ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್‌: ಕಣ ಕಣದಲ್ಲೂ ಕಾಂಚಾಣ...

Last Updated 17 ಮಾರ್ಚ್ 2019, 19:30 IST
ಅಕ್ಷರ ಗಾತ್ರ

ಕ್ರಿಕೆಟ್‌ ಜಗತ್ತು ಬೆರಗುಗಣ್ಣಿನಿಂದ ನೋಡುವಂತೆ ಮಾಡಿದ ಚುಟುಕು ಕ್ರಿಕೆಟ್‌ ಲೀಗ್‌ ಇದು. ಭಾರತದಲ್ಲಿ ಕ್ರಿಕೆಟ್‌ನ ಜನಪ್ರಿಯತೆಯನ್ನು ಮತ್ತಷ್ಟು ಉತ್ತುಂಗಕ್ಕೆ ಕೊಂಡೊಯ್ದ ಹೆಗ್ಗಳಿಕೆ ಇದಕ್ಕೆ ಸಲ್ಲುತ್ತದೆ. ಹನ್ನೊಂದು ಆವೃತ್ತಿಗಳನ್ನು ಯಶಸ್ವಿಯಾಗಿ ಪೂರೈಸಿರುವ ಐ‍ಪಿಎಲ್‌, ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಭಾರತದಲ್ಲಿ ಲೀಗ್‌ಗಳ ಪರ್ವ ಶುರುವಾಗಲು ಇದು ಪ್ರೇರಣೆಯಾಗಿದೆ.

ಐಪಿಎಲ್‌ ಶುರುವಾದ ಮೇಲೆ ದೇಶ, ವಿದೇಶದ ಕ್ರಿಕೆಟಿಗರು ಕುಬೇರರಾಗಿದ್ದಾರೆ. ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್‌ ಮಂಡಳಿ ಎಂಬ ಕಿರೀಟ, ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಮುಡಿಗೇರಿದೆ. ಲೀಗ್‌ನ ಜನಪ್ರಿಯತೆ ಹೆಚ್ಚುತ್ತಾ ಹೋದಂತೆ ಹಣ ಕೂಡಾ ಹೊಳೆಯಂತೆ ಹರಿಯುತ್ತಿದ್ದು, ಬಿಸಿಸಿಐ ಖಜಾನೆ ತುಂಬುತ್ತಿದೆ. ದಶಕದ ಹಿಂದೆ ಶುರುವಾದ ಈ ಲೀಗ್‌, ಜನಪ್ರಿಯತೆಯ ವಿಷಯದಲ್ಲಿ ಅಮೆರಿಕದ ಎನ್‌ಬಿಎ ಬ್ಯಾಸ್ಕೆಟ್‌ಬಾಲ್ ಲೀಗ್‌ ಮತ್ತು ಇಂಗ್ಲೆಂಡ್‌ನ ಪ್ರೀಮಿಯರ್‌ ಫುಟ್‌ಬಾಲ್‌ ಲೀಗ್‌ಗಳಿಗೆ ಸಮನಾಗಿ ಬೆಳೆದು ನಿಂತಿದೆ.

ಸ್ಟಾರ್‌ ಇಂಡಿಯಾ ಸಂಸ್ಥೆ ₹ 16,347.5 ಕೋಟಿ ನೀಡಿ ಐದು ವರ್ಷಗಳ ಅವಧಿಯ (2018–2022) ಮಾಧ್ಯಮ ಪ್ರಸಾರದ ಹಕ್ಕು ಖರೀದಿಸಿದ್ದು ಇದಕ್ಕೆ ಹಿಡಿದ ಕೈಗನ್ನಡಿ. ಇದರಲ್ಲಿ ಟಿ.ವಿ. ಮೊಬೈಲ್‌ ಮತ್ತು ಇಂಟರ್‌ನೆಟ್‌ ಪ್ರಸಾರದ ಹಕ್ಕುಗಳೂ ಸೇರಿವೆ. ಸಂಸ್ಥೆಯೊಂದು ಇಷ್ಟೊಂದು ದುಬಾರಿ ಮೊತ್ತ ನೀಡಿ ಹಕ್ಕು ಖರೀದಿಸಿರುವುದು ಐಪಿಎಲ್‌ ಇತಿಹಾಸದಲ್ಲೇ ಮೊದಲು. 2008ರಲ್ಲಿ ಸೋನಿ ಸಂಸ್ಥೆ ₹ 8,200 ಕೋಟಿ ನೀಡಿ 10 ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಂಡಿತ್ತು. ಹೊಸ ಒಡಂಬಡಿಕೆಯ ಪ್ರಕಾರ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಬೊಕ್ಕಸಕ್ಕೆ ವರ್ಷಕ್ಕೆ ಅಂದಾಜು ₹3,270 ಕೋಟಿ ಸಂದಾಯವಾಗುತ್ತಿದೆ. ಪ್ರತಿ ಪಂದ್ಯಕ್ಕೆ ಬಿಸಿಸಿಐ ಸುಮಾರು ₹ 55 ಕೋಟಿ ಆದಾಯ ಗಳಿಸುತ್ತಿದೆ.

‘ಐಪಿಎಲ್‌ ಶುರುವಾದ ಬಳಿಕ ಭಾರತದ ಕ್ರಿಕೆಟ್‌ನಲ್ಲಿ ಮಹತ್ತರ ಬದಲಾವಣೆಗಳು ಆಗಿವೆ. ಲೀಗ್‌ ನೋಡುವವರ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇದೆ. ಈ ಕಾರಣದಿಂದಲೇ ಇಷ್ಟು ದುಬಾರಿ ಮೊತ್ತ ನೀಡಿ ಮಾಧ್ಯಮ ಹಕ್ಕು ಖರೀದಿಸಿದ್ದೇವೆ’ ಎಂದು ಸ್ಟಾರ್‌ ಇಂಡಿಯಾದ ಸಿಇಒ ಉದಯ್‌ ಶಂಕರ್‌ ಹೋದ ವರ್ಷ ಹೇಳಿದ್ದರು.

ವಿಶ್ವದ ಅತ್ಯಂತ ಸಿರಿವಂತ 90 ಲೀಗ್‌ಗಳ ಪಟ್ಟಿಯ ಮೇಲೆ ಕಣ್ಣಾಡಿಸಿದರೆ, ಅಮೆರಿಕದ ನ್ಯಾಷನಲ್‌ ಫುಟ್‌ಬಾಲ್ ಲೀಗ್‌ ಅಗ್ರಸ್ಥಾನದಲ್ಲಿರುವುದು ಎದ್ದು ಕಾಣುತ್ತದೆ. ಈ ಪಟ್ಟಿಯಲ್ಲಿ ಐಪಿಎಲ್‌ 23ನೇ ಸ್ಥಾನ ಹೊಂದಿದೆ.

ಹೆಚ್ಚಿದ ಬ್ರಾಂಡ್‌ ಮೌಲ್ಯ

ಐಪಿಎಲ್‌ ಪಂದ್ಯಗಳು ಒಟ್ಟು 17 ಕ್ರೀಡಾ ವಾಹಿನಿಗಳಲ್ಲಿ ಪ್ರಸಾರಗೊಳ್ಳುತ್ತವೆ. ಏಳು ಭಾಷೆಗಳಲ್ಲಿ ಪಂದ್ಯಗಳ ವೀಕ್ಷಕ ವಿವರಣೆ ನೀಡಲಾಗುತ್ತಿದೆ. ಹೀಗಾಗಿ ವೀಕ್ಷಕರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಲೀಗ್‌ನ ಬ್ರಾಂಡ್‌ ಮೌಲ್ಯವೂ ದುಪ್ಪಟ್ಟಾಗಿದೆ.

2017ರಲ್ಲಿ ₹36,629 ಕೋಟಿ ಇದ್ದ ಲೀಗ್‌ನ ಬ್ರಾಂಡ್‌ ಮೌಲ್ಯ 2018ರ ವೇಳೆಗೆ ₹43,526 ಕೋಟಿಗೆ ಹೆಚ್ಚಿದೆ ಎಂದು ಡಫ್‌ ಆ್ಯಂಡ್‌ ಫೆಲ್ಪ್ಸ್‌ಸಂಸ್ಥೆ ಹೋದ ವರ್ಷದ ಆಗಸ್ಟ್‌ನಲ್ಲಿ ಪ್ರಕಟಿಸಿದ್ದ ವರದಿಯಲ್ಲಿ ಉಲ್ಲೇಖಿಸಿತ್ತು.

ಈ ಸಂಸ್ಥೆಯ ವರದಿಯ ಪ್ರಕಾರ ಮುಂಬೈ ಇಂಡಿಯನ್ಸ್‌ ತಂಡ ಅತಿ ಹೆಚ್ಚು ಬ್ರಾಂಡ್‌ ಮೌಲ್ಯ ಹೊಂದಿದೆ. 2018ರಲ್ಲಿ ಈ ತಂಡದ ಬ್ರಾಂಡ್‌ ಮೌಲ್ಯ ಬರೋಬ್ಬರಿ ₹780.7 ಕೋಟಿ.

ಬಾಲಿವುಡ್‌ ನಟ ಶಾರುಖ್‌ ಖಾನ್‌ ಒಡೆತನದ ಕೋಲ್ಕತ್ತ ನೈಟ್‌ರೈಡರ್ಸ್‌ ತಂಡದ ಮೌಲ್ಯ ₹718.6 ಕೋಟಿ. ಈ ಪಟ್ಟಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ (ಸಿಎಸ್‌ಕೆ) ಜಂಟಿ ಮೂರನೇ ಸ್ಥಾನಗಳಲ್ಲಿವೆ. ಈ ಫ್ರಾಂಚೈಸ್‌ಗಳು ತಲಾ ₹676.9 ಕೋಟಿ ಬ್ರೌಂಡ್‌ ಮೌಲ್ಯ ಹೊಂದಿವೆ.

ಸ್ಟಾರ್‌ ಇಂಡಿಯಾ ಸಂಸ್ಥೆ ಹೋದ ವರ್ಷ ಜಾಹೀರಾತು ಮೂಲಗಳಿಂದಲೇ ₹2,000 ಕೋಟಿ ಆದಾಯ ಗಳಿಸಿತ್ತು. 2017ರಲ್ಲಿ ಸೋನಿ ಸಂಸ್ಥೆ ಗಳಿಸಿದ್ದು ₹ 1,300 ಕೋಟಿ.

***

ದುಪ್ಪಟ್ಟಾದ ಆದಾಯ

ಚಿತ್ರ ನಟರು ಮತ್ತು ಉದ್ಯಮಿಗಳ ಸಹ ಭಾಗಿತ್ವ ಲೀಗ್‌ಗೆ ಹೊಸ ಮೆರಗು ನೀಡಿದೆ. ಇದು ಕೂಡಾ ಐಪಿಎಲ್‌ ಜನಪ್ರಿಯತೆ ಹೆಚ್ಚಲು ನೆರವಾಗಿದೆ ಎಂಬ ಮಾತುಗಳೂ ಕೇಳಿಬಂದಿವೆ.

2015–16ರಲ್ಲಿ ಐಪಿಎಲ್‌ ಆದಾಯ ಶೇಕಡ 300 ರಷ್ಟು ಹೆಚ್ಚಿದೆ ಎಂದು ಬಿಸಿಸಿಐ ತನ್ನ ವಾರ್ಷಿಕ ವರದಿಯಲ್ಲಿ ಬಹಿರಂಗಪಡಿಸಿತ್ತು.

2016ರಲ್ಲಿ ಲೀಗ್‌ನ ವೀಕ್ಷಕರ ಸಂಖ್ಯೆ 10 ಕೋಟಿ ದಾಟಿತ್ತು.

ಐಪಿಎಲ್‌ನಲ್ಲಿ ಇದುವರೆಗೂ ಅತಿ ಹೆಚ್ಚು ಆದಾಯ ಗಳಿಸಿದ ಬ್ಯಾಟ್ಸ್‌ಮನ್‌ಗಳು (11 ಆವೃತ್ತಿಗಳು ಸೇರಿ)

1. ಮಹೇಂದ್ರ ಸಿಂಗ್‌ ಧೋನಿ

ತಂಡ: ಚೆನ್ನೈ ಸೂಪರ್‌ ಕಿಂಗ್ಸ್‌

ಗಳಿಸಿದ ಆದಾಯ: ₹122.8 ಕೋಟಿ

2. ರೋಹಿತ್‌ ಶರ್ಮಾ

ತಂಡ: ಮುಂಬೈ ಇಂಡಿಯನ್ಸ್‌

ಗಳಿಸಿದ ಆದಾಯ: ₹116.8 ಕೋಟಿ

3.ವಿರಾಟ್‌ ಕೊಹ್ಲಿ

ತಂಡ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು

ಗಳಿಸಿದ ಆದಾಯ: ₹109.2 ಕೋಟಿ

4. ಗೌತಮ್‌ ಗಂಭೀರ್‌

ತಂಡ: ಡೆಲ್ಲಿ ಡೇರ್‌ಡೆವಿಲ್ಸ್‌ (ಹಿಂದಿನ ಆವೃತ್ತಿ)

ಗಳಿಸಿದ ಆದಾಯ: ₹94.6 ಕೋಟಿ

5. ಸುರೇಶ್‌ ರೈನಾ

ತಂಡ: ಚೆನ್ನೈ ಸೂಪರ್‌ ಕಿಂಗ್ಸ್‌

ಗಳಿಸಿದ ಆದಾಯ: ₹88.7 ಕೋಟಿ.

******

ತಂಡಗಳ ಬ್ರಾಂಡ್‌ ಮೌಲ್ಯ

ಮುಂಬೈ ಇಂಡಿಯನ್ಸ್‌ 1:
2018ರ ಬ್ರಾಂಡ್‌ ಮೌಲ್ಯ: ₹780.7 ಕೋಟಿ

2017ರ ಬ್ರಾಂಡ್‌ ಮೌಲ್ಯ: ₹732.4 ಕೋಟಿ

ಏರಿಕೆ (ಶೇಕಡ) 7

**

ಕೋಲ್ಕತ್ತ ನೈಟ್‌ ರೈಡರ್ಸ್‌: 2

2018ರ ಬ್ರಾಂಡ್‌ ಮೌಲ್ಯ: ₹718.6 ಕೋಟಿ

2017ರ ಬ್ರಾಂಡ್‌ ಮೌಲ್ಯ: ₹683.8 ಕೋಟಿ

ಏರಿಕೆ: 5

**

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: 3

2018ರ ಬ್ರಾಂಡ್‌ ಮೌಲ್ಯ: ₹676.9 ಕೋಟಿ

2017ರ ಬ್ರಾಂಡ್‌ ಮೌಲ್ಯ: ₹607.8 ಕೋಟಿ

ಏರಿಕೆ: 11

**

ಚೆನ್ನೈ ಸೂಪರ್‌ ಕಿಂಗ್ಸ್‌: 3

2018ರ ಬ್ರಾಂಡ್‌ ಮೌಲ್ಯ: ₹676.9 ಕೋಟಿ

2017ರ ಬ್ರಾಂಡ್‌ ಮೌಲ್ಯ: –

ಏರಿಕೆ: –

**

ಸನ್‌ರೈಸರ್ಸ್‌ ಹೈದರಾಬಾದ್‌: 5

2018ರ ಬ್ರಾಂಡ್‌ ಮೌಲ್ಯ: ₹483.6 ಕೋಟಿ

2017ರ ಬ್ರಾಂಡ್‌ ಮೌಲ್ಯ: ₹386.9 ಕೋಟಿ

ಏರಿಕೆ: 25

***

ಡೆಲ್ಲಿ ಡೇರ್‌ಡೆವಿಲ್ಸ್‌: 6‌

2018ರ ಬ್ರಾಂಡ್‌ ಮೌಲ್ಯ: ₹359.4 ಕೋಟಿ.

2017ರ ಬ್ರಾಂಡ್‌ ಮೌಲ್ಯ: ₹304.1 ಕೋಟಿ

ಏರಿಕೆ: 18

**

ಕಿಂಗ್ಸ್‌ ಇಲೆವನ್‌ ಪಂಜಾಬ್‌: 6

2018ರ ಬ್ರಾಂಡ್‌ ಮೌಲ್ಯ: ₹359.4 ಕೋಟಿ.

2017 ಬ್ರಾಂಡ್‌ ಮೌಲ್ಯ: ₹283.3 ಕೋಟಿ

ಏರಿಕೆ: 27

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT