ಟೈಗರ್ಸ್‌–ನಮ್ಮ ಶಿವಮೊಗ್ಗ ಸೆಣಸು

7
ಕೆಪಿಎಲ್‌: ಹುಬ್ಬಳ್ಳಿ ಆವೃತ್ತಿ ಪಂದ್ಯಗಳು ಇಂದಿನಿಂದ

ಟೈಗರ್ಸ್‌–ನಮ್ಮ ಶಿವಮೊಗ್ಗ ಸೆಣಸು

Published:
Updated:
Deccan Herald

ಹುಬ್ಬಳ್ಳಿ: ಒಂದೂವರೆ ತಿಂಗಳು ಸುರಿದ ಮಳೆಯಿಂದ ಬೇಸತ್ತು ಹೋಗಿರುವ ‘ವಾಣಿಜ್ಯ ನಗರಿ’ಯ ಕ್ರಿಕೆಟ್‌ ಪ್ರೇಮಿಗಳಿಗೆ ಕಳೆದ ಎರಡು ದಿನದಿಂದ ಕಾಣಿಸಿಕೊಳ್ಳುತ್ತಿರುವ ಅಲ್ಪ ಬಿಸಿಲು ಸಂತಸ ಮೂಡಿಸಿದೆ. ಮತ್ತೆ ಮಳೆಯ ಭೀತಿ, ಪಂದ್ಯಗಳನ್ನು ಕಣ್ತುಂಬಿಕೊಳ್ಳುವ ನಿರೀಕ್ಷೆಯ ನಡುವೆ ಕೆಪಿಎಲ್‌ ಟೂರ್ನಿಯ ಹುಬ್ಬಳ್ಳಿ ಆವೃತ್ತಿ  ಭಾನುವಾರ ಆರಂಭವಾಗಲಿವೆ.

ಇಲ್ಲಿನ ರಾಜನಗರದಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ‘ತವರಿನ ತಂಡ’ ಹುಬ್ಬಳ್ಳಿ ಟೈಗರ್ಸ್‌ ಹಾಗೂ ನಮ್ಮ ಶಿವಮೊಗ್ಗ ಪೈಪೋಟಿ ನಡೆಸಲಿವೆ.

ಅನುಭವಿ ಆರ್‌. ವಿನಯ್‌ ಕುಮಾರ್‌ ಮುಂದಾಳತ್ವದ ಟೈಗರ್ಸ್ ತಂಡ ಕೆಪಿಎಲ್‌ನಲ್ಲಿ ನಾಲ್ಕು ಸಲ ಆಡಿದ್ದು, ಎರಡು ಬಾರಿ ರನ್ನರ್ಸ್‌ ಅಪ್‌ ಆಗಿದೆ. ಒಂದು ಸಲ ಸೆಮಿಫೈನಲ್‌ ಮತ್ತು ಒಂದು ಸಲ ಐದನೇ ಸ್ಥಾನ ಪಡೆದಿದೆ. ಈ ಬಾರಿ ‘ನಾವು ಚಾಂಪಿಯನ್ ಆಗಿ ತವರಿನ ಅಭಿಮಾನಿಗಳಿಗೆ ಉಡುಗೊರೆ ನೀಡುತ್ತೇವೆ’ ಎಂದು ವಿನಯ್‌ ಹೇಳಿದ್ದಾರೆ. ಅವರ ಮಾತಿಗೆ ತಕ್ಕಂತೆ ಆಟಗಾರರು ಕೂಡ ಸಜ್ಜಾಗಿದ್ದಾರೆ.

ಟೈಗರ್ಸ್ ತಂಡ ಬೆಂಗಳೂರಿನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಬಿಜಾಪುರ ಬುಲ್ಸ್‌ ಎದುರು ಗೆಲುವು ಪಡೆದಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಸಮತೋಲನ ಹೊಂದಿದೆ. ಆರಂಭಿಕ ಬ್ಯಾಟ್ಸ್‌ಮನ್‌ ಮೊಹಮ್ಮದ್ ತಾಹ, ಅಭಿಷೇಕ ರೆಡ್ಡಿ, ವಿನಯ್‌ ತಂಡದ ಬ್ಯಾಟಿಂಗ್ ಶಕ್ತಿ ಎನಿಸಿದ್ದಾರೆ.

ಚೊಚ್ಚಲ ಪಂದ್ಯ: ಮೂರು ವರ್ಷಗಳಿಂದ ಟೂರ್ನಿಯಲ್ಲಿ ಆಡುತ್ತಿರುವ ನಮ್ಮ ಶಿವಮೊಗ್ಗ ಎರಡು ಸಲ ಆರನೇ ಸ್ಥಾನ ಪಡೆದಿತ್ತು. ಹೋದ ವರ್ಷ ಸೆಮಿಫೈನಲ್‌ ಪ್ರವೇಶಿಸಿತ್ತು.

ಧಾರವಾಡದ ಪ್ರತಿಭೆ ಅನಿರುದ್ಧ ಜೋಶಿ ನಾಯಕತ್ವದ ಶಿವಮೊಗ್ಗ ತಂಡಕ್ಕೆ ಏಳನೇ ಆವೃತ್ತಿಯಲ್ಲಿ ಇದು ಚೊಚ್ಚಲ ಪಂದ್ಯ. ಆರ್‌. ಜೊನಾಥನ್‌, ಲಿಯಾನ್‌ ಖಾನ್‌ ತಂಡದ ಶಕ್ತಿ ಎನಿಸಿದ್ದಾರೆ. ಆದರೆ, ಈ ಬಾರಿಯ ಹರಾಜಿನಲ್ಲಿ ₹8.3 ಲಕ್ಷಕ್ಕೆ ಮಾರಾಟವಾಗಿರುವ ಅಭಿಮನ್ಯು ಮಿಥುನ್‌ ದುಲೀಪ್‌ ಟ್ರೋಫಿ ಟೂರ್ನಿಯಲ್ಲಿ ಸ್ಥಾನ ಪಡೆದಿರುವ ಕಾರಣ ಕೆಪಿಎಲ್‌ನಲ್ಲಿ ಆಡುತ್ತಿಲ್ಲ. ಸಾಕಷ್ಟು ಅನುಭವ ಹೊಂದಿರುವ ‘ಪೀಣ್ಯ ಎಕ್ಸ್‌ಪ್ರೆಸ್‌’ ಅಲಭ್ಯತೆ ತಂಡಕ್ಕೆ ಹಿನ್ನೆಡೆ ಎನಿಸಿದೆ.

ಈ ಎರಡೂ ತಂಡಗಳ ಆಟಗಾರರು ಶನಿವಾರ ಸುಮಾರು ಎರಡು ಗಂಟೆ ತೇಜಲ್‌ ಶಿರಗುಪ್ಪಿ ಕ್ರಿಕೆಟ್‌ ಅಕಾಡೆಮಿಯಲ್ಲಿ ಅಭ್ಯಾಸ ನಡೆಸಿದರು. ಹುಬ್ಬಳ್ಳಿಯಲ್ಲಿ ಎಂಟು ದಿನ ಒಟ್ಟು ಹನ್ನೊಂದು ಪಂದ್ಯಗಳು ನಡೆಯಲಿವೆ.

ಪಂದ್ಯ ಆರಂಭ: ಸಂಜೆ 6.40
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌.

*
ಎರಡು ಸಲ ಫೈನಲ್‌ಗೆ ಬಂದು ಸೋತಿದ್ದೇವೆ, ಆದ್ದರಿಂದ ಈ ಬಾರಿ ಪ್ರಶಸ್ತಿ ಗೆಲ್ಲಲೇಬೇಕು ಎನ್ನುವ ಗುರಿ ಹೊಂದಿದ್ದೇವೆ. ಅದಕ್ಕೆ ತಕ್ಕ ತಾಲೀಮು ಮಾಡಿದ್ದೇವೆ.
-ಅಭಿಷೇಕ ರೆಡ್ಡಿ, ಹುಬ್ಬಳ್ಳಿ ಟೈಗರ್ಸ್‌ ಆಟಗಾರ

*
ಕೆಎಸ್‌ಸಿಎ ಸಿಬ್ಬಂದಿ ಹಗಲಿರುಳು ಕೆಲಸ ಮಾಡಿ ಪಿಚ್‌ ಸಜ್ಜುಗೊಳಿಸಿದ್ದಾರೆ. ಮಳೆ ಬಾರದಿದ್ದರೆ ಪಂದ್ಯ ಸುಗಮವಾಗಿ ನಡೆಯುತ್ತದೆ
-ಪ್ರಶಾಂತ ರಾವ್‌, ಕೆಎಸ್‌ಸಿಎ ಪಿಚ್‌ ಕ್ಯುರೇಟರ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !