ಸೋಮವಾರ, ಆಗಸ್ಟ್ 19, 2019
28 °C

ಮಳೆಗಾಲದಲ್ಲೇ ಬೇಕಾ ಕೆಪಿಎಲ್‌?

Published:
Updated:
Prajavani

ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಕೆಪಿಎಲ್‌ ಟೂರ್ನಿಯ ಪಂದ್ಯಗಳನ್ನು ಮಳೆ ಕಾರಣಕ್ಕೆ ಸತತ ಎರಡನೇ ವರ್ಷ ಸ್ಥಳಾಂತರ ಮಾಡಲಾಗಿದೆ. ಇದರಿಂದ ಈ ಭಾಗದ ತಂಡಗಳಾದ ಹುಬ್ಬಳ್ಳಿ ಟೈಗರ್ಸ್‌, ಬೆಳಗಾವಿ ಪ್ಯಾಂಥರ್ಸ್‌ ಮತ್ತು ಬಿಜಾಪುರ ಬುಲ್ಸ್ ತಂಡಗಳ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಆದ್ದರಿಂದ ಮಳೆಗಾಲದಲ್ಲಿಯೇ ಕೆಪಿಎಲ್‌ ನಡೆಸಬೇಕಾ ಎನ್ನುವ ಪ್ರಶ್ನೆ ಉದ್ಭವವಾಗಿದೆ.

***

‘ಮಿಲಿಯನ್‌ ಡಾಲರ್‌ ಬೇಬಿ’ ಐಪಿಎಲ್‌ ಭಾರತದಲ್ಲಿ ಆರಂಭವಾಗುತ್ತಿದ್ದಂತೆ ವಿಶ್ವ ಕ್ರಿಕೆಟ್‌ ಲೋಕದಲ್ಲಿ ಟ್ವೆಂಟಿ–20 ಮಾದರಿ ಹೊಸ ತಲ್ಲಣವನ್ನೇ ಉಂಟು ಮಾಡಿತು. ಇದರ ಪರಿಣಾಮವಾಗಿ ಮರುವರ್ಷವೇ ರಾಜ್ಯದಲ್ಲಿ ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌) ಆರಂಭಿಸಲಾಯಿತು.

ಇದರಿಂದ ಅನೇಕ ಯುವ ಪ್ರತಿಭಾನ್ವಿತ ಆಟಗಾರರಿಗೆ ಅನುಕೂಲವಾಗಿದೆ. ಗ್ರಾಮೀಣ ಪ್ರದೇಶಕ್ಕಷ್ಟೇ ನಮ್ಮ ಪ್ರತಿಭೆ ಅಂದುಕೊಂಡಿದ್ದ ಹಲವಾರು ಆಟಗಾರರು ಕ್ರೀಡಾ ವಾಹಿನಿಗಳಲ್ಲಿ ಮಿಂಚತೊಡಗಿದರು. ಭಾರತ ತಂಡದಲ್ಲಿ ಆಡಿರುವ ರಾಬಿನ್‌ ಉತ್ತಪ್ಪ, ಆರ್‌. ವಿನಯ ಕುಮಾರ್‌, ಮನೀಷ್‌ ಪಾಂಡೆ, ಎಸ್‌. ಅರವಿಂದ್‌, ಅಭಿಮನ್ಯು ಮಿಥುನ್‌ ಅವರಂಥ ಹಿರಿಯ ಆಟಗಾರರ ಜೊತೆ ಡ್ರೆಸ್ಸಿಂಗ್‌ ಕೊಠಡಿ ಹಂಚಿಕೊಳ್ಳಲು ಅವರಿಗೆ ಅವಕಾಶ ಲಭಿಸಿತು. ಹಿರಿಯರಿಂದ ಮಾರ್ಗದರ್ಶನ ಕೂಡ ಸಿಕ್ಕಿತು.

ಇದರಿಂದ ಕಲಬುರ್ಗಿ ಜಿಲ್ಲೆಯ ಶಹಬಾದ್‌ನ ಆನಂದ ದೊಡ್ಡಮನಿ, ಯಾದಗಿರಿಯ ಅವಿನಾಶ್, ರಾಯಚೂರಿನ ಎಸ್‌.ಕೆ. ಮೊಯಿನುದ್ದೀನ್‌, ಸಮರ್ಥ ಊಟಿ, ಬೆಳಗಾವಿಯ ರೋಹನ್‌ ಕದಂ, ರೋನಿತ್‌ ಮೋರೆ, ಸ್ವಪ್ನಿಲ್‌ ಎಳವೆ, ರಾಹುಲ್‌ ನಾಯಕ್, ಅಮರ್‌ ಘಾಳಿ, ಋತುರಾಜ್‌ ಭಾಟೆ, ಮಜಿದ್‌ ಮಕಂದರ್, ರಾಹುಲ್‌ ನಾಯ್ಕ, ಸಿಂಧನೂರಿಗೆ ಮನೋಜ ಭಾಂಡಗೆ, ಅವಿನಾಶ ಹೀಗೆ ಅನೇಕ ಆಟಗಾರರಿಗೆ ದೊಡ್ಡ ಮಟ್ಟದಲ್ಲಿ ತಮ್ಮ ಸಾಮರ್ಥ್ಯ ತೋರಿಸಲು ವೇದಿಕೆ ಲಭಿಸಿತು.

ಕ್ರಿಕೆಟ್‌ ಕಿಟ್‌ ಖರೀದಿಸಲು ಕೂಡ ಹಣವಿಲ್ಲದೇ ಪರದಾಡುತ್ತಿದ್ದ ಅನೇಕ ಆಟಗಾರರಿಗೆ ಕೆಪಿಎಲ್‌ನಿಂದ ಆರ್ಥಿಕವಾಗಿಯೂ ಅನುಕೂಲವಾಗಿದೆ. ಐಪಿಎಲ್, ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದರೆ ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನೂ ಕೆಪಿಎಲ್‌ ಕಲಿಸಿಕೊಟ್ಟಿದೆ.

ಆದರೆ, ಇತ್ತೀಚಿನ ಎರಡು ವರ್ಷಗಳಿಂದ ಕೆಪಿಎಲ್‌ ಟೂರ್ನಿಯ ರಂಗು ಕಡಿಮೆಯಾಗುತ್ತಿದೆ. ಪ್ರತಿ ವರ್ಷವೂ ಹೊಸ ಆಟಗಾರರು ಬರುತ್ತಿದ್ದರೂ ಮಳೆಯಿಂದ ಪೂರ್ಣಪ್ರಮಾಣದಲ್ಲಿ ಪಂದ್ಯಗಳನ್ನು ಆಡಲು ಸಾಧ್ಯವಾಗುತ್ತಿಲ್ಲ. ಪಂದ್ಯ ಆಯೋಜನೆಯಾಗುವ ಹುಬ್ಬಳ್ಳಿ, ಬೆಂಗಳೂರು ಮತ್ತು ಮೈಸೂರಿನ ಒಂದಲ್ಲ ಒಂದು ಕಡೆ ಮಳೆ ಇದ್ದೇ ಇರುತ್ತದೆ. ಆದ್ದರಿಂದ ಪಂದ್ಯಗಳು ಸ್ಥಳಾಂತರವಾಗುವುದು ಸಾಮಾನ್ಯವಾಗಿ ಬಿಟ್ಟಿದೆ.

ಈ ಬಾರಿಯ ಕೆಪಿಎಲ್‌ ಟೂರ್ನಿಯಲ್ಲಿ ಹುಬ್ಬಳ್ಳಿಯಲ್ಲಿ ಏಳು ಪಂದ್ಯಗಳು ನಡೆಯಬೇಕಿದ್ದವು. ಸತತ ಮಳೆ ಬೀಳುತ್ತಿರುವ ಕಾರಣ ಆಗಸ್ಟ್‌ 22ರಿಂದ ಆಯೋಜನೆಯಾಗಿದ್ದ ಪಂದ್ಯಗಳನ್ನು ಬೆಂಗಳೂರು ಮತ್ತು ಮೈಸೂರಿಗೆ ಸ್ಥಳಾಂತರಿಸಲಾಗಿದೆ.  ಇದರಿಂದ ಉತ್ತರ ಕರ್ನಾಟಕದ ತವರಿನ ತಂಡಗಳಾದ ಹುಬ್ಬಳ್ಳಿ ಟೈಗರ್ಸ್‌, ಬೆಳಗಾವಿ ಪ್ಯಾಂಥರ್ಸ್‌ ಮತ್ತು ಬಿಜಾಪುರ ಬುಲ್ಸ್‌ ತಂಡಗಳಿಗೆ ಈ ವರ್ಷವೂ ‘ತವರಿನ’ ಮೈದಾನದಲ್ಲಿ ಆಡಲು ಅವಕಾಶವಿಲ್ಲದಂತಾಗಿದೆ.

ಧಾರವಾಡ, ಹಾವೇರಿ, ಗದಗ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಉತ್ತರ ಕನ್ನಡ ಜಿಲ್ಲೆಗಳ ಕ್ರಿಕೆಟ್‌ ಪ್ರಿಯರು ಹುಬ್ಬಳ್ಳಿಯ ಪಂದ್ಯಗಳನ್ನು ನೋಡುವ ಅವಕಾಶದಿಂದ ವಂಚಿತರಾಗಿದ್ದಾರೆ. ಹೋದ ವರ್ಷ ಕೂಡ 11 ಪಂದ್ಯಗಳ ಪೈಕಿ ಎರಡು ಪಂದ್ಯಗಳಷ್ಟೇ ನಡೆದಿದ್ದವು. ಉಳಿದ ಒಂಬತ್ತು ಪಂದ್ಯಗಳು ಮೈಸೂರಿಗೆ ಸ್ಥಳಾಂತರಿಸಲಾಗಿತ್ತು. ಆದ್ದರಿಂದ ಈ ಭಾಗದ ಕ್ರಿಕೆಟ್‌ ಪ್ರೇಮಿಗಳು ‘ಮಳೆಗಾಲದಲ್ಲೂ ಬೇಕಾ ಕೆಪಿಎಲ್‌’ ಎಂದು ಪ್ರಶ್ನಿಸುತ್ತಿದ್ದಾರೆ.

ಮಳೆಗಾಲದಲ್ಲಿ ಆಡುವುದು ಅನಿವಾರ್ಯ: ಈ ವರ್ಷ ವಿಶ್ವಕಪ್‌, ಭಾರತ–ವೆಸ್ಟ್‌ ಇಂಡೀಸ್‌ ಸರಣಿ, ದುಲೀಪ್‌ ಟ್ರೋಫಿ, ರಣಜಿ, ‘ಎ’ ತಂಡಗಳ ಸರಣಿ, ತಮಿಳುನಾಡು ಪ್ರೀಮಿಯರ್‌ ಲೀಗ್‌ ಹೀಗೆ ಒಂದಾದ ಮೇಲೊಂದರಂತೆ ಕ್ರಿಕೆಟ್‌ ಟೂರ್ನಿಗಳು ಇದ್ದ ಕಾರಣ ಈಗಲೇ ಕೆಪಿಎಲ್‌ ಆಡುವುದು ನಮಗೂ ಅನಿವಾರ್ಯ ಎಂದು ಹುಬ್ಬಳ್ಳಿ ಟೈಗರ್ಸ್‌ ಮಾಲೀಕ ಸುಶೀಲ್‌ ಜಿಂದಾಲ್‌ ಹೇಳಿದರು.

‘ಬಿಸಿಸಿಐ ಆಯೋಜಿಸುವ ದೇಶಿ ಹಾಗೂ ಅಂತರರಾಷ್ಟ್ರೀಯ ಕ್ರಿಕೆಟ್‌ ಟೂರ್ನಿಗಳ ವೇಳಾಪಟ್ಟಿ ನೋಡಿಕೊಂಡು ಕೆಪಿಎಲ್‌ ವೇಳಾಪಟ್ಟಿ ರೂಪಿಸುವುದು ಕಷ್ಟವಾಗುತ್ತದೆ. 2018ರ ಕೆಪಿಎಲ್‌ನಲ್ಲಿ ಒಟ್ಟು 22 ದಿನ ಪಂದ್ಯಗಳು ನಡೆದಿದ್ದವು. ಈ ಬಾರಿ 15 ದಿನದಲ್ಲಿ ಪಂದ್ಯಗಳು ಮುಗಿದು ಹೋಗುತ್ತವೆ. ನೇರ ಪ್ರಸಾರದ ಹಕ್ಕು ಪಡೆದಿರುವ ಸ್ಟಾರ್‌ ಸ್ಪೋರ್ಟ್ಸ್‌ ವಾಹಿನಿ ತನ್ನ ವೇಳಾಪಟ್ಟಿಗೆ ತಕ್ಕಂತೆ ಕೆಪಿಎಲ್‌ ವೇಳಾಪಟ್ಟಿ ರೂಪಿಸುತ್ತದೆ. ಮಳೆಗಾಲ ಇರುವ ಕಾರಣ ಪಂದ್ಯ ಸ್ಥಳಾಂತರಕ್ಕೆ ಒ‍ಪ್ಪಿಕೊಳ್ಳುವುದು ನಮಗೂ ಅನಿವಾರ್ಯವಾಗಿತ್ತು’ ಎಂದರು.

ಮೈಸೂರಿಗೆ ಬಸ್‌ ವ್ಯವಸ್ಥೆ ಮಾಡುತ್ತೇವೆ: ಫಾಕ್‌

ತವರಿನಲ್ಲಿ (ಹುಬ್ಬಳ್ಳಿ) ಪಂದ್ಯಗಳನ್ನು ಆಡುವ ಆಸೆ ನಮಗೂ ಇದೆ. ಇದಕ್ಕಾಗಿ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಸಿಬ್ಬಂದಿ ಶಕ್ತಿ ಮೀರಿ ಪ್ರಯತ್ನಿಸಿದ್ದಾರೆ. ಆದರೆ ಮಳೆ ಇರುವ ಕಾರಣ ಪಂದ್ಯಗಳು ಸ್ಥಳಾಂತರವಾಗಿವೆ. ಬೇರೆ ಊರುಗಳಲ್ಲಿ ಆಡುವುದು ಅನಿವಾರ್ಯ ಎಂದು ಬೆಳಗಾವಿ ಪ್ಯಾಂಥರ್ಸ್‌ ತಂಡದ ಮಾಲೀಕ ಅಲಿ ಎಸ್‌. ಫಾಕ್‌ ಅಭಿಪ್ರಾಯಪಟ್ಟರು.

‘ನಮ್ಮ ತಂಡ ನಾಕೌಟ್ ಹಂತಕ್ಕೆ ಬಂದರೆ ಬೆಳಗಾವಿಯಿಂದಲೇ ಅಭಿಮಾನಿಗಳನ್ನು ಮೈಸೂರಿಗೆ ಕರೆದುಕೊಂಡು ಬರುತ್ತೇವೆ. ಇದಕ್ಕಾಗಿ ನಾವೇ ಬಸ್ಸಿನ ವ್ಯವಸ್ಥೆ ಮಾಡುತ್ತೇವೆ. ಬೆಂಬಲಿಗರಿದ್ದರೆ ಆಟಗಾರರಿಗೂ ಹುಮ್ಮಸ್ಸು ಬರುತ್ತದೆ’ ಎಂದರು.

Post Comments (+)