ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಲ್: ಟೈಗರ್ಸ್ ‌ಮಾಲೀಕನ ವಿಚಾರಣೆ

Last Updated 27 ನವೆಂಬರ್ 2019, 18:58 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ನಡೆದಿದೆ ಎನ್ನಲಾದ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಸಿಬಿ ಪೊಲೀಸರು, ಹುಬ್ಬಳ್ಳಿ ಟೈಗರ್ಸ್ ತಂಡದ ಮಾಲೀಕ ಸುನಿಲ್ ಜಿಂದಾಲ್ ಅವರನ್ನು ಬುಧವಾರ ತೀವ್ರ ವಿಚಾರಣೆ ನಡೆಸಿದ್ದಾರೆ.

ಸಿಸಿಬಿ ಕಚೇರಿಗೆ ಮಂಗಳವಾರ ಬೆಳಿಗ್ಗೆ ಹಾಜರಾದ ಸುನಿಲ್ ಅವರನ್ನು ಮೂರು ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ ಸಿಸಿಬಿ ಅಧಿಕಾರಿಗಳು, ತಂಡದ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಹುಬ್ಬಳ್ಳಿ ಟೈಗರ್ಸ್‌ ತಂಡದ ಯಾವುದೇ ಆಟಗಾರನ ಹೆಸರು ಮ್ಯಾಚ್ ಫಿಕ್ಸಿಂಗ್‍ ಹಗರಣದಲ್ಲಿ ಈವರೆಗೂ ಕೇಳಿಬಂದಿಲ್ಲ.

ಆದರೆ, ಹುಬ್ಬಳ್ಳಿ ತಂಡದ ಜತೆ ಆಡಿರುವ ತಂಡಗಳ ಸದಸ್ಯರು ಮ್ಯಾಚ್ ಫಿಕ್ಸಿಂಗ್‍ನಲ್ಲಿ ಭಾಗಿಯಾಗಿರುವ‌ ಸುಳಿವು ಸಿಕ್ಕಿದೆ. ಆ ಹಿನ್ನೆಲೆಯಲ್ಲಿ ಸುನಿಲ್ ಅವರಿಂದ ಕೆಲವು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ ಎಂದು ‌ಮೂಲಗಳು ಹೇಳಿವೆ.

ಬಿಜಾಪುರ ಬುಲ್ಸ್ ತಂಡದ ಮಾಲೀಕ ಕಿರಣ ಕಟ್ಟೀಮನಿ ಅವರು ಬುಧವಾರ ಕೂಡಾ ಸಿಸಿಬಿ ಕಚೇರಿಗೆ ಹಾಜರಾಗಿದ್ದರು. ಅವರು ಅಧಿಕಾರಿಗಳು ಕೇಳಿದ ಮಾಹಿತಿಗಳನ್ನು ನೀಡಿದ್ದಾರೆ. ಕಟ್ಟೀಮನಿ ಅವರನ್ನು ಸೋಮವಾರ ಅಧಿಕಾರಿಗಳು ವಿಚಾರಣೆ ನಡೆಸಿದ್ದರು.

ಮಾಧ್ಯಮ ಪ್ರತಿನಿಧಿಗಳ ಜೊತೆ ಬುಧವಾರ ಮಾತನಾಡಿದ ಅವರು, ‘ಹಿಂದುಳಿದ ಪ್ರದೇಶದ ಹುಡುಗರನ್ನು ಕರೆದುಕೊಂಡು ಬಂದು ಅವರಿಗೆ ತರಬೇತಿ ನೀಡಿ, ಭವಿಷ್ಯ ರೂಪಿಸುವ ಉದ್ದೇಶ ನನ್ನದು. ಕೆಲವು ಹಿರಿಯ ಆಟಗಾರರು ಬೆಟ್ಟಿಂಗ್‍ನಂಥ ಕೃತ್ಯದಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ. ಆ ಕುರಿತು ಸಿಸಿಬಿ ತನಿಖೆ ನಡೆಸಿ, ಕ್ರಮ ತೆಗೆದುಕೊಳ್ಳಲಿದೆ’ ಎಂದರು.

‘ಬೆಟ್ಟಿಂಗ್‍ ವಿಷಯಕ್ಕೂ ನನಗೂ, ನನ್ನ ತಂಡಕ್ಕೂ ಯಾವುದೇ ಸಂಬಂಧ ಇಲ್ಲ. ಸಿಸಿಬಿ ಅಧಿಕಾರಿಗಳು ತಂಡದ ಹಣಕಾಸು ವಿಷಯಕ್ಕೆ ಸಂಬಂಧಪಟ್ಟಂತೆ ಕೆಲವು ಮಾಹಿತಿಗಳನ್ನು ನನ್ನಿಂದ ಕೇಳಿದ್ದಾರೆ. ಅವರು ಕೇಳಿದ ಎಲ್ಲ ಮಾಹಿತಿಯನ್ನು ನೀಡಿದ್ದೇನೆ. ಎಲ್ಲ ತಂಡಗಳ ಮಾಲೀಕರಿಗೂ ಕೇಳಿರುವಂತೆ ನನಗೂ ಕೇಳಿದ್ದಾರೆ’ ಎಂದರು.

‘ಕೆ.ಸಿ.ಕಾರಿಯಪ್ಪ, ಭರತ್ ಚಿಪ್ಲಿ, ಸೂರಜ್ ಕಾಮತ್ ನಮ್ಮ ತಂಡದಲ್ಲೇ ಇದ್ದಾರೆ. ನಮ್ಮ ತಂಡದ ಆಟಗಾರರು ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್‍ನಲ್ಲಿ ತೊಡಗಿಸಿಕೊಳ್ಳುವ ಛಾನ್ಸೇ ಇಲ್ಲ. ನಮ್ಮ ತಂಡದ ಯಾರಾದರೂ ಅಂಥವರ ಜೊತೆ ಸಂಪರ್ಕದಲ್ಲಿರುವುದು ಗಮನಕ್ಕೆ ಬಂದರೂ ಬುದ್ದಿ ಹೇಳುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT