ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರೀಡಂ ಟ್ರೋಫಿ ಟೆಸ್ಟ್ ಸರಣಿ: ಇಂದು ಮೊದಲ ಪಂದ್ಯ, ವಿರಾಟ್ ನಾಯಕತ್ವಕ್ಕೆ ಪರೀಕ್ಷೆ

ಭಾರತ–ದಕ್ಷಿಣ ಆಫ್ರಿಕಾ ಮುಖಾಮುಖಿ
Last Updated 25 ಡಿಸೆಂಬರ್ 2021, 20:26 IST
ಅಕ್ಷರ ಗಾತ್ರ

ಸೆಂಚುರಿಯನ್: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮುಂದೆ ಈಗ ಹಲವು ಸವಾಲುಗಳು ಇವೆ.

ಭಾನುವಾರ ಇಲ್ಲಿ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ಎದುರಿನ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಕಣಕ್ಕಿಳಿಯುವ ಅಂತಿಮ ಹನ್ನೊಂದರ ತಂಡವನ್ನು ಆಯ್ಕೆ ಮಾಡುವ ಸವಾಲು ಪ್ರಮುಖವಾಗಿದೆ. ಅದರೊಂದಿಗೆ ಬ್ಯಾಟಿಂಗ್‌ನಲ್ಲಿ ತಾವು ಲಯ ಕಂಡುಕೊಳ್ಳುವುದರ ಜೊತೆಗೆ ದಕ್ಷಿಣ ಆಫ್ರಿಕಾದ ನೆಲದಲ್ಲಿ ಮೊದಲ ಸರಣಿ ಜಯ ಸಾಧನೆ ಮಾಡುವ ಒತ್ತಡವೂ ಅವರ ಮೇಲಿದೆ. ಮುಖ್ಯ ಕೋಚ್ ಆಗಿ ನೇಮಕವಾದ ನಂತರ ರಾಹುಲ್ ದ್ರಾವಿಡ್ ಅವರಿಗೂ ಇದು ಮೊದಲ ವಿದೇಶ ಪ್ರವಾಸವಾಗಿದೆ. ಗೆಲುವಿನೊಂದಿಗೆ ಶುಭಾರಂಭ ಮಾಡುವ ಛಲ ಅವರಲ್ಲಿಯೂ ಇದೆ.

1992ರಲ್ಲಿ ಭಾರತವು ಮೊದಲ ಬಾರಿ ಇಲ್ಲಿಗೆ ಪ್ರವಾಸ ಬಂದಿತ್ತು. ಆಗಿನಿಂದಲೂ ಇಲ್ಲಿ ಸರಣಿ ಜಯದ ಆಸೆ ಕೈಗೂಡಿಲ್ಲ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನಲ್ಲಿ ಗಳಿಸಿರುವ ಯಶಸ್ಸಿನ ಆತ್ಮವಿಶ್ವಾಸದಲ್ಲಿರುವ ಕೊಹ್ಲಿ ಬಳಗವು ಇಲ್ಲಿಯೂ ಜಯಭೇರಿ ಬಾರಿಸಲು ಉತ್ಸುಕವಾಗಿದೆ.

ಆದ್ದರಿಂದ ಇಲ್ಲಿಯಬೌನ್ಸಿ ಪಿಚ್‌ಗಳಲ್ಲಿ ನಾಲ್ವರು ಮಧ್ಯಮವೇಗಿಗಳು ಸೇರಿದಂತೆ ಒಟ್ಟು ಐವರು ಬೌಲರ್‌ಗಳನ್ನು ಕಣಕ್ಕಿಳಿಸುವ ಯೋಚನೆಯಲ್ಲಿ ತಂಡವಿದೆ. ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಮತ್ತು ಸ್ಪಿನ್ನರ್ ಆರ್. ಅಶ್ವಿನ್ ಆಡಬಹುದು. ಆರನೇ ಬೌಲರ್ ಮತ್ತು ಬ್ಯಾಟ್ಸ್‌ಮನ್ ಆಗಿ ಶಾರ್ದೂಲ್ ಠಾಕೂರ್ ಕಣಕ್ಕಿಳಿಯಬಹುದು. ಇದರಿಂದಾಗಿ ಅನುಭವಿ ಇಶಾಂತ್ ಶರ್ಮಾ ಅವರಿಗೆ ಸ್ಥಾನ ಲಭಿಸುವುದು ಅನುಮಾನ. ರಹಾನೆ ಮತ್ತು ಇಶಾಂತ್ ಅವರ ಮೀನಖಂಡದಲ್ಲಿ ನೋವು ಇರುವುದರಿಂದ ಭಾನುವಾರ ಬೆಳಿಗ್ಗೆಯವರೆಗೆ ತಂಡದ ವ್ಯವಸ್ಥಾಪಕ ಸಮಿತಿ ಕಾದು ನೋಡಲಿದೆ.

ರೋಹಿತ್ ಶರ್ಮಾ, ಶುಭಮನ್ ಗಿಲ್ ಅನುಪಸ್ಥಿತಿಯಲ್ಲಿ ಕನ್ನಡದ ಜೋಡಿ ಮಯಂಕ್ ಅಗರವಾಲ್ ಮತ್ತು ಕೆ.ಎಲ್. ರಾಹುಲ್ ಇನಿಂಗ್ಸ್ ಆರಂಭಿಸುವುದು ಬಹುತೇಕ ಖಚಿತ. ನಂತರದ ಕ್ರಮಾಂಕದಲ್ಲಿ ವಿರಾಟ್, ಪೂಜಾರ ಆಡುವರು. ಆದರೆ ಐದನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್, ಹನುಮವಿಹಾರಿ ಅಥವಾ ಅಜಿಂಕ್ಯ ರಹಾನೆ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳುವ ಒತ್ತಡ ಕೊಹ್ಲಿ ಮುಂದಿದೆ.

ಕಳೆದೆರಡು ವರ್ಷಗಳಿಂದ ಕೊಹ್ಲಿ ಒಂದೂ ಶತಕ ಗಳಿಸಿಲ್ಲ. ಉತ್ತಮ ಲಯ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಪೂಜಾರ ಅವರದ್ದೂ ಇದೇ ಪರಿಸ್ಥಿತಿ ಇದೆ. ಒಂದೊಮ್ಮೆ ಇವರಿಬ್ಬರೂ ಲಯಕ್ಕೆ ಮರಳಿದರೆ, ಡೀನ್ ಎಲ್ಗರ್ ನಾಯಕತ್ವದ ಆತಿಥೇಯರಿಗೆ ಕಠಿಣ ಸವಾಲು ಎದುರಾಗುವುದು ಖಚಿತ. ದಕ್ಷಿಣ ಆಫ್ರಿಕಾ ತಂಡದಲ್ಲಿ ಎಲ್ಗರ್ (69 ಪಂದ್ಯ) ಮತ್ತು ತೆಂಬಾ ಬವುಮಾ (53 ಪಂದ್ಯ) ಅವರಿಬ್ಬರೂ 50ಕ್ಕೂ ಹೆಚ್ಚು ಟೆಸ್ಟ್‌ಗಳಲ್ಲಿ ಆಡಿದ ಅನುಭವಿಗಳು. ಕ್ವಿಂಟನ್ ಡಿಕಾಕ್, ಎಡನ್ ಮಾರ್ಕರಮ್ ಅವರಿಗೆ ತಮ್ಮಪ್ರತಿಭೆ ಸಾಬೀತುಪಡಿಸುವ ಅವಕಾಶ ಈಗ ಇದೆ.

ಕಗಿಸೊ ರಬಾಡ, ಲುಂಗಿ ಗಿಡಿ, ಕೇಶವ್ ಮಹಾರಾಜ್ ಭಾರತದ ಬ್ಯಾಟಿಂಗ್ ಪಡೆಯನ್ನು ಕಾಡುವ ಸಮರ್ಥರು. ತವರಿನ ಪಿಚ್‌ಗಳಲ್ಲಿ ಅವರು ಹೆಚ್ಚು ಪರಿಣಾಮಕಾರಿಯಾಗಬಲ್ಲರು.

ಬಾಕ್ಸಿಂಗ್ ಡೇ ಅಂದರೇನು?
ಬಾಕ್ಸಿಂಗ್ ಡೇ ಪರಿಕಲ್ಪನೆ ಆರಂಭಗೊಂಡದ್ದು ಇಂಗ್ಲೆಂಡ್‌ನಲ್ಲಿ. ಕ್ರಿಸ್‌ಮಸ್‌ನ ಮರುದಿನವನ್ನು ಬಾಕ್ಸಿಂಗ್ ಡೇ ಎಂದು ಕರೆಯುತ್ತಾರೆ. ಐರ್ಲೆಂಡ್‌ ಮತ್ತು ಸ್ಪೇನ್‌ನಲ್ಲಿ ಈ ದಿನವನ್ನು ಸೇಂಟ್ ಸ್ಟೀಫನ್ಸ್‌ ದಿನ ಎಂದೂ ಕರೆಯುತ್ತಾರೆ. ರೊಮೇನಿಯಾ, ಹಂಗರಿ, ಜರ್ಮನಿ, ಪೋಲೆಂಡ್‌ ಮತ್ತು ನೆದರ್ಲೆಂಡ್ಸ್‌ನಲ್ಲಿ ಈ ದಿನ ಎರಡನೇ ಕ್ರಿಸ್‌ಮಸ್.

ಯುರೋಪ್‌ ರಾಷ್ಟ್ರಗಳಲ್ಲಿ ವರ್ಷದ ಕೊನೆಯ ವಾರ ಚರ್ಚ್‌ಗಳಲ್ಲಿ ಪೊಟ್ಟಣಗಳನ್ನು (ಬಾಕ್ಸ್‌) ಇರಿಸಿ ಕಾಣಿಕೆಗಳನ್ನು ಸ್ವೀಕರಿಸಲಾಗುತ್ತದೆ. ಈ ‘ಬಾಕ್ಸ್‌’ಗಳಿಂದಲೇ ಬಾಕ್ಸಿಂಗ್ ಡೇ ಎಂಬ ಹೆಸರು ಬಂದಿರಬೇಕು ಎನ್ನಲಾಗುತ್ತದೆ. ಈ ದಿನ ಆರಂಭವಾಗುವ ಪಂದ್ಯವನ್ನು ಬಾಕ್ಸಿಂಗ್ ಡೇ ಮ್ಯಾಚ್ ಎಂದು ಕರೆಯುವುದು ಕ್ರೀಡಾಕ್ಷೇತ್ರದಲ್ಲಿ ಮೊದಲಿನಿಂದಲೂ ಇರುವ ರೂಢಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT