ಏಷ್ಯಾಕಪ್‌ಭಾರತ–‍‍ಪಾಕ್‌ ಕದನ ಕುತೂಹಲ...

7

ಏಷ್ಯಾಕಪ್‌ಭಾರತ–‍‍ಪಾಕ್‌ ಕದನ ಕುತೂಹಲ...

Published:
Updated:
Deccan Herald

ಭಾರತ ಮತ್ತು ಪಾಕಿಸ್ತಾನ ನಡುವಣ ಕ್ರಿಕೆಟ್‌ ಬಾಂಧವ್ಯಕ್ಕೆ ವಿಶಿಷ್ಠ ಪರಂಪರೆ ಇದೆ. ಉಭಯ ತಂಡಗಳ ನಡುವೆ ಪಂದ್ಯ ನಡೆದರೆ ಅದನ್ನು ಕ್ರಿಕೆಟ್‌ ಲೋಕ ಸೂಕ್ಷ್ಮವಾಗಿ ಗಮನಿಸುತ್ತದೆ. ಸಾಂಪ್ರದಾಯಿಕ ಎದುರಾಳಿಗಳ ನಡುವಣ ಹೋರಾಟ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಕ್ರೀಡಾಂ‌ಗಣದಲ್ಲಿ ಜಮಾಯಿಸುತ್ತಾರೆ. ಟಿ.ವಿಯಲ್ಲಿ ಪಂದ್ಯ ನೋಡುವವರ ಸಂಖ್ಯೆಯೂ ಅತ್ಯಧಿಕ.

1952ರ ಅಕ್ಟೋಬರ್‌ನಲ್ಲಿ ಉಭಯ ತಂಡಗಳ ನಡುವೆ ಚೊಚ್ಚಲ ಟೆಸ್ಟ್‌ ನಡೆದಿತ್ತು. 1978ರ ಅಕ್ಟೋಬರ್‌ನಲ್ಲಿ ಆಯೋಜನೆಯಾಗಿದ್ದ ಏಕದಿನ ಪಂದ್ಯದಲ್ಲಿ ಭಾರತ–ಪಾಕ್‌ ಮೊದಲ ಸಲ ಮುಖಾಮುಖಿಯಾಗಿದ್ದವು. 2007ರವರೆಗೂ ಎರಡು ದೇಶಗಳ ನಡುವಣ ಕ್ರಿಕೆಟ್‌ ಸಂಬಂಧ ಸುಮಧುರವಾಗಿಯೇ ಇತ್ತು. 2008ರ ಮುಂಬೈ ಭಯೋತ್ಪಾದನೆ ದಾಳಿಯ ಬಳಿಕ ಇದು ಹದಗೆಟ್ಟಿತ್ತು.

ಗಡಿಯಲ್ಲಿ ಗುಂಡಿನ ದಾಳಿ ಮತ್ತು ಭಯೋತ್ಪಾದನೆ ಕೃತ್ಯ ನಿಲ್ಲಿಸುವವರೆಗೆ ದ್ವಿಪಕ್ಷೀಯ ಕ್ರಿಕೆಟ್‌ ಸರಣಿ ಸಾಧ್ಯವಿಲ್ಲ ಎಂದು ಭಾರತ ಸರ್ಕಾರ ಸ್ಪಷ್ಟಪಡಿಸಿತ್ತು.

‘ಭಯೋತ್ಪಾದನೆ ಮತ್ತು ಕ್ರಿಕೆಟ್‌ ಜೊತೆ ಜೊತೆಯಾಗಿ ಸಾಗಲು ಸಾಧ್ಯವಿಲ್ಲ. ತಟಸ್ಥ ತಾಣದಲ್ಲಿಯೂ ಕ್ರಿಕೆಟ್‌ ಸರಣಿ ಆಯೋಜನೆ ಸಾಧ್ಯವಿಲ್ಲ’ ಎಂದು ಈ ವರ್ಷದ ಆರಂಭದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಹೇಳಿದ್ದರು.

ಈ ಹಿನ್ನೆಲೆಯಲ್ಲಿ, ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು (ಬಿಸಿಸಿಐ), 2014ರಲ್ಲಿ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಜೊತೆ ಮಾಡಿಕೊಂಡಿದ್ದ ಫ್ಯೂಚರ್ಸ್‌ ಟೂರ್ಸ್‌ ಆ್ಯಂಡ್‌ ‍‍ಪ್ರೋಗ್ರಾಂ (ಎಫ್‌ಟಿಪಿ) ಒಪ್ಪಂದದ ಅನ್ವಯ ಎರಡೂ ದೇಶಗಳಲ್ಲಿ ಆರು ಸರಣಿಗಳನ್ನು ಆಡಲು ನಿರಾಕರಿಸಿತ್ತು.

ಹೀಗಾಗಿ ಉಭಯ ತಂಡಗಳ ನಡುವಣ ‍ಪಂದ್ಯ ನೋಡಲು ಅಭಿಮಾನಿಗಳು ಐಸಿಸಿ ಚಾಂಪಿಯನ್‌ಷಿಪ್‌ಗಳನ್ನು ಎದುರು ನೋಡುವುದು ಅನಿವಾರ್ಯವೆನಿಸಿದೆ. 2017ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಪಾಕಿಸ್ತಾನ ತಂಡ ಭಾರತವನ್ನು ಮಣಿಸಿ ಪ್ರಶಸ್ತಿ ಜಯಿಸಿತ್ತು. ಇದಾಗಿ 14 ತಿಂಗಳ ನಂತರ ಉಭಯ ತಂಡಗಳು ಮತ್ತೆ ಮುಖಾಮುಖಿಯಾಗುತ್ತಿವೆ. ಈ ಪೈಪೋಟಿಗೆ ಈ ಬಾರಿಯ ಏಷ್ಯಾಕಪ್‌ ಟೂರ್ನಿ ವೇದಿಕೆ ಕಲ್ಪಿಸಿದೆ. ಸೆಪ್ಟೆಂಬರ್‌ 19 ರಂದು ದುಬೈ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದತ್ತ ಈಗ ಕೋಟ್ಯಂತರ ಕ್ರಿಕೆಟ್‌ ಪ್ರಿಯರ ಕಣ್ಣುಗಳು ನೆಟ್ಟಿವೆ.

34 ವರ್ಷಗಳ ಏಷ್ಯಾಕಪ್‌ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ 12 ಸಲ ಪೈಪೋಟಿ ನಡೆಸಿವೆ. ಈ ಪೈಕಿ ಭಾರತ ಆರರಲ್ಲಿ ಗೆದ್ದು, ಐದರಲ್ಲಿ ಸೋತಿದೆ. ಒಂದು ಪಂದ್ಯ ಮಳೆಯ ಕಾರಣ ರದ್ದಾಗಿದೆ.

ಏಷ್ಯಾಕಪ್‌ನ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಅಲ್ಲಿ ಭಾರತದ ಆಧಿಪತ್ಯ ಎದ್ದುಕಾಣುತ್ತದೆ. ಟೂರ್ನಿಯಲ್ಲಿ ಅತಿ ಹೆಚ್ಚು ಬಾರಿ ಟ್ರೋಫಿ ಗೆದ್ದ ಹಿರಿಮೆಗೆ ತಂಡ ಪಾತ್ರವಾಗಿದೆ. ಭಾರತದ ಖಾತೆಯಲ್ಲಿ ಒಟ್ಟು ಆರು ಪ್ರಶಸ್ತಿಗಳಿವೆ. ಪಾಕಿಸ್ತಾನ ತಂಡ ಟೂರ್ನಿಯಲ್ಲಿ ಚಾಂಪಿಯನ್‌ ಆಗಿರುವುದು ಎರಡು ಸಲ ಮಾತ್ರ.ಶ್ರೀ

ಅಗ್ನಿಪರೀಕ್ಷೆಯ ಕಾಲ

2016ರಲ್ಲಿ ಟ್ವೆಂಟಿ–20 ಮಾದರಿಯಲ್ಲಿ ನಡೆದಿದ್ದ ಟೂರ್ನಿಯಲ್ಲಿ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದ ಭಾರತದ ಮುಂದೆ ಈಗ ಪ್ರಶಸ್ತಿ ಉಳಿಸಿಕೊಳ್ಳುವ ಬಹುದೊಡ್ಡ ಸವಾಲಿದೆ.

ಇಂಗ್ಲೆಂಡ್‌ ಎದುರು ಟೆಸ್ಟ್‌ ಮತ್ತು ಏಕದಿನ ಸರಣಿಗಳನ್ನು ಸೋತಿರುವ ಭಾರತ ಸಾಕಷ್ಟು ಒತ್ತಡದಲ್ಲಿದೆ. ನಾಯಕ ವಿರಾಟ್‌ ಕೊಹ್ಲಿ ವಿಶ್ರಾಂತಿ ಬಯಸಿದ್ದು, ಏಷ್ಯಾಕಪ್‌ನಿಂದ ಹಿಂದೆ ಸರಿದಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುವ ಜವಾಬ್ದಾರಿ ರೋಹಿತ್‌ ಶರ್ಮಾ ಹೇಗಲಿಗೇರಿದೆ.

ಕರ್ನಾಟಕದ ಕೆ.ಎಲ್‌.ರಾಹುಲ್‌, ಮನೀಷ್‌ ಪಾಂಡೆ, ಉಪ ನಾಯಕ ಶಿಖರ್‌ ಧವನ್‌, ಹಾರ್ದಿಕ್‌ ಪಾಂಡ್ಯ ಮತ್ತು ದಿನೇಶ್‌ ಕಾರ್ತಿಕ್‌ ಅವರು ತಂಡದಲ್ಲಿದ್ದಾರೆ. ಅನುಭವಿ ಆಟಗಾರ ಮಹೇಂದ್ರ ಸಿಂಗ್‌ ದೋನಿ ಅವರ ಬಲವೂ ತಂಡಕ್ಕಿದೆ. ಇವರು ಅನೇಕ ಪಂದ್ಯಗಳಲ್ಲಿ ಏಕಾಂಗಿಯಾಗಿ ಹೋರಾಡಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಹೀಗಾಗಿ ಇತರರಿಗಿಂತ ಇವರ ಮೇಲೆ ತುಸು ಹೆಚ್ಚು ಹೊಣೆ ಇದೆ. ಅದನ್ನು ಹೇಗೆ ನಿಭಾಯಿಸುತ್ತಾರೆ ಎಂಬ ಕುತೂಹಲವೂ ಗರಿಗೆದರಿದೆ.

***

ಭಾರತ–ಪಾಕ್‌ ಏಷ್ಯಾಕಪ್‌ ಹಣಾಹಣಿಯ ಮೆಲುಕು

ಭಾರತ ಮತ್ತು ‍ಪಾಕಿಸ್ತಾನ ನಡುವಣ ಹಲವು ರೋಚಕ ಹಣಾಹಣಿಗಳಿಗೆ ಏಷ್ಯಾಕಪ್‌ ಸಾಕ್ಷಿಯಾಗಿದೆ. ಈ ಪೈಕಿ ಕೆಲ ಪಂದ್ಯಗಳ ಫಲಿತಾಂಶವನ್ನು ಇಲ್ಲಿ ಮೆಲುಕು ಹಾಕಲಾಗಿದೆ.

1984 (ಯುಎಇ): ಭಾರತಕ್ಕೆ 54ರನ್‌ ಗೆಲುವು.

1984ರಲ್ಲಿ ನಡೆದಿದ್ದ ಚೊಚ್ಚಲ ಏಷ್ಯಾಕಪ್‌ನಲ್ಲಿ ಮೊದಲ ಬಾರಿಗೆ ಉಭಯ ತಂಡಗಳು ಎದುರಾಗಿದ್ದವು. ಶಾರ್ಜಾ ಕ್ರಿಕೆಟ್‌ ಸಂಸ್ಥೆಯ ಮೈದಾನದಲ್ಲಿ ನಡೆದಿದ್ದ ಹಣಾಹಣಿಯಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಭಾರತ 46 ಓವರ್‌ಗಳಲ್ಲಿ 4 ವಿಕೆಟ್‌ಗೆ 188ರನ್‌ ಗಳಿಸಿತ್ತು. ವಿಕೆಟ್‌ ಕೀಪರ್‌ ಸುರಿಂದರ್‌ ಖನ್ನಾ (56ರನ್‌) ಮತ್ತು ಸಂದೀಪ್‌ ಪಾಟೀಲ್‌ (43 ರನ್‌) ಬ್ಯಾಟಿಂಗ್‌ನಲ್ಲಿ ಮಿಂಚಿದ್ದರು.

ಗುರಿ ಬೆನ್ನಟ್ಟಿದ್ದ ಪಾಕಿಸ್ತಾನಕ್ಕೆ ರವಿಶಾಸ್ತ್ರಿ ಮತ್ತು ಕರ್ನಾಟಕದ ರೋಜರ್‌ ಬಿನ್ನಿ ಆಘಾತ ನೀಡಿದ್ದರು. ತಲಾ ಮೂರು ವಿಕೆಟ್‌ ಉರುಳಿಸಿದ್ದ ಈ ಜೋಡಿ ಸುನಿಲ್‌ ಗಾವಸ್ಕರ್‌ ಬಳಗಕ್ಕೆ ಅಮೋಘ ಗೆಲುವು ತಂದುಕೊಟ್ಟಿತ್ತು.

***

1988 (ಬಾಂಗ್ಲಾದೇಶ): ಭಾರತಕ್ಕೆ 4 ವಿಕೆಟ್‌ ಜಯ

ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಪಾಕಿಸ್ತಾನ 142ರನ್‌ಗಳಿಗೆ ಆಲೌಟ್‌ ಆಗಿತ್ತು. ಭಾರತದ ಆಫ್‌ಬ್ರೇಕ್‌ ಬೌಲರ್‌ ಅರ್ಷದ್‌ ಅಯೂಬ್‌ ಎದುರಾಳಿ ತಂಡದ ಬ್ಯಾಟಿಂಗ್‌ ಶಕ್ತಿಗೆ ಬಲವಾದ ಪೆಟ್ಟು ನೀಡಿದ್ದರು. ಅವರು ಐದು ವಿಕೆಟ್‌ ಉರುಳಿಸಿ ಗಮನ ಸೆಳೆದಿದ್ದರು. ಕಪಿಲ್‌ ದೇವ್‌ ಮತ್ತು ಮಣಿಂದರ್‌ ಸಿಂಗ್‌ ಅವರು ತಲಾ ಎರಡು ವಿಕೆಟ್‌ ಕಬಳಿಸಿದ್ದರು.

ಗುರಿ ಬೆನ್ನಟ್ಟಿದ್ದ ತಂಡ ನವಜೋತ್‌ ಸಿಂಗ್‌ ಸಿಧು ಅವರ ವಿಕೆಟ್‌ ಬೇಗನೆ ಕಳೆದುಕೊಂಡಿತ್ತು. ಮೊಹಿಂದರ್‌ ಅಮರನಾಥ್‌ ಮತ್ತು ಕೃಷ್ಣಮಾಚಾರಿ ಶ್ರೀಕಾಂತ್‌ ಛಲದಿಂದ ಹೋರಾಡಿ ಗೆಲುವಿನ ಸಿಹಿ ಉಣಬಡಿಸಿದ್ದರು.

***

2010 (‍ಶ್ರೀಲಂಕಾ): ಭಾರತಕ್ಕೆ 3 ವಿಕೆಟ್‌ ಗೆಲುವು

ಈ ಪಂದ್ಯದಲ್ಲಿ ಭಾರತದ ಗೆಲುವಿನ ರೂವಾರಿಯಾಗಿದ್ದು ಹರಭಜನ್‌ ಸಿಂಗ್‌.

ಮೊದಲು ಬ್ಯಾಟ್‌ ಮಾಡಿದ್ದ ಪಾಕಿಸ್ತಾನ ಸಲ್ಮಾನ್‌ ಭಟ್‌ ಮತ್ತು ಕಮ್ರನ್‌ ಅಕ್ಮಲ್‌ ಅವರ ಅರ್ಧಶತಕಗಳ ನೆರವಿನಿಂದ 267ರನ್‌ ದಾಖಲಿಸಿತ್ತು.

ಗುರಿ ಬೆನ್ನಟ್ಟಿದ ಭಾರತ ಆರಂಭದಲ್ಲೇ ವೀರೇಂದ್ರ ಸೆಹ್ವಾಗ್‌, ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಅವರ ವಿಕೆಟ್‌ ಕಳೆದುಕೊಂಡು ಸಂಕಷ್ಟ ಎದುರಿಸಿತ್ತು. ಈ ಹಂತದಲ್ಲಿ ಗೌತಮ್‌ ಗಂಭೀರ್‌  (83) ಮತ್ತು ನಾಯಕ ಮಹೇಂದ್ರ ಸಿಂಗ್‌ ದೋನಿ (56) ಅರ್ಧಶತಕಗಳನ್ನು ಸಿಡಿಸಿ ಮಿಂಚಿದ್ದರು.  ಕೊನೆಯ ಓವರ್‌ನಲ್ಲಿ ಭಾರತದ ಗೆಲುವಿಗೆ ಏಳು ರನ್‌ಗಳ ಅಗತ್ಯವಿತ್ತು. ಎರಡನೇ ಎಸೆತದಲ್ಲಿ ಸುರೇಶ್‌ ರೈನಾ (34) ರನ್‌ಔಟ್‌ ಆದರು. ಮೂರನೇ ಎಸೆತದಲ್ಲಿ ಎರಡು ರನ್‌ ಗಳಿಸಿದ ಪ್ರವೀಣ್‌ ಕುಮಾರ್, ಮರು ಎಸೆತದಲ್ಲಿ ಒಂದು ರನ್‌ ಗಳಿಸಿದರು. ಮೊಹಮ್ಮದ್‌ ಅಮೀರ್‌ ಹಾಕಿದ ಐದನೇ ಎಸೆತವನ್ನು ಹರಭಜನ್‌, ಸಿಕ್ಸರ್‌ಗೆ ಅಟ್ಟಿ ಸಂಭ್ರಮಿಸಿದ್ದರು. ಇದಕ್ಕೂ ಮುನ್ನ ಶೋಯಬ್‌ ಅಖ್ತರ್‌, ಹರಭಜನ್‌ ಅವರನ್ನು ಕೆಣಕಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !