ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಕೊಡದಿದ್ದರೆ ಚುನಾವಣೆ ಬಹಿಷ್ಕಾರ

ತಿರುಮಲಾಪುರದಲ್ಲಿ ಬಿಗಡಾಯಿಸಿದ ಸಮಸ್ಯೆ l ಗ್ರಾಮಸ್ಥರ ಎಚ್ಚರಿಕೆ
Last Updated 6 ಏಪ್ರಿಲ್ 2018, 7:27 IST
ಅಕ್ಷರ ಗಾತ್ರ

ಹೊಳಲ್ಕೆರೆ: ಸಮರ್ಪಕವಾಗಿ ಕುಡಿಯುವ ನೀರು ಒದಗಿಸದಿದ್ದರೆ ಚುನಾವಣೆ ಬಹಿಷ್ಕರಿಸುವುದಾಗಿ ತಿರುಮಲಾಪುರ (ಎಮ್ಮೆಹಟ್ಟಿ) ಗ್ರಾಮಸ್ಥರು ಎಚ್ಚರಿಸಿದ್ದಾರೆ.

‘ಕುಡಿಯುವ ನೀರಿಲ್ಲದೆ ಜನ ಪರಿತಪಿಸುತ್ತಿದ್ದಾರೆ. ಗ್ರಾಮದಲ್ಲಿ 200 ಮನೆಗಳಿದ್ದು, ಸುಮಾರು 1,500 ಜನಸಂಖ್ಯೆ ಇದೆ. ಇಷ್ಟು ಜನರಿಗೆ ಒಂದು ಕೊಳವೆಬಾವಿ ಮಾತ್ರ ಇದೆ. ಈ ಕೊಳವೆ ಬಾವಿಯಲ್ಲೂ ನೀರು ಕಡಿಮೆ ಆಗಿದ್ದು, ಬೆಳಿಗ್ಗೆ ಮತ್ತು ಸಂಜೆ ಅರ್ಧಗಂಟೆ ಮಾತ್ರ ನೀರು ಬಿಡುತ್ತಾರೆ. ಇದರಿಂದ ಒಂದು ಮನೆಗೆ ಮೂರ್ನಾಲ್ಕು ಕೊಡ ನೀರು ಸಿಗುತ್ತದೆ. ಈ ನೀರನ್ನು ಕುಡಿಯಲು ಮತ್ತು ದೈನಂದಿನ ಚಟುವಟಿಕೆಗೆ ಬಳಸಬೇಕು. ಇದೇ ಕೊಳವೆಬಾವಿಯಿಂದ ತೊಟ್ಟಿಗೆ ನೀರು ಬಿಡುತ್ತಿದ್ದು, ದನಕರುಗಳಿಗೆ ಕುಡಿಯಲು ಹಾಗೂ ಬಟ್ಟೆ ತೊಳೆಯಲು ಬಳಸಬೇಕು’ ಎನ್ನುತ್ತಾರೆ ಗ್ರಾಮಸ್ಥರು.

‘ಕುಡಿಯುವ ನೀರಿಗಾಗಿ ಮತ್ತೊಂದು ಕೊಳವೆಬಾವಿ ಕೊರೆಸಲಾಗಿದ್ದು, ಹೆಚ್ಚು ನೀರು ಬಂದಿದೆ. ಆದರೆ ಈ ಕೊಳವೆಬಾವಿಗೆ ಮೋಟರ್ ಬಿಟ್ಟಿಲ್ಲ. ಹೊಸ ಕೊಳವೆಬಾವಿಗೆ ಸಂಪರ್ಕ ಕಲ್ಪಿಸುವಂತೆ ಪಿಡಿಒ, ಗ್ರಾಮ ಪಂಚಾಯ್ತಿ ಅಧ್ಯಕ್ಷರಿಗೆ ಅನೇಕ ಬಾರಿ ಮನವಿ ಮಾಡಿದರೂ ಗಮನ ಹರಿಸಿಲ್ಲ. ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ಮಂಜೂರಾಗಿದ್ದರೂ ನಿರ್ಮಾಣ ಆಗಿಲ್ಲ. ಜನ ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದು, ರಾತ್ರಿ ವೇಳೆ ತೋಟಗಳಿಗೆ ಹೋಗಿ ನೀರು ತರುತ್ತಾರೆ. ಎತ್ತಿನ ಗಾಡಿ, ಬೈಕ್, ಟ್ರ್ಯಾಕ್ಟರ್ ಗಳಲ್ಲಿ ಡ್ರಂ ಇಟ್ಟುಕೊಂಡು ನೀರು ತರುತ್ತಿದ್ದಾರೆ’ ಎಂದು ಗ್ರಾಮಸ್ಥರಾದ ಟಿ.ಗೋವಿಂದಪ್ಪ, ನಾಗರಾಜ್, ಧನಂಜಯ, ಮಧು, ಶ್ರೀನಿವಾಸ್, ಈರಪ್ಪ, ರಂಗಮ್ಮ, ಚಿತ್ತಮ್ಮ, ಆಶಾ, ಜಯಮ್ಮ ದೂರಿದ್ದಾರೆ.‘ಚುನಾವಣೆಯ ಒಳಗೆ ನೀರಿನ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದಲ್ಲಿ ನಾವು ಮತದಾನ ಮಾಡುವುದಿಲ್ಲ’ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

**

ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ಮಂಜೂರಾದರೂ, ಇದುವರೆಗೆ ನಿರ್ಮಾಣ ಆಗಿಲ್ಲ. ಇದರಿಂದ ಜನ ಫ್ಲೋರೈಡ್ ಇರುವ ನೀರನ್ನೇ ಕುಡಿಯುತ್ತಿದ್ದಾರೆ –  ಟಿ.ಗೋವಿಂದಪ್ಪ, ತಿರುಮಲಾಪುರ ಗ್ರಾಮಸ್ಥ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT