ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೇಲ್‌ನಷ್ಟು ಶಕ್ತಿ, ಎಬಿಡಿಯಷ್ಟು ಸಾಮರ್ಥ್ಯ ವಿರಾಟ್‌ಗಿಲ್ಲ: ಗೌತಮ್ ಗಂಭೀರ್

Last Updated 17 ಜೂನ್ 2020, 8:42 IST
ಅಕ್ಷರ ಗಾತ್ರ

ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಗೆ ವಿಂಡೀಸ್‌ನ ಕ್ರಿಸ್‌ ಗೇಲ್ ಅವರಷ್ಟು ತೋಳ್ಪಲ ಮತ್ತು ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಅವರಷ್ಟು ಸಾಮರ್ಥ್ಯ ಇಲ್ಲ. ಆದರೆ ತಮ್ಮ ಅತ್ಯದ್ಭುತ ಫಿಟ್‌ನೆಸ್‌ನಿಂದಾಗಿಯೇ ವಿರಾಟ್ ವಿಶ್ವದ ಯಶಸ್ವಿ ಬ್ಯಾಟ್ಸ್‌ಮನ್ ಆಗಿ ರೂಪುಗೊಂಡಿದ್ದಾರೆ ಎಂದು ಹಿರಿಯ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿದ್ದಾರೆ.

‘ಕೊಹ್ಲಿ ಚಾಣಾಕ್ಷ ಕ್ರಿಕೆಟಿಗ. ಆದರೆ ಟ್ವೆಂಟಿ–20 ವೃತ್ತಿಜೀವನದಲ್ಲಿ ಅವರು ತಮ್ಮ ದೈಹಿಕ ಕ್ಷಮತೆಯ ಮೂಲಕವೇ ಯಶಸ್ವಿ ಆಟಗಾರನಾಗಿ ಉತ್ತುಂಗಕ್ಕೇರಿದ್ದಾರೆ. ಬಹುಶಃ ಕ್ರಿಸ್‌ ಗೇಲ್‌ಗಿರುವ ಸಹಜವಾದ ಬಲ, ಎಬಿಡಿಗೆ ಇರುವ ಸಾಮರ್ಥ್ಯವು ಕೊಹ್ಲಿ ಇರಲಿಲ್ಲ. ಆದರೆ ಅದೆಲ್ಲವನ್ನೂ ಗಳಿಸಲು ಪರಿಶ್ರಮ ಪಡುವ ಕೊಹ್ಲಿ ಸೂಪರ್ ಫಿಟ್‌ ಆಗಿದ್ದಾರೆ’ ಎಂದು ದೆಹಲಿಯ ಗಂಭೀರ್ ಶ್ಲಾಘಿಸಿದ್ದಾರೆ.

‘ಕೊಹ್ಲಿಗೆ ಕ್ರಿಕೆಟ್ ಕೌಶಲ್ಯಗಳಿವೆ. ಆದರೆ ಅವರ ದೊಡ್ಡ ಆಸ್ತಿಯೆಂದರೆ ದೈಹಿಕ ಫಿಟ್‌ನೆಸ್‌ ಮಾತ್ರ. ಒಂದು, ಎರಡು ರನ್‌ಗಳಿಗೆ ವಿಕೆಟ್‌ ಮಧ್ಯೆ ಓಡುವ ಅವರ ವೇಗಕ್ಕೆ ಅವರೇ ಸಾಟಿ. ಬಹಳಷ್ಟು ಆಟಗಾರರಿಗೆ ಅದು ಸಾಧ್ಯವಾಗುವುದಿಲ್ಲ. ಪ್ರತಿಯೊಂದು ಎಸೆತದಲ್ಲಿಯೂ ಬ್ಯಾಟಿಂಗ್‌ ರೊಟೇಟ್ ಮಾಡುವ ಬ್ಯಾಟ್ಸ್‌ಮನ್‌ಗಳು ವಿರಳ. ಅಂತಹವರಲ್ಲಿ ಪ್ರಮುಖರು ವಿರಾಟ್’ ಎಂದು ಸಂಸದರೂ ಆಗಿರುವ ಗಂಭೀರ್ ವಿಶ್ಲೇಷಿಸಿದ್ದಾರೆ.

ವಿರಾಟ್ ಕೊಹ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ಯಶಸ್ವಿ ಬ್ಯಾಟ್ಸ್‌ಮನ್ ಆಗಿದ್ದಾರೆ. 177 ಪಂದ್ಯಗಳಿಂದ 5412 ರನ್‌ಗಳನ್ನು ಗಳಿಸಿದ್ದಾರೆ.

‘ರೋಹಿತ್ ಶರ್ಮಾ ಅವರ ಶೈಲಿ ವಿಭಿನ್ನ. ಕೊಹ್ಲಿಗೆ ಇರುವ ರೊಟೇಟಿಂಗ್ ಸಾಮರ್ಥ್ಯ ಅವರಿಗೆ ಇರಲಿಕ್ಕಿಲ್ಲ. ಆದರೆ ದೊಡ್ಡ ಹೊಡೆತಗಳನ್ನು ಪ್ರಯೋಗಿಸುವ ಕಲೆ ಗೊತ್ತಿದೆ. ಆದರೆ, ವಿರಾಟ್ ಅವರದ್ದು ಸ್ಥಿರ ಆಟದ ಪ್ರದರ್ಶನವಾಗಿದೆ. ವಿರಾಟ್ ಅವರಲ್ಲಿರುವ ಈ ಗುಣವು ಗೇಲ್ ಮತ್ತು ಎಬಿಡಿಗೂ ಇಲ್ಲ. ಅದರಲ್ಲೂ ಸ್ಪಿನ್ ಬೌಲಿಂಗ್ ಎದುರು ವಿರಾಟ್ ಅವರ ಆಟ ಅದ್ಭುತ. ಆದ್ದರಿಂದಲೇ ಅವರ ರನ್‌ಗಳಿಕೆಯ ಸರಾಸರಿಯು 50ರಷ್ಟಿದೆ’ ಎಂದು ಗಂಭೀರ್ ಹೇಳಿದರು.

2007ರಲ್ಲಿ ಟಿ20 ವಿಶ್ವಕಪ್ ಗೆದ್ದ ಮತ್ತು 2011ರಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ ಜಯಿಸಿದ ಭಾರತ ತಂಡದಲ್ಲಿ ಗಂಭೀರ್ ಆಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT