ಸೋತೆವೆಂದು ಕೈಬಿಡಬೇಡಿ: ಅಭಿಮಾನಿಗಳಲ್ಲಿ ವಿರಾಟ್‌ ಕೊಹ್ಲಿ ಭಾವುಕ ಮನವಿ

7

ಸೋತೆವೆಂದು ಕೈಬಿಡಬೇಡಿ: ಅಭಿಮಾನಿಗಳಲ್ಲಿ ವಿರಾಟ್‌ ಕೊಹ್ಲಿ ಭಾವುಕ ಮನವಿ

Published:
Updated:
Deccan Herald

ಲಂಡನ್‌: ‘ಕೆಲವು ಪಂದ್ಯಗಳಲ್ಲಿ ಅಮೋಘ ಗೆಲುವು ದಾಖಲಿಸುತ್ತೇವೆ. ಕೆಲವು ಬಾರಿ ಹೀನಾಯ ಸೋಲು ಎದುರಾಗುತ್ತದೆ. ಸೋತ ಮಾತ್ರಕ್ಕೆ   ಬೇಸರ ಮಾಡಿಕೊಂಡು ನಮ್ಮನ್ನು ಬೆಂಬಲಿಸುವುದನ್ನು ಮರೆಯಬೇಡಿ...’

ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ, ಅಭಿಮಾನಿಗಳಲ್ಲಿ ಮಾಡಿಕೊಂಡಿರುವ ಭಾವುಕ ಮನವಿ ಇದು.

ಇಂಗ್ಲೆಂಡ್‌ ಎದುರಿನ ಟೆಸ್ಟ್‌ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಭಾರತ ತಂಡ ಸೋತಿತ್ತು. ಈ ಕುರಿತು ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಅಭಿಮಾನಿಗಳೂ ಆಕ್ರೋಶ ವ್ಯಕ್ತಪಡಿಸಿದ್ದರು.

‘ಆಟದಲ್ಲಿ ಸೋಲು, ಗೆಲುವು ಸಾಮಾನ್ಯ. ಸೋಲಿನಿಂದ ಹೊಸ ವಿಷಯಗಳನ್ನು ಕಲಿಯುತ್ತೇವೆ. ನೀವ್ಯಾರು ಹತಾಶರಾಗಬೇಡಿ. ಗೆದ್ದಾಗ ಹೇಗೆ ಬೆಂಬಲಿಸುತ್ತೀರೊ, ಈಗಲೂ ಅದೇ ರೀತಿ ಹುರಿದುಂಬಿಸಿ’ ಎಂದು ವಿರಾಟ್‌, ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಮೊದಲ ಪಂದ್ಯದಲ್ಲಿ ಶತಕ ಸಿಡಿಸಿ ಗಮನ ಸೆಳೆದಿದ್ದ ಕೊಹ್ಲಿ, ಲಾರ್ಡ್ಸ್‌ನಲ್ಲಿ ನಡೆದಿದ್ದ ಎರಡನೆ ಟೆಸ್ಟ್‌ನಲ್ಲಿ ದೊಡ್ಡ ಮೊತ್ತ ಪೇರಿಸಲು ವಿಫಲರಾಗಿದ್ದರು.

‘ಈಗ ಎಲ್ಲವೂ ಮುಗಿದಿಲ್ಲ. ಸರಣಿಯಲ್ಲಿ ಇನ್ನು ಮೂರು ಪಂದ್ಯಗಳು ಬಾಕಿ ಇವೆ. ಸೋಲಿನ ಬಗ್ಗೆ ಯೋಚಿಸುತ್ತಾ ಕೂರಲು ಸಮಯವಿಲ್ಲ. ಮೂರನೆ ಪಂದ್ಯದಲ್ಲಿ ಗೆದ್ದು ಹಿನ್ನಡೆಯನ್ನು 1–2ಕ್ಕೆ ತಗ್ಗಿಸಿಕೊಳ್ಳಲು ನಾವು ಖಂಡಿತವಾಗಿಯೂ ‍ಪ್ರಯತ್ನಿಸುತ್ತೇವೆ. ಮುಂದಿನ ಪಂದ್ಯದಲ್ಲಿ ಹೊಸ ಹುರುಪಿನೊಂದಿಗೆ ಸೆಣಸುತ್ತೇವೆ’ ಎಂದು ವಿರಾಟ್‌ ಹೇಳಿದ್ದಾರೆ.

ಸರಣಿಯ ಮೂರನೆ ಪಂದ್ಯ ಆಗಸ್ಟ್‌ 18ರಿಂದ ನಾಟಿಂಗ್‌ಹ್ಯಾಮ್‌ನಲ್ಲಿ ನಡೆಯಲಿದೆ.

ಬೂಮ್ರಾ ಲಭ್ಯ: ಗಾಯದಿಂದ ಸಂಪೂರ್ಣವಾಗಿ ಗುಣಮುಖರಾಗಿರುವ ವೇಗದ ಬೌಲರ್‌ ಜಸ್‌ಪ್ರೀತ್‌ ಬೂಮ್ರಾ ಇಂಗ್ಲೆಂಡ್‌ ವಿರುದ್ಧದ ಮೂರನೆ ಟೆಸ್ಟ್‌ನಲ್ಲಿ ಕಣಕ್ಕಿಳಿಯುವ ನಿರೀಕ್ಷೆ ಇದೆ.

ಜೂನ್‌ನಲ್ಲಿ ನಡೆದಿದ್ದ ಐರ್ಲೆಂಡ್‌ ಎದುರಿನ ಸರಣಿಯ ವೇಳೆ ಬೂಮ್ರಾ ಅವರ ಎಡಗೈ ಬೆರಳಿಗೆ ಗಾಯವಾಗಿತ್ತು. ಹೀಗಾಗಿ ಇಂಗ್ಲೆಂಡ್‌ ಎದುರಿನ ಏಕದಿನ ಮತ್ತು ಟ್ವೆಂಟಿ–20 ಸರಣಿಗೆ ಅಲಭ್ಯರಾಗಿದ್ದರು. ಟೆಸ್ಟ್‌ ಸರಣಿಯ ಮೊದಲ ಎರಡು ಪಂದ್ಯಗಳಲ್ಲೂ ಅವರು ಅಂಗಳಕ್ಕಿಳಿದಿರಲಿಲ್ಲ.

ಎರಡನೆ ಟೆಸ್ಟ್‌ನ ವೇಳೆ ಗಾಯಗೊಂಡಿದ್ದ ಸ್ಪಿನ್ನರ್‌ ಆರ್‌.ಅಶ್ವಿನ್‌ ಮತ್ತು ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರೂ ಸಂಪೂರ್ಣವಾಗಿ ಫಿಟ್‌ ಆಗಿದ್ದಾರೆ.

ಸಿದ್ಧತೆಗೆ ಸಮಯ ಸಿಕ್ಕಿಲ್ಲ: ‘ಟೆಸ್ಟ್‌ ಸರಣಿಗೂ ಮುನ್ನ ಸೂಕ್ತ ಸಿದ್ಧತೆ ಮಾಡಿಕೊಳ್ಳಲು ಭಾರತದ ಆಟಗಾರರಿಗೆ ಸಮಯ ಸಿಕ್ಕಿಲ್ಲ. ಹೀಗಾಗಿ ಮೊದಲ ಎರಡು ಪಂದ್ಯಗಳಲ್ಲಿ ನಿರೀಕ್ಷೆಗೆ ತಕ್ಕಂತೆ ಆಡಿಲ್ಲ’ ಎಂದು ಇಂಗ್ಲೆಂಡ್‌ ತಂಡ ಮುಖ್ಯ ಕೋಚ್‌ ಟ್ರೆವೊರ್‌ ಬೇಲಿಸ್‌ ನುಡಿದಿದ್ದಾರೆ.

‘ಭಾರತ, ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯಾದಂತಹ ತಂಡಗಳು ಸತತವಾಗಿ ಸರಣಿಗಳನ್ನು ಆಡಬೇಕಾಗುತ್ತದೆ. ಇದರಿಂದ ಪ್ರಮುಖ ಆಟಗಾರರಿಗೆ ವಿಶ್ರಾಂತಿ ಸಿಗುವುದಿಲ್ಲ. ಇದು ಅವರ ಸಾಮರ್ಥ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ’ ಎಂದಿದ್ದಾರೆ.

‘ಟೆಸ್ಟ್‌ ಸರಣಿಗೂ ಮುನ್ನ ಪ್ರವಾಸಿ ತಂಡಗಳು ಹೆಚ್ಚು ಅಭ್ಯಾಸ ಪಂದ್ಯಗಳನ್ನು ಆಡಬೇಕಾಗುತ್ತದೆ. ಇದರಿಂದ ಸ್ಥಳೀಯ ವಾತಾವರಣಕ್ಕೆ ಹೊಂದಿಕೊಳ್ಳಲು ಅನುವಾಗುತ್ತದೆ’ ಎಂದು ತಿಳಿಸಿದ್ದಾರೆ.

ಭಾರತ ತಂಡ ಟೆಸ್ಟ್‌ ಸರಣಿಗೂ ಮುನ್ನ ಮೂರು ದಿನಗಳ ಏಕೈಕ ಅಭ್ಯಾಸ ಪಂದ್ಯವನ್ನಷ್ಟೇ ಆಡಿತ್ತು.

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 2

  Sad
 • 1

  Frustrated
 • 4

  Angry

Comments:

0 comments

Write the first review for this !