ಮಂಗಳವಾರ, ಸೆಪ್ಟೆಂಬರ್ 17, 2019
21 °C

ಕ್ರಿಕೆಟ್ | ಭಾರತಕ್ಕೆ ಗೆಲುವು; ಅತಿ ಹೆಚ್ಚು ಪಂದ್ಯ ಗೆದ್ದ ನಾಯಕ ಎನಿಸಿದ ಕೊಹ್ಲಿ

Published:
Updated:

ಜಮೈಕಾ: ವೆಸ್ಟ್‌ಇಂಡೀಸ್‌ ವಿರುದ್ಧದ ಟೆಸ್ಟ್‌ ಸರಣಿಯ ಎರಡನೇ ಹಾಗೂ ಕೊನೆಯ ಪಂದ್ಯದಲ್ಲೂ ಭಾರತ ತಂಡ ಗೆಲುವು ಸಾಧಿಸಿದೆ. ಈ ಜಯದೊಂದಿಗೆ ವಿರಾಟ್‌ ಕೊಹ್ಲಿ ಭಾರತಕ್ಕೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಗೆಲುವುಗಳನ್ನು ತಂದುಕೊಟ್ಟ ನಾಯಕ ಎನಿಸಿದರು.

ಸಬಿನಾ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ವಿಂಡೀಸ್‌ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು. ಇನಿಂಗ್ಸ್‌ ಆರಂಭಿಸಿದ ಭಾರತ, ಮೊದಲ ಇನಿಂಗ್ಸ್‌ನಲ್ಲಿ 410 ರನ್‌ ಗಳಿಸಿ ಆಲೌಟ್‌ ಆಯಿತು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಹನುಮ ವಿಹಾರಿ(111) ಶತಕ ಭಾರಿಸಿದರೆ, ಆರಂಭಿಕ ಮಯಾಂಕ್‌ ಅಗರವಾಲ್‌(55), ನಾಯಕ ವಿರಾಟ್‌ ಕೊಹ್ಲಿ(76) ಹಾಗೂ ಕೊನೆಯ ಕ್ರಮಾಂಕ ಆಟಗಾರ ಇಶಾಂತ್‌ ಶರ್ಮಾ(57) ತಲಾ ಅರ್ಧ ಶತಕದ ಸಂಭ್ರಮ ಆಚರಿಸಿದರು. ವಿಂಡೀಸ್‌ ನಾಯಕ ಜೇಸನ್‌ ಹೋಲ್ಡರ್‌ ಐದು ವಿಕೆಟ್‌ ಪಡೆದು ಮಿಂಚಿದರು.

ಇದಕ್ಕುತ್ತರವಾಗಿ ಸಮರ್ಥ ಆಟವಾಡುವಲ್ಲಿ ವಿಫಲವಾದ ವಿಂಡೀಸ್‌ ಕೇವಲ 117 ರನ್‌ಗಳಿಗೆ ಆಲೌಟ್‌ ಆಯಿತು. ವೇಗಿ ಜಸ್‌ಪ್ರೀತ್‌ ಬೂಮ್ರಾ ಹ್ಯಾಟ್ರಿಕ್‌ ಸೇರಿ ಒಟ್ಟು ಆರು ವಿಕೆಟ್‌ ಉರುಳಿಸಿ ಆತಿಥೇಯರ ಬ್ಯಾಟಿಂಗ್‌ ಬಲ ಅಡಗಿಸಿದರು. ಕೊಹ್ಲಿ ಪಡೆಯ ವೇಗಿಗಳು ಮೊದಲ ಇನಿಂಗ್ಸ್‌ನಲ್ಲಿ ಒಟ್ಟು 9 ವಿಕೆಟ್‌ ಪಡೆದರು. ಇನ್ನೊಂದು ವಿಕೆಟ್‌ ಸ್ಪಿನ್ನರ್‌ ರವೀಂದ್ರ ಜಡೇಜಾ ಪಾಲಾಯಿತು.

299ರನ್‌ಗಳ ಮುನ್ನಡೆ ಇದ್ದರೂ ಆತಿಥೇಯರಿಗೆ ಪಾಲೋಆನ್‌ ನೀಡದೆ ಎರಡನೇ ಇನಿಂಗ್ಸ್‌ ಆರಂಭಿಸಿದ ಭಾರತ, 4 ವಿಕೆಟ್‌ ನಷ್ಟಕ್ಕೆ 168 ರನ್‌ ಗಳಿಸಿದ್ದಾಗ ಇನಿಂಗ್ಸ್‌ ಡಿಕ‌್ಲೇರ್‌ ಮಾಡಿಕೊಂಡಿತು. ಉಪನಾಯಕ ಅಜಿಂಕ್ಯ ರಹಾನೆ(64) ಹಾಗೂ ವಿಹಾರಿ(53) ತಲಾ ಅರ್ಧ ಶತಕ ಗಳಿಸಿದರು. ಆತಿಥೇಯ ವೇಗಿ ಕೆಮರ್‌ ರೋಚ್‌ 3 ವಿಕೆಟ್‌ ಪಡೆದರು.

ಒಟ್ಟು 468ರನ್‌ಗಳ ಬೃಹತ್‌ ಗುರಿ ಬೆನ್ನತ್ತಿದ ವಿಂಡೀಸ್‌ ಪಡೆ ಉತ್ತಮ ಆಟವಾಡುವಲ್ಲಿ ವಿಫಲವಾಗಿ ಎರಡನೇ ಇನಿಂಗ್ಸ್‌ನಲ್ಲೂ ಕೇವಲ 210 ರನ್‌ ಗಳಿಗೆ ಆಲೌಟ್‌ ಆಯಿತು. ಇದರೊಂದಿಗೆ ಭಾರತ ತಂಡ 257ರನ್‌ ಅಂತರದ ಗೆಲುವು ಸಾಧಿಸಿತು. ವೇಗಿ ಮೊಹಮದ್‌ ಶಮಿ ಹಾಗೂ ರವೀಂದ್ರ ಜಡೇಜಾ ತಲಾ 3 ವಿಕೆಟ್‌ ಪಡೆದರೆ, ಇಶಾಂತ್‌ 2 ಹಾಗೂ ಬೂಮ್ರಾ ಒಂದು ವಿಕೆಟ್‌ ಪಡೆದರು.

ವಿಂಡೀಸ್‌ ಸರಣಿಯಲ್ಲಿ ಭಾರತ ಒಟ್ಟು ಮೂರು ಟಿ20, ಮೂರು ಏಕದಿನ ಹಾಗೂ ಎರಡು ಟೆಸ್‌ ಪಂದ್ಯಗಳನ್ನು ಆಡಿತು. ಇದರಲ್ಲಿ ಮಳೆಯಿಂದಾಗಿ ರದ್ದಾದ ಮೊದಲ ಏಕದಿನ ಪಂದ್ಯವನ್ನು ಹೊರತುಪಡಿಸಿ ಉಳಿದೆಲ್ಲ ಪಂದ್ಯಗಳನ್ನೂ ಕೊಹ್ಲಿ ಪಡೆಯೇ ಗೆದ್ದು ಬೀಗಿತು.

ಅತಿಹೆಚ್ಚು ಗೆಲುವು ತಂದುಕೊಟ್ಟ ನಾಯಕ ಕೊಹ್ಲಿ
ಇದುವರೆಗೆ ಒಟ್ಟು 48 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿರುವ ವಿರಾಟ್‌ 28 ಗೆಲುವು ತಂದುಕೊಟ್ಟಿದ್ದಾರೆ. ಈ ದಾಖಲೆ ಮಾಜಿ ನಾಯಕ ಮಹೇಂದ್ರ ಸಿಂಗ್‌ ದೋನಿ ಅವರ ಹೆಸರಿನಲ್ಲಿತ್ತು. ದೋನಿ ನಾಯಕತ್ವದಲ್ಲಿ ಭಾರತ 27 ಜಯ ದಾಖಲಿಸಿತ್ತು.
 

Post Comments (+)