ಬುಧವಾರ, ಅಕ್ಟೋಬರ್ 16, 2019
22 °C
ಓವರ್‌ನಲ್ಲಿ 10ಕ್ಕಿಂತ ಹೆಚ್ಚು ರನ್‌ ನೀಡುವಂತೆ ಬೌಲರ್‌ಗೆ ಆಮಿಷ

ಕೆಪಿಎಲ್‌ ಟೂರ್ನಿ | ಮ್ಯಾಚ್ ಫಿಕ್ಸಿಂಗ್: ಸಿಸಿಬಿ ಬಲೆಗೆ ಬುಕ್ಕಿ

Published:
Updated:

ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್‌ (ಕೆಪಿಎಲ್) ಕ್ರಿಕೆಟ್‌ ಟೂರ್ನಿಯಲ್ಲಿ ನಡೆದಿದೆ ಎನ್ನಲಾದ ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್‌ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು, ಇಬ್ಬರು ಬುಕ್ಕಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಈ ಪೈಕಿ ಒಬ್ಬನನ್ನು ಬಂಧಿಸಿದ್ದಾರೆ.

ರಾಜಸ್ಥಾನದ ಭವೇಶ್ ಬಾಫ್ನಾ ಬಂಧಿತ ಬುಕ್ಕಿ. ಮತ್ತೊಬ್ಬ ಬುಕ್ಕಿ ಸನ್ಯಾಮ್ ಎಂಬಾತ ದೆಹಲಿಯಲ್ಲಿ ತಲೆಮರೆಸಿಕೊಂಡಿರುವ ಮಾಹಿತಿ ಸಿಕ್ಕಿದೆ. ಶೀಘ್ರದಲ್ಲೇ ಆತನನ್ನೂ ಬಂಧಿಸಲಾಗುವುದು ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದರು.

ಬಳ್ಳಾರಿ ಟಸ್ಕರ್ಸ್ ತಂಡದ ಮಧ್ಯಮವೇಗದ ಬೌಲರ್ ಭವೇಶ್ ಗುಲೇಚಾನನ್ನು (26) ಸಂಪರ್ಕಿಸಿದ್ದ ಬಾಫ್ನಾ, ಮ್ಯಾಚ್ ಫಿಕ್ಸಿಂಗ್‌ಗೆ ನೆರವು ನೀಡುವಂತೆ ಹೇಳಿದ್ದ. ಈ ಬಗ್ಗೆ ಮಾಹಿತಿ ಆಧರಿಸಿ ಬಾಫ್ನಾನನ್ನು ಬಂಧಿಸಲಾಗಿದೆ.

ರಾಜಸ್ಥಾನದವರೇ ಆದ ಭವೇಶ್ ಗುಲೇಚಾ, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ‘ಪ್ರತಿ ಓವರ್‌ನಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ರನ್ ನೀಡಿದರೆ ಹೆಚ್ಚು ಹಣ ಗಳಿಸಬಹುದು’ ಎಂದು ಭವೇಶ್‌ಗೆ ಬಾಫ್ನಾ ಆಮಿಷ ಒಡ್ಡಿದ್ದ. ಅಷ್ಟೇ ಅಲ್ಲ, ಈ ಬಗ್ಗೆ ಮನವೊಲಿಸಲು ಮುಂದಾಗಿದ್ದ. ಆದರೆ, ಇದನ್ನು ಭವೇಶ್ ನಿರಾಕರಿಸಿದ್ದ ಎಂದೂ ಗೊತ್ತಾಗಿದೆ.

ಕೆಪಿಎಲ್  ಆರಂಭವಾದ ನಂತರವೂ ಒಮ್ಮೆ ಭೇಟಿಯಾಗುವಂತೆ ಭವೇಶ್‌ಗೆ ಬಾಫ್ನಾ ತಿಳಿಸಿದ್ದ. ಗೆಳೆಯ ಎಂಬ ಕಾರಣಕ್ಕೆ ಭವೇಶ್ ಭೇಟಿ ಮಾಡಿ ಮಾತನಾಡಿದ್ದ. ಅಲ್ಲದೆ, ‘ನಿನಗೆ ಐಪಿಎಲ್‌ ಟೂರ್ನಿಯಲ್ಲಿ ಅವಕಾಶ ಮಾಡಿಕೊಡಲು ವ್ಯಕ್ತಿಯೊಬ್ಬನನ್ನು ಪರಿಚಯಿಸುತ್ತೇನೆ’ ಎಂದು ವಿಮಾನ ನಿಲ್ದಾಣ ಬಳಿಯ ತಾಜ್ ಹೋಟೆಲ್‌ಗೆ ಭವೇಶ್‌ನನ್ನು ಬಾಫ್ನಾ ಬಲವಂತವಾಗಿ ಕರೆದುಕೊಂಡು ಹೋಗಿದ್ದ. ಹೋಟೆಲ್‌ನ ಕೊಠಡಿಯೊಂದರಲ್ಲಿ ಮತ್ತೊಬ್ಬ ಬುಕ್ಕಿ, ಸನ್ಯಾಮ್‌ನನ್ನು ಭವೇಶ್‌ಗೆ ಪರಿಚಯ ಮಾಡಿಕೊಟ್ಟಿದ್ದ.

‘₹ 2 ಲಕ್ಷ ಕೊಡುತ್ತೇನೆ. ಪ್ರತಿ ಓವರ್‌ನಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ರನ್ ಬಿಟ್ಟುಕೊಡಬೇಕು. ನಾವು ಹೇಳಿದಂತೆ ಮಾಡಿದರೆ ಹಣದ ಜೊತೆಗೆ ಇತರೆ ಸೌಲಭ್ಯಗಳನ್ನೂ ಕೊಡುತ್ತೇವೆ’ ಎಂದು ಭವೇಶ್‌ಗೆ ಸನ್ಯಾಮ್‌ ಆಮಿಷ ಒಡ್ಡಿದ್ದ. ಆದರೆ, ಆ ಆಮಿಷವನ್ನು ನಿರಾಕರಿಸಿದ್ದ ಭವೇಶ್, ಹೋಟೆಲ್‌ನಿಂದ ಹೊರಹೋಗಿದ್ದ ಎಂದೂ ತನಿಖೆ ನಡೆಸುತ್ತಿರುವ ಪೊಲೀಸರು ತಿಳಿಸಿದರು.

 

Post Comments (+)