ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಲ್: ಹುಬ್ಬಳ್ಳಿ ಟೈಗರ್ಸ್‌ಗೆ ಕೆಪಿಎಲ್‌ ಕಿರೀಟ

ಆದಿತ್ಯ ಸೋಮಣ್ಣ ಆಲ್‌ರೌಂಡ್‌ ಆಟ; ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಎಡವಿದ ಬಳ್ಳಾರಿ ಟಸ್ಕರ್ಸ್
Last Updated 31 ಆಗಸ್ಟ್ 2019, 20:40 IST
ಅಕ್ಷರ ಗಾತ್ರ

ಮೈಸೂರು: ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ ಫೈನಲ್‌ ಪಂದ್ಯದಲ್ಲಿ ಬಳ್ಳಾರಿ ಟಸ್ಕರ್ಸ್‌ ತಂಡವನ್ನು ಎಂಟು ರನ್‌ಗಳಿಂದ ಮಣಿಸಿದ ಹುಬ್ಬಳ್ಳಿ ಟೈಗರ್ಸ್ ಕೆಪಿಎಲ್‌ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಕಿರೀಟ ಮುಡಿಗೇರಿಸಿಕೊಂಡಿತು.

ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಟೈಗರ್ಸ್‌ ನಿಗದಿತ ಓವರ್‌ಗಳಲ್ಲಿ 6 ವಿಕೆಟ್‌ಗೆ 152 ರನ್‌ ಗಳಿಸಿದರೆ, ಟಸ್ಕರ್ಸ್ 20 ಓವರ್‌ಗಳಲ್ಲಿ 144 ರನ್‌ಗಳಿಗೆ ಆಲೌಟಾಯಿತು.

ಆರಂಭಿಕ ಆಟಗಾರನಾಗಿ ಬಡ್ತಿ ಪಡೆದು 47 ರನ್‌ ಗಳಿಸಿದ್ದಲ್ಲದೆ, ಬೌಲಿಂಗ್‌ನಲ್ಲೂ ಕರಾಮತ್ತು ತೋರಿ 24 ರನ್‌ಗಳಿಗೆ ಮೂರು ವಿಕೆಟ್‌ ಪಡೆದ ಆದಿತ್ಯ ಸೋಮಣ್ಣ ಅವರು ಟೈಗರ್ಸ್ ಗೆಲುವಿನ ರೂವಾರಿ ಎನಿಸಿಕೊಂಡರು. ಏಕಾಂಗಿ ಹೋರಾಟ ನಡೆಸಿದ ಟಸ್ಕರ್ಸ್‌ ತಂಡದ ದೇವದತ್ತ ಪಡಿಕ್ಕಲ್‌ (68, 48 ಎ, 8 ಬೌಂ, 2 ಸಿ.) ಸೋಲಿನಲ್ಲೂ ಮಿಂಚಿದರು.

ಹುಬ್ಬಳ್ಳಿ ಟೈಗರ್ಸ್‌ಗೆ ಒಲಿದ ಚೊಚ್ಚಲ ಕಿರೀಟ ಇದು. 2016 ರಲ್ಲಿ ಚಾಂಪಿಯನ್‌ ಆಗಿದ್ದ ಟಸ್ಕರ್ಸ್‌ ತಂಡದ ಎರಡನೇ ಪ್ರಶಸ್ತಿಯ ಕನಸು ಭಗ್ನಗೊಂಡಿತು.

ಸಾಧಾರಣ ಗುರಿ ಬೆನ್ನಟ್ಟಿದ ಟಸ್ಕರ್ಸ್‌ 25 ರನ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡು ಒತ್ತಡಕ್ಕೆ ಒಳಗಾಯಿತು. ನಾಲ್ಕನೇ ವಿಕೆಟ್‌ಗೆ ಪಡಿಕ್ಕಲ್‌ ಮತ್ತು ಸಿ.ಎಂ.ಗೌತಮ್‌ 66 ಎಸೆತಗಳಲ್ಲಿ 75 ರನ್‌ ಸೇರಿಸಿ ತಂಡದ ಗೆಲುವಿನ ಕನಸನ್ನು ಜೀವಂತವಾಗಿರಿಸಿಕೊಂಡರು. ಆದರೆ ಪಡಿಕ್ಕಲ್‌ ಔಟಾದ ಬಳಿಕ ತಂಡ ಸೋಲಿನ ಹಾದಿ ಹಿಡಿಯಿತು.

ಆರಂಭಿಕ ಆಘಾತ: ಟಾಸ್‌ ಗೆದ್ದ ಟಸ್ಕರ್ಸ್‌ ತಂಡದ ನಾಯಕ ಆರ್‌.ವಿನಯ್‌ ಕುಮಾರ್‌ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡರು. ಮೊಹಮ್ಮದ್‌ ತಾಹ ಜತೆ ಆದಿತ್ಯ ಸೋಮಣ್ಣ ಇನಿಂಗ್ಸ್‌ ಆರಂಭಿಸಿದರು.

ಕಳೆದ ಪಂದ್ಯಗಳಲ್ಲಿ ಬಿರುಸಿನ ಆಟವಾಡಿದ್ದ ತಾಹ (9; 10 ಎಸೆತ) ಮತ್ತು ವಿನಯ್‌ (4) ಅವರನ್ನು ಬೇಗನೇ ಕಳೆದುಕೊಂಡ ತಂಡ ಆಘಾತಅನುಭವಿಸಿತು.

ಸೋಮಣ್ಣ ಆಸರೆ: ಬೆನ್ನುಬೆನ್ನಿಗೆ ಎರಡು ವಿಕೆಟ್‌ ಕಳೆದುಕೊಂಡು ಒತ್ತಡಕ್ಕೆ ಒಳಗಾಗಿದ್ದ ಹುಬ್ಬಳ್ಳಿ ಟೈಗರ್ಸ್ ತಂಡಕ್ಕೆ ಆದಿತ್ಯ ಸೋಮಣ್ಣ (47, 38 ಎಸೆತ, 2 ಬೌಂ) ಮತ್ತು ಲವನೀತ್‌ ಸಿಸೋಡಿಯ (29, 29 ಎಸೆತ) ಆಸರೆಯಾದರು.

ಸಂಕ್ಷಿಪ್ತ ಸ್ಕೋರು: ಹುಬ್ಬಳ್ಳಿ ಟೈಗರ್ಸ್: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 152 (ಆದಿತ್ಯ ಸೋಮಣ್ಣ 47, ಲವನೀತ್‌ ಸಿಸೋಡಿಯ 29, ಪ್ರವೀಣ್‌ ದುಬೆ ಔಟಾಗದೆ 26, ಶ್ರೇಯಸ್‌ ಗೋಪಾಲ್ ಔಟಾಗದೆ 14, ಕೆ.ಗೌತಮ್ 46ಕ್ಕೆ 1, ಪ್ರಸಿದ್ಧ ಕೃಷ್ಣ 20 ಕ್ಕೆ 1, ಕೆ.ಪಿ.ಅಪ್ಪಣ್ಣ 19ಕ್ಕೆ 2, ಸಿ.ಎ.ಕಾರ್ತಿಕ್ 18ಕ್ಕೆ 1, ಅಬ್ರಾರ್‌ ಖಾಜಿ 26ಕ್ಕೆ 1)

ಬಳ್ಳಾರಿ ಟಸ್ಕರ್ಸ್: 20 ಓವರ್‌ಗಳಲ್ಲಿ 144 ಕ್ಕೆ ಆಲೌಟ್‌ (ಸಿ.ಎಂ.ಗೌತಮ್‌ 29, ದೇವದತ್ತ ಪಡಿಕ್ಕಲ್ 68, ಭವೇಶ್‌ ಗುಲೇಚಾ 15, ಮಿತ್ರಕಾಂತ್‌ ಯಾದವ್ 19ಕ್ಕೆ 1, ಅಭಿಲಾಷ್‌ ಶೆಟ್ಟಿ 34ಕ್ಕೆ 3, ಆದಿತ್ಯ ಸೋಮಣ್ಣ 24ಕ್ಕೆ 3)

ಫಲಿತಾಂಶ: ಹುಬ್ಬಳ್ಳಿ ಟೈಗರ್ಸ್‌ಗೆ 8 ರನ್‌ ಗೆಲುವು.

ಪಂದ್ಯಶ್ರೇಷ್ಠ: ಆದಿತ್ಯ ಸೋಮಣ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT