ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಾಹೀರಾತು ದೃಢೀಕರಣ ಅಗತ್ಯ’

₨50 ಸಾವಿರಕ್ಕಿಂತ ಹೆಚ್ಚು ಸಾಗಣೆಗೆ ದಾಖಲಾತಿ ಹಾಜರಿ ಕಡ್ಡಾಯ
Last Updated 30 ಮಾರ್ಚ್ 2018, 4:59 IST
ಅಕ್ಷರ ಗಾತ್ರ

ಬಾಗಲಕೋಟೆ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಜಾಹೀರಾತು ಪ್ರಕಟಿಸುವ ಮೊದಲು ಜಿಲ್ಲಾಮಟ್ಟದ ಮಾಧ್ಯಮ ದೃಢೀಕರಣ ಮತ್ತು ಮುನ್ನೆ ಚ್ಚರಿಕೆ ಸಮಿತಿಯ ಗಮನಕ್ಕೆ ತಂದು ಅನುಮತಿ ಪತ್ರ ಪಡೆಯುವಂತೆ ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್ ಸೂಚಿಸಿದರು.

‘ಜಿಲ್ಲೆಯಲ್ಲಿ ತೋಟಗಾರಿಕೆ ಇಲಾ ಖೆಯ ಉಪನಿರ್ದೇಶಕರ ನೇತೃತ್ವದಲ್ಲಿ ಮಾಧ್ಯಮ ದೃಢೀಕರಣ ಸಮಿತಿ (ಎಂ.ಸಿ.ಎಂ.ಸಿ) ರಚಿಸಲಾಗಿದೆ. ಅಭ್ಯರ್ಥಿಗಳು ಚುನಾವಣೆ ಪ್ರಚಾರದ ಜಾಹೀರಾತಿಗಾಗಿ ಮಾಡುವ ವೆಚ್ಚ ಹಾಗೂ ಅದನ್ನು ಪ್ರಕಟಿಸುವ ಮಾಧ್ಯಮಗಳ ಮೇಲೆ ನಿಗಾವಹಿಸುವ ಕೆಲಸವನ್ನು ಈ ಸಮಿತಿ ಮಾಡಲಿದೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಮಿತಿಯ ಪರವಾನಗಿ ಪಡೆಯದೇ ಯಾವುದೇ ರೀತಿಯ ಪ್ರಚಾರ ಕೈಗೊಂಡಲ್ಲಿ ಅಂತಹವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳ ಬೇಕಾಗುತ್ತದೆ. ಪ್ರಾಯೋಜಿತ ಸುದ್ದಿಗಳಿಗೂ ಕಡಿವಾಣ ಹಾಕಲಾಗಿದೆ. ಮುದ್ರಣ, ಎಲೆಕ್ಟ್ರಾನಿಕ್ಸ್ ಮಾಧ್ಯಮ, ಆಕಾಶವಾಣಿ, ಕೇಬಲ್, ಮೊಬೈಲ್, ಎಸ್.ಎಂ.ಎಸ್, ಅಂತರ್ಜಾಲ ತಾಣಗಳಲ್ಲಿ ಪ್ರಕಟವಾಗುವ ಜಾಹೀರಾತುಗಳ ಬಗ್ಗೆ ಸಮಿತಿ ಕಣ್ಣಿಡಲಿದೆ. ಮಾಧ್ಯಮಗಳಲ್ಲಿ ಅಭ್ಯರ್ಥಿಗಳ ಪರವಾಗಿ ಬಿತ್ತರಗೊಳ್ಳುವ ಸುದ್ದಿಗಳನ್ನು ಪೇಯ್ಡ್ ನ್ಯೂಸ್‌ ಎಂದು ಪರಿಗಣಿಸಲಾಗುತ್ತದೆ ಎಂದರು.

ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ, ಅಕ್ರಮಗಳನ್ನು ತಡೆಗಟ್ಟಲು ಪ್ರತಿ ಮತಕ್ಷೇತ್ರಕ್ಕೆ ಆರು ಜಾಗೃತದಳ (ಪ್ಲೈಯಿಂಗ್ ಸ್ಕ್ವಾಡ್) ರಚಿಸಲಾಗಿದೆ. ಜಿಲ್ಲೆಯಲ್ಲಿ ಬೀಳಗಿ ಮತಕ್ಷೇತ್ರವನ್ನು ಅತೀ ಸೂಕ್ಷ್ಮ ಕ್ಷೇತ್ರವೆಂದು ತಾತ್ಕಾಲಿಕವಾಗಿ ಪರಿಗಣಿಸಲಾಗಿದೆ. ಅಲ್ಲಿ ಒಂಬತ್ತು ಜಾಗೃತದಳ ರಚಿಸಲಾಗಿದೆ. ಇದರ ಜೊತೆಗೆ ಸ್ಟ್ಯಾಟಿಕ್ ಸರ್ವೇಕ್ಷಣಾ ತಂಡ, ವಿಡಿಯೊ ಸರ್ವೆಲೆಯನ್ಸ್‌್ ತಂಡ ರಚಿಸಲಾಗಿದೆ. ಜಿಲ್ಲೆಯಾದ್ಯಂತ 23 ಚೆಕ್ ಪೋಸ್ಟ್‌ಗಳನ್ನು ರಚಿಸಲಾಗಿದೆ. ಈಗಾಗಲೇ ಅವು ಕಾರ್ಯಪ್ರವೃತ್ತವಾಗಿವೆ ಎಂದರು.

ಈಗಾಗಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಜಿಲ್ಲೆಯಲ್ಲಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿ ಸಲಾಗುತ್ತಿದೆ ಈಗಾಗಲೇ ಪ್ರಚಾರ ಫಲಕ, ಜಾಹೀರಾತು, ಹೋರ್ಡಿಂಗ್ಸ್‌ಗಳನ್ನು ತೆರವುಗೊಳಿಸಲಾಗಿದೆ. ಇನ್ನು ಎಲ್ಲಾದರೂ ಉಳಿದಿದ್ದರೆ ಆ ಬಗ್ಗೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು.

ಚುನಾವಣಾ ನೀತಿ ಸಂಹಿತೆ ಸಮಿತಿ ಜಿಲ್ಲಾ ನೋಡಲ್ ಅಧಿಕಾರಿ ವಿಕಾಸ್ ಸುರಳಕರ್ ಮಾತನಾಡಿ, ‘ಚುನಾವಣೆಗೆ ಸಂಬಂಧಿಸಿದ ಸಭೆ, ಸಮಾರಂಭಗಳಿಗೆ ಅನುಮತಿ ಕಡ್ಡಾಯ ವಾಗಿದೆ. ಪೂರ್ವಾನುಮತಿ ಪಡೆದು ಪಾರ ದರ್ಶಕವಾಗಿ ಚುನಾವಣೆ ನಡೆಸಲು ಎಲ್ಲ ರಾಜಕೀಯ ಪಕ್ಷಗಳು ಸಹಕರಿಸುವಂತೆ’ ಕೋರಿದರು. ದೇವಸ್ಥಾನ, ಮಸೀದಿ ಹಾಗೂ ಚರ್ಚಗಳಲ್ಲಿ ರಾಜಕೀಯ ಸಭೆ ಗಳನ್ನು ನಿರ್ಬಂಧಿಸಲಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಮಾತನಾಡಿ, ಪ್ರತಿ ಚೆಕ್‌ಪೋಸ್ಟ್‌ನಲ್ಲೂ ಸಿ.ಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಅವುಗಳು ಸರಿ ಯಾಗಿ ಕಾರ್ಯಾಚರಿಸುತ್ತಿವೆಯೇ ಎಂಬುದರ ಬಗ್ಗೆ ಪರಿಶೀಲಿಸಲು ಪ್ರತಿದಿನ ಜಾಗೃತದಳ ತಂಡ ಭೇಟಿ ನೀಡಲಿದೆ. ₹ 50,000 ಸಾವಿಕ್ಕಿಂತ ಹೆಚ್ಚು ಹಣ ಸಾಗಿಸುವಂತಹ ಸಂದರ್ಭದಲ್ಲಿ ಅದಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು. ಪ್ರಚಾರಕ್ಕೆ ಬಳಸುವ ವಾಹನಕ್ಕೆ ಅನುಮತಿ ಕಡ್ಡಾಯ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಶಶೀಧರ ಕುರೇರ, ಎನ್.ಐ.ಸಿಯ ಗಿರಿಯಾಚಾರ್, ನಿರ್ಮಿತಿ ಕೇಂದ್ರದ ಅಧಿಕಾರಿ ಶಂಕರಲಿಂಗ ಗೋಗಿ ಇದ್ದರು.

**

ದೊಡ್ಡನಗೌಡ ದೂರು: ವರದಿಗೆ ಸೂಚನೆ

ಹುನಗುಂದ ಮತಕ್ಷೇತ್ರದಲ್ಲಿ ಮತದಾರರ ಪಟ್ಟಿಗೆ ಅನಧಿಕೃತ ಮತದಾರರನ್ನು ಸೇರಿಸಲಾಗಿದೆ. ಶಾಸಕರ ಕುಮ್ಮಕ್ಕಿನಿಂದ ಹಿಂದಿನ ತಹಶೀಲ್ದಾರ್ ಆ ಕೆಲಸ ಮಾಡಿದ್ದಾರೆ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಬುಧವಾರ ಲಿಖಿತವಾಗಿ ದೂರು ನೀಡಿದ್ದಾರೆ.

ಈ ಬಗ್ಗೆ ಪರಿಶೀಲಿಸಿ ಮಾರ್ಚ್ 31ರ ಒಳಗಾಗಿ ವರದಿ ನೀಡುವಂತೆ ಉಪವಿಭಾಗಾಧಿಕಾರಿ ದೊಡ್ಡಗೌಡರ ಅವರಿಗೆ ಸೂಚಿಸಲಾಗಿದೆ. ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

**

ಶಸ್ತ್ರಾಸ್ತ್ರ ಜಮಾ ಮಾಡಲು ಸೂಚನೆ

ಬಾಗಲಕೋಟೆ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಪರವಾನಗಿ ಹೊಂದಿದ ಶಸ್ತ್ರಾಸ್ತ್ರಗಳನ್ನು ಹಾಗೂ ಮದ್ದು ಗುಂಡುಗಳನ್ನು ಸಂಬಂಧಿಸಿದ ಪೋಲಿಸ್ ಠಾಣೆ ಅಥವಾ ಆಯುಧ ಮಾರಾಟಗಾರರಲ್ಲಿ ಜಮೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್ ಆದೇಶಿಸಿದ್ದಾರೆ.

ಆತ್ಮ ರಕ್ಷಣೆಗಾಗಿ ನೀಡಿರುವ ಆಯುಧಗಳನ್ನು ಮಾರ್ಚ್ 30 ರೊಳಗಾಗಿ ಜಮಾ ಮಾಡಬೇಕು. ಜಮಾ ಮಾಡಿದ ಬಗ ಸಂಬಂಧಿಸಿದ ಪೋಲಿಸ್ ಠಾಣೆ ಮತ್ತು ಆಯುಧ ಮಾರಾಟಗಾರರಿಂದ ಸೂಕ್ತ ರಶೀದಿ ಪಡೆಯಬೇಕು. ಈ ಆದೇಶವು ಮಾರ್ಚ್ 27 ರಿಂದ ಮೇ 18ರವರೆಗೆ ಜಾರಿಯಲ್ಲಿರುತ್ತದೆ. ನಿಗದಿತ ಅವಧಿಯೊಳಗೆ ಜಮಾ ಮಾಡದೇ ಇದ್ದಲ್ಲಿ ಅಂತಹವರು ಮೂರು ತಿಂಗಳ ಜೈಲುವಾಸ ಅಥವಾ ದಂಡ ಇಲ್ಲವೇ ಎರಡೂ ಶಿಕ್ಷೆಗೆ ಒಳಪಡಲಿದ್ದಾರೆ. ಮೇ 18 ರ ನಂತರ ಎಲ್ಲಾ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಾಪಸ್ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

**

ದೂರುಗಳಿದ್ದರೆ ಕರೆ ಮಾಡಿ...

ಹೆಚ್ಚುವರಿ ಜಿಲ್ಲಾಧಿಕಾರಿ ಶಶಿಧರ ಮಾತನಾಡಿ, ಅಭ್ಯರ್ಥಿಗಳು ಮುದ್ರಿಸುವ ಬಿತ್ತಿಪತ್ರಗಳಲ್ಲಿ ಮುದ್ರಕರ ಹೆಸರು ನಮೂದಿಸಬೇಕು. ಮುದ್ರಣವಾಗುವ ಭಿತ್ತಿಪತ್ರಗಳ ಸಂಖ್ಯೆಯ ಬಗ್ಗೆ ಮಾಹಿತಿ ನೀಡಬೇಕು. 1000 ಪ್ರತಿಗಳನ್ನು ಮುದ್ರಿಸಿದರೆ ಅದರಲ್ಲಿ 3 ಪ್ರತಿಗಳನ್ನು ನಮಗೆ ಸಲ್ಲಿಸಬೇಕು ಎಂದರು.

ಚುನಾವಣೆಗೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಲು ನಿಯಂತ್ರಣ ಕೊಠಡಿ ತೆರೆಯಲಾಗಿದೆ. 08354–235121, 235125, 235126 ಹಾಗೂ 235109 (ಟೋಲ್‌ ಫ್ರೀ ಸಂಖ್ಯೆ) ಸಂಪರ್ಕಿಸಬಹುದಾಗಿದೆ. 24x7 ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT