ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್ ಅವರ ಟಿ–20 ರ‍್ಯಾಂಕಿಂಗ್‌ ಕುಸಿತ

Last Updated 27 ಅಕ್ಟೋಬರ್ 2021, 10:19 IST
ಅಕ್ಷರ ಗಾತ್ರ

ದುಬೈ: ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಅರ್ಧಶತಕ ಬಾರಿಸಿದರೂ ಸಹ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಐಸಿಸಿ ಟಿ–20 ಬ್ಯಾಟ್ಸ್‌ಮನ್‌ಗಳ ರ್‍ಯಾಂಕಿಂಗ್‌ನಲ್ಲಿ ಒಂದು ಸ್ಥಾನ ಕುಸಿದು ಐದನೇ ಸ್ಥಾನಕ್ಕೆ ಇಳಿದಿದ್ದಾರೆ. ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಎರಡು ಸ್ಥಾನ ಕುಸಿದು 8ನೇ ಸ್ಥಾನದಲ್ಲಿದ್ದಾರೆ.

ದುಬೈನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಸೂಪರ್ 12ರ ಹಂತದ ಪಂದ್ಯದಲ್ಲಿ ಕೊಹ್ಲಿ (725 ರೇಟಿಂಗ್ ಪಾಯಿಂಟ್) 49 ಎಸೆತಗಳಲ್ಲಿ 57 ರನ್ ಬಾರಿಸಿದರೆ, ರಾಹುಲ್ (684 ರೇಟಿಂಗ್ ಪಾಯಿಂಟ್)3 ರನ್ ಗಳಿಸಿದ್ದರು. ಭಾರತ 7 ವಿಕೆಟ್‌ ನಷ್ಟಕ್ಕೆ ಗಳಿಸಿದ್ದ 151 ರನ್ ಮೊತ್ತವನ್ನು ಪಾಕಿಸ್ತಾನ ತಂಡವು ಯಾವುದೇ ವಿಕೆಟ್ ನಷ್ಟವಿಲ್ಲದೆ 13 ಎಸೆತಗಳು ಬಾಕಿ ಇರುವಂತೆಯೇ ತಲುಪಿತ್ತು.

ಪಾಕಿಸ್ತಾನದ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ ಅವರು ಭಾರತದ ವಿರುದ್ಧ 79 ಮತ್ತು ನ್ಯೂಜಿಲೆಂಡ್ ವಿರುದ್ಧ 33 ರನ್ ಗಳಿಸುವ ಮೂಲಕ 3 ಸ್ಥಾನಗಳು ಮೇಲೇರಿ ವೃತ್ತಿ ಜೀವನದ ಅತ್ಯುತ್ತಮ ನಾಲ್ಕನೇ ಸ್ಥಾನಕ್ಕೆ ಜಿಗಿದಿದ್ದಾರೆ.

ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಕ್ರಮವಾಗಿ 40 ಮತ್ತು 51 ರನ್ ಗಳಿಸಿದ ದಕ್ಷಿಣ ಆಫ್ರಿಕಾ ಬ್ಯಾಟರ್ ಏಡೆನ್ ಮಾರ್ಕರಮ್ ಅವರು ತಮ್ಮ ವೃತ್ತಿಜೀವನದ ಅತ್ಯುತ್ತಮ ಹಂತಕ್ಕೆ ಏರಿದ್ದಾರೆ. ಎಂಟು ಸ್ಥಾನಗಳ ಮೇಲೇರಿ ಮೂರನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್‌ನ ಡೇವಿಡ್ ಮಲಾನ್ (831) ಮತ್ತು ಪಾಕಿಸ್ತಾನದ ನಾಯಕ ಬಾಬರ್ ಅಜಮ್ (820) ಮೊದಲ ಎರಡು ಸ್ಥಾನದಲ್ಲಿದ್ದಾರೆ.

ಮಾರ್ಕರಮ್ ಅವರ ಹಿಂದಿನ ಅತ್ಯುತ್ತಮ ರ್‍ಯಾಂಕಿಂಗ್ ಒಂಬತ್ತನೇ ಸ್ಥಾನವಾಗಿತ್ತು. ಟಿ–20ಯಲ್ಲಿ ಅವರು 147.29 ಸ್ಟ್ರೈಕ್ ರೇಟ್‌ನೊಂದಿಗೆ ಸುಮಾರು 40 ರ ಸರಾಸರಿಯನ್ನು ಹೊಂದಿದ್ದಾರೆ.

ಅಫ್ಗಾನಿಸ್ತಾನದ ರಹಮಾನುಲ್ಲಾ ಗುರ್ಬಾಜ್ ಸ್ಕಾಟ್ಲೆಂಡ್ ವಿರುದ್ಧ 46 ರನ್ ಗಳಿಸಿದ ನಂತರ ಒಂಬತ್ತು ಸ್ಥಾನ ಮೇಲೇರಿ ವೃತ್ತಿಜೀವನದ ಅತ್ಯುತ್ತಮ 12 ನೇ ಸ್ಥಾನಕ್ಕೆ ಬಂದರೆ, ಬಾಂಗ್ಲಾದೇಶದ ಆರಂಭಿಕ ಆಟಗಾರ ಮೊಹಮ್ಮದ್ ನಯಿಮ್ ಶ್ರೀಲಂಕಾ ವಿರುದ್ಧ 52 ಎಸೆತಗಳಲ್ಲಿ 62 ರನ್ ಗಳಿಸಿದ ನಂತರ ವೃತ್ತಿಜೀವನದ ಅತ್ಯುತ್ತಮ 13 ನೇ ಸ್ಥಾನಕ್ಕೆ ತಲುಪಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT