಮಹಿಳೆಯರ ಟೆಸ್ಟ್ ಕ್ರಿಕೆಟ್‌ನ ಮಹತ್ವ ಹೆಚ್ಚಾಗಿದೆ ಎಂದು ಅಭಿಪ್ರಾಯಪಟ್ಟಿರುವ ಇಂಗ್ಲೆಂಡ್ ಮಹಿಳಾ ತಂಡದ ನಾಯಕಿ ಹೀಥರ್ ನೈಟ್ ಐದು ದಿನಗಳನ್ನು ನಿಗದಿ ಮಾಡಿದರೆ ಮಹಿಳೆಯರ ಟೆಸ್ಟ್‌ ಹೆಚ್ಚು ರೋಚಕವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 

ಭಾನುವಾರ ಮುಕ್ತಾಯಗೊಂಡ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಭಾರತ ತಂಡ ಯಶಸ್ವಿಯಾಗಿತ್ತು. ಮೊದಲ ಇನಿಂಗ್ಸ್‌ನಲ್ಲಿ ಆರಂಭಿಕ ಜೋಡಿ ಶೆಫಾಲಿ ವರ್ಮಾ ಮತ್ತು ಸ್ಮೃತಿ ಮಂದಾನ ಅವರು ಅಮೋಘ ಆಟವಾಡಿದರೂ ಭಾರತ ಫಾಲೊ ಆನ್‌ಗೆ ಒಳಗಾಗಿತ್ತು. ಎರಡನೇ ಇನಿಂಗ್ಸ್‌ನಲ್ಲೂ ಶೆಫಾಲಿ ಮಿಂಚಿದ್ದರು. ದೀಪ್ತಿ ಶರ್ಮಾ ಅರ್ಧಶತಕ ಗಳಿಸಿದ್ದರು. ಹರ್ಮನ್‌ಪ್ರೀತ್ ಕೌರ್‌, ನಾಯಕಿ ಮಿಥಾಲಿ ರಾಜ್‌ ಒಳಗೊಂಡಂತೆ ಮಧ್ಯಮ ಕ್ರಮಾಂಕ ಕುಸಿತಕ್ಕೆ ಒಳಗಾದ ಕಾರಣ ತಂಡ ಸೋಲಿನ ಆಂತಕಕ್ಕೆ ಒಳಗಾಗಿತ್ತು.

ಆದರೆ 80 ರನ್ ಗಳಿಸಿದ ಎಂಟನೇ ಕ್ರಮಾಂಕದ ಸ್ನೇಹ್ ರಾಣಾ ಮತ್ತು 44 ರನ್ ಗಳಿಸಿದ ಹತ್ತನೇ ಕ್ರಮಾಂಕದ ತಾನಿಯಾ ಭಾಟಿಯಾ ಅವರ ಸೊಗಸಾದ ಬ್ಯಾಟಿಂಗ್ ನೆರವಿನಿಂದ ತಂಡ 8ಕ್ಕೆ 344 ರನ್ ಗಳಿಸಿದ್ದ ವೇಳೆ ಪಂದ್ಯವನ್ನು ಮುಕ್ತಾಯಗೊಳಿಸಲು ನಿರ್ಧರಿಸಲಾಗಿತ್ತು. 

‘ಪಂದ್ಯ ರೋಚಕ ಅಂ‌ತ್ಯ ಕಾಣುವ ನಿರೀಕ್ಷೆ ಇತ್ತು. ಆದರೆ ಹಾಗಾಗಲಿಲ್ಲ. ಆದರೂ ಇದು ಖುಷಿ ಕೊಟ್ಟ ಪಂದ್ಯವಾಗಿತ್ತು. ಮಹಿಳೆಯರ ಕ್ರಿಕೆಟ್‌ ಪಂದ್ಯಗಳು ಹೆಚ್ಚಾಗಿ ಡ್ರಾದಲ್ಲಿ ಮುಕ್ತಾಯಗೊಳ್ಳುತ್ತವೆ. ಪಂದ್ಯದ ಅವಧಿ ನಾಲ್ಕೇ ದಿನ ಆಗಿರುವುದು ಇದಕ್ಕೆ ಕಾರಣ. ಆದ್ದರಿಂದ ಐದು ದಿನಗಳ ಪಂದ್ಯ ಆಯೋಜಿಸುವುದು ಉತ್ತಮ. ಭಾರತ ಎದುರಿನ ಪಂದ್ಯದಲ್ಲಿ ಇನ್ನೂ ಒಂದು ದಿನ ಇದ್ದಿದ್ದರೆ ಫಲಿತಾಂಶ ಹೊರಹೊಮ್ಮುತ್ತಿತ್ತು’ ಎಂದು ಹೀಥರ್ ನೈಟ್ ಅಭಿಪ್ರಾಯಪಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು